‘ಓಜೋನ್ ಪದರ’ ಎಂಬ ಕೊನೆಯ ಛತ್ರಿ

Share Button

          ಪ್ರತಿ ವರ್ಷ 16  ಸೆಪ್ಟೆಂಬರ್ ಆನ್ನು ‘ವಿಶ್ವ ಓಜೋನ್ ದಿನ’ ಎಂದು ಪರಿಗಣಿಸಲಾಗುತ್ತದೆ.   ಓಜೋನ್ ಎಂಬುದು ಆಮ್ಲಜನಕದ ಪರಿವರ್ತಿತ ರೂಪ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ (O2) ಅಣುವಿನೊಂದಿಗೆ ಅದರದ್ದೇ ಇನ್ನೊಂದು ಪರಮಾಣು (O) ಸೇರಿಕೊಂಡು  ಓಜೋನ್ (O3) ಸೃಷ್ಟಿಯಾಗುತ್ತದೆ. ನೇರಳಾತೀತ ಕಿರಣಗಳು ಭೂಮಿಗೆ ನೇರವಾಗಿ ಬಿದ್ದರೆ ಮನುಷ್ಯರಿಗೆ  ಚರ್ಮದ  ಕ್ಯಾನ್ಸರ್  , ವಿವಿಧ ಸಸ್ಯ ಸಂಕುಲಗಳ ವಿನಾಶ , ಭೂಮಿಯನ್ನು ಬರಡಾಗಿಸುವುದು ಹೀಗೆ ಹಲವಾರು ತೊಂದರೆಗಳನ್ನುಂಟು ಮಾಡಬಲ್ಲುವು ಎಂದು ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ. ಈ ಕಿರಣಗಳನ್ನು ತಡೆಯುವ ಸಾಮರ್ಥ್ಯವಿರುವುದರಿಂದ ವಾತಾವರಣದಲ್ಲಿರುವ ಓಜೋನ್ ಪದರವನ್ನು  ಕೊನೆಯ ಛತ್ರಿ  (Terminal Umbrella )   ಎಂದೂ ಕರೆಯುತ್ತಾರೆ.

           ಓಜೋನ್ ಪದರದಲ್ಲಿ ರಂಧ್ರವುಂಟಾಗಲು ಮುಖ್ಯಕಾರಣವಾಗಿ  ‘ಕ್ಲೋರೋ-ಪ್ಲೋರೋ-ಕಾರ್ಬನ್ (Chloro Fluor Carbon ) ಎಂಬ ವರ್ಗಕ್ಕೆ ಸೇರಿದ ರಾಸಾಯನಿಕ ವಸ್ತುಗಳನ್ನು ಗುರುತಿಸುತ್ತಾರೆ. ಕಾರ್ಬನ್, ಕ್ಲೋರಿನ್ ಮತ್ತು  ಫ್ಲೋರಿನ್ ಮೂಲವಸ್ತುಗಳನ್ನು ನಿಗದಿತ ಪ್ರಮಾಣದಲ್ಲಿ ರಾಸಾಯನಿಕ ಕ್ರಿಯೆಗೊಳಪಡಿಸಿದಾಗ ವಿವಿಧ ಕ್ಲೋರೋಪ್ಲೋರೋ ಕಾರ್ಬನ್ ಗಳು ದೊರೆಯುತ್ತವೆ.  ದ್ರವರೂಪದಲ್ಲಿರುವ ‘ಕ್ಲೋರೋ-ಪ್ಲೋರೋ-ಕಾರ್ಬನ್ ‘ಗಳು ಕೆಲವು ಕೈಗಾರಿಕೆಗಳಲ್ಲಿ ಬಳಕೆಯಾಗುತ್ತದೆ. ಅನಿಲ ರೂಪದ  ಕ್ಲೋರೋಪ್ಲೋರೋ ಕಾರ್ಬನ್ ಗಳು ರೆಫ್ರಿಜರೇಶನ್ ಪ್ರಕ್ರಿಯೆಗೆ ಉಪಯೋಗವಾಗುತ್ತವೆ. ಮಿತಪ್ರಮಾಣದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕ್ಲೋರೋಫಾರ್ಮ್ ಕೂಡ ಇದೇ ವರ್ಗಕ್ಕೆ ಸೇರಿದ ರಾಸಾಯನಿಕ ವಸ್ತುವಾಗಿದೆ.

           ಪ್ರಕೃತಿಯ ಸಮತೋಲವವನ್ನು ಹದಗೆಡಿಸುತ್ತಿರುವ ಮಾನವರು ಮತ್ತು ಕೈಗಾರಿಕೀಕರಣದ ಕೆಲವು ಚಟುವಟಿಕೆಗಳು, ವಾತಾವರಣಕ್ಕೆ ಸೇರುತ್ತಿರುವ ಅತಿಯಾದ ವಿಷಾನಿಲಗಳು, ಮಿತಿಮೀರಿದ ವಾಹನ ದಟ್ಟಣೆಯಿಂದಾಗುವ ವಾಯು ಮಾಲಿನ್ಯ ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ ಭೂಮಿಯ ಮೇಲಿನ  ಓಜೋನ್ ಪದರವು  ತೆಳ್ಳಗಾಗಿ ರಂಧ್ರವುಂಟಾಗುತ್ತಿದೆ . ಇದನ್ನು ಸರಿಪಡಿಸದಿದ್ದಲ್ಲಿ  ಸೂರ್ಯನ ನೇರಳಾತೀತ ಕಿರಣಗಳು ಭೂಮಿಗೆ ನೇರವಾಗಿ ಬಿದ್ದು   ಜೀವರಾಶಿಗಳ ಅಸ್ತಿತ್ವಕ್ಕೆ ಮಾರಕ ಎಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಓಝೋನ್ ಪದರವು ನಾಶವಾದರೆ, ಭೂಮಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಧ್ರುವ ಪ್ರದೇಶಗಳ ಮಂಜು  ಕರಗಿ ಸಮುದ್ರದ ನೀರಿನ ಮಟ್ಟ ಏರುವಿಕೆ, ಇದರಿಂದ ಸಂಭವಿಸಬಹುದಾದ ಜಲಕಂಟಕಗಳು, ಭೂಮಿಯ ಉಷ್ಣತೆಯಲ್ಲಿ ಏರಿಕೆ, ಪರಿಣಾಮವಾಗಿ ಹಸಿರು ನಾಶ, ವಿಪರೀತ ಚಳಿ, ಸಸ್ಯಸಂಕುಲಗಳ ಬೆಳವಣಿಗೆ  ಅಸಾಧ್ಯವಾಗುವುದು ಹೀಗೆ ಹಲವಾರು ದುಷ್ಪರಿಣಾಮಗಳ ಸಾಧ್ಯತೆ ಇದೆ.

 

ಜಾಗತಿಕ ಮಟ್ಟದಲ್ಲಿ ಓಜೋನ್  ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕೈಗಾರಿಕೆಗಳಲ್ಲಿ ಸಿಎಫ್.ಸಿ ಗಳ ಬಳಕೆಯನ್ನು ಹಂತ ಹಂತವಾಗಿ ನಿಷೇಧಿಸಿ ಭೂಮಿಯನ್ನು ರಕ್ಷಿಸಬೇಕಾದ ಅಗತ್ಯವನ್ನು ಸಾರಲು, ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ, 16 ಸೆಪ್ಟೆಂಬರ್ 1987 ರಂದು  ‘ಮಾಂಟ್ರಿಯಲ್ ಪ್ರೊಟೊಕಾಲ್’ ಎಂಬ ನಿಯಮಾವಳಿಗಳನ್ನು ರೂಪಿಸಲಾಯಿತು. ಮುಂದೆ ವಿವಿಧ ಹಂತಗಳಲ್ಲಿ  ಪರಿಷ್ಕರಣೆಗೊಂಡ  ‘ಮಾಂಟ್ರಿಯಲ್ ಪ್ರೊಟೊಕಾಲ್’ ಈಗ ಜಾಗತಿಕವಾಗಿ  ಒಪ್ಪಿತವಾಗಿದೆ. ಈ ಕಾಯಿದೆಗೆ ಸಹಿ ಹಾಕಿದ ದಿನವಾದ  ಸೆಪ್ಟೆಂಬರ್ 16 ನೆ ತಾರೀಕನ್ನು ‘‘ವಿಶ್ವ ಓಜೋನ್ ದಿನ’ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ  ಸಿ.ಎಫ್.ಸಿಗಳ ಬಳಕೆಯನ್ನು ನಿಷೇಧಿಸಿ ಪರ್ಯಾಯವಾಗಿ ಹೈಡ್ರೋಕಾರ್ಬನ್   ಉತ್ಪನ್ನಗಳನ್ನು ಬಳಸುವ ಅಭಿಯಾನ ಆರಂಭವಾಯಿತು. ರೆಫ್ರಿಜರೇಟರ್, ಏರ್ ಕಂಡಿಶನರ್ ಗಳಲ್ಲಿ  ಪರ್ಯಾಯವಾಗಿ ಇತರ ಅನಿಲಗಳನ್ನು ಬಳಸುತ್ತಾರೆ. ಸಣ್ಣ ಪ್ರಮಾಣದಲ್ಲಿ ಸಿ.ಎಫ಼್.ಸಿಗಳನ್ನು ಉಪಯೋಗಿಸುತ್ತಿದ್ದ  ಸುಗಂಧ ದ್ರವ್ಯ, ಕೀಟ ನಾಶಕಗಳ ಬಾಟಲಿಗಳಲ್ಲಿಯೂ ಕಂಪ್ರೆಸ್ಸೆಡ್ ಅನಿಲ ಅಥವಾ ಎಲ್. ಪಿ.ಜಿ.ಯನ್ನು ಉಪಯೋಗಿಸುತ್ತಾರೆ.  ಹೀಗೆ ಮಾಂಟ್ರಿಯಲ್ ಪ್ರೊಟೊಕೋಲ್ ವಿಶ್ವದಲ್ಲಿ ಓಜೋನ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹು ಮಟ್ಟಿಗೆ ಯಶಸ್ವಿಯಾಗಿರುವುದು ಸತ್ಯ.

– ಹೇಮಮಾಲಾ.ಬಿ

3 Responses

  1. Pushpa Nagathihalli says:

    ಓಜೊನ್ ಪದರದ ಬಗ್ಗೆ ಸೂಕ್ತ ಲೇಖನ.ಬೆಂಗಳೂರಿಗಂತೂ ವಾಯುಮಾಲಿನ್ಯ ಪರಿಸರ ಮಾಲಿನ್ಯ ದ ತಡೆಗೆ ಯೋಚಿಸದಿದ್ದರೆ ಸ್ವಲ್ಪ ದಿನಗಳಲ್ಲೇ ಸ್ವಚ್ಚ ಉಸಿರಿನ ಒಂದಂಶವು ಸಿಗಲಾರದು.

  2. Shrinivas Panchamukhi says:

    ಓಝೋನ್’ನ ಪ್ರಾಮುಖ್ಯತೆ ತಿಳಿಸುವ ಮಾಹಿತಿಯುಕ್ತ ಲೇಖನ

  3. Satya HG says:

    ಬೆಳಿಗ್ಗೆನೇ ಓದಿದೆ.ಉಪಯುಕ್ತ ಮಾಹಿತಿ

Leave a Reply to Pushpa Nagathihalli Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: