‘ಅಪ್ಪ’

Share Button

ತಮ್ಮ ಮುಂದಿರುವ ಈ ಬರಹ ಶ್ರೀ ಎ. ಆರ್. ಮಣಿಕಾಂತ್ ಅವರ ‘ಅಪ್ಪ ಅಂದರೆ ಆಕಾಶ’ ಎಂಬ ಕನ್ನಡ ಹೊತ್ತಿಗೆಯ ಬಗ್ಗೆಯಾಗಲಿ, ಅಥವಾ ಶ್ರೀ ನಾಗರಾಜ ಮುಕಾರಿಯವರ ‘ಅಪ್ಪ ಅಂದರೆ ಹಾಗೆಯೇ..’ ಎನ್ನುವ ಅವರ ಕವಿತೆಯ ಬಗ್ಗೆಯಾಗಲಿ ಹೇಳುತ್ತಿಲ್ಲ. ಬದಲಾಗಿ ಇಲ್ಲಿ ಉಲ್ಲೇಖಿಸುತ್ತಿರುವ ‘ಅಪ್ಪ’ ಮೊನ್ನೆ ನನ್ನ ಮಗನ ಜೊತೆಗೂಡಿ ನೋಡಿದ ಅಪ್ಪನ ಆಳ ಪಾತಳದ ಪ್ರೀತಿಯ ಅರ್ಥ ನೀಡುವ ಹಿಂದಿ ಸಿನೇಮಾ ಸಂಜು….. ಹೌದು, ಖ್ಯಾತ ಹಿಂದಿ ನಿರ್ದೇಶಕ ರಾಜಕುಮಾರ ಹಿರಾನಿ ಅವರ ನಿರ್ದೇಶನದಲ್ಲಿ, ಪ್ರಖ್ಯಾತ ಹಿಂದಿ ನಟ ಸುನಿಲ್ ದತ್ತ ಹಾಗೂ ನರ್ಗಿಸ್ ದತ್ತರ ಪುತ್ರ ಸಂಜಯ ದತ್ತ ಅವರ ಜೀವನ ಆಧಾರಿತ ಚಿತ್ರ ಸಂಜು….!

ಸಿನೇಮಾ ರಂಗದಲ್ಲಿ ಹುಡುಗಾಟದ ಹುಡುಗನಾಗಿ, ಪಾದರಸದ ಚಟುವಟಿಕೆಯಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತ, ಏ ಜವಾನಿ ಹೈ ದಿವಾನಿ ಸಿನೇಮಾದ ಜನಪ್ರಿಯ ಹಾಡುಗಳ ಮೂಲಕ ಯುವ ಹೃದಯಗಳನ್ನು ತನ್ನತ್ತ ಸೆಳೆಯುತ್ತ, ಮೊನ್ನೆಯಷ್ಟೆ ಬಿಡುಗಡೆಗೊಂಡ ಚಿತ್ರ ಸಂಜುದಲ್ಲಿ ಸಂಜಯ ದತ್ತನ ಪಾತ್ರದ ಆಭಿನಯ, ಆತನ ಆಂಗಿಕ, ಹಾವ-ಭಾವ ಮಾತಿನ ಶೈಲಿ, ಇತ್ಯಾದಿಗಳನ್ನು ತನ್ನ ಮಟ್ಟದಲ್ಲಿ ಪ್ರೇಕ್ಷಕನ ಮುಂದಿಟ್ಟು ರಂಜಿಸಿ, ಹೌದೆನಿಸಿಕೊಂಡು ಸಿನೇರಂಗದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಬಳಗವನ್ನು ಸೃಷ್ಟಿಸುತ್ತಿರುವ ಯುವ ನಟ ರಣಬಿರ ಕಪೂರನ ಬಗ್ಗೆಯೂ ಸಹ ನಾನಿಲ್ಲಿ ಹೇಳುತ್ತಿಲ್ಲ.

ತಾಯಿಯಾಗಿ ತನ್ನ ಮಗನ ಸರ್ವ ಸಂಭ್ರ್ರಮದಲ್ಲಿಯೂ ಭಾಗವಹಿಸಬೇಕೆಂದು, ಅವನ ಮೊದಲ ಚಿತ್ರ ‘ರಾಕಿ’ಯ ಮೊದಲ ಪ್ರದರ್ಶನದಲ್ಲಿ ಮುಂದಿನ ಸಾಲಿನ, ಮಧ್ಯದ ಆಸನದಲ್ಲಿಯೇ ಕುಳಿತು ನೋಡಿ ಬೆನ್ನು ಬೆನ್ನುತಟ್ಟಬೇಕೆಂದು ಬಯಸಿದಷ್ಟೇ ಅಲ್ಲದೆ, ಮಗನ ಮದುವೆಯ ದಿಬ್ಬಣ ಸಂಭ್ರ್ರಮದಲ್ಲಿ ಮದುಮಕ್ಕಳ ಮುಂದೆ ನರ್ತಿಸುವ ಅಪಾರ ಆಸೆಯಿಟ್ಟುಕೊಂಡು ಅರ್ಬುದ ರೋಗಕ್ಕೆ ಆಪ್ಪಿಕೊಂಡು ದಿನಗಳೆಣೆಸುತ್ತಿದ್ದ ಖ್ಯಾತ ನಟಿ ನರ್ಗಿಸ್ ದತ್ತ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ ಮೋನಿಷಾ ಕೊಯಿರಾಳ ಅಭಿನಯದ ಬಗ್ಗೆಯೂ ಸಹ ನಾನಿಲ್ಲಿ ಬರೆಯುತ್ತಿಲ್ಲ.

ಬಾಬ್ರಿ ಮಸೀದಿಯ ಧ್ವಂಸ, ಮುಂಬೈ ಸ್ಪೋಟದ ಕಾರಣ, ನರ್ಗಿಸಳ ಮೇಲಿನ ಅಪಾರ ಪ್ರೀತಿಯಿಂದಾಗಿಯೋ ಅಥವಾ ಬಾಬ್ರಿ ಮಸೀದಿಯ ಧ್ವಂಸದಲ್ಲಿ ಘಾಸಿಗೊಳಗಾದ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಲೋಕಸಭೆಯ ನಾಯಕನ ಸಹಾನೂಭೂತಿಯ ಗುಣವನ್ನೋ ಆತಂಕವಾದಿಗಳ ಆರ್ಭಟ, ಆಕ್ರೋಶ, ಜನರ ಆಕ್ರಂದನ ಬಗ್ಗೆಯಾಗಲಿ ನಾನಿಲ್ಲಿ ಬರೆಯಿತ್ತಿಲ್ಲ.

ಸಂಜಯನ ಅಪ್ಪನ ಪಾತ್ರ ನಿಭಾಯಿಸಿ, ಪ್ರೇಕ್ಷನನ್ನು ಇವನೇ ಸುನಿಲ್ ದತ್ತ ಎನ್ನುವ ಮಟ್ಟಿಗೆ ಪ್ರಬುದ್ಧ ಅಭಿನಯ ನೀಡಿದ ಪರೇಶ ರಾವಲನ ಬಗ್ಗೆಯೂ ಸಹ ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಆದರೆ ಹೆಸರಿಗಷ್ಟೇ ಸುನಿಲ್ ದತ್ತ, ಆ ಹೆಸರಿನ ಹಿಂದಿದ್ದ ‘ಅಪ್ಪ’ ಎನ್ನುವ ಮಗನ ಪ್ರತಿ ಕ್ಷಣದ ಆಪ್ತತೆಯ ಬಗ್ಗೆ ನಾನಿಲ್ಲಿ ಬರೆಯುತ್ತಿರುವುದು.

‘ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವ ಲೋಕ ಪ್ರಸಿದ್ಧಿ ಮಾತು ಪ್ರತಿಯೊಬ್ಬರ ಜೀವನದಲ್ಲಿ ಎಷ್ಟೊಂದು ಸತ್ಯ. ಇಲ್ಲಿಯೂ ಸಹ ಅಷ್ಟೆ. ಅಪ್ಪ ನೀಡಿದ ಸ್ವಾತಂತ್ರವನ್ನು ಸ್ನೇಹಿತನೊಬ್ಬನ ಸಹವಾಸದಿಂದ ಉಢಾಳನಾಗಿ, ಕುಡುಕನಾಗಿ, ಬೀಡಿ-ಸಿಗರೇಟು ಹೀರುವ ಯುವಕನಾಗಿ, ಕೊನೆಗೆ ಹಿರಾಯಿನ್, ಕೋಕಿನ್, ಮೆರೆಜಾನಾ, ಎಲ್.ಎಸ್.ಡಿ ಯಾವುದೇ ಮದ್ದನ್ನು ಬಿಡದೇ ಅವೆಲ್ಲವುಗಳನ್ನು ತನ್ನೆಡೆಗೆ ಅಹ್ವಾನಿಸಿಕೊಂಡು ಮಹಾ ವ್ಯಸನದ ಮದ್ದುಗಳಿಗೆ ಬಲಿಯಾಗುವ ಸಂಜಯನನ್ನು ಸರಿದಾರಿಗೆ ತರಲು ಅಪ್ಪ ಅನುಭವಿಸಿದ ಕಷ್ಟ, ಪಟ್ಟ ಪಾಡು, ಆತನನ್ನು ಎತ್ತರದಲ್ಲಿ ನಿಲ್ಲಿಸುತ್ತದೆ.

ಇಲ್ಲಿ ನಮ್ಮನ್ನೇ ನಾವು ಒಮ್ಮೆ ಹೋಲಿಸಿಕೊಂಡಾಗ ನಮ್ಮ ಮಕ್ಕಳು ಮಾಡಿದ ತಪ್ಪನ್ನು ಸಮಾಜದ ಎದುರಿಗೆ ಹೆಚ್ಚಾಗಿ ಯಾವುದೇ ತಂದೆಯೂ ಒಪ್ಪಿಕೊಳ್ಳುವುದಿಲ್ಲ, ಆದಷ್ಟು ಮಟ್ಟಿಗೆ ಸಮರ್ಥಿಸಿಕೊಳ್ಳುತ್ತಾ ಆತನನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿಯೇ ಇರುತ್ತಾನೆ. ನಮ್ಮ ಈ ಹೆಣಗಾಟವನ್ನು ಉಹಿಸಿಕೊಂಡರೆ, ಸುನಿಲ ದತ್ತನ ಆ ದಿನದ ಸ್ಥಿತಿ ಹೋಲಿಸಿದರೆ, ಕರಳು ಚುರ್ ಅನ್ನುತ್ತೆ. ಒಂದುಕಡೆ ಮರಣಶಯ್ಯೆಯಲ್ಲಿ ಮಲಗಿದ ರೋಗಗ್ರಸ್ಥ ಹೆಂಡತಿ, ಇನ್ನೊಂದಡೆ ವ್ಯಸನಕ್ಕೆ ಬಲಿಯಾಗಿ ಸಾವಿನೊಡನೆ ಸರಸವಾಡುತ್ತಿರುವ ಮಗ, ಅಳಬೇಕೆಂದರೆ ಹೆಣ್ಣು ಹೃದಯವಲ್ಲ, ದುಖಃವನ್ನು ಅದುಮಿಟ್ಟ ಅಪ್ಪನಿಗೆ ಆಸರೆಯಾಗುವವರು ಯಾರು? ಇಲ್ಲ.. ಯಾರೂ ಇಲ್ಲ…!! ಸ್ಥಿತಿ ಹೇಗಿತ್ತು ನೋಡಿ..!?.

ಅದೆಂತಹ ಸಂದರ್ಭ, ಮಗನ ಮೇಲೆ ಎಕೆ-೫೬ ರೈಫಲ್ ಪ್ರಕರಣ, ಮುಂಬೈ, ಸ್ಪೋಟಕದಲ್ಲಿ ಆರ್.ಡಿ.ಎಕ್ಸ್ ಗೊಂದಲ, ಈ ದಾವೆಯಲ್ಲಿ ಬಂಧಿಯಾಗುವ ಭೀತಿ, ಕೈಯಲ್ಲಿರುವ ಸಿನೇಮಾಗಳು ಕೈತಪ್ಪಿ ಹೋಗುವ ಆತಂಕ. ಈ ಎಲ್ಲವುಗಳು ಸರಿ ಅಥವಾ ತಪ್ಪು ಎನ್ನುವ ಪ್ರಕರಣಗಳ ಬಗ್ಗೆಯೂ… ನಾನಿಲ್ಲಿ ಚರ್ಚಿಸುತ್ತಿಲ್ಲ. ತನ್ನ ವ್ಯಕ್ತಿತ್ವವನ್ನೇ ಮರೆತು ಸಮಾಜದಲ್ಲಿ ತನ್ನ ಕಂದನಿಗೊಂದು ಸ್ಥಾನ ಕೊಡಿಸುವ ನಿಟ್ಟಿನಲ್ಲಿ ‘ಅಪ್ಪ’ ಎನ್ನುವ ವ್ಯಕ್ತಿ ಮಗನನ್ನು ಖಳನಾಯಕನಿಂದ ಮುನ್ನಾಭಾಯಿಯಾಗಿ ಮಾಡಿ ಸಮಾಜದ ಎದುರಿಗೆ ನಿಲ್ಲಿಸಿದ ಅಪ್ಪ ನೀನೆಂತಹ ಜಾದುಗಾರ. ಈ ಬಗ್ಗೆ ಸುನಿಲ್ ಎನ್ನುವ ಅಪ್ಪ ಸೆಣೆಸಿದ ಸಾಹಸ ತುಂಬಾ ಮೆಚ್ಚುವಂತಹದ್ದು.

ಅಪ್ಪ ಎನ್ನುವ ವ್ಯಕ್ತಿ ಹಾಗೆನೇ, ಏನೋ ಎನಿಸುತ್ತದೆ ಅಲ್ಲವೇ?. ಮೊನ್ನೆ ನಾನೊಂದು ವ್ಯಾಟ್ಸಪ್ ಸಂದೇಶ ಓದುತ್ತಿದ್ದಾಗ ಅಪ್ಪನ ಬಗ್ಗೆ ಇದ್ದ ಸಾಲೊಂದು ಮನಸ್ಸಿಗೆ ತಾಗಿತು. ಮಹಾನುಭಾವರೊಬ್ಬರು ತನ್ನ ಬಾಲ್ಯ ಜೀವನಾವಧಿಯಲ್ಲಿ ಅಪ್ಪನ ಹೆಗಲ ಮೇಲೆ ಕುಳಿತು ಜಾತ್ರೆಯ ಉತ್ಸವದಲ್ಲಿರುವ ದೇವರನ್ನು ಕುರಿತು ‘ಅಪ್ಪಾ ದೇವರು ಎಲ್ಲಪ್ಪ’? ಎಂದು ಪ್ರಶ್ನೆ ಕೇಳಿದ್ದನ್ನು ನೆನೆಪಿಸಿಕೊಂಡ ಸಂದರ್ಭ ಮತ್ತು ಅದನ್ನು ಕುರಿತಂತೆ ಯೋಚನೆ ಮಾಡಿದಾಗ ತಾನಾಗ ಕುಳಿತ್ತದ್ದು ದೇವರ ಹೆಗೆಲ ಮೇಲೆನೇ ಅಲ್ಲವೇ….? ಎನ್ನುವ ವಿಚಾರ ಎಂತಹವರನ್ನೂ ಚಿಂತನೆಗೆ ಹಚ್ಚುತ್ತದೆ ಅಲ್ಲವೇ? ಅಂತಹ ಅಪ್ಪ ನನ್ನ-ನಿಮ್ಮ ಮನೆಯಲ್ಲಿ ಇದ್ದಾರೆ. ಅವರಿಗೆ ವೃದ್ಧಾಶ್ರಮದ ವಿಳಾಸ ನೀಡದೆ, ವೃಧ್ಧಾಪ್ಯದ ದಿನಗಳಲ್ಲಿ ಸಂತೋಷದಿಂದ ಕಳೆಯುವ, ಅಪ್ಪನ ನಗುವನ್ನು ಮನೆಯ ಮಗುವಿನ ನಗುವಿನೊಂದಿಗೆ ಸಂಮಿಳಿತಗೊಳಿಸುವಂತಹ ಆಪ್ತ ಹೃದಯವನ್ನು ಆ ದೇವರು ನಮಗೆ ನೀಡಲಿ. ತನ್ಮೂಲಕ ಅಪ್ಪನ ಅರ್ಧ‌ಋಣವನ್ನಾದರೂ ತೀರಿಸುವ ಅವಕಾಶ ಆ ಭಗವಂತ (ಅಪ್ಪ) ಕರುಣಿಸಲಿ ಎಂದು ಪ್ರಾರ್ಥಿಸೋಣವೇ?

– ಎಸ್. ಎ. ಕಾಂತಿ

1 Response

  1. Nagraraj Mukari (chiraabhi) says:

    ಸುಂದರ ಬರಹ…ಹೀಗೆಯೇ ಮುಂದುವರೆಯಲಿ ನಿಮ್ಮ ಬರವಣಿಗೆ …

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: