ಓದುವ ಖುಷಿ – ಪುಸ್ತಕ ಪರಿಚಯ : ‘ದಹನ’

Share Button


ಕೃತಿ : ದಹನ (ಕಥಾ ಸಂಕಲನ)
ಲೇಖಕರು: ಎಸ್.ಎನ್. ಸೇತುರಾಮ್

“ಹೆಣ್ಣು ಮಕ್ಕಳ ಜವಾಬ್ದಾರಿ ಕಳೀಬೇಕು ಅಂದ್ರೆ ಮದುವೆ ಮಾಡಿ ಬಿಡಬೇಕು. ಆಮೇಲೆ ಅವ್ಳು ಗಂಡ ಬಿಟ್ಟು ಒಂಟಿಯಾದ್ರೂ ಪರವಾಗಿಲ್ಲ! ಮದುವೆ ಆಗದ ಹೆಣ್ಣು ಜವಾಬ್ದಾರಿ. ನಂತರ ಒಂಟಿಯಾದದ್ದಲ್ಲ”. ಹೀಗೆ ಸಮಾಜದ ದೋಷಗಳನ್ನು ನೇರಾ ನೇರಾ ಖಂಡಿಸಿ ರೋಗಗ್ರಸ್ಥ ಮನಸುಗಳ ಚಿಕಿತ್ಸೆಗೆ ನಿಲ್ಲುತ್ತಾರೆ ಸೇತುರಾಮ್. ಎಸ್.ಎನ್. ಸೇತುರಾಮ್‌ರವರ ಹೊಸ ಪುಸ್ತಕ ದಹನದಲ್ಲಿ ‘ನಂಗೇಲಿ‘ ಕಥೆಯಲ್ಲಿ ಬರುವ ಸಾಲುಗಳಿವು. ಈ ಪುಸ್ತಕ ಮೂರು ಕತೆಗಳನ್ನೊಳಗೊಂಡ ಎಲ್ಲರೂ ಹೇಳಬಯಸುವ ಹೇಳಲಾಗದ ಕಟು ವಾಸ್ತವವನ್ನು ಹೇಳುತ್ತವೆ. ಸೇತುರಾಮ್‌ರವರ ಮೊದಲನೇ ಪುಸ್ತಕ ‘ನಾವಲ್ಲ‘ದಲ್ಲಿಯೂ ಸಣ್ಣ ಸಣ್ಣ ಕತೆಗಳ ಮೂಲಕ ಓದುಗರ ಅಚ್ಚುಮೆಚ್ಚಾದವರು ಈಗ ದಹನಲ್ಲಿ ತುಸು ಧೀರ್ಘವಾದ ಕತೆಗಳನ್ನು ಮುಂದಿಟ್ಟಿದ್ದಾರೆ. ಪಾತ್ರಗಳ ಸಂಖ್ಯೆಯು ಹೆಚ್ಚಿದೆ. ಸೇತುರಾಮ್‌ರವರ ನಾಟಕಗಳು, ಧಾರಾವಾಹಿಗಳನ್ನು ನೋಡಿದವರಿಗೆ ಸೇತುರಾಮ್‌ರವರ ವಸ್ತು ನಿಷ್ಠತೆ, ನಿಖರತೆ, ನಿಷ್ಠೂರತೆಗಳು ಇಷ್ಟವಾಗಿರುತ್ತವೆ. ಹಾಗೆಯೇ ಕತೆಗಳಲ್ಲೂ ಅದನ್ನೇ ಮುಂದುವರೆಸುತ್ತಾ ಯಶಸ್ವಿಯಾಗಿದ್ದಾರೆ. ಸೇತುರಾಮ್‌ರವರ ಕತೆಗಳಲ್ಲಿ ಒಳ್ಳೆಯ ಮನಸಿನ ವ್ಯಕ್ತಿಗಳು ನೋವು ಅನುಭವಿಸುತ್ತಾರೆ. ಗಂಡಿನ ಕರಾಳ ಮುಖಗಳನ್ನು ಬಿಚ್ಚಿಡುತ್ತಾ ಸಮಾಜಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಘಟನೆಗಳನ್ನೇ ನೇರಾ ನೇರಾ ವಿವರಿಸುತ್ತಾರೆ. ಈ ಕತೆಗಳಲ್ಲಿ ಪಾತ್ರಗಳು ಕಾಲ್ಪನಿಕ ಅನ್ನೋದಕ್ಕಿಂತ ನಮ್ಮ ನಿಮ್ಮ ಮನೆಯ, ಸುತ್ತ ಮುತ್ತಲಿನ ವ್ಯಕ್ತಿಗಳೇ ಆಗಿರುವುದರಲ್ಲಿ ಸಂಶಯವೇ ಇರದಂತೆ ಪಾತ್ರವನ್ನು ಚಿತ್ರಿಸಲಾಗಿದೆ. ‘ನಂಗೇಲಿ’ ಕತೆಯಲ್ಲಿ ಸೌಮ್ಯ ಎಂಬ ಮಗಳ ಪಾತ್ರವನ್ನು ಎಷ್ಟು ನೈಜವಾಗಿಸಿ ಅವಳ ಭಾವನೆಗಳನ್ನು ಹೊರಹೊಮ್ಮಿಸಿದ್ದಾರೆ ಎಂದರೆ, ಸೌಮ್ಯ ನೋಡಲು ಅಷ್ಟೇನು ಸುಂದರವಾಗಿರದ ಮದುವೆ ವಯಸ್ಸಿಗೆ ಬಂದ ಹೆಣ್ಣು, ಅವಳ ಪೋಷಕರು ಅವಳನ್ನು ಮದುವೆ ಮಾಡಿ ಕಳುಹಿಸಿ ಜವಾಬ್ದಾರಿ ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಸೌಮ್ಯಳನ್ನು ಮದುವೆಯಾಗಲು ಒಪ್ಪುವ ವರ ಹಣ ಹಾಗೂ ಆಸ್ತಿಗಾಗಿ ಬೇಡಿಕೆ ಇಡುತ್ತಾನೆ, ಅಲ್ಲಿಗೆ ಅವನು ಪಡೆಯಲು ಬಯಸಿದ್ದು ಹಣ ಹಾಗೂ ಆಸ್ತಿ ಅದರೊಂದಿಗೆ ಸೌಮ್ಯ ಉಚಿತ.

“ಇಕ್ಕಟ್ಟು ಅಂಕಲ್! ಇಷ್ಟು ಕೊಟ್ರೆ ಮದುವೆ ಆಗ್ತೀನಿ ಅಂತಿದ್ದಾನೆ. ಇವ್ರು ಹೂಂ ಅಂದಿದ್ದಾರೆ. ಅವನನ್ನು ನೋಡಿದಾಗಲೆಲ್ಲ ಈ ಆಸ್ತಿಗಾಗಿ ಮದುವೆ ಅಂತ ಅನ್ನಿಸುತ್ತೆ. ಅಪ್ಪ ಕಷ್ಟಪಟ್ಟು ಕೈ ತೊಳಕೋತಾನೆ. ಅವನು ಆಸ್ತಿ ಹಣದ ಆಸೆಗೆ ಕೈ ಹಿಡೀತಾನೆ. ಆಗ್ತಿರೋದು ಮದುವೆ ಅಲ್ಲ ವ್ಯಾಪಾರ” ಎಂಬ ವಾಸ್ತವವನ್ನು ಸೌಮ್ಯ ತನ್ನ ತಂದೆಯ ಸ್ನೇಹಿತರಿಗೆ ನೋವನ್ನು ಹೇಳಿಕೊಳ್ಳುತ್ತಾ.. ಯಾವುದೇ ಹೆಣ್ಣು ಬಯಸೋದು ತನ್ನನ್ನು ಪ್ರೀತಿಸುವ ಗಂಡನ್ನು ಅದು ಬಿಟ್ಟು ಹಣ ಆಸ್ತಿಗೆ ಮದುವೆ ಅಂತಾದ್ರೆ ಆ ಹೆಣ್ಣನ್ನು ಗಂಡು ಪ್ರಾಣಿಯ ಹಾಗೆ ದೈಹಿಕ ಸುಖಕ್ಕಷ್ಟೇ ಬಳಸುತ್ತಾನೆ, ಹಾಗೂ ದೈಹಿಕ ಸುಖಕ್ಕೂ ಅವನು ತನ್ನಿಂದ ಯಾವುದೇ ಆಕರ್ಷಣೆ ಇಲ್ಲದಿದ್ದರೆ ಏನು ಮಾಡಲಿ ಎಂಬ ವಿವರಿಸಲು ಅಸಾಧ್ಯವಾದ ಸಂವೇದನೆಯನ್ನು ಹಂಚಿಕೊಳ್ಳುತ್ತಾಳೆ.

“ಅವನಿಗೆ ತಗೊಂಡ ಬೆಲೆ ಸಾಲದು ಅನ್ನಿಸಿಬಿಟ್ರೆ, ನಾಚಿ ನಾನು ಸುಖಕ್ಕೆ ಸಿದ್ಧವಾಗಿ ಹಾತೊರೆದು ಕೆಂಪಾದಾಗ, ಅವನು ಕಾಸು ಕೇಳಿಬಿಟ್ರೇ? ಎಷ್ಟು ಕೊಡ್ತೀಯ ಅಂದು ಬಿಟ್ರೇ?” ಅವನಿಗೆ ನಾನು ಮಾಂಸದ ಮುದ್ದೆಯಾಗಿ ಕಂಡ್ರೆ, ನನ್ನ ನೋಡಿ ನಕ್ಕರೇ?…..ಹೀಗೆ ಅಣ್ಣ ಅಪ್ಪನ ವ್ಯಾಪಾರದಲ್ಲಿನ ಭ್ರಷ್ಟತೆ, ಅಮ್ಮನ ಅಸಹಾಯಕತೆ, ಸೊಸೆಯು ಪರಿಸ್ಥಿತಿಯ ಒತ್ತಡ ಹಾಗೂ ಸ್ವಾತಂತ್ರ ಬಯಸಿ ದಾರಿ ಬಿಡುವ ಸಂಪೂರ್ಣ ಕುಟುಂಬ ವ್ಯವಸ್ಥೆಯೇ ಬುಡಮೇಲಾಗುವುದಕ್ಕೆ ಕಾರಣವನ್ನು ಈ ಕಥೆಯಲ್ಲಿ ತರ್ಕ ಮಾಡಲಾಗಿದೆ.

ಇನ್ನು “ಒಂದೆಲಗ” ಕತೆಯಲ್ಲಿ ಸಂತೆಯಲ್ಲಿ ಊಟವಿಲ್ಲದೇ, ಸೂರಿಲ್ಲದೇ, ಸಂಸ್ಕಾರವಿಲ್ಲದೇ ಬಿದ್ದಿದ್ದ ಬಾಲಕನನ್ನು ಮನೆಗೆ ಕರೆತಂದು ಸಾಕಿ ಸಲುಹಿದ ಅಕ್ಕನಾಗಿ, ತಾಯಿಯಾಗಿ ಉಪಚರಿಸಿ, ಎಂ.ಬಿ.ಬಿ.ಎಸ್. ಓದಲು ನೆರವು ನೀಡಿದ ಮೇಸ್ಟ್ರ ಮಗಳನ್ನೇ ಕಾಮಕ್ಕೆ ಬಳಸಿ ನಂತರ ಮದುವೆಯಾಗುವ, ನಂತರ ತನ್ನ ಹುದ್ದೆ ಹಾಗೂ ಸಮಾಜಿಕ ಸ್ಟೇಟಸ್ಗೆ ಸರಿಹೊಂದುವುದಿಲ್ಲ ಎಂಬ ಕಾರಣಕ್ಕೆ ಹುಚ್ಚಿ ಪಟ್ಟಕಟ್ಟಿ ಮಾನಸಿಕ ಸಮತೋಲನ ಕಳೆದುಕೊಂಡ ಹೆಣ್ಣಿನ ಚಿಕಿತ್ಸಾ ಕೇಂದ್ರಕ್ಕೆ ಶ್ಯಾಮಸುಂದರ ಸರಸ್ವತಿಯನ್ನು ಸೇರಿಸುತ್ತಾನೆ. ತಾನು ಎಂ.ಬಿ.ಬಿ.ಎಸ್. ಓದುವ ಕಾಲೇಜಿನ ಜ್ಯೂನಿಯರ್ ಹುಡುಗಿಯನ್ನೆ ಮತ್ತೆ ಮದುವೆಯಾಗುತ್ತಾನೆ. ಸರಸ್ವತಿಯ ಮಗಳನ್ನು ಸಾಕುತ್ತಾನೆ. ಆದರೆ ಮಗನನ್ನು ಗಾಳಿ ಪಟ ಹಿಡಿಯೋ ಭರದಲ್ಲಿ ಸರಸ್ವತಿಯೇ ಮಹಡಿ ಮೇಲಿಂದ ಕೈತಪ್ಪಿನಿಂದ ಕೆಳಗೆ ನೂಕುತ್ತಾಳೆ, ಎಂಟು ವರ್ಷದ ಮಗ ಸಾವನ್ನಪ್ಪುತ್ತಾನೆ. ಅಲ್ಲಿಗೆ ಸರಸ್ವತಿಗರ ಪೂರ್ಣ ಪ್ರಮಾಣದ ಹುಚ್ಚಿ ಪಟ್ಟಕೊಟ್ಟು ಮನೆಯಿಂದ ಹೊರಹಾಕುತ್ತಾನೆ. ಹೀಗೆ ಚಿಕಿತ್ಸಾ ಕೇಂದ್ರದಲ್ಲಿ ನಡೆಯುವ ಸಂಭಾಷಣೆಯೇ ಇಲ್ಲಿ ಕತೆಯಾಗಿದೆ. ಸರಸ್ವತಿಯ ಮಗಳು ತಾನು ಇಷ್ಟಪಡುವ ಗಂಡಸನ್ನು ಮದುವೆಯಾಗುವುದಾಗಿ ತಿಳಿಸಲು ಬಂದ ಸಂದರ್ಭದಲ್ಲಿ 14 ವರ್ಷಗಳಿಂದ ಮಾತನಾಡದೇ ಇದ್ದ ಸರಸ್ವತಿ ಮಾತನಾಡುತ್ತಾಳೆ. ತನಗಾದ ಪರಿಸ್ಥಿತಿ ಮಗಳಿಗೆ ಬರಬಾರದಂತೆ ತನ್ನೆಲ್ಲ ಕಷ್ಟ ಸುಖವನ್ನು ಹೇಳಿಕೊಳ್ಳುತ್ತಾಳೆ.

“ದೈಹಿಕ ಕ್ರಿಯೆಯಿಂದ ಯಾವ ಹೆಣ್ಣು ಕೆಡೋದು ಇಲ್ಲ, ಅದಾಗಲಿಲ್ಲ ಅಂದಾಕ್ಷಣ ಸ್ವಚ್ಛವು ಅಲ್ಲ ಅನಿವಾರ್ಯದ ಬಾವದಲ್ಲಿ ದಯವಿಟ್ಟು ಮದುವೆ ಆಗಬೇಡ. ನಾನು ಮಾಡಿದ ತಪ್ಪನ್ನೇ ನೀನು ಮಾಡಬೇಡ! “ಎನ್ನುತ್ತಾಳೆ ಅಮ್ಮ.

ಹೀಗೆ ಮಗನ ಸಾವಾಗಿದ್ರೂ, ಸರಸ್ವತಿಯ ಅಸಾಹಯಕತೆಯನ್ನು ನೋಡಿ, ಅವಳ ಬತ್ತಲ ದೇಹ ನೋಡಿ ದೈಹಿಕವಾಗಿ ಬಳಸಿಕೊಳ್ಳುವ ತನ್ನದೇ ಗಂಡ ಎಂಬ ಪದವಿ ಹೊಂದಿದವನ ವಿಕಾರತೆಯನ್ನು ಚಿತ್ರಿಸಲಾಗಿದೆ. ಗಂಡನಿಗೆ ಇವಳು ನನ್ನ ಹೆಂಡತಿ ಎಂಬ ಭಾವನೆಯೇ ಇರದಿದ್ದರೇ ಪ್ರಜ್ಞೆ ಮೂಡುವುದಾರೂ ಹೇಗೆ? ಆತ ಬರೀ ಅವಳಲ್ಲಿ ಬರೀ ಹೆಣ್ಣಿನ ದೇಹವನ್ನಷ್ಟೇ ಬಯಸಿದ್ದು, ಹಾಗಾಗಿ ಅವನಿಗೆ ಪ್ರಜ್ಞೆ ಮೂಡುವುದಿಲ್ಲ, ಎಂಬ ಸನ್ನಿವೇಶದಲ್ಲಿ ಕಾಣಬಹುದು.

“ಬಾಲ್ಯದ ಹೂರಣವೇ ಬಲಿತ ಮೇಲೂ! ಹೂವಾದ್ರೆ ಪರಿಮಳ, ಹೊಸಲಾದ್ರೆ ವಾಸನೆ!  ದೇಹ ಬದುಕೋದು ಅಭ್ಯಾಸದ ಮೇಲಲ್ವಾ? ಮನಸ್ಸಲ್ಲಿ ಪ್ರಜ್ಞೆ ಮೂಡಿದರೇ ದೇಹಕ್ಕೂ ಒಂದು ಅಂಕೆ” ಅಮ್ಮ ಪ್ರತಿ ರಾತ್ರಿ ಕಿಟಕಿಯಾಚೆ ನಕ್ಷತ್ರವನ್ನು ನೋಡುತ್ತಾ ಕಾಲ ಕಳೆಯುತ್ತಾಳೆ, ಮಗನನ್ನು ಹುಡುಕ್ತಾಳೆ, ಅಲ್ಲಿ ಮಗ ಮನೆ ಮಾಡಿದ್ದಾನೆ, ನನ್ನೂ ಅಲ್ಲಿಗೆ ಕರುಸ್ಕೊಳ್ತಾನೆ ಅಂತ.

ಇನ್ನು “ದಹನ” ಕತೆಯಲ್ಲಿ ಹೆಚ್.ಬಿ.ಆರ್. ಸರ್ಕಾರಿ ನೌಕರನಾಗಿದ್ದು, ಕತೆ ಕವನ, ನಾಟಕ ಹೀಗೆ ಸಾಹಿತ್ಯಿಕವಾಗಿ ಗುರುತಿಸಿಕೊಂಡು ಗುರು ಸ್ಥಾನದಲ್ಲಿರಬೇಕಾದವನ ಡೋಂಗಿತನ, ಚಪಲತೆಯನ್ನು ಹಾಗೂ ಅವನ ಅಭಿಮಾನಿಯಾದ ಅಕ್ಷತಾಳ ಸಾಂಸಾರಿಕ ಸಮಸ್ಯೆಯನ್ನು ನಿರೂಪಿಸಲಾಗಿದೆ. ಹೇಗೆ ಒಬ್ಬ ಹೆಣ್ಣು ಆದರ್ಶಪ್ರಾಯವಾಗಿರುವ ಹಿರಿಯನ್ನು ಗೌರವಿಸಿ ತನ್ನ ಗಂಡನ ಲೈಂಗಿಕ ನಿಶ್ಯಕ್ತಿಯ ಸಮಸ್ಯೆಯನ್ನು ಹೇಳಿಕೊಳ್ಳುತ್ತಾಳೆ. ಆದರೆ ಅವನು ಅವಳನ್ನು ಸಂತೈಸಿ ಸಮಾಧಾನ ಮಾಡೋದನ್ನು ಬಿಟ್ಟು ಅವಳನ್ನು ಸುಖಿಸಲು ಮುಂದಾಗುತ್ತಾನೆ.

“ಕೊಟ್ಟಿಗೇಲಿ ಹಸು ಗರ್ಭ ಧರಿಸದಿದ್ರೆ ಹೋರಿ ಬದಲಿಸ್ತಾರೆ. ಮನೇಲಿ ಹೆಂಗಸು ಬಸಿರಾಗದಿದ್ರೆ ಹೆಂಗಸನ್ನೇ ಬದಲಿಸ್ತಾರೆ.”
ಈ ಸಾಲು ಹೀಗೆ ಸಮಾಜದ ರೋಗಿಷ್ಠ ಮನಸನ್ನು ಬತ್ತಲು ಮಾಡುತ್ತವೆ. ಅಕ್ಷತಾ ಒಂದು ಮಗುವನ್ನು ದತ್ತು ಪಡೆದು ಸಾಕುತ್ತಾಳೆ. ಹೆಚ್.ಬಿ.ಆರ್. ಮಾತ್ರ ಕ್ಷಣ ಕ್ಷಣಕ್ಕೂ ಅಕ್ಷತಾಳನ್ನು ಸುಖಿಸಲು ಯತ್ನಿಸುತ್ತಾನೆ. ಇದನ್ನು ಅರಿತ ಅಕ್ಷತಾ ಹೆಚ್.ಬಿ.ಆರ್.ನನ್ನು ಕೆರಳಿಸಿ ನಂತರ ಕಾಯಿಸಿ ಹಂತ ಹಂತವಾಗಿ ಅವನಲ್ಲಿ ಕಾಮುಕತನವನ್ನು ದಹಿಸುತ್ತಾಳೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಹೆಚ್.ಬಿ.ಆರ್. ಬದಲಾಗುತ್ತಾನೆ, ಸತ್ತು ಮರುಹುಟ್ಟು ಪಡೆಯುತ್ತಾನೆ ಸುಖಿಸಲು ಯೋಚಿಸಿದ್ದವಳೆ ಇಲ್ಲಿ ತಾಯಿಯಾಗುತ್ತಾಳೆ,

ಕೊನೆಗೆ ಹೆಚ್.ಬಿ.ಆರ್. “ಬಿರುದು ಬಾವಲಿ ಪ್ರಶಸ್ತಿಗಳು ನಾನು ಬದುಕಿದ ಸಮಾಜದ ಮನಸ್ಥಿಯ ಕುರುಹೇ ಹೊರತು ನನ್ನ ಯೋಗ್ಯತೆಯ ಮಾಪನವಲ್ಲ” ಎಂಬ ಮನಸ್ಥಿತಿಯನ್ನು ಹೊಂದುತ್ತಾನೆ.

ಹೀಗೆ ಸೇತುರಾಮ್‌ರವರು ಈ ಕತೆಗಳಲ್ಲಿ ಗಂಡಿನ ಕಾಮುಕತನ, ಸೂಕ್ಷ್ಮಸಂವೇದನೆ ಇರದ ನಡವಳಿಕೆ, ಹೆಣ್ಣನ್ನು ಶೋಷಿಸುವುದನ್ನು ಧಿಕ್ಕರಿಸಿ, ಹೆಣ್ಣು ಹೇಳಬೇಕಾದದ್ದನ್ನು ತಾವೇ ಹೇಳಿದ್ದಾರೆ. ಗಂಡು ಯಾವಾಗಲೂ ಬಯಸಿದ್ದು ಬಾಹ್ಯವೇ, ಆದರೆ ಹೆಣ್ಣು ಆಂತರ್ಯವನ್ನು ಎಂಬುದನ್ನು, ಮುಖವಾಡ ಧರಿಸಿರುವ ಕೀಳು ಮನಸ್ಥಿತಿಯನ್ನು, ಪರಿಸ್ಥಿತಿಯ ಲಾಭ ಪಡೆಯುವ ವಿಕೃತಿಗಳನ್ನು ಬಹಿರಂಗಪಡಿಸುತ್ತಾ, ಹೆಣ್ಣಿನ ನೋಟದಿಂದ ಸಮಾಜವನ್ನು ನೋಡಿ ಚಿಕಿತ್ಸೆ ನೀಡುವ ವೈದ್ಯರಂತೆ ಕಾಣುತ್ತಾರೆ. ಸದಾ ಪ್ರಜ್ಞೆಯನ್ನು ಬಡಿದೆಬ್ಬಿಸುವ ದಹನ ಕೃತಿಯನ್ನು ಓದಲೇ ಬೇಕಾದ ಜರೂರು ನಮಗೆಲ್ಲಾ ಇದೆ.

-ಶರತ್ ಪಿ.ಕೆ. ಹಾಸನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: