ಬರ್ನಾಡ್ ಟ್ರೆವಿಸನ್, ಅಮೃತ ಮತ್ತು ಚಿನ್ನದ ಹುಡುಕಾಟದಲ್ಲಿ …

Share Button

  

ಬರ್ನಾಡ್ ಟ್ರೆವಿಸನ್

ಆಧುನಿಕ ವಿಜ್ಞಾನವು ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ.  ಯಾವುದೇ ಒಂದು ರಾಜವಂಶದ ಯಾ ಚಕ್ರವರ್ತಿಯ ಕತೆಯಷ್ಟೇ ವಿಜ್ಞಾನದ ಚರಿತ್ರೆ ಕುತೂಹಲದಾಯಕವಾಗಿದೆ ಎಂದರೆ ಅತಿಶೋಯಕ್ತಿಯಲ್ಲ. ಆಧುನಿಕ ವಿಜ್ಞಾನದ ಜನ್ಮ ಸುಮಾರಾಗಿ 17 ನೇ ಶತಮಾನದ ಆದಿ ಭಾಗದಲ್ಲಿ ಆಯಿತೆನ್ನಬಹುದು. ಅದಕ್ಕಿಂತ ಮೊದಲಿನ ವಿಜ್ಞಾನ, ಸೈದ್ಧಾಂತಿಕ ಯಾ ತಾತ್ವಿಕ ರೂಪದಲ್ಲಿ ಇತ್ತೆನ್ನುವುದು ತಿಳಿದ ವಿಚಾರ. ಆ ದಿನಗಳೆಂದರೆ ವಿಜ್ಞಾನ ಮತ್ತು ತತ್ವ ಶಾಸ್ತ್ರ ಜೊತೆಗೂಡಿ ಹೋಗುತ್ತಿದ್ದ ಸಮಯ. ಒಬ್ಬ ವಿಜ್ಞಾನಿ ತತ್ವ ಶಾಸ್ತ್ರಜ್ಞನಾಗಿದ್ದ, ಹಾಗೂ ಒಬ್ಬ ತತ್ವ ಶಾಸ್ತ್ರಜ್ಞ ವಿಜ್ಞಾನಿಯೂ ಆಗಿದ್ದ.

ಆಧುನಿಕ ವಿಜ್ಞಾನದ ಅವತಾರವಾಗುವ ಮೊದಲೇ ಒಂದು ಸಮಯವಿತ್ತು – ಅದು 15 ನೇ ಶತಮಾನದಿಂದ 17 ನೇ ಶತಮಾನದವರೆಗಿನ ಸುಮಾರು 250 ವರ್ಷಗಳ ಕಾಲ. ಆಗ ಕೆಲವು ವಿಜ್ಞಾನಿಗಳು ಮತ್ತು ಸಂಶೋಧಕರು ಅತ್ಯಂತ ಗುಪ್ತವಾಗಿ, ಮುಖ್ಯ ಸಮಾಜಕ್ಕೆ ಗೊತ್ತಾಗದ ರೀತಿಯಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದರು. ಇದಕ್ಕೆ ಆಲ್ಕೆಮೀ (Alchemy) ಎನ್ನುವ ಹೆಸರಿತ್ತು. ಇಂತಹ ಪ್ರಯೋಗಗಳನ್ನು ಮಾಡುವವರು “ಆಲ್ಕೆಮಿಸ್ಟ್ ಗಳು”. 

ಆಲ್ಕೆಮಿಸ್ಟ್ ಗಳು ಗೂಢವಾದ ಎರಡು “ಅಮೂಲ್ಯ ವಸ್ತು“ ಗಳ ಹುಡುಕಾಟದಲ್ಲಿ ಸದಾ ನಿರತರಾಗಿದ್ದರು. ಈ ವಸ್ತುಗಳಲ್ಲಿ ಒಂದು “ಸ್ಪರ್ಶಮಣಿ” (Philosophers Stone) ಮತ್ತೊಂದು “ಅಮೃತ” (Elixir). ಸ್ಪರ್ಶಮಣಿಗೆ ಯಾವುದೇ ಒಂದು ಸಾಮಾನ್ಯ ಲೋಹವನ್ನು ಚಿನ್ನವನ್ನಾಗಿ ಪರಿವರ್ತಿಸುವ ವಿಶೇಷ ಶಕ್ತಿಯನ್ನು ಹೊಂದಿದೆ ಎನ್ನುವ ನಂಬಿಕೆ ಸಂಶೋಧಕರಲ್ಲಿ ಇತ್ತು. ಹಾಗೆಯೇ “ಎಲಿಕ್ಸರ್” ದ್ರವದ ಸೇವನೆ ರೋಗರಹಿತ ದೀರ್ಘಾಯು ಇಲ್ಲವೇ ಅಮರತ್ವ ಪಡೆಯುವ ಗುಣವಿದೆ ಎನ್ನುವ ವಿಶ್ವಾಸ. ಕೆಲವೊಂದು ರಾಸಾಯನಿಕಗಳನ್ನು ಆರ್ಸೆನಿಕ್, ಪಾದರಸ ಮತ್ತು ಗಂಧಕಕ್ಕೆ ತಗಲಿಸಿದರೆ, ಇವು ಲೋಹಗಳ ಬಣ್ಣವನ್ನು ಬದಲಿಸುತ್ತಿದ್ದುದರಿಂದ ಅಂದಿನ ಕಾಲಕ್ಕೆ ಈ ವಿಚಾರ ತಾರ್ಕಿಕವೇ ಆಗಿತ್ತು.


                                          ಚಿತ್ರ : ಆಲ್ಕೆಮಿಯ ರಹಸ್ಯಗಳ ಬಗ್ಗೆ ಅಂದಿನ ಒಂದು ಪುಸ್ತಕ.

ಅಂತಹ ಒಬ್ಬ “ರಸ ವಿದ್ಯಾ ತಜ್ಞ” (Alchemist) ಬರ್ನಾಡ್ ಟ್ರೆವಿಸನ್(1406 – 1490). ಉತ್ತರ ಇಟಲಿಯ ಪುರಾತನ ಪಟ್ಟಣ, ಪಡುವದಲ್ಲಿ ಜನಿಸಿದ ಟ್ರೆವಿಸನ್ ಅವರ ಪೂರ್ವಜರೂ ರಸ ವಿದ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರೇ ಇದ್ದರು. ಹಾಗಾಗಿ ಇಂತಹ ಪ್ರಯೋಗಗಳಲ್ಲಿ ತಮ್ಮ ಮಕ್ಕಳು ಆಸಕ್ತಿ ತೋರಿದುದನ್ನು ಕುಟುಂಬದವರು ಸಂತೋಷದಿಂದಲೇ ಬೆಂಬಲಿಸಿದ್ದರು. ಪ್ರಾಯ 14 ತುಂಬುತ್ತಿರುವಾಗಲೇ ಟ್ರೆವಿಸನರ ಪ್ರಯತ್ನಗಳು ಪ್ರಾರಂಭವಾದವು. ಮೊದಲಿಗೆ ರೋಮನ್ ಪರಂಪರೆಯ ಸಿತೂ (Citeaux) ಸನ್ಯಾಸಿ, ಗಾಟ್ಫ್ರಿಡಸ್ ಲ್ಯೂರಿಯರ್ ಅವರೊಂದಿಗೆ ‘ಹುಡುಕಾಟ’ ಪ್ರಾರಂಭವಾಯಿತು. ತಮ್ಮ ರಹಸ್ಯ ಪ್ರಯೋಗಾಲಯದ ಮಂದ ಬೆಳಕಿನಲ್ಲಿ, ಕುಲುಮೆಗಳು, ಪಿಂಗಾಣಿ ಪಾತ್ರೆಗಳು, ಕ್ರುಸಿಬಲ್ ಗಳು, ಗಾಜಿನ ಬೋಗುಣಿಗಳು, ಬಟ್ಟಿಇಳಿಸುವ ರಿಟೋರ್ಟುಗಳು ಇವುಗಳ ಮಧ್ಯೆ ಈ ವಿಜ್ಞಾನಿಗಳು, ಸದಾ ಕಾರ್ಯ ನಿರತ.

ಒಂದು ದೃಶ್ಯ: ತನ್ನ ಅತಿ ವಿಶ್ವಾಸಾರ್ಹ ವಿದ್ಯಾರ್ಥಿಗಳೊಂದಿಗೆ 2000 ಕೋಳಿ ಮೊಟ್ಟೆಗಳನ್ನು ಆರಿಸಿ, ದೊಡ್ಡ ಪಾತ್ರೆಯಲ್ಲಿ ನೀರಿನಲ್ಲಿ ಕುದಿಯಲು ಇಡುತ್ತಾರೆ. ಮೊಟ್ಟೆಗಳ ಬಿಳಿ ಚಿಪ್ಪನ್ನು ರಾಶಿಹಾಕಿ ಕಾಯಿಸುತ್ತಾರೆ. ಸುಮಾರು ಐದು ವರ್ಷಗಳವರೆಗೆ ಈ ವಿಚಿತ್ರ ಉತ್ಪನ್ನವನ್ನು ಬಟ್ಟಿ ಇಳಿಸಿವುದು, ಪುನಃ ಬಟ್ಟಿ ತೆಗೆಯುವುದು ಮಾಡುತ್ತಾ ಒಂದು ರಹಸ್ಯವಾದ ಬಿಳಿ ದ್ರವ ಮತ್ತು ಕೆಂಪು ಎಣ್ಣೆಯನ್ನು ಪಡೆಯುತ್ತಾರೆ. ಇದನ್ನು ಭಾಷ್ಪೀಕರಿಸಿ, ಹರಳುಗಳನ್ನಾಗಿ ಪರಿವರ್ತಿಸಿ, ತಯಾರಾದ “ಸ್ಪರ್ಶಮಣಿ”ಯಿಂದ ಕೊನೆಯ ಪರೀಕ್ಷೆಯ ಸಮಯವನ್ನು ಉಸಿರು ಬಿಗಿ ಹಿಡಿದು ಮಾಡಿದಾಗ, “ವಿಫಲ” ರಾಗುತ್ತಾರೆ. ಸ್ಪರ್ಶದಲ್ಲಿ ಸಾಮಾನ್ಯ ಲೋಹ ಬಂಗಾರವಾಗುವುದಿಲ್ಲ! ಸನ್ಯಾಸಿ ಕೆಲಸ ಕೈಗೂಡುವುದಿಲ್ಲ ಎಂದು ಬಿಟ್ಟುಹೋದರು. ಆದರೂ ಇಟಲಿ ದೇಶದ ರಾಜಮನೆತನದ ಈ ವಿಜ್ಞಾನಿ, ಟ್ರೆವಿಸನ್, ಜೀವನ ಪರ್ಯಂತ ತನ್ನ ಸಂಶೋಧನೆಯನ್ನು ಕೈ ಬಿಟ್ಟವರಲ್ಲ. ‘ಮುಂದೆ ಒಂದು ದಿನ, ಮೂಲ ಬೀಜವನ್ನು ಪ್ರಯೋಗಗಳಿಂದ ತೆಗೆದು, ಬಂಗಾರದ ಫಸಲನ್ನೇ ಮಾಡಲಿದ್ದೇನೆ’ ಎಂದು ಅತ್ಯಂತ ಆತ್ಮೀಯರಲ್ಲಿ ಈ ಛಲವಾದಿ ಹೇಳುತ್ತಿದ್ದರು.

ಕೆಲವು ಮರದ ತೊಗಟೆಗಳು, ಕೆಲವು ಬಂಗಾರದ ಬಣ್ಣದ ಹಣ್ಣುಗಳು, ಹೂವುಗಳು ಮತ್ತು ಕೆಲವು ಹೊಂಬಣ್ಣದ ಜಿಂಕೆಗಳ ಚರ್ಮ, ಮಾಂಸಗಳು, ಅಲ್ಲದೇ ಇನ್ನೇನೋ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಕಾಯಿಸಿ, ಕರಗಿಸಿ, ಬಟ್ಟಿ ಇಳಿಸಿ, ಸೋಸಿ, ಭಾಷ್ಪೀಕರಿಸಿ ಮತ್ತೆ ಈ ಪ್ರಕ್ರಿಯೆಗಳನ್ನು ಪುನರಾವರ್ತಿಸಿ, ಒಂದಲ್ಲ, ಎರಡಲ್ಲ, ಹಲವಾರು ಬಾರಿ ಕೈಗೊಂಡರು. ಮತ್ತೆ ಮುಂದುವರಿಯುತ್ತಾ, ಕೆಲವು ರೀತಿಯ ಕಲ್ಲುಗಳು, ಬೆಣಚು ಕಲ್ಲುಗಳು, ಆಯ್ದ ಕೆಂಪು ಮಣ್ಣನ್ನೂ ಕಚ್ಚಾ ವಸ್ತುಗಳಾಗಿ ಉಪಯೋಗಿಸುತ್ತಾ, ಇವುಗಳನ್ನೆಲ್ಲಾ ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಮಾನವನ ಯಾ ಸಿಂಹ ಮತ್ತು ಚಿರತೆ ಜಾತಿಯ ಪ್ರಾಣಿಗಳ ಮೂತ್ರ ಮತ್ತು ರಕ್ತದಲ್ಲಿ ಬೆರೆಸಿ ಪ್ರಯೋಗಗಳನ್ನು ಪುನಃ ಮಾಡಿದರು. ವಿಫಲವಾದರೆ ಉದ್ಘಾರವೆತ್ತುತ್ತಿದ್ದರು, ‘ಪ್ರಕೃತಿಯಲ್ಲಿ ಚಿನ್ನವೆಂದರೆ, ಎಲ್ಲಾ ಅಲ್ಪ ಲೋಹಗಳು ಬೆಳೆಯುತ್ತಾ, ಬೆಳೆಯುತ್ತಾ ಸಿಗುವ ಕೊನೆಯ ಪರಿಪೂರ್ಣ ಲೋಹವಲ್ಲವೇ? ಪ್ರಕೃತಿಯೇ ಇಷ್ಟು ಕಾಲ ಕಾಯಲಿಲ್ಲವೇ? ಹಾಗಾಗಿ, ಇದೇನು ಮಹಾ!’ ಎಂದು ತಮ್ಮ ಆತ್ಮೀಯ ಒಡನಾಡಿಗಳನ್ನು ಸಮಾಧಾನ ಮಾಡುತ್ತಿದ್ದರು. ಸೂರ್ಯನ ಬೆಳಕಿನಲ್ಲಿ ಪ್ರಯೋಗಗಳನ್ನು ಪ್ರಾರಂಭಿಸಿದರು. ‘ಸೂರ್ಯನ ಬೆಳಕು ಬಿದ್ದಲ್ಲವೇ ಭೂಮಿಯಲ್ಲಿ ಇಷ್ಟೆಲ್ಲಾ ಸೃಷ್ಟಿಯಾದುದು. ಬಂಗಾರವೂ ಹಾಗೆಯೇ ಉಂಟಾಗಬೇಕಷ್ಟೇ’, ಎನ್ನುವುದು ಅವರ ವಾದವಿತ್ತು. ಆಕಾಲದಲ್ಲಿ ಉಳಿದವರಿಗೂ ಹಾಗೆಯೇ ಅನಿಸಿರಬೇಕು. (ಆಧುನಿಕ ವಿಜ್ಞಾನದ ಉದಯವಿನ್ನೂ ಆಗಿರಲಿಲ್ಲ).

ರಾಜ ಮನೆತನದಿಂದ ಬಂದ ಟ್ರೆವಿಸನ್ ಅವರ ಐಶ್ವರ್ಯವೂ ಪ್ರಯೋಗಗಳಲ್ಲಿ ಕರಗಿತು. ಎಲ್ಲಾ ಬಂಡವಾಳಗಳು ಅವರ ಪ್ರಯೋಗಾಲಯದಲ್ಲಿ ‘ಸದುಪಯೋಗವಾಗುತ್ತಿದ್ದವು’. ದೇವರ ಪ್ರಾರ್ಥನೆಗೆ ಅವರು ಹೆಚ್ಚು ಹೆಚ್ಚು ಮೊರೆಹೋದರು.

ಟ್ರೆವಿಸನ್ ಅವರಂತೆ ಯೂರೋಪಿನ ಇತರ ದೇಶಗಳಲ್ಲೂ ಆಲ್ಕೆಮಿಯ ಪ್ರಯೋಗಗಳು ನಡೆಯುತ್ತಿದ್ದವು. ಪ್ರಾಗ್ ದೇಶದ ರಾಜ ರುಡೊಲ್ಫ್II ಅವರ ಅರಮನೆಯ ಹತ್ತಿರ ರಸವಿದ್ಯೆ ವಿಜ್ಞಾನಿಗಳಿಗೆ ಆಶ್ರಯ ನೀಡಿ ಅವರ ಸುಪರ್ದಿಯಲ್ಲೇ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದರು. ಇಂಗ್ಲೆಂಡಿನ ರಾಜ ಹೆನ್ರಿ VI (1421 – 1471) ಇಂತಹ ಪ್ರಯೋಗಗಳನ್ನು ಮಾಡಲು ವಿಶೇಷ ಪರವಾನಿಗೆ ನೀಡಿ, ಆಯ್ದ ವಿಶೇಷ ವಿಜ್ಞಾನಿಗಳಿಗೆ ಮಾತ್ರ ಅವಕಾಶ ನೀಡಿದರು. ರಾಜಾಶ್ರಯದಲ್ಲಿ ಪ್ರಯೋಗಗಳು ನಡೆಯುತ್ತಿದ್ದವು. ಕೆಲವು ನಕಲಿ ಆಲ್ಕೆಮಿ ವಿಜ್ಞಾನಿಗಳು ಚಿನ್ನ ತಯಾರಿಸಿದ್ದೇವೆ ಎಂದು ಉಳಿದವರನ್ನು ನಂಬಿಸಿ, ಕೊನೆಗೆ ಸಿಕ್ಕಿಹಾಕಿಕೊಂಡ ಉದಾಹರಣೆಗಳಿವೆ. ಭಾರತದ ಯಾವ ರಾಜನೂ ಇಂತಹ ‘ರಸವಿದ್ಯಾ ಆಲ್ಕೆಮಿ ಶಾಸ್ತ್ರ’ಕ್ಕೆ ಇಂಬು ಕೊಟ್ಟ ಪುರಾವೆಗಳಿಲ್ಲ. ಬದಲಾಗಿ ಆಯುರ್ವೇದ ಪದ್ಧತಿಯ ರಸ ಔಷಧಗಳನ್ನು ಶಾಸ್ತ್ರೀಯ ರೀತಿಯಲ್ಲಿ ತಯಾರಿಸಿ ಜನರ ಉಪಯೋಗಕ್ಕೆ ಬಳಸಿರುವುದು ಗೊತ್ತಿರುವ ವಿಚಾರ.

ಟ್ರೆವಿಸನ್ ಅವರ ಜೀವನದ ಕೊನೆಯ ಮಾತುಗಳು ಎಂತಹವರ ಮನಸನ್ನೂ ಕರಗಿಸುವಂತಹುದು. “ ದೇವರೇ, ನಾನು ತುಂಬಾ ಬಳಲಿದ್ದೇನೆ.ನಾನು ಕೈಗೊಂಡ ಕೆಲಸ ಮುಗಿಸದೇ ನನಗೆ ಇಹ ಜೀವನ ತ್ಯಜಿಸಲು ಇಷ್ಟವಿಲ್ಲ. ನನಗಿನ್ನೊಂದು ವರ್ಷ ದಯಪಾಲಿಸು. ಸಣ್ಣ ತಪ್ಪನ್ನು (ಪ್ರಯೋಗಾಲಯದಲ್ಲಿ) ಸರಿಪಡಿಸಿ, ಗುರಿ ಮುಟ್ಟಲು ಅವಕಾಶ ನೀಡು. ನಾನಂತೂ ಈ ಸಫಲತೆಯನ್ನು ಮಾನವನ ಕಲ್ಯಾಣ ಮತ್ತು ಒಳಿತಿಗಾಗಿ ಮಾತ್ರ ಉಪಯೋಗಿಸುವೆ. ಅದೂ ನಿನಗೆ ಗೊತ್ತಷ್ಟೇ!”. ಆದರೆ, ಎಂಬತ್ತ ನಾಲ್ಕರ ವೃದ್ಧ ಸಂಶೋಧಕನ ಪ್ರಾರ್ಥನೆ ದೇವರ ಕಿವಿಗೆ ಬೀಳಲಿಲ್ಲ!

                                         ಚಿತ್ರ: ಕಲಾವಿದನ ಕುಂಚದಲ್ಲಿ ಆಲ್ಕೆಮಿ ಪ್ರಯೋಗಾಲಯ

ಯುರೋಪಿನಾದ್ಯಂತ ಪ್ರಯೋಗಾಲಯಗಳಲ್ಲಿ ಪ್ರಚಲಿತವಿದ್ದ ಈ ಸಂಶೋಧನೆಗಳ ಪ್ರಭಾವ ವಿಜ್ಞಾನ ಕ್ಷೇತ್ರದಲ್ಲಿ ಅಲ್ಲದೇ, ಸಾಹಿತ್ಯ, ಕಾವ್ಯ, ನಾಟಕ ಹಾಗೂ ರಂಗಭೂಮಿಯಲ್ಲೂ ತನ್ನ ಪ್ರಭಾವವನ್ನು ಬೀರಿದೆ. 17 ನೇ ಶತಮಾನದ ನಾಟಕಕಾರರಾದ ಬೆನ್ ಜಾನ್ಸನ್ ತನ್ನ ಕೃತಿಯಾದ “ದಿ ಆಲ್ಕೆಮಿಸ್ಟ್” ಎನ್ನುವ ನಾಟಕದಲ್ಲಿ ಈ ರಸ ತಜ್ಞರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸುತ್ತಾರೆ. ಏನೇ ಇರಲಿ, ಈ ವಿಷಯದ ಮೇಲಿನ ನಾಟಕಗಳೆಲ್ಲಾ ಆ ಸಮಯದಲ್ಲಿ ಎಲ್ಲಾ ಮಂದಿರಗಳಲ್ಲಿ ಜಯಭೇರಿ ಬಾರಿಸಿವೆ. ಉತ್ಕೃಷ್ಟ ವಿಚಾರವಾದಿ ( rationalist ) ಅನಿಸಿಕೊಂಡ ಸರ್ ಐಸಾಕ್ ನ್ಯೂಟನ್ ಕೂಡಾ ಒಬ್ಬ ವಿಜ್ಞಾನಿ ಆಗಿಯೇ ಆಲ್ಕೆಮಿಯ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಸಂಪರ್ಕಿಸಿ ಸಾಕಷ್ಟು ತಿಳಕೊಂಡು, ಕೇಂಬ್ರಿಜ್ ನ  ಟ್ರಿನಿಟಿ ಕಾಲೇಜ್ ನಲ್ಲಿ ಆಲ್ಕೆಮಿ ಪ್ರಯೋಗಾಲಯವನ್ನು ಸ್ಥಾಪಿಸಿದ್ದರು. ಪ್ರಸಿದ್ಧ ಲೇಖಕರಾದ ಪೌಲೋ ಕೊಲ್ಹೋ ಅವರ ಕಾದಂಬರಿಗೂ, ಈ ರಸವಿದ್ಯಾ ತಜ್ಞರಿಗೂ ಸಂಬಂಧವಿಲ್ಲದಿದ್ದರೂ, ಕಾದಂಬರಿಯ ಹೆಸರು ಮಾತ್ರ “ದಿ ಆಲ್ಕೆಮಿಸ್ಟ್” ಎಂದೇ ಇದೆ.

ಆಲ್ಕೆಮಿಯ ಮೂಲ ಉದ್ದೇಶವಾದ ಸ್ಪರ್ಶಮಣಿ ಮತ್ತು ಅಮೃತವನ್ನು ಪಡೆಯುವಲ್ಲಿ ವಿಫಲವಾದರೂ, ಇವೆಲ್ಲದರ ಪ್ರಯತ್ನದ ಫಲ ವಿಜ್ಞಾನ ಲೋಕದಲ್ಲಿ ಅಚ್ಚಳಿಯದೇ ಉಳಿದಿವೆ. ವಿಜ್ಞಾನಿಗಳು ಇನ್ನಿತರ ಎಷ್ಟೋ ರಾಸಾಯನಿಕ ವಸ್ತುಗಳನ್ನು ಅಯಾಚಿತವಾಗಿ ಕಂಡುಹಿಡಿದಿದ್ದಾರೆ. ಹೊಸ ಉಪಕರಣಗಳು ವಿಜ್ಞಾನಿಗಳ ಕೈ ಸೇರಿವೆ. ಎರಡೂವರೆ ಶತಮಾನಗಳು ನಿಜವಾಗಿಯೂ ಸೈದ್ಧಾಂತಿಕ ( theoretical ) ವಿಜ್ಞಾನಿಗಳಿಗೆ, ಅನ್ವಯಿಕ ( applied ) ವಿಜ್ಞಾನಿಗಳಾಗಲು ಮೆಟ್ಟಲುಗಳು ದೊರಕಿವೆ. ಟ್ರೆವಿಸನ್ ಅವರ ಕೊನೆಯ ಮಾತುಗಳಲ್ಲಿ ಅವರ ಉಸಿರು ನಿಂತು ಹೋಯಿತು : “ ಪ್ರಾಯಶಃ ಬಂಗಾರವನ್ನು ತಯಾರು ಮಾಡಲು, ನಾವು ಚಿನ್ನವನ್ನೇ ಕಚ್ಚಾ ವಸ್ತುವಾಗಿ ಪ್ರಾರಂಭ ಮಾಡಬೇಕಿದೆ.!”

ಆಧುನಿಕ ಸಂಶೋಧನೆ (Research) ಮಾಡುವವರಿಗೆ ಗೊತ್ತಿದೆ: ಹಲವಾರು ಪ್ರಯತ್ನಗಳಲ್ಲಿ, ಪ್ರಯೋಗಾಲಯದಲ್ಲಿರಬಹುದು, ಹೊರಗಿರಬಹುದು(Field work) ಅಥವಾ ಗ್ರಂಥಾಲಯ – ಅಂತರ್ಜಾಲದಲ್ಲಿಯೂ ಆಗಿರಬಹುದು, ಸುಮಾರಷ್ಟು ಪ್ರಯತ್ನಗಳು ಮೇಲ್ನೋಟಕ್ಕೆ ವ್ಯರ್ಥವೆನಿಸುತ್ತದೆ, ಸೋಲು ಅನಿಸುತ್ತದೆ. ಈ “ವ್ಯರ್ಥ ಸಮಯ” ಎಷ್ಟು ಕಡಿಮೆ ಯಾ ಚುಟುಕಾಗಿದೆಯೋ, ಅಷ್ಟು ಫಲಾಪೇಕ್ಷೆಯ ದೃಷ್ಟಿಯಿಂದ ಒಳ್ಳೆಯದೆಂದು ಸಂಶೋಧಕ ಅಂದುಕೊಳ್ಳುತ್ತಾನೆ. ಹಾಗಂದುಕೊಂಡಂತಹ “ವ್ಯರ್ಥ ಸಮಯ” ವು ವಾರಗಳು, ಮಾಸಗಳು, ವರ್ಷಗಳೇ ಇರುವುದು ಅಚ್ಚರಿಯಲ್ಲ. ಆದರೆ, ಶತಮಾನಗಳೇ ಉರುಳಿದರೆ? ಒಟ್ಟಾರೆ ಅನುಭವದ ಅರಿವಿನಲ್ಲಿ ಯಾವುದೂ ವ್ಯರ್ಥವಲ್ಲ. ಇದಕ್ಕೆ “ಆಲ್ಕೆಮಿಸ್ಟ್” ಗಳ ಉದಾಹರಣೆ ಅದ್ಭುತವೇ ಸರಿ!
 

-ಡಾ. ಬಡೆಕ್ಕಿಲ ಶ್ರೀಧರ ಭಟ್ ,  ಪುತ್ತೂರು.

3 Responses

  1. Shruthi Sharma says:

    ಅಪರೂಪದ ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು 🙂

  2. ಡಾ. ಬಡೆಕ್ಕಿಲ ಶ್ರೀಧರ ಭಟ್. says:

    ಶ್ರುತಿ ಶರ್ಮ, 15 ನೇ ಶತಮಾನದ ಇಂತಹ ವಿಜ್ಞಾನಿಗಳು ಮಾಡಿದ ಪ್ರಯತ್ನ ನಿಜವಾಗಿಯೂ ಅಪರೂಪವೇ. ಪ್ರಯತ್ನ ವಿಫಲವಾದರೂ, ಆಧುನಿಕ ವಿಜ್ಞಾನದ ದಾರಿಯಲ್ಲಿ ಆ ಮೆಟ್ಟಲುಗಳು ಬಹು ಮುಖ್ಯವಾಗಿವೆ. ವಿಫಲತೆಯಲ್ಲೂ ವಿಜ್ಞಾನಿಗಳು ಒಂದು ದಾರಿಯನ್ನು ಕಂಡುಕೊಂಡಿದ್ದಾರೆ.
    ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

  3. Sharada V. Bhatt says:

    Quite good, Shreedhara. Very informative. You have gathered information from number of sources, I suppose! Great! Keep it up. Our best wishes for the coming episodes.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: