ಕೋಲ್ಕತಾದೊಳಗೊಂದು ಸುತ್ತು

Share Button

ಶ್ರುತಿ ಶರ್ಮಾ, ಬೆಂಗಳೂರು.

ಭಾರತದ ಕೆಲವು ಅನರ್ಘ್ಯ ರತ್ನಗಳ, ನೋಬೆಲ್ ಪ್ರಶಸ್ತಿ ವಿಜೇತರ, ಒಂದಷ್ಟು ಕವಿ ಪುಂಗವರ, ಸಾಹಿತಿಗಳ ತವರೂರು – ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಅರಿಯಲ್ಪಡುವ ಕೋಲ್ಕತಾವನ್ನು ನೋಡುವ ಕುತೂಹಲ ಹಲವು ದಿನಗಳಿಂದ ಇತ್ತು. ಅತಿಬುದ್ಧಿವಂತ ಬೆಂಗಾಲಿ ಗೆಳತಿಯರ ಬಾಯಲ್ಲಿ ಕೋಲ್ಕತಾದ ವರ್ಣನೆಗಳನ್ನು ಕೇಳಿ ಈ ಕುತೂಹಲವೂ ಸ್ವಲ್ಪ ಹೆಚ್ಚೇ ಇತ್ತು. ಹೀಗೊಂದು ಸಲ ಕೋಲ್ಕತಾ ಪ್ರವಾಸದ ಯೋಜನೆ ಕಾರ್ಯರೂಪಕ್ಕೆ ತಂದಿದ್ದಾಯಿತು.

ಕೋಲ್ಕತಾದಲ್ಲಿ ಇಳಿಯುತ್ತಿದ್ದಂತೆ ಅಲ್ಲಿನ ತಾಪಮಾನ ನಮ್ಮೂರಾದ ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆಗೆ ಬಂದಿಳಿದ ಅನುಭವ ಕೊಟ್ಟಿತ್ತಾದರೂ ಆ ಶೆಖೆಯಲ್ಲೂ ದೃಶ್ಯಗಳು ಭಿನ್ನವಾಗಿ ಸೆಳೆದಿದ್ದುವು. ಅದಾಗಲೇ ಹಳತೆನಿಸುವ ಬೃಹತ್ ಅಪಾರ್ಟ್ಮೆಂಟುಗಳು, ಹಳೆ ಪಂಚತಾರಾ ಹೋಟೆಲುಗಳು ಈ ನಗರವು ಬಹಳ ಹಿಂದೆಯೇ ಅಭಿವೃದ್ಧಿಗೊಂಡಿರುವುದನ್ನು ಸಾರುತ್ತಿದ್ದುವು. ಹಾಗೆಂದು ಒಂದು ರಸ್ತೆಯ ಒಂದು ಬದಿ ಐಷಾರಾಮಿ ಎನಿಸುತ್ತಿದ್ದರೆ ಮತ್ತೊಂದು ಬದಿ ಕೊಳಚೆ ಇದ್ದುದೂ ಇದೆ. ರಸ್ತೆಯ ಒಂದು ಬದಿ ಪಂಚತಾರಾ ಹೋಟೆಲ್, ಅದಕ್ಕೆ ಮುಖ ಮಾಡಿ ಇನ್ನೊಂದು ಬದಿ ನೇರವಾಗಿ ಕೊಳಚೆಯ ಮಧ್ಯಲ್ಲಿ ಪುಟ್ಟ ಹೋಟೆಲ್ ಗಾಡಿಗಳನ್ನು ಕಂಡು ಅಚ್ಚರಿಯೆನಿಸುತ್ತದೆ. ಇವೆರಡಕ್ಕೂ ಬರುವ ಗ್ರಾಹಕರನ್ನೂ ಇಲ್ಲಿ ಕಾಣಲು ಸಾಧ್ಯ.

ಅಂಬಾಸಿಡರ್ ಟ್ಯಾಕ್ಸಿಗಳು ಎಲ್ಲೆಂದರಲ್ಲಿ ಕಂಡುಬರುವ ಕೋಲ್ಕತಾ ನಗರದಲ್ಲಿ ಜನರು ತಮ್ಮ ಸ್ವಂತ ವಾಹನಗಳನ್ನು ತೆಗೆದುಕೊಂಡು ಹೋಗುವ ದೃಶ್ಯ ಕಡಿಮೆಯೇ. ಹಳೆಯದಾದರೂ ಗಟ್ಟಿಮುಟ್ಟಾಗಿರುವ ಬಸ್ಸುಗಳು, ಹೊಗೆ ಕಾರುತ್ತಿರಲಿಲ್ಲ. ಪ್ರಮುಖ ರಸ್ತೆಗಳು ಶುಚಿಯಾಗಿದ್ದು ಚಾಲಕರು ಕಟ್ಟುನಿಟ್ಟಾಗಿ ಸಂಚಾರ ನಿಯಮಗಳನ್ನು ಪಾಲಿಸುವುದೂ ಕಾಣಸಿಗುತ್ತದೆ. ಅಂಬಾಸಿಡರ್ ಕಾರಿನಲ್ಲಿ ಹೋಗುವ ಆಶೆಯಿಂದ ಒಂದು ಕಡೆ ಟ್ಯಾಕ್ಸಿಯಲ್ಲೇ ಹೋಗಿ ಬಂದಿದ್ದೂ ಆಯಿತು. ಆದರೆ ಎಲ್ಲಾ ಕಡೆಯಂತೆ ಆನ್ಲೈನ್ ಕ್ಯಾಬ್ ಬುಕ್ ಮಾಡುವುದು ಹೆಚ್ಚು ಕ್ಷೇಮಕರ ಅನುಭವ ಕೊಟ್ಟಿತ್ತು.

ಇದಲ್ಲದೆ, ಈಗ್ಗೆ ಹತ್ತು ವರ್ಷ ಹಿಂದೆಯೇ ಮೆಟ್ರೋ ರೈಲಿನ ವ್ಯವಸ್ಥೆ ಇದ್ದಿರುವ ಕೋಲ್ಕತಾದಲ್ಲಿ ಅದರ ಟಿಕೇಟ್ ಬೆಲೆಯೂ ಕಡಿಮೆಯೆಂದರೆ ಐದು ರೂಪಾಯಿ ಆಗಿದ್ದು, ಇದರ ಉಪಯೋಗ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತದೆನ್ನುವುದು ವಿಶೇಷ. ಪೂರ್ಣವಾಗಿ ಅಂಡರ್ಗ್ರೌಂಡ್ ಮೆಟ್ರೋ ರೈಲುಗಳು ಸಧ್ಯಕ್ಕೆ ಇದ್ದು, ಮುಂದಿನ ಹಂತದ ಕೆಲಸಗಳು ನಾವು ಭೇಟಿ ಕೊಟ್ಟಾಗ(೨೦೧೭ ಅಕ್ಟೋಬರ್) ನಡೆಯುತ್ತಿತ್ತು.

ಇದೆಲ್ಲಾ ಅಲ್ಲದೆ ನಗರದ ನಾಸ್ಟಾಲಜಿಕ್ ಇಫ಼ೆಕ್ಟ್ ಹೆಚ್ಚಿಸುವಂತೆ ರಸ್ತೆಗಳ ಜೊತೆ ಪುಟ್ಟ ರೈಲು ಹಳಿಗಳಿದ್ದು ಇದರ ಮೇಲೆ ಪುಟ್ಟ ಎರಡು ಡಬ್ಬಿಗಳ ರೈಲು ಸಂಚರಿಸುತ್ತದೆ. ಈ ರೈಲಿನ ವ್ಯವಸ್ಥೆ ಒಂದಷ್ಟು ಕಡೆ ಕಾಣಸಿಗುತ್ತದೆ. ಇದನ್ನೂ ಕೂಡಾ ಸದುಪಯೋಗಪಡಿಸಿಕೊಳ್ಳುವ ಸಾಕಷ್ಟು ಮಂದಿಯನ್ನು ಕಾಣಬಹುದು. ಒಟ್ಟಾರೆಯಾಗಿ ಸಾಧ್ಯವಾದಷ್ಟು ಮಟ್ಟಿಗೆ ಕಮ್ಮಿ ವೆಚ್ಚದಲ್ಲಿ ಜನರಿಗೆ ಸಾರಿಗೆ ವ್ಯವಸ್ಥೆಗಳು ಲಭ್ಯವಿದ್ದು, ಅವೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸರಕಾರ, ಅದರ ಸದ್ಬಳಕೆ ಮಾಡುವ ಜನರು ಎಲ್ಲರೂ ಮೆಚ್ಚುಗೆಗೆ ಪಾತ್ರರು. ಹೀಗಾಗಿಯೋ ಏನೋ, ಖಾಸಗಿ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿದ್ದ ದೃಶ್ಯ ತುಂಬಾ ಕಡಿಮೆ, ಟ್ರಾಫ಼ಿಕ್ ಜಾಂನ ದೃಶ್ಯ ಅಲ್ಲಿ ಕಾಣಲಿಲ್ಲ.

ಇನ್ನು ಕೋಲ್ಕತಾ ನಗರಿಯು ಸುಮಾರಷ್ಟು ಹಚ್ಚ ಹಸುರನ್ನೇ ಹೊಂದಿದೆ. ವಿಶಾಲವಾದ “ಮೈದಾನ್” ಎಂದು ಕರೆಯಲ್ಪಡುವ ಹುಲ್ಲುಗಾವಲಿನ ಪ್ರದೇಶವು ಒಳ್ಳೆಯ ನಡಿಗೆಗೆ ಅನುಕೂಲವಾಗುವಂತಿದೆ. ಇದರ ಸಮೀಪದಲ್ಲಿ ವಿಕ್ಟೋರಿಯಾ ಸ್ಮಾರಕ ಕಟ್ಟಡವೂ ಇದ್ದು, ಇವೆಲ್ಲಾ ಹಲವಾರು ಎಕರೆಗಳಲ್ಲಿ ವ್ಯಾಪಿಸಿದೆ. ಇಲ್ಲಿನ ಜಾಗಗಳನ್ನು ಸುತ್ತು ಹಾಕಲು ಕುದುರೆಗಾಡಿಗಳೂ ಲಭ್ಯವಿದೆ.

ಇಲ್ಲಿನ ಹಲವು ಪ್ರದೇಶಗಳಲ್ಲಿ ಛಾಯಾಗ್ರಹಣಕ್ಕೆ ಅವಕಾಶವಿಲ್ಲ. ಪ್ರಮುಖ ಸ್ಥಳಗಳಾದ ಹೌರಾ ಸೇತುವೆ, ವಿಕ್ಟೋರಿಯಾ ಮೆಮೋರಿಯಲ್, ಬೇಲೂರು ಮಠ, ದಕ್ಷಿಣೇಶ್ವರ ಕಾಳಿ ದೇವಸ್ಥಾನ, ಹಾಗೂ ಬಿರ್ಲಾ ಮಂದಿರ ಇಲ್ಲೆಲ್ಲೂ ಛಾಯಾಗ್ರಹಣಕ್ಕೆ ಅವಕಾಶವಿಲ್ಲದ್ದು ಕಂಡುಬಂತು. ಕೆಲವು ಕಡೆ ಸರಕಾರದ ನಿಷೇಧವಾದರೆ ಇನ್ನು ಕೆಲವು ಕಡೆ ಅದು ಆಡಳಿತಗಾರರ ನಿರ್ಧಾರ. ಸ್ಥಳಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಅಲ್ಲ, ನಿಜವಾದ ಕಣ್ಣುಗಳ ಮೂಲಕ ನೋಡಿ ಆಸ್ವಾದಿಸುವುದು ಇಲ್ಲಂತೂ ಅನಿವಾರ್ಯ, ಅವಕಾಶ ಕೂಡಾ ಹೌದು.

ಇಲ್ಲಿನ ಬೀದಿಗಳಲ್ಲಿ ಸುಮ್ಮನೆ ಒಂದು ಸುತ್ತು ಹಾಕಿದಾಗ ಇಲ್ಲಿ ವಾಹನಗಳ ಹೊಗೆಗಿಂತ ಧೂಮಪಾನದ ಹೊಗೆಯೇ ಹೆಚ್ಚಾಗಿದೆಯೆಂದು ಅನಿಸದೆ ಇರಲಿಲ್ಲ. ಎಲ್ಲೆಂದರಲ್ಲಿ ಜನರು (ಪೋಲಿಸರನ್ನೂ ಸೇರಿಸಿ) ಯಾವುದೇ ಮುಲಾಜಿಲ್ಲದೆ ಸಿಗರೇಟಿನ ಹೊಗೆ ಬಿಡುತ್ತಿರುವ ದೃಶ್ಯ ಸಾಮಾನ್ಯ. ಇದು ನನಗೆ ನಿಜಕ್ಕೂ ಅಸಹನೆ ಮೂಡಿಸಿತ್ತು.

ಕೋಲ್ಕತಾದ ವಿವಿಧ ಪ್ರವಾಸೀ ಸ್ಥಳಗಳನ್ನು ಭೇಟಿ ಕೊಟ್ಟಾಗ ಕೆಲವೆಡೆ ಖುಷಿ ಎನಿಸಿದರೆ ಇನ್ನು ಕೆಲವೆಡೆ ಇರುಸುಮುರುಸಾಗಿದ್ದೂ ಇದೆ. ನಗರದಲ್ಲೇ ಒಂದಷ್ಟು ಭಾಗ ಚೆಂದದ ಉಸ್ತುವಾರಿಗೊಳಪಟ್ಟಿದ್ದರೆ ಇನ್ನೊಂದಷ್ಟು ಭಾಗ ಇದ್ಯಾವುದೂ ಇಲ್ಲದೆ ಕೊಳೆಗೇರಿಗಳಾಗಿದ್ದುದು ಖೇದದ ಸಂಗತಿ.

ಸುಂದರವಾಗಿ ನಿರ್ವಹಿಸಲ್ಪಡುತ್ತಿರುವ ಬೇಲೂರು ಮಠ, ವಿಕ್ಟೋರಿಯಾ ಸ್ಮಾರಕ, ಪ್ರಿನ್ಸೆಪ್ ಘಾಟ್, ಮೈದಾನ್ ಇತ್ಯಾದಿ ಪ್ರದೇಶಗಳು ಸವಿ ನೆನಪುಗಳನ್ನೇ ಇತ್ತರೆ ಅತಿ ಪ್ರಸಿದ್ಧ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ರಸ್ತೆಯೇ ಕೊಳಚೆಯ ದರ್ಶನ ಮಾಡಿಸುತ್ತದೆ. ಒಂದಷ್ಟು ಸಹಸ್ರ ಅಂಧ ಭಕ್ತರು ಸೋಪು ಹಚ್ಚಿ ಸಾಕಷ್ಟು ನೊರೆ ಬರಿಸಿಯೇ ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಸಾಧಾರಣವಾಗಿತ್ತು. ಕಣ್ಣಿಗೆ ಕಾಣುವ ಪ್ರಕೃತಿ ದೇವತೆಗೆ ಅಪಚಾರವೀಯುತ್ತಾ ತೀರ್ಥಯಾತ್ರೆಯ ಹೆಸರಿನಲ್ಲಿ, ತಮ್ಮ ಪಾಪಗಳನ್ನು ತೊಳೆಯುವೆವೆಂದೋ, ಪುಣ್ಯ ಗಳಿಸುವೆವೆಂದೋ ನದಿಯಲ್ಲಿ ಇದುವರೆಗೂ ನೀರು ಕಾಣದವರಂತೆ ಮೀಯುವ ಇವರ ಮನದಲ್ಲಿ ಕೊಳೆ ಅಂತೂ ಜಡ್ಡುಕಟ್ಟಿ ಕೂತಿದೆಯೆಂದೆನಿಸಿತ್ತು. ಒಳಗಿನ ಕಲ್ಲು ಬೊಂಬೆಗೆ ಸಾಲು ನಿಂತು ಪ್ರಕೃತಿ ಮಾತೆಯೇ ಕೊಡಮಾಡಿರುವ ಹೂವಿನ ಹಾರ, ಹಣ್ಣು ಹಂಪಲುಗಳನ್ನು ಅರ್ಪಿಸಿ ಧನ್ಯರಾದೆವೆಂದುಕೊಳ್ಳುತ್ತಾ ಹೊರಬರುವ ಉದ್ದ ಸಾಲಿಗೆ ಕೊನೆಯೇ ಇರಲಿಲ್ಲ. ಇವನ್ನೆಲ್ಲಾ ದೂರದಿಂದಲೇ ನೋಡಿ ನಿಮಿಷಗಳಲ್ಲೇ ಹಿಂದಿರುಗಿದ್ದೂ ಆಯಿತು.

ಕೋಲ್ಕತಾ ಯಾತ್ರೆ ಹೋಗಬೇಕಾದರೆ ಒಂದೆರಡು ದಿನದ ಮಟ್ಟಿಗೆ ಕಟ್ಟುನಿಟ್ಟಿನ ಡಯಟ್ ಏನಾದರೂ ಇದ್ದರೆ ಬದಿಗಿಟ್ಟು ಸವಿಯಲೇ ಬೇಕಾದ ಕೆಲವು ತಿನಿಸುಗಳಿವೆ. ಅಲ್ಲಿಯದೇ ಮೂಲದ ರಸ್ ಮಲಾಯಿ, ರಸಗುಲ್ಲ, ಸಂದೇಶ್ ಗಳನ್ನು ಸವಿಯಲು ಗಿರೀಶ್ ಪಾರ್ಕ್ ಮೆಟ್ರೋ ನಿಲ್ದಾಣದಕ್ಕೆ ಹತ್ತಿರವಿರುವ “ಕೆ ಸಿ ದಾಸ್” ಅತ್ಯಂತ ಸೂಕ್ತವಾದ ಜಾಗ. ಜನರಿಂದ ಸದಾ ಗಿಜಿಗುಡುತ್ತಿರುವ ಇಲ್ಲಿ ಕೇಸರ್-ಬಾದಾಮ್ ರಸ್ ಮಲಾಯಿ ಯಾವುದೇ ಗಿಲ್ಟ್ ಇಲ್ಲದೆ ಸವಿಯುವುದನ್ನು ಮರೆಯಬೇಡಿ. ಹೆಚ್ಚಾದ ಕ್ಯಾಲೋರಿಗಳನ್ನು ಕಳೆಯಲು “ಮೈದಾನ್” ನಲ್ಲಿ ವಾಕ್ ಹೋಗಿ ಸರಿದೂಗಿಸಿದರಾಯಿತೆಂದಿಟ್ಟುಕೊಳ್ಳಿ.

ಎಲ್ಲಾ ನಗರಗಳಲ್ಲಿರುವಂತೆ ಇಲ್ಲೂ ಒಂದಷ್ಟು ವಿಶೇಷತೆಗಳಿವೆ, ನಗುವಿದೆ, ಅಳುವಿದೆ, ಹಸಿವಿದೆ, ಹಸುರಿದೆ. ನಿಷ್ಕಲ್ಮಶ ಮನಸ್ಸಿನ ಒಂದಷ್ಟು ಜನ ಸಿಗುತ್ತಾರೆ. ಕಲಾವಿದರಿದ್ದಾರೆ, ಕಲಾರಸಿಕರಿದ್ದಾರೆ. ಅಂದ ಹಾಗೆ, ಸೀರೆ ಪ್ರಿಯೆಯರಿಗೆ ತಮ್ಮ ವಾರ್ಡ್ರೋಬ್ ಸೇರಿಸಲು ಅಪ್ಪಟ ಬೆಂಗಾಲಿ ಕಾಟನ್ ಸೀರೆಗಳ ಆಯ್ಕೆಯೂ ಇದೆ. ಏನೇ ಇರಲಿ, ಇಲ್ಲದಿರಲಿ, ಕೋಲ್ಕತಾಕ್ಕೆ ಒಮ್ಮೆ ಭೇಟಿ ಇತ್ತವರು ಆ ನಗರವನ್ನು ಇಷ್ಟಪಡದಿರಲು ಸಾಧ್ಯವೇ ಇಲ್ಲ 🙂

– ಶ್ರುತಿ ಶರ್ಮಾ, ಬೆಂಗಳೂರು.

7 Responses

  1. Sahana Pundikai says:

    ಕೋಲ್ಕತ್ತಾವನ್ನು ಕಲಾತ್ಮಕವಾಗಿ ವರ್ಣಿಸಿದ್ದೀರಿ ಶೃತಿ..ಮುಂಜಾನೆಗೊಂದು ಒಳ್ಳೆಯ ಓದು.ಧನ್ಯವಾದಗಳು

  2. Pushpa Nagathihalli says:

    ಕೊಲ್ಕತ್ತಾ ನಿಜ ದರ್ಶನವಾಯ್ತು

  3. Srinivas Rangappa says:

    ಬರವಣಿಗೆ ತುಂಬಾ ಇಷ್ಟ ಆಯಿತು.
    ನವೀರಾದ ಲೇಖನಿ ಮೂಲಕ ಕಲ್ಕತ್ತಾ ನಿಜವಾದ ದಶ೯ನವಾಯಿತು. ವಂದನೆಗಳು ಶೃತಿ ಯವರಿಗೆ

  4. Saraswathi Samaga says:

    Wow Shruthi…thanks for arranging Kolkatta trip!!

  5. Hema says:

    ಬಲು ಸೊಗಸಾಗಿ ಕೊಲ್ಕತ್ತಾವನ್ನು ವರ್ಣಿಸಿದ್ದೀರಿ..ಇತ್ತೀಚೆಗೆ ಭೇಟಿ ಕೊಟ್ಟಿದ್ದಾಗ ನನ್ನ ಅನುಭವಗಳೂ ಹೀಗೆಯೇ ಇದ್ದುವು ಅನಿಸಿತು.

  6. Pallavi Bhat says:

    ಸುಂದರ ಲೇಖನ. ಕೊಲ್ಕತ್ತವೆಂಬ ಪುರಾತನ ನಗರಿಯ ವೈಭವವನ್ನೂ, ಕುಂದು ಕೊರತೆಗಳನ್ನೂ ಸಮವಾಗಿ ವಿವರಸಿದ್ದೀರಿ.

  7. Krishna Pramod Sharma says:

    ಅಮೋಘ ವಿವರಣೆ ಶ್ರುತಿ
    ಕೋಲ್ಕತ್ತಾ ಪ್ರವಾಸದ ಅನುಭವಕ್ಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: