ಹೊಸ ಮನ್ವಂತರಕ್ಕಾಗಿ….

Share Button

ಹೊಸತನವಿಲ್ಲದ, ಏರು-ಇಳಿವುಗಳಿಲ್ಲದ ಆಡಳಿತ, ರಾಜಕೀಯ ಜಾಡ್ಯವೆನ್ನಿಸುತ್ತದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಯುವಜನಾಂಗ ಸದಾ ಹೊಸತನ್ನು ಬಯಸುತ್ತದೆ. ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಈಸಬೇಕಾದ ಇಂದಿನ ಯುವಜನಾಂಗದ ಬೇಕು-ಬೇಡಗಳನ್ನು ಅರಿಯುವಲ್ಲಿ ಇಂದಿನ ರಾಜಕಾರಣಿಗಳು ಅಸಮರ್ಥರಾಗಿದ್ದಾರೆ. ಯುವಜನಾಂಗದ ಆಶಯಗಳನ್ನು ಅರ್ಥೈಸಿಕೊಂಡು ಆಡಳಿತದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ ಮುಖಂಡರು ಹಿಂದುಳಿದಿದ್ದಾರೆ.

ರಾಜಕೀಯದಲ್ಲಿ ಮನ್ವಂತರವೊಂದು ಪ್ರಾರಂಭವಾಗಬೇಕಾದ ಅವಶ್ಯಕತೆ ಇದೆ. ನೆಲ ಒದ್ದರೆ ನೀರು ಚಿಮ್ಮುವಂತಹ ಸಾಮರ್ಥ್ಯವನ್ನು ಹೊಂದಿದ ಯುವಜನತೆಯಿಂದ ಮಾತ್ರ ಇದು ಸಾಧ್ಯ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಕಾಲೇಜು, ವಿಶ್ವವಿದ್ಯಾಲಯಗಳ ಮಡಿಲಿನಲ್ಲಿಯೇ ಭವಿಷ್ಯದ ರಾಜಕಾರಣಿಗಳು ತಯಾರಾಗಬೇಕಿದೆ. ಶಿಕ್ಷಣದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಂದು ಎದುರಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದವರು ಧ್ವನಿ ಎತ್ತುವುದು ನಮ್ಮಲ್ಲಿ ಬೆರಳೆಣಿಕೆಯಷ್ಟು ಮಾತ್ರ. ಎಲ್ಲೋ ಸ್ವಾಭಿಮಾನಿಯಾದ ಒಬ್ಬಿಬ್ಬರು ಅನ್ಯಾಯವನ್ನು ಖಂಡಿಸಿದಾಗ ಆ ವಿದ್ಯಾರ್ಥಿ ಅಪರಾಧಿಯ ಸ್ಥಾನದಲ್ಲಿ ನಿಂತುಕೊಳ್ಳುವ ಸನ್ನಿವೇಶ ನಿರ್ಮಾಣವಾಗುತ್ತದೆ. ಕಾಲೇಜು ಆಡಳಿತ ಮಂಡಳಿಯು ಆತನ ಹೆಸರನ್ನು ಕಪ್ಪು ಪಟ್ಟಿಯಲ್ಲಿ ಸೇರಿಸುತ್ತದೆ. ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೂ ತಪ್ಪೆ? ಹೋರಾಟ, ಚಳುವಳಿಗಳು ಅನ್ಯಾಯದ ಪ್ರತಿ ಹೋರಾಡುವ ಉದ್ದೇಶವನ್ನು ಹೊಂದಿರುತ್ತವೆ. ನ್ಯಾಯವನ್ನು ಗಳಿಸುವ ನಿಟ್ಟಿನಲ್ಲಿ ನಡೆಯುತ್ತವೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ, ಹಕ್ಕು ಮರೀಚಿಕೆಯಾದಾಗ ಚಳುವಳಿಗಳು ಹುಟ್ಟಿಕೊಳ್ಳುತ್ತವೆ. ಇಂಥ ಚಳುವಳಿಗಳನ್ನು ಸಕಾರಾತ್ಮಕ ದೃಷ್ಠಿಯಿಂದ ನೋಡುವ ಅವಶ್ಯಕತೆ ಇದೆ. ಯುವಜನಾಂಗ ಚಳುವಳಿಗಳನ್ನು ಶಾಂತಿಯ ನೆಲೆಗಟ್ಟಲ್ಲಿ ಹಮ್ಮಿಕೊಳ್ಳಬೇಕು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡದೇ ಅಹಿಂಸಾತ್ಮಕ ಹೋರಾಟವನ್ನು ನಡೆಸಿ ನ್ಯಾಯವನ್ನು ಪಡೆದುಕೊಳ್ಳಬೇಕು.

ನಿಜವಾದ ನಾಯಕರು ತಯಾರಾಗಬೇಕಾದದ್ದು ವಿದ್ಯಾರ್ಥಿ ಜೀವನದಲ್ಲೇ. ಆದರೆ ಹೋರಾಟ ಎಂಬ ಶಬ್ದ ದೇಶಕ್ಕೆ ಸ್ವಾತಂತ್ರ ದೊರಕುವುದರೊಂದಿಗೇ ಅರ್ಥವನ್ನು ಕಳೆದಕೊಂಡಿದೆ. ಅನ್ಯಾಯದ ವಿರುದ್ಧ ಯಾರೇ ಹೋರಾಟಕ್ಕಿಳಿದಾಗ ಆ ಹೋರಾಟ ರಾಜಕೀಯದ ಬಣ್ಣವನ್ನು ಪಡೆದುಕೊಳ್ಳುತ್ತದೆ. ಇಲ್ಲವೇ ಹೋರಾಟವನ್ನು ರಾಜಕೀಯದ ದಾಳವನ್ನಾಗಿಸಿ ಕೊಳ್ಳಲಾಗುತ್ತದೆ. ಅನ್ಯಾಯಕ್ಕೊಳಗಾದವನಿಗೆ ನ್ಯಾಯ ಸಿಗುವ ಬದಲು ಹೋರಾಟ ಇನ್ನೊಬ್ಬರ ಬೇಳೆ ಬೇಯಿಸಿಕೊಳ್ಳುವುದಕ್ಕೆ ಉಪಯೋಗವಾಗುತ್ತದೆ.

ಇಂದಿನ ಯುವಜನತೆಯು ಮುಂದಾಳತ್ವದ ಕೊರತೆಯನ್ನು ಎದುರಿಸುತ್ತಿದೆ. ಇವರ ಉತ್ಸಾಹ ಕೇವಲ ಗಣೇಶೋತ್ಸವ, ಧರ್ಮಕ್ಕೆ ಸಂಬಂಧಿಸಿದ ಹೋರಾಟ, ಯುವಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲೇ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಹ ಹೋರಾಟ ಮನೋಭಾವ ವಿದ್ಯಾರ್ಥಿಗಳಲ್ಲಿ ಚಿಗುರೊಡೆಯಬೇಕಿದೆ.

ವಿದ್ಯಾರ್ಥಿ ದೆಸೆಯ ಮುಖಂಡತ್ವದ ಉದ್ದೇಶ ಕೇವಲ ಭವಿಷ್ಯದಲ್ಲಿ ರಾಜಕಾರಣಿಗಳಾಗಲು ಅಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಅದರ ಉದ್ದೇಶವಾಗಿದೆ. ಶೋಷಣೆಯ ವಿರುಧ್ದ ಹೋರಾಡುವ ಮನೋಭಾವನ್ನು ಇಂದಿನ ಯುವಜನಾಂಗ ಮೈಗೂಡಿಸಿಕೊಳ್ಳಬೇಕಿದೆ.

– ಗೌರಿ.ಚಂದ್ರಕೇಸರಿ, ಶಿವಮೊಗ್ಗ.

2 Responses

  1. Anonymous says:

    ಹೌದು…ಸತ್ಯ ..ಲೇಖನ ಚೆನ್ನಾಗಿದೆ

  2. Gouri says:

    ಧನ್ಯವಾದಗಳು

Leave a Reply to Gouri Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: