ಓಡಿ ಹೋಗುವ ಮುನ್ನ

Share Button

ಹದಿ ಹರೆಯದ ಮಕ್ಕಳು ಮನೆಗೊಂದು ಗುಡ್ ಬೈ ಹೇಳಲು ಹಿಡಿಯಷ್ಟು ಹಠ ಹಾಗೂ ಮೊಂಡುತನವಿದ್ದರೆ ಸಾಕು. ತನ್ನಿಷ್ಟದ ವಸ್ತುವನ್ನು ಪಾಲಕರು ತಂದು ಕೊಡಲಿಲ್ಲವೆಂದೋ, ಟಿ,ವಿ,ನೋಡಬೇಡ ಎಂದದ್ದಕ್ಕೋ, ಓದು-ಬರೆ ಎಂದು ಬುಧ್ಧಿವಾದ ಹೇಳಿದ್ದಕ್ಕೋ ಮಕ್ಕಳು ಮುನಿಸಿಕೊಳ್ಳುತ್ತಾರೆ. ಹೆತ್ತವರು ತಮ್ಮ ಇಷ್ಟದ ವಿರುದ್ಧ ನಡೆದುಕೊಂಡಾಗ ಪಾಲಕರಿಗೊಂದು ಪಾಠ ಕಲಿಸಬೇಕೆಂಬ ಹುಚ್ಚು ಮನಸ್ಸಿನಿಂದ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾರೆ. ಪರೀಕ್ಷಾ ಫಲಿತಾಂಶದ ಭಯದಿಂದಲೋ, ಪಶ್ಚಾತ್ತಾಪದಿಂದಲೋ ತಮಗಾದ ಅವಮಾನ-ದಿಂದಲೂ ಮಕ್ಕಳು ಮನೆಗೆ ವಿದಾಯವನ್ನು ಹೇಳುತ್ತಾರೆ.

ಬಡತನ, ಅಸಹಾಯಕತೆಗಳಿಗಾಗಿ ಮಕ್ಕಳ ಆಸೆಗಳನ್ನು ಪೂರೈಸುವಲ್ಲಿ ವಿಫಲರಾಗುವ ಪಾಲಕರು, ತಮ್ಮ ಮಕ್ಕಳು ಮನೆ ಬಿಟ್ಟು ಹೋಗುವ ನಿರ್ಧಾರವನ್ನು ತೆಗೆದುಕೊಳ್ಳಬಲ್ಲರು ಎಂಬ ಊಹೆಯನ್ನೂ ಮಾಡಿರುವುದಿಲ್ಲ. ಪಂಜರದಿಂದ ಪಕ್ಷಿ ಹಾರಿದಾಗಲೇ ಎದೆಯೊಡೆದುಕೊಳ್ಳುತ್ತಾರೆ. ನೀನೆಲ್ಲಿಯೇ ಇದ್ದರೂ ಹೊರಟು ಬಾ ಎಂಬ ಜಾಹೀರಾತನ್ನು ನೀಡಿ ಮಕ್ಕಳಿಗಾಗಿ ಹಪಹಪಿಸುತ್ತಾರೆ. ಅದೃಷ್ಟವಶಾತ್ ಮಕ್ಕಳು ಮನೆ ಸೇರಿದರೆ ಪಾಲಕರ ಅದೃಷ್ಠ. ಇಲ್ಲವಾದಲ್ಲಿ ನಿರಂತರ ಶೋಕ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗಾಗಿ ಕ್ವಾಲಿಟಿ ಟೈಮ್‌ನ್ನು ನೀಡಬೇಕಾಗುತ್ತದೆ. ಆಗಾಗ ಮುನಿಸಿಕೊಳ್ಳುವ, ಮೊಂಡುತನ ಮಾಡುವ ಇಲ್ಲವೆ ಮನೆ ಬಿಟ್ಟು ಹೋಗುವೆನೆಂದು ಬೆದರಿಕೆಯನ್ನು ಒಡ್ಡುವ ಮಕ್ಕಳಿಗೆ ಪಾಲಕರು ಪ್ರೀತಿಯಿಂದ ಕೆಲವು ವಾಸ್ತವ ಸಂಗತಿಗಳನ್ನು ತಿಳಿಸಬೇಕು. ಮಕ್ಕಳು ಮನೆಯನ್ನು ತೊರೆದು ಹೋಗುವುದರಿಂದ ಅವರಿಗೆ ಮುಂದೊದಗಬಹುದಾದ ತೊಂದರೆಗಳನ್ನು ವಿವರಿಸಬೇಕು.

ಪಾಲಕರು ಮಕ್ಕಳಿಗೆ ತಿಳಿಸಬೇಕಾದ ಸಂಗತಿಗಳು:

1. ಸ್ವತಂತ್ರರು ಆದರೆ ಸುರಕ್ಷಿತರಲ್ಲ:
ಮನೆಯಿಂದ ಹೊರಬಂದ ನೀವು ಸ್ವತಂತ್ರರಿರಬಹುದು ಆದರೆ ಖಂಡಿತ ನೀವು ಸುರಕ್ಷಿತರಾಗಿರುವುದಿಲ್ಲ. ಹುಡುಗಿಯರಾಗಿರಬಹುದು ಇಲ್ಲ ಹುಡುಗರಾಗಿರಬಹುದು. ಪಾಲಕರ ರಕ್ಷಾಕವಚವನ್ನು ಕಿತ್ತೊಗೆದು ಹೊರಹೋಗುವ ನಿಮಗೆ ಯಾವುದೇ ರೀತಿಯ ಅಪಾಯವಾಗಬಹುದಾದ ಸಾಧ್ಯತೆಗಳಿವೆ.

2. ಸಾವಿರಾರು ಜನರಿರಬಹುದು ಆದರೆ ನೀವು ಅನಾಥರು:
ಮನೆಯಿಂದ ಹೊರಬಂದ ನೀವು ಸಾವಿರಾರು ಜನರ ಮಧ್ಯದಲ್ಲಿರಬಹುದು .ಆದರೆ ಅವರಾರೂ ನಿಮ್ಮವರಲ್ಲ. ಹೀಗಾಗಿ ಅಲ್ಲಿ ನೀವು ಅನಾಥರೆ. ಪೋಲಿಸರ ಕಣ್ಣಿಗೆ ಬಿದ್ದರೆ ಮಾತ್ರ ನೀವು ಮತ್ತೆ ಮನೆ ಸೇರುವ ಸಾಧ್ಯತೆಗಳಿವೆ.

3. ಪ್ರೀತಿ ತೋರುವವರಿರಬಹುದು ಆದರೆ ನಂಬಿಕೆಗೆ ಅರ್ಹರಲ್ಲ:
ಒಂಟಿಯಾಗಿರುವ ನಿಮ್ಮನ್ನು ಕಂಡು ಮೈದಡವಿ ಮಾತನಾಡುವವರು ಹಲವಾರು ಜನ ಸಿಗಬಹುದು. ಆದರೆ ಆ ಪ್ರೀತಿಯ ಹಿಂದೆ ಮೋಸ ಮನೆ ಮಾಡಿರುತ್ತದೆ. ಅವರು ನಿಮ್ಮನ್ನು ಅಂಗವಿಹೀನರನ್ನಾಗಿ ಮಾಡಿ ಭಿಕ್ಷಾಟನೆಗೆ ತಳ್ಳಬಹುದು. ಕೆಟ್ಟ ಕೆಲಸಕ್ಕೆ ಬಳಸಿಕೊಂಡು ಅದೇ ಕೂಪಕ್ಕೆ ನಿಮ್ಮನ್ನು ತಳ್ಳಬಹುದು.

4. ಹಣವಿರಬಹುದು ಆದರೆ ತಾತ್ಕಾಲಿಕ:

ನೀವು ಮನೆಯಿಂದ ಹೊರಹೋಗುವಾಗ ಕೈ ತುಂಬಾ ಹಣವನ್ನು ತೆಗೆದುಕೊಂಡು ಹೋಗಿರಬಹುದು ಆದರೆ ಅದು ಬೆರಳೆಣಿಕೆಯಷ್ಟು ದಿನ ನಿಮ್ಮನ್ನು ಸಲಹುತ್ತದೆ. ಕೈ ಖಾಲಿಯಾದ ನಂತರ….?

5. ಕೆಲಸ ದೊರೆಯಬಹುದು ಆದರೆ ಮನಸ್ಸು?

ಕೈಯಲ್ಲಿರುವ ಹಣ ಖಾಲಿಯಾದಾಗ ಅನಿವಾರ್ಯವಾಗಿ ನೀವು ಕೂಲಿ ಮಾಡಲೇಬೇಕು. ನೀವಿನ್ನೂ ಚಿಕ್ಕವರಾಗಿದ್ದಲ್ಲಿ ಕೂಲಿಯೂ ಸಿಕ್ಕಲಾರದು. ಸಿಕ್ಕರೂ ಇಡೀ ದಿನ ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಓದಿಗೆ ತಿಲಾಂಜಲಿಯನ್ನೀಯಬೇಕಾಗುತ್ತದೆ. .ಭವಿಷ್ಯದಲ್ಲಿ ಏನೆಲ್ಲ ಆಗಬೇಕೆಂದಿದ್ದ ನಿಮ್ಮ ಕನಸೆಲ್ಲ ಕಮರಿ ಹೋಗುತ್ತದೆ.

6. ನೀವು ನೋಡಿದ್ದು ಸಿನಿಮಾಗಳಲ್ಲಿ ಆದರೆ ವಾಸ್ತವದಲ್ಲಲ್ಲ:
ಮನೆ ಬಿಟ್ಟು ಬಂದ ಹುಡುಗನೊಬ್ಬ ಬೆಳೆದು ದೊಡ್ಡವನಾದ ಮೇಲೆ ಆಗರ್ಭ ಶ್ರೀಮಂತನಾದ ಕಥೆಯುಳ್ಳ ಹಲವಾರು ಸಿನೆಮಾಗಳನ್ನು ನೋಡಿ ಅದೇ ನಿಮ್ಮ ಜೀವನದಲ್ಲೂ ಆಗಬಹುದೆಂದುಕೊಂಡಿದ್ದರೆ ಅದು ತಪ್ಪು. ಅದು ಕೇವಲ ಸಿನಿಮಾ. ಎಲ್ಲಡೆ ನಯವಂಚಕತನವೇ ತುಂಬಿರುವ ಈಗಿನ ದಿನಗಳಲ್ಲಿ ನೀವು ನೋಡಿದ ಸಿನೆಮಾ ಕಥೆ ನಿಮ್ಮ ಜೀವನದಲ್ಲೂ ನಡೆಯಲು ಸಾಧ್ಯವಿಲ್ಲ.

7. ಹಠ ಗೆದ್ದಿರಬಹುದು ಆದರೆ ಮನಸ್ಸು?

ಮನೆ ಬಿಟ್ಟು ಬಂದು ತಂದೆ-ತಾಯಿಗೆ ಒಳ್ಳೆಯ ಪಾಠ ಕಲಿಸಿದೆನೆಂದು ನೀವು ಬೀಗಬಹುದು .ಆದರೆ ಹೆತ್ತ ಕರುಳಿನ ಕೂಗು ನಿಮಗೆ ಕೇಳಿಸುತ್ತದೆಯೆ? ನಿಮ್ಮ ಕ್ಷುಲ್ಲಕ ಹಠದಿಂದ ಹೆತ್ತವರನ್ನು ಕಳೆದುಕೊಳ್ಳಬಹುದು ಜೊತೆಗೆ ನಿಮ್ಮ ಒಡಹುಟ್ಟಿದವರನ್ನು ಅನಾಥರನ್ನಾಗಿಸಿದ ಕಳಂಕವೂ ನಿಮಗೆ ಅಂಟಿಕೊಳ್ಳಬಹುದು.

ಈ ಎಲ್ಲ ಸಂಗತಿಗಳ ಬಗ್ಗೆ ಪಾಲಕರು ತಮ್ಮ ಮಕ್ಕಳ ಜೊತೆ ಆಗಾಗ ಸಮಾಲೋಚಿಸುತ್ತಿದ್ದಲ್ಲಿ ಮಕ್ಕಳ ದಾರಿ ತಪ್ಪುವ ಅವಕಾಶಗಳು ಕಡಿಮೆ. ಮಕ್ಕಳ ವ್ಯಕ್ತಿತ್ವಕ್ಕೆ ಪೂರಕವಾದಂತಹ ವಾತಾವರಣ ಮನೆತಲ್ಲಿರಬೇಕು. ಅಲ್ಲದೇ ಜೀವನ ಮೌಲ್ಯಗಳನ್ನು ಬಾಲ್ಯದಿಂದಲೂ ಮಕ್ಕಳಲ್ಲಿ ಪಾಲಕರು ಬಿತ್ತಬೇಕು. ಬೆಳೆಯುವ ವಯಸ್ಸಿನಲ್ಲಿ ಮೊಬೈಲ್, ಇಂಟರ್‌ನೆಟ್‌ನಂತಹ ಅನವಶ್ಯಕ ಅನುಕೂಲತೆಗಳನ್ನು ಮಕ್ಕಳಿಗೆ ಒದಗಿಸಬಾರದು. ಯಾವುದೇ ವಿಷಯದ ಕುರಿತಾಗಿ ಇನ್ನೊಬ್ಬರ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಬಾರದು ಅಥವಾ ಹೀಯಾಳಿಸಬಾರದು. ಸ್ನೇಹ-ಪ್ರೀತಿಯಿಂದ ಮಕ್ಕಳ ಜೊತೆ ವರ್ತಿಸಬೇಕೆ ಹೊರತು ಮಕ್ಕಳ ಮೇಲೆ ಸಿಡುಕುವುದಾಗಲಿ ಅವರನ್ನು ದ್ವೇಷಿಸುವುದಾಗಲಿ ಮಾಡಬಾರದು. ಅಂದಾಗ ಮಾತ್ರ ಮಕ್ಕಳು ತಮ್ಮ ಮುನಿಸು, ದುಡುಕು ಸ್ವಭಾವ, ಮೊಂಡುತನದಂತಹ ನಕಾರಾದತ್ಮಕ ವರ್ತನೆಗಳಿಂದ ದೂರವಾಗಲು ಸಾಧ್ಯ.

-ಗೌರಿ.ಚಂದ್ರಕೇಸರಿ,ಶಿವಮೊಗ್ಗ.

6 Responses

  1. Avatar Doddabasappa P says:

    ಉತ್ತಮ ಉಪಯುಕ್ತ ಲೇಖನ

  2. Avatar Shankara Narayana Bhat says:

    ಮಕ್ಕಳ ಪಾಲಕರು ತಿಳಿಯಬೇಕಾದ ವಿಷಯವಾಗಿದೆ. ಇಲ್ಲಿ ಹೇಳಿದಂತೆ ಮಕ್ಕಳನ್ನು ಪ್ರೀತಿಯಿಂದ ಕಾಣುವ ಅಗತ್ಯವಿದೆ.

  3. Avatar Shankari Sharma says:

    ಸಕಾಲಿಕ ಬರಹ, ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: