ಬೇಲೂರು ಮಠ – ಒಂದು ನೋಟ

Share Button

ಶ್ರುತಿ ಶರ್ಮಾ, ಬೆಂಗಳೂರು.

ನಾನು ಭೇಟಿ ನೀಡಿದ ಚೆಂದದ ಸ್ಥಳಗಳಲ್ಲೊಂದು ಕೋಲ್ಕತಾದಲ್ಲಿರುವ ಬೇಲೂರು ಮಠ. ಕೋಲ್ಕತಾದಲ್ಲಿನ ಹೆಚ್ಚಿನ ಎಲ್ಲಾ ಪ್ರವಾಸೀ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕಡೆಯದಾಗಿ ಬೇಲೂರು ಮಠಕ್ಕೆ ಹೋದಾಗ ನಿಜಕ್ಕೂ ಆ ಪ್ರಯಾಣ ಸಾರ್ಥಕವಾದ ಅನುಭವ. ಮಠದ ಗೇಟು ದಾಟಿ ಆವರಣ ಪ್ರವೇಶಿಸುತ್ತಿದ್ದಂತೆ, ಕೋಲ್ಕತಾದ ಧಗೆಯಲ್ಲೂ ತಂಪು ಗಾಳಿ ಬೀಸಿ ಹಾಯೆನಿಸಿತ್ತು. ನೆರಳು ನೀಡುವ ಸಾಕಷ್ಟು ಮಾವಿನ ಮರಗಳಿಂದ ಮಠವು ಆವೃತವಾಗಿದೆ. ಇದು ಇಲ್ಲಿನ ವಾತಾವರಣವನ್ನೇ ಪ್ರಶಾಂತ ಸುಂದರವಾಗಿಸಲು ಸಹಕರಿಸುತ್ತದೆಯೆನಿಸಿತ್ತು. ಜೊತೆಗೆ ಗಂಗಾ ನದಿಯ ತಟದಲ್ಲಿ ಕಟ್ಟಲಾಗಿರುವುದರಿಂದ ಮಠದ ಆವರಣದಲ್ಲಿ ಸಾಕಷ್ಟು ಗಾಳಿಯೂ ಬೀಸುತ್ತಿರುತ್ತದೆ.

ಬೇಲೂರು ಮಠವು ಶ್ರೀ ರಾಮಕೃಷ್ಣ ಪರಮಹಂಸರ ನೆನಪಿನಲ್ಲಿ ಸ್ವಾಮಿ ವಿವೇಕಾನಂದರು ಕಟ್ಟಿಸಿದ ಆಶ್ರಮವಾಗಿದ್ದು ಪ್ರಸ್ತುತ ಅಲ್ಲಿ ಮಠದ ಶಿಷ್ಯವೃಂದ ಕಾರ್ಯನಿರ್ವಹಿಸುತ್ತಿದೆ. ಇದೊಂದು ರೀತಿ ಸ್ವಾಮಿ ವಿವೇಕಾನಂದರ ಕನಸಿನ ಪ್ರಾಜೆಕ್ಟ್ ಎಂದೇ ಕರೆಯಬಹುದು. ಬೇಲೂರು ಮಠದ ಹಿಂದೆ ಅವರ ಹಾಗೂ ಶ್ರೀ ರಾಮಕೃಷ್ಣರ ಇತರ ಶಿಷ್ಯರ ಅಪಾರ ದುಡಿಮೆ, ಬುದ್ಧಿಮತ್ತೆ ಹಾಗೂ ಕೊಡುಗೆಗಳಿವೆ. ಹಾಗೂ ಆ ಪರಿಶ್ರಮಕ್ಕೆ ತಕ್ಕುದಾಗಿ ಅದನ್ನು ನಿರ್ವಹಿಸಿಕೊಂಡು ಹೋಗುತ್ತಿರುವ ಶಿಷ್ಯವೃಂದ ಸಧ್ಯಕ್ಕೆ ಅಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಠದ ಒಳಾಂಗಣ ಪ್ರವೇಶಿಸುತ್ತಿದ್ದಂತೆಯೇ ಛಾಯಾಗ್ರಹಣ ನಿಷೇಧಿಸಲ್ಪಟ್ಟಿದೆಯೆಂಬ ಫಲಕಗಳು ಅಲ್ಲಲ್ಲಿ ಕಾಣಸಿಗುತ್ತದೆ. ಕೆಲವೊಂದು ಸ್ಥಳಗಳ ಪ್ರಶಾಂತ ವಾತಾವರಣವನ್ನು ಕಾಯ್ದಿಡಲು ಮೊಬೈಲು ಫೋನು, ಕ್ಯಾಮರಾಗಳನ್ನು ಬಳಸದಿರುವುದು ಅತ್ಯಂತ ಮುಖ್ಯವಾಗುತ್ತದೆ. ಹೀಗಿದ್ದರೂ ಅಲ್ಲಲ್ಲಿ ಪ್ರವಾಸಿಗರು ಫೋಟೋಗಳನ್ನು ಕ್ಲಿಕ್ಕಿಸುವುದನ್ನು ನೋಡುವಾಗ ಬೇಸರವೆನಿಸುತ್ತದೆ. ಸಂದರ್ಭಗಳನ್ನು ನಮ್ಮ ಕಣ್ಣುಗಳಿಂದ ಸೆರೆಹಿಡಿದು ಮನಃಪಟಲವೆಂಬ ಮೆಮೊರಿಯಲ್ಲಿ ರಕ್ಷಿಸಿಡುವುದು ನಿಜ ಹೇಳಬೇಕೆಂದರೆ ಆ ಕ್ಷಣಗಳ ಸವಿಯನ್ನು ಇಮ್ಮಡಿಗೊಳಿಸುತ್ತದೆ. ಇದನ್ನು ಎಲ್ಲಾ ಕಡೆ ಅನುಸರಿಸುವುದು ಪ್ರಾಯೋಗಿಕವಲ್ಲವಾದರೂ ಸಾಂದರ್ಭಿಕವಾಗಿ ಅಲ್ಲಲ್ಲಿಯ ನಿಯಮ ಪಾಲನೆಯೆಂಬ ರೀತಿಯಲ್ಲಾದರೂ ಅನುಸರಿಸುವುದು ಉಚಿತ.

ಪಾದರಕ್ಷೆಗಳನ್ನು ಸುರಕ್ಷಿತವಾಗಿ ಇಡಲು ನಾನು ಹಿಂದೆಲ್ಲೂ ಕಾಣದಂಥಹ ಸ್ವಚ್ಚವಾದ ಸೌಲಭ್ಯ, ಅದೂ ಕೂಡಾ ಯಾವುದೇ ಶುಲ್ಕವಿಲ್ಲದೆ ಇಲ್ಲಿ ಲಭ್ಯ. ಇದು ಮಠದ ಆವರಣದಲ್ಲಿದ್ದು ಚಪ್ಪಲಿಗಳನ್ನು ಬಿಚ್ಚಿ ಐವತ್ತು ಮೀಟರ್ ನಡೆದರೆ ಮಠದ ಪ್ರಧಾನ ಕಟ್ಟಡಸಮೀಪಿಸುತ್ತದೆ. ಈ ಪ್ರದೇಶ ಪೂರ್ತಿ ಸ್ವಚ್ಛವಾಗಿ ನೋಡಿಕೊಳ್ಳಲಾಗಿದ್ದದೂ ಕೂಡಾ ಕಟ್ಟಡದ ಬುಡದವರೆಗೆ ಪಾದರಕ್ಷೆಗಳನ್ನು ಹಾಕಿಯೇ ಹೋಗುವ ಪ್ರವಾಸಿಗಳನ್ನು ಕಂಡು ಮತ್ತೆ ಖೇದವಾಗುತ್ತದೆ.

ಆದರೆ ಇವರೆಲ್ಲರ ಬಳಿ ಮಠದ ಕಾರ್ಯನಿರ್ವಾಹಕರು ಅತ್ಯಂತ ಸೌಮ್ಯವಾಗಿ ನಿಯಮಗಳನ್ನು ಪಾಲನೆ ಮಾಡುವಂತೆ ಕೇಳಿಕೊಳ್ಳುವುದನ್ನು ನೋಡುವಾಗ ಅವರ ಶಾಂತಿಪ್ರಿಯತೆಯು ಮೆಚ್ಚುಗೆಯಾಗುತ್ತದೆ. ಎಲ್ಲೂ ಗದ್ದಲ, ಬೈಗುಳ, ಸದ್ದಿಲ್ಲದಂತೆ ಶಿಸ್ತನ್ನು ಪಾಲಿಸುತ್ತಾ ಇತರರನ್ನೂ ಇದಕ್ಕೆ ಪ್ರೇರೇಪಿಸುವ ಅವರ ರೀತಿಯು ಅತ್ಯುತ್ತಮ.

ಬೇಲೂರು ಮಠದ ಕಟ್ಟಡವು ಅತ್ಯಂತ ವಿಶಿಷ್ಟವೂ ಕಲಾತ್ಮಕವೂ ಆಗಿದೆ. ಇದು ಪ್ರತ್ಯೇಕವಾಗಿ ಯಾವುದೇ ಶೈಲಿಗೆ ಒಳಪಟ್ಟ ಕಟ್ಟಡವಲ್ಲ, ಆದರೆ ಇಲ್ಲಿ ಒಂದಷ್ಟು ಧರ್ಮಗಳ, ಹಲವು ದೇಶ-ರಾಜ್ಯಗಳ ಶೈಲಿಗಳ ಸಮ್ಮಿಶ್ರವಿದೆ. ಮತ-ಧರ್ಮ-ಸಂಸ್ಕಾರಗಳ ಸೌಹಾರ್ದತೆಯನ್ನು ಎತ್ತಿಹಿಡಿಯುವ ಸಲುವಾಗಿ ಇದನ್ನು ದೇವಾಲಯ, ಮಸೀದಿ, ಚರ್ಚ್, ಬೌದ್ಧ, ಮೊಘಲ, ರಜಪೂತ ಶೈಲಿಗಳನ್ನು ಸಮ್ಮಿಶ್ರಗೊಳಿಸಿ ಕಟ್ಟಲಾಗಿದೆ. ಮಠದ ಮುಂದಿನ ಗೋಪುರವು ದಕ್ಷಿಣ ಭಾರತದ ಕೆತ್ತನೆಯನ್ನು ಹೋಲುತ್ತದೆ. ಮಠದ ಕಟ್ಟಡದ ಅತ್ಯಂತ ಮೇಲ್ಭಾಗದಲ್ಲಿ ಚಿನ್ನದ ಕಳಶವನ್ನು ಇಡಲಾಗಿದೆ.

ಮುಖ್ಯ ದ್ವಾರದ ಮೇಲೆ ಶ್ರೀ ರಾಮಕೃಷ್ಣ ಮಿಷನ್ ನ ಲಾಂಛನವಿದೆ. ಇದು ಅಲೆಗಳಿಂದ ಕೂಡಿದ ನೀರು, ತಾವರೆ, ಉದಯಿಸುವ ಸೂರ್ಯ, ನಾಗ, ಹಂಸಗಳನ್ನು ಒಳಗೊಂಡಿದ್ದು ಕ್ರಮವಾಗಿ ಕರ್ಮ, ಭಕ್ತಿ, ಜ್ನಾನ, ಯೋಗ ಹಾಗೂ ಪರಮಾತ್ಮ ಇವನ್ನು ಪ್ರತಿಬಿಂಬಿಸುವ ಅರ್ಥವನ್ನು ಒಳಗೊಂಡಿದೆ.

ಮಠದ ಬಾಲ್ಕನಿಯು ಮೊಘಲ, ರಜಪೂತ ಶೈಲಿಯಲ್ಲಿದ್ದರೆ ಇಲ್ಲಿನ ಎರಡು ಕಂಬಗಳು ಅಜಂತಾ ಎಲ್ಲೋರ ಗವಿಗಳಲ್ಲಿನ ಕಂಬಗಳನ್ನು ಹೋಲುತ್ತವೆ. ಒರಿಸ್ಸಾದ ಶೈಲಿಯ ಕೆತ್ತನೆಗಳನ್ನೂ ಇಲ್ಲಿ ಕಾಣಬಹುದು.

ಇನ್ನು ಪ್ರಧಾನ ಪ್ರಾರ್ಥನಾ ಸಭಾಂಗಣವು ಅಮೃತಶಿಲೆಯಿಂದ ನಿರ್ಮಿತವಾಗಿದ್ದು ಇದನ್ನು ಚರ್ಚ್ ಹಾಲ್ ನಂತೆ ನಿರ್ಮಿಸಲಾಗಿದೆ. ಇದನ್ನು ರೋಮ್ ನ ಸೈನ್ಟ್ ಪೀಟರ್ಸ್ ಚರ್ಚ್ ನ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಿದ, ತಾವರೆಯ ಮೇಲೆ ಕುಳಿತಂಥ ಶ್ರೀ ರಾಮಕೃಷ್ಣರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಾಂತವಾದ ಈ ಸ್ಥಳವು ಧ್ಯಾನಕ್ಕೆ ಅತ್ಯಂತ ಸೂಕ್ತ.

ಹೊರಬಂದರೆ ಆವರಣದಲ್ಲಿ ಕರಕುಶಲ ಮಳಿಗೆಯು ಲಭ್ಯವಿದೆ. ಇಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಲಭ್ಯ.

ಇನ್ನು, ಈ ಮಠದ ಪೂರ್ವಾಪರವನ್ನು ಹುಡುಕಿ ಹೋದರೆ ಅಗಾಧವಾದ ಮಾಹಿತಿ ಲಭಿಸುತ್ತದೆ.  1898 ರಲ್ಲಿ ಗಂಗಾ ನದಿಯ ಪಶ್ಚಿಮ ತಟದಲ್ಲಿನ ಜಾಗವನ್ನು ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಖರೀದಿಸಿದ ಶಿಷ್ಯರ ಗುಂಪು 1935 ರಲ್ಲಿ ಕಟ್ಟಡದ ಕೆಲಸವನ್ನಾರಂಭಿಸಿ ಜನವರಿ 14, 1938 ರಲ್ಲಿ ಅದನ್ನು ಉದ್ಘಾಟನೆ ಮಾಡಲಾಯಿತೆನ್ನುವುದು ತಿಳಿದು ಬರುತ್ತದೆ.


ಶ್ರೀ ರಾಮಕೃಷ್ಣ ಮಿಶನ್ ನ ಲಾಂಛನ

ಇಷ್ಟೆಲ್ಲಾ ಕಲಾತ್ಮಕತೆಯಿಂದ ಕೂಡಿದ ಈ ಮಠದ ಕಟ್ಟಡ ಹಿಂದಿನ ಕಲ್ಪನೆ ಸ್ವಾಮಿ ವಿವೇಕಾನಂದರ ಸಹಯೋಗಿಗಳಲ್ಲೊಬ್ಬರಾದ, ಅವರ ಅಣ್ಣನೆಂದೇ ಕರೆಯಲ್ಪಡುವ ಶ್ರೀ ಪ್ರಜ್ನಾನಾನಂದರದು. ತಮ್ಮ ಪೂರ್ವಾಶ್ರಮದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಇವರ ಕೌಶಲ ಹೇಗಿದೆಯೆಂದರೆ ಕಟ್ಟಡವು ಹಲವು ಶೈಲಿಗಳ ಸಮ್ಮಿಶ್ರವಾದರೂ ಸುಂದರವಾಗಿದೆ, ಅಲ್ಲೊಂದು ಸಮತೋಲನವಿದೆ, ಜೊತೆಗೆ ಕೋಲ್ಕತಾದ ಹವಾಮನಕ್ಕೆ ಅತ್ಯಂತ ತಕ್ಕುದಾಗಿದೆ. ಒಳಭಾಗದಲ್ಲಿ ಗಾಳಿ-ಬೆಳಕಿನ ಯಾವುದೇ ಕೊರತೆಯಿಲ್ಲ.

ಅಂದ ಹಾಗೆ, ಇಲ್ಲಿಗೆ ಭೇಟಿ ನೀಡಲು ಬೆಳಗಿನ ಜಾವದ ಸಮಯ ಅತ್ಯಂತ ಸೂಕ್ತ. ಇಲ್ಲಿ ದಿನನಿತ್ಯ ಹೂವು, ಹಣ್ಣು, ಕುಂಕುಮಗಳನ್ನು ಚೆಲ್ಲಾಡಿ ಮಾಡುವ ಪೂಜೆಯಿಲ್ಲ, ಹವನವಿಲ್ಲ, ಆದರೆ ನೋಡಬಂದವರನ್ನೂ ಧ್ಯಾನಸ್ಥರನ್ನಾಗಿಸುವ ಅದೆಂಥಹುದೋ ಶಕ್ತಿಯಿದೆ, ಸೆಳೆತವಿದೆ, ಮೌನವಿದೆ. ನದಿಯತ್ತ ನೋಡಿ ಕೈಮುಗಿವ, ಮಣ್ಣನ್ನೇ ಕುಂಕುಮದಂತೆ ಹಣೆಗಿಟ್ಟುಕೊಳ್ಳುವ ಪ್ರಕೃತಿಮಾತೆಯ ಸೇವಕರಂತಿರುವ ಶ್ರೀ ರಾಮಕೃಷ್ಣರ ಶಿಷ್ಯವೃಂದವು ಅಸಾಧಾರಣ ಸೌಮ್ಯತೆಯಿಂದಲೇ ಶಿಸ್ತನ್ನು ಕಾಯ್ದುಕೊಳ್ಳುತ್ತಾರೆ. ಪ್ರಕೃತಿಯೆಡೆಗೆ ತಮ್ಮಿಂದಾಗಲೀ ಪ್ರವಾಸಿಗರಿಂದಾಗಲೀ ಹಾನಿಯಾಗದಂತೆ ಕಾಯ್ದುಕೊಳ್ಳುತ್ತಾರೆ. ಯಾವುದೇ ಗದ್ದಲವಿಲ್ಲದ, ಮೊಬೈಲ್ ಸದ್ದುಗಳಿಲ್ಲದ, ಫೋಟೋಕ್ಕೆ ನೀಡುವ ಪೋಸುಗಳ ದೃಶ್ಯವಿಲ್ಲದ ಬೇಲೂರು ಮಠದಿಂದ ವಾಪಸು ಬರುವ ಮನಸ್ಸಾಗುವುದಿಲ್ಲ.
.

– ಶ್ರುತಿ ಶರ್ಮಾ, ಬೆಂಗಳೂರು.

4 Responses

  1. Shankara Narayana Bhat says:

    ಬೇಲೂರು ಕೋಲ್ಕತ್ತದಲ್ಲಿದೆ ಎನ್ನುವಾಗ ಆಶ್ಚರ್ಯವಾಗುತ್ತದೆ, ಇರಬಹುದು. ಆದರೆ ವಿವರಣೆ ಚೆನ್ನಾಗಿದೆ. ಹೋಗಿ ನೋಡಿದಹಾಂಗೇ ಆಯಿತು.ಹೋಗಿ ನೋಡಲು ಸಾಧ್ಯವಿಲ್ಲದವರೀಗೆ ಲೇಖನವು ಅನುಕೂಲ.

  2. Ramyashri bhat says:

    ನಿಮ್ಮ ಲೇಖನವನ್ನು ಓದುತ್ತಾ ಬೇಲೂರು ಮಠವನ್ನು ವೀಕ್ಷಿಸಿದಂತಾಯಿತು. ಒಳ್ಳೆಯ ವಿವರಣೆಯನ್ನು ನೀಡಿದ್ದೀರಿ.

  3. dr harshitha says:

    ಉತ್ತಮ ಮಾಹಿತಿ ಹಾಗೂ ನಿರೂಪಣೆ…

  4. Shruthi Sharma says:

    ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: