ನೊಂದವರ ನಡುವೆ..

Share Button

           ಹೌದು, ನಮ್ಮ ದಕ್ಷಿಣಕನ್ನಡ ಜಿಲ್ಲೆಯ ನೆರೆ ಜಿಲ್ಲೆಯೇ ನಮ್ಮೆಲ್ಲರ ಹೆಮ್ಮೆಯ ಕೊಡಗು. ಸವಿ ಕಿತ್ತಳೆಯ ನಾಡು,ದೇಶದ ಹೆಮ್ಮೆಯ ಯೋಧರ ಬೀಡು. ಕೊಡಗಿನ ಕಾಫಿಯ ಘಮಲು ದೇಶ,ಪರದೇಶಗಳಲ್ಲೆಲ್ಲಾ ಹರಡಿ ಜನಮನ ಗೆದ್ದಿರುವುದು ಹಳೆ ಕತೆ! ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವುದೂ ಅಲ್ಲದೆ ತನ್ನದೇ ಆದ ಭಾಷೆ,ಆಹಾರ ಸಂಸ್ಕೃತಿಯಿರುವ ಸಂಪದ್ಭರಿತ  ನಾಡು. ಅಲ್ಲಿ ವರ್ಷವಿಡೀ ಇರುವ ತಂಪಾದ ಹವೆ ಅದನ್ನು ನಮ್ಮೆಲ್ಲರ ನೆಚ್ಚಿನ ಊಟಿಯನ್ನಾಗಿಸಿದೆ ಕೊಡಗಿನ ಸನ್ನಡತೆಯ ಸಸ್ನೇಹೀ ಜನರ ಬದುಕು ಇತ್ತೀಚೆಗೆ ಇದ್ದಕ್ಕಿದ್ದಂತೆ ಒಮ್ಮೆಲೇ ಭಯಾನಕ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದ್ದು ದುರಂತ.

ಅಗಸ್ಟ್ ತಿಂಗಳ ಮೊದಲನೇ ವಾರದಿಂದಲೇ ಮಳೆಯ ರಭಸ ತುಸು ಜೋರಾಗಿಯೇ ಇತ್ತು. ಸ್ವಾಭಾವಿಕವಾಗಿ ಅಲ್ಲಿ ಸುರಿಯುತ್ತಿದ್ದ ಮಂಜುಹನಿಯಂತಹ ಮಳೆಯ ಬದಲು ದಪ್ಪ ದಪ್ಪ ಮಳೆ ಹನಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು ಜನ. ಏನೋ,ವಾಡಿಕೆಗಿಂತ ಈ ಸರ್ತಿ ಮಳೆ ಜಾಸ್ತಿ ಎನಿಸುತಿತ್ತು ಎಲ್ಲರಿಗೂ. ಎರಡನೇ ವಾರದಲ್ಲಿ ಮಳೆಯ ರಭಸ ಇನ್ನೂ ಜೋರಾಗತೊಡಗಿತು. ತಾ.16ರ ರಾತ್ರಿ ಇದ್ದಕ್ಕಿದ್ದಂತೆ ನೆಲವೇ ಬಿರಿದಂತೆ ಭಯಾನಕ ಸದ್ದು… ಜನರೆಲ್ಲಾ ತಮ್ಮ ಮನೆಯಿಂದ ಹೊರಗೋಡಿ ಬಂದು ಸ್ವಲ್ಪ ದೂರದಲ್ಲಿದ್ದ ತಮ್ಮ ಸ್ನೇಹಿತರ ಮನೆಯಲ್ಲಿ ರಾತ್ರಿ ಕಳೆದರು. ಮುಂಜಾನೆ ಮನೆ ಬಳಿ ಬಂದು ನೋಡಿದರೆ ಏನಿದೆ…ಮನೆಯೇ ಕಾಣುತ್ತಿಲ್ಲ.. ಮನೆಯ ಪಕ್ಕದ ದೊಡ್ಡ ಬೆಟ್ಟವೇ ಜಾರಿ ಮನೆ ಮೇಲೆ ಬಿದ್ದು ಮನೆಯನ್ನು ಆಪೋಷನ ತೆಗೆದುಕೊಂಡಿತ್ತು. ಮನೆಯಿದ್ದ ಕುರುಹು ಕೂಡಾ ಕಾಣದಾಗಿತ್ತು.ಎಲ್ಲಿ ನೋಡಿದರೂ ಮಣ್ಣು, ಮರಗಳ ರಾಶಿ. ಸಣ್ಣ ಸರಕಾರಿ ನೌಕರಿಯಲ್ಲಿದ್ದ ಇವರು ನಿವೃತ್ತಿ ಬಳಿಕ  ತಮ್ಮಲ್ಲಿದ್ದ ಎಲ್ಲಾ ಹಣವನ್ನು ಸುರಿದು ನಾಲ್ಕು ವರ್ಷಗಳ ಹಿಂದೆ ಕಟ್ಟಿದ ಮನೆಯದು. ತನ್ನ ಸಣ್ಣ ಕಾಫಿ ತೋಟದ ಜೊತೆಗೆ, ಬರುವ ಪಿಂಚಣಿ ಹಣದಿಂದ ಎರಡು ಮಕ್ಕಳೊಂದಿಗೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದರು. ರಾತ್ರಿ ಬೆಳಗಾಗುವುದರೊಳಗಾಗಿ ಅವರು ಪ್ರಕೃತಿಯ ಕೆಂಗಣ್ಣಿಗೆ ಸಿಲುಕಿ ಇದ್ದುದೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದರು. ಮನೆಯ ಜೊತೆಗೆ ಇದ್ದ ಬದ್ದ ಸ್ವಲ್ಪ ಕಾಫಿ ತೋಟವೂ ಹೇಳ ಹೆಸರಿಲ್ಲದಂತೆ ಮಾಯವಾಗಿತ್ತು.

ಇದು ಬರೇ ಒಬ್ಬರ ವಿಷಯವಾಯಿತು. ಇಂಥಹ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಎರಡು ಅಂತಸ್ತಿನ ಮನೆಯೊಂದು ಇಡೀ ಮನೆಯೇ ಅಡಿಪಾಯ ಕುಸಿದು ಇಪ್ಪತ್ತು ಅಡಿ ಆಳಕ್ಕೆ ಹೋಗಿದ್ದರೆ,ಇನ್ನೊಂದು ಕಡೆ  ಇಡೀ ಮನೆಯೇ ಮೀಟರುಗಟ್ಟಲೆ ಸರಿದು ನಿಂತಿತ್ತು. ಅತಿದೊಡ್ಡ ಸಪ್ಪಳ ಗಮನಕ್ಕೆ ಬಂದುದರಿಂದ,ಮನೆಯಿಂದ ಜನರು ಹೊರಬಂದಿದ್ದರು.ಆದ್ದರಿಂದ ಎಷ್ಟೋ ಜೀವಗಳ ಹಾನಿಯಾಗುವುದು ಸ್ವಲ್ಪದರಲ್ಲಿ ತಪ್ಪಿತ್ತು. ಊಹೆಗೂ ನಿಲುಕದಷ್ಟು ಸಹಾಯಗಳ ಮಹಾಪೂರವೇ ಹರಿದು ಬಂದಿತ್ತು ನಿಜ. ಆದರೆ ನಿಜವಾದ ಆಕಾಂಕ್ಷಿಗಳಿಗೆ ತಲಪದೆ ಬೇಕಾಬಿಟ್ಟಿಯಾಗಿ ಸಾಮಾನುಗಳು ಹಾಗೂ ಮೊಬಲಗುಗಳು ಅನ್ಯರ ಪಾಲಾದುದು ಕಠೋರ ಸತ್ಯ. ಇದನ್ನು ಮನಗಂಡು, ನಾವು ಕೊಡಲಾಶಿಸಿದ ದೇಣಿಗೆಯನ್ನು ಆಕಾಂಕ್ಷಿಗಳಿಗೆ ಹೇಗೆ ಸರಿಯಾಗಿ ತಲಪಿಸುವುದೆಂಬ ಚಿಂತೆಯಲ್ಲಿದ್ದೆವು.

ಸ್ವಲ್ಪ ದಿನಗಳಲ್ಲಿ, ನಮ್ಮ ಬೇಡಿಕೆ ಭಗವಂತನಿಗೆ ತಲಪಿತೇನೋ ಎಂಬಂತೆ, ನಮ್ಮ ಆತ್ಮೀಯರೊಬ್ಬರಿಂದ ಸಂತಸದ ವಿಷಯವೊಂದು ತಿಳಿಯಿತು. ಪುತ್ತೂರಿನಲ್ಲಿ ಸಕ್ರಿಯವಾಗಿರುವ ಸಂಘಗಳಲ್ಲಿ, ‘ಕುಶಲ’ ಹಾಸ್ಯಪ್ರಿಯರ ಸಂಘವೂ ಒಂದು. ಅದರ ಸದಸ್ಯರಾಗಿರುವವರು, ನಾನು ಹಾಗೂ ಈ ಆತ್ಮೀಯರು.ಇವರು ಪುತ್ತೂರಿನ ESMA( Ex. Service Men’s Association)ನ ಸದಸ್ಯರೂ ಹೌದು. ಮಡಿಕೇರಿಯ ECHS(Ex.Service Men Comprehensive Health Scheme)ನ ಪದಾಧಿಕಾರಿಗಳೊಡನೆ , ಪುತ್ತೂರಿನ ESMA ಪದಾಧಿಕಾರಿಗಳು ಚರ್ಚಿಸಿ, ಅಲ್ಲಿಯ ಸರಿಯಾದ ಫಲಾಕಾಂಕ್ಷಿಗಳನ್ನು ಗುರುತಿಸಿ, ಪುತ್ತೂರಿನ ಸಂಘದಲ್ಲಿ ಸಂಗ್ರಹವಾದ ದೇಣಿಗೆಯನ್ನು ಫಲಾಪೇಕ್ಷಿಗಳಿಗೇ ನೇರವಾಗಿ ಇಲ್ಲಿಯ ಸದಸ್ಯರು ಮಡಿಕೇರಿಗೆ ಹೋಗಿ ಕೊಡುವುದೆಂದು ನಿರ್ಧರಿಸಲಾಗಿತ್ತು. ಅವರೊಡನೆ ನಾವೂ ಸೇರಿ ಹೋಗಲು ಅನುಮತಿಯನ್ನು ಪಡೆಯಲಾಯಿತು. ಹಾಗೆಯೇ ,ಕುಶಲ ಸಂಘದ ಸದಸ್ಯರಿಂದ ಸಂಗ್ರಹಿಸಿದ ದೇಣಿಗೆಯನ್ನೂ ಸೇರಿಸಿ, ಚೆಕ್ ಮೂಲಕ ಹಸ್ತಾಂತರಿಸಲು ನಿಶ್ಚಯಿಸಲಾಯಿತು. ಹೋಗಲು ರಜಾದಿನವೊಂದನ್ನು ಗೊತ್ತು ಪಡಿಸಲಾಯಿತು.

ಪುತ್ತೂರು ಮಡಿಕೇರಿ ರಸ್ತೆಯಲ್ಲಿ ಇನ್ನೂ ದುರಸ್ತಿ ಕಾರ್ಯಗಳು ನಡೆಯುತ್ತಿದ್ದುದರಿಂದ ಘನ ವಾಹನಗಳಿಗೆ ಹೋಗಲು ಅವಕಾಶವಿರಲಿಲ್ಲ. ಆದ್ದರಿಂದ ಸ್ವಂತ ವಾಹನಗಳಲ್ಲಿ ಒಟ್ಟು ನಾವು ಹದಿನೈದು ಜನರು, ಮುಂಜಾನೆ ಪುತ್ತೂರಿನಿಂದ ಹೊರಟು, ಬೆಳಿಗ್ಗೆ ಹತ್ತು ಗಂಟೆಗೆ ಮಡಿಕೇರಿ ತಲಪಲಾಯಿತು. ದಾರಿ ಮಧ್ಯೆ, ಜೋಡ್ಪಾಲ ಬಳಿಯಿಂದ ಮಡಿಕೇರಿ ವರೆಗೂ, ಹೆಜ್ಜೆ ಹೆಜ್ಜೆಗೂ , ಪ್ರಕೃತಿ ವಿಕೋಪದ ತೀವ್ರತೆಯ,ಭೀಕರತೆಯ ಅನುಭವವಾಗುತ್ತಿತ್ತು.  ಮೊದಲೆಲ್ಲಾ ಮಡಿಕೇರಿಗೆ ಹೋಗುವುದೆಂದರೆ ದಾರಿಯಲ್ಲಿನ ಪ್ರಕೃತಿ ಸೌಂದರ್ಯವನ್ನು ಇಂಚು ಇಂಚಾಗಿ ಆಸ್ವಾದಿಸುದೇ ಅವರ್ಣನೀಯ ಅನುಭವ!. ಇಡೀ ಬೆಟ್ಟಗಳೇ ಜರಿದು ರಸ್ತೆಯಲ್ಲಿ ಅಡ್ಡಲಾಗಿ ಸುರಿದ ಅಗಾಧ ಮಣ್ಣನ್ನು ತೆರವು ಗೊಳಿಸಿ, ಹಾಳಾದ  ಭಾಗಗಳ ದುರಸ್ಥಿ ಕಾರ್ಯ ರಭಸದಿಂದ ನಡೆಯುತ್ತಿತ್ತು. ರಸ್ತೆ ಬದಿಯಲ್ಲಿದ್ದ ತಾರಸಿ ಮನೆಗಳು ಇದ್ದಂತೆಯೇ ಜಾರಿ,ಮೀಟರುಗಟ್ಟಲೆ ದೂರ ಹೋಗಿ ಕುಳಿತಿದ್ದವು. ಹಂಚಿನ ಮನೆಗಳು ನುಚ್ಚು ನೂರಾಗಿದ್ದವು. ಕೆಲವು ಕಟ್ಟಡಗಳು ಇದ್ದ ಜಾಗದಲ್ಲಿ ಮನೆಗಳು ಮಾಯವಾಗಿ ಅಲ್ಲಿ ಅಗಾಧ ಮಣ್ಣಿನ ರಾಶಿಯು ಕಣ್ಣಿಗೆ ರಾಚುತ್ತಿತ್ತು. ದೂರದಲ್ಲಿ ಕಾಣುತ್ತಿದ್ದ ಹಸಿರು ಬೆಟ್ಟಗಳ ಮೇಲೆ ಆಳವಾದ ಗಾಯದಲ್ಲಿ ರಕ್ತ ಸುರಿಯುತ್ತಿರುವಂತೆ ಕೆಂಪಾಗಿ ಕಾಣುತ್ತಿತ್ತು. ಇವುಗಳನ್ನೆಲ್ಲಾ ದಿನ ನಿತ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿದ್ದರೂ ಅದೇ ಜಾಗಗಳನ್ನು ಸ್ವತಃ ವೀಕ್ಷಿಸಿದಾಗ ಆಗುವ ಅನುಭವವೇ ಬೇರೆ.. ಅವು ಜೀವಂತವಾಗಿರುತ್ತವೆ!.  ಪ್ರಕೃತಿಯ ಈ ರುದ್ರ ತಾಂಡವವನ್ನು ನಿಬ್ಬೆರಗಾಗಿ ನೋಡಿದ ನಮಗೆ ಮಾತಾಡಲು ಶಬ್ದಗಳೇ ಇರಲಿಲ್ಲ… ಮನಸ್ಸು ಮೂಕವಾಗಿ ಸಂಕಟ ಪಡುತ್ತಿತ್ತು.

ರಜಾದಿನವಾಗಿದ್ದರೂ ಮಡಿಕೇರಿಯ ECHS ನ ಎಲ್ಲಾ ಸಿಬಂದಿ ವರ್ಗದವರು ಹಾಜರಿದ್ದು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದರು. ಚಿಕ್ಕ ಚೊಕ್ಕ ಕಾರ್ಯಕ್ರಮವನ್ನು ಸಂಘಟಕರು ಆಯೋಜಿಸಿದ್ದರು. ಎಂಟು ಕುಟುಂಬಗಳ ಫಲಾನುಭವಿಗಳು ಹಾಜರಿದ್ದರು. ಕಷ್ಟದಲ್ಲಿ ಒದಗಿ ಬಂದಿದ್ದ ಸಹಾಯದ ಮಹಾಪೂರ ಹೇಗೆ ದುರ್ಬಳಕೆಗೊಳ್ಳುತ್ತಿತ್ತು ಎಂಬುದು ಅಲ್ಲಿ ತಿಳಿಯಿತು. ಹನಿ ಹನಿ ಕೂಡಿ ಹಳ್ಳ ಎಂಬಂತೆ, ಸಹಾಯ ಹಸ್ತ ಚಾಚಿ ಬಂದ ನಮ್ಮನ್ನು ತುಂಬು ಹೃದಯದಿಂದ ಅಭಿನಂದಿಸಿದರು. ಬಂದ ಪ್ರತಿ ಕುಟುಂಬಗಳಿಗೆ, ಸಂಗ್ರಹವಾದ ಧನವನ್ನು ಸಮನಾಗಿ ಚೆಕ್ ಮೂಲಕ ಹಂಚಲಾಯಿತು. ಆ ಕುಟುಂಬದ ಸದಸ್ಯರೊಡನೆ ಮಾತಾಡಿದರೆ ಒಬ್ಬೊಬ್ಬರದೂ ಒಂದೊಂದು ಸಮಸ್ಯೆ. ಅವರೆಲ್ಲರೂ ತಮ್ಮ ಮನೆ ಮಠಗಳನ್ನು ಕಳಕೊಂಡಿದ್ದರು. ಸೈನ್ಯದಿಂದ ನಿವೃತ್ತಿಗೊಂಡು ಇದ್ದ ಉಳಿತಾಯದಿಂದ ಕಟ್ಟಿದ್ದ ಮನೆ,ತೋಟ ಇತ್ಯಾದಿಗಳು ದಿನ ಬೆಳಗಾಗುವುದರೊಳಗಾಗಿ ನಾಶವಾಗಿದ್ದವು. ಅಲ್ಲಿ ನೆರೆದಿದ್ದವರ ಕಣ್ಣಂಚುಗಳು ಒದ್ದೆಯಾಗಿದ್ದುವು. ಕಾರ್ಯಕ್ರಮವು ಮುಗಿಯುತ್ತಿದ್ದಂತೆ ನಾವೆಲ್ಲರೂ ‌ಸಾರ್ಥಕ್ಯ ಭಾವದ ಭಾರವಾದ ಆರ್ದ್ರಮನದೊಡನೆ ಹಿಂತಿರುಗಿದೆವು.

 

ಇಂದು ಮಾನವನು ಒಂದು ಕಡೆಯಿಂದ, ಏನೆಲ್ಲಾ ಸಾಧಿಸಿರುವ ಬಗ್ಗೆ ಅತೀವ ಹೆಮ್ಮೆ ಪಡುತ್ತಿದ್ದಂತೆಯೇ  ಇನ್ನೊಂದೆಡೆಯಿಂದ ಪ್ರಕೃತಿಯು,ನಾವು ಅದರೆದುರು ಬರೇ ತೃಣಸಮಾನರೆಂದು  ಸಾಕ್ಷಿ ಸಹಿತ ತೋರಿಸಿ ಕೊಡುತ್ತಿದೆ. ಈ ಭೀಕರ ಪ್ರಕೃತಿ ವಿಕೋಪಕ್ಕೆ ಯಾರ್ಯಾರೋ ಎಷ್ಟು ವಿವಿಧ ಕಾರಣಗಳನ್ನು ಕೊಟ್ಟರೂ ನಿರ್ಗತಿಕರಾದ ಮಂದಿಗೆ ಮೊದಲಿನ ನೆಮ್ಮದಿಯ ಜೀವನ ಸಿಗಲು ಎಷ್ಟು ವರ್ಷಗಳು ಬೇಕೋ..

-ಶಂಕರಿ ಶರ್ಮ, ಪುತ್ತೂರು.

4 Responses

  1. Hema says:

    ಮಾನವೀಯ ಮಿಡಿತ…ಬಹಳ ಉತ್ತಮ ಕೆಲಸ

  2. Upskumar says:

    ನಿಮ್ಮ ಸ್ಪಂದನೆ ಅನುಕರಣೀಯ.

  3. Krishna Pramod Mudipu says:

    ಮಾನವರಾಗಿ ನಾವು ಇಷ್ಟು ಮಾಡಿದ್ದೂ ನಿಜವಾದ ಸೇವೆ
    ದೇವರು ಮೆಚ್ಚುವ ಕೆಲಸ

Leave a Reply to Upskumar Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: