ಎಲ್ಲೋ ಮಳೆಯಾಗಿದೆ ಇಂದು…

Share Button

“ಬಿಸಿಲಿಗೆ ಬೆಂದ ಭೂಮಿಗೆ, ಸೂರ್ಯಾಸ್ತವಾಗುತ್ತಿದೆ ಎನ್ನುವ ಸಂತಸ. 
ಸೂರ್ಯ ಮರೆಯಾಗಿದ್ದೆ ತಡ,  ವರುಣ ತಂದ ಮೇಘಗಳಿಂದ ಜಾರಿದ
ಮಳೆಯ ಹನಿ ಹನಿ ಭೂಮಿ ಸ್ವರ್ಶಿದಾಗ, ನಲಿವ ಮಣ್ಣಿನ ಘಮಲು
ನಲಿವ ಮಣ್ಣಿನ ಘಮಲು ಹೇಳುತ್ತಿದೆ,  ಎಲ್ಲೋ ಮಳೆಯಾಗಿದೆ ಇಂದು.”

ಮಣ್ಣಿನ ಘಮಲಿನ ಸ್ವೂರ್ತಿ ಪಡೆದ ಕವಿಗಳು, ರಸಿಕರ ಕಲ್ಪನೆಗಳಿಗೆ ಕೊನೆಯಿಲ್ಲ ಬಿಡಿ.
ಈ ಮಣ್ಣಿನ ಘಮಲು ಕುರಿತು ವಿಜ್ಞಾನಿ ಹೇಳುವುದೇನು ತಿಳಿದುಕೊಳ್ಳೋಣ.  1964ರಲ್ಲಿ ಆಸ್ಟ್ರೇಲಿಯಾ ದೇಶದ  ಇಸಾಬೆಲ್‍ ಜಾಯ್‍ ಬಿಯರ್‍ ಮತ್ತು ಆರ್‍.ಜಿ.ಥಾಮಸ್‍ ಎನ್ನುವ ಇಬ್ಬರು ವಿಜ್ಞಾನಿಗಳು ಈ ಕುರಿತು ಅಧ್ಯಯನ ನೆಡೆಸಿದರು. ಮಳೆಹನಿಗೆ ನಲಿವ ಮಣ್ಣಿನ ಘಮಲಿಗೊಂದು ಹೆಸರು Petrichor ಎಂದಾಯಿತು. 2010ರಲ್ಲಿ ವಿಶ್ವಪ್ರಸಿದ್ಧ ಎಂ.ಐ.ಟಿ ವಿಶ್ವವಿದ್ಯಾಲಯದ ವಿಜ್ಞಾನಿಗಳು Petrichor ಹೇಗಾಗುತ್ತದೆ ಎಂದು ವಿಸ್ತ್ರುತ ಅಧ್ಯಯನ ನೆಡೆಸಿದರು.

ಪರಿಸರದಲ್ಲಿರುವ ಮೃತ ಮತ್ತು ಕೊಳೆಯುತ್ತಿರುವ ಸಾವಯವ ವಸ್ತುಗಳನ್ನು ಸಂಸ್ಕರಿಸಿ, ಸಸ್ಯಗಳಿಗೆ ಮತ್ತು ಇತರೆ ಜೀವರಾಶಿಗೆ ಪೌಷ್ಟಿಕಾಂಶಗಳನ್ನು ಒದಗಿಸುವಂತೆ ಮಾಡುವಲ್ಲಿ ಆ್ಯಕ್ಟಿನೊಮೈಸೆಟಿಸ್‍ ಬ್ಯಾಕ್ಟೀರಿಯಾ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೀಗೆ ಸಾವಯವ ವಸ್ತುಗಳ ಸಂಸ್ಕರಣೆಯಲ್ಲಿ ಉಪ ಉತ್ಪನ್ನವಾಗಿ ದೊರೆಯುತ್ತದೆ Geosmin. ಮಳೆ ಹನಿಗೆ ನಲಿವ ಭೂಮಿಯ ಘಮಲು ಉಂಟಾಗಲು ಈ Geosmin ಕಾರಣವೆನ್ನಲಾಗಿದೆ. ಗಾಳಿಯಲ್ಲಿರುವ ಸಾವಿರಾರು ಕೋಟಿ ಅಣುಗಳಲ್ಲಿ ಅತ್ಯಂತ ಅಲ್ಪ ಪ್ರಮಾಣದ Geosmin ಇದ್ದರೂ, ಅದರ ಸುವಾಸನೆಯನ್ನು ಗ್ರಹಿಸುವ ಶಕ್ತಿ ಮನುಷ್ಯನಿಗೆ ಇದೆ. ಹೀಗಾಗಿ ಬೀಸುವ ಗಾಳಿಯಲ್ಲಿ ತೇಲಿ ಬರುವ Geosmin ಸುವಾಸನೆಯನ್ನು ಗ್ರಹಿಸಿದಾಗ, ಎಲ್ಲೋ ಮಳೆಯಾಗುತ್ತಿದೆ ಎಂದು ಹೇಳುತ್ತೇವೆ.

ಧೀರ್ಘಕಾಲದವರೆಗೆ ಮಳೆಯಾಗಿರದ ಸನ್ನಿವೇಶದಲ್ಲಿ ಸಾವಯವ ತ್ಯಾಜ್ಯದ ಸಂಸ್ಕರಣೆಯನ್ನು ಆ್ಯಕ್ಟಿನೊಮೈಸೆಟಿಸ್‍ ಬ್ಯಾಕ್ಟೀರಿಯಾಗಳು ನಿಧಾನಗತಿಯಲ್ಲಿ ಮಾಡುತ್ತವೆ. ಹೀಗಾಗಿ Geosmin ಉತ್ಪಾದನೆ ಬಹಳ ಕಡಿಮೆ ಇರುತ್ತದೆ. ಅದೇ ರೀತಿ ಮಳೆಯಾಗುವ ಲಕ್ಷಣಗಳಿರುವಾಗ, ಈ ಬ್ಯಾಕ್ಟೀರಿಯಾಗಳು ಹೆಚ್ಚು ಸಕ್ರೀಯವಾಗುತ್ತವೆ ಮತ್ತು Geosmin ಉತ್ಪಾದನೆ ಹೆಚ್ಚಾಗುತ್ತದೆ.

ಮಳೆಯ ಮೊದಲ ಹನಿಗಳು ಭೂಮಿಯನ್ನು ಸ್ವರ್ಶಿಸಿದಾಗ, ಸಿಡಿವ ಅತ್ಯಂತ ಸೂಕ್ಷ್ಮ ನೀರಿನ ಕಣಗಳು, Geosmin ಮತ್ತು ಸಸ್ಯಗಳು ಉತ್ಪಾದಿಸುವ ಪರಿಮಳವನ್ನು ಒಳಗೊಳ್ಳುತ್ತವೆ. ಹೆಚ್ಚು ಮಳೆಯಾದಾಗ, ಬೀಸುವ ಗಾಳಿಯಲ್ಲಿ ದೂರದವರೆಗೆ ಪಸರಿಸುವ ಸುವಾಸನೆಯುಕ್ತ ಈ ಸೂಕ್ಷ್ಮ ಕಣಗಳು, ಮಣ್ಣಿನ ಘಮಲನ್ನು ನಮಗೆ ನೀಡುತ್ತವೆ.

– ಉದಯ ಶಂಕರ ಪುರಾಣಿಕ

1 Response

  1. Shankari Sharma says:

    ಮಣ್ಣಿನ ಘಮಲು ಬಗ್ಗೆ ವಿಸ್ತೃತ ಲೇಖನ ಚೆನ್ನಾಗಿದೆ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: