ಅಮರ ಶಿಲ್ಪಿ ಜಕಣಾಚಾರಿಯ ಊರು- ಕೈದಳ

Share Button

ಕ್ರಿಸ್ ಮಸ್ ರಜೆಯೆಂದು ತುಮಕೂರಿನಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ. ನಂತರ ಅಲ್ಲಿಯ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿದೆವು. ಎಲ್ಲವೂ ಸುಂದರವಾಗಿತ್ತು, ಲೆಕ್ಕವಿಲ್ಲದಷ್ಟು ಫೋಟೋ ಕ್ಲಿಕ್ಕಿಸಿದ್ದೂ ಆಯಿತು. ಎಲ್ಲ ಸ್ಥಳಗಳಲ್ಲಿ ನನಗೆ ವೈಯಕ್ತಿಕವಾಗಿ  ಹಿಡಿಸಿದ ಸ್ಥಳ ಸುಮಾರು ೧೨೦೦ ವರ್ಷದ ಹಿಂದಿನ ಐತಿಹ್ಯ ಹೊಂದಿದ ಕೈದಳದ ಚೆನ್ನಕೇಶವ ದೇವಾಲಯ. ಅಲ್ಲಿಗೆ ತಲುಪುವಾಗಲೇ ಸಂಜೆ ಐದೂವರೆ ಇರಬೇಕು. ಸ್ಥಳ ಹೇಳಿಕೊಳ್ಳುವಷ್ಟು ಮನಮೋಹಕವಲ್ಲದಿದ್ದರೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೈದಳ, ಅಮರಶಿಲ್ಪಿ ಜಕಣಾಚಾರಿಯ ಹುಟ್ಟಿದ ಸ್ಥಳ. ತುಮಕೂರಿನ ಗೂಳೂರು ಎಂಬಲ್ಲಿದೆ. ಇಲ್ಲಿನ ಶಿಲ್ಪಕಲೆ ಬೇಲೂರಿನ ದೇವಾಲಯವನ್ನು ಹೋಲುತ್ತದೆ. ಪೇಟೆಯಿಂದ ಅನತಿ ದೂರದಲ್ಲಿ, ಹೆಚ್ಚು ಕಡಿಮೆ ನಿರ್ಜನ ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ದೇವಾಲಯದ ಎಡ ಬದಿಗೆ ಗಂಗಾಧರೇಶ್ವರನ ದೇವಾಲಯವಿದ್ದು, ಶಿವ,ಪಾರ್ವತಿಯರು ಇಲ್ಲಿ ಉಪಸ್ಥಿತರಾಗಿದ್ದಾರೆ. ಈ ಎರಡೂ ದೇವಾಲಯದ ಜೀರ್ಣೋದ್ಧಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ  ಡಾ. ವೀರೇಂದ್ರ ಹೆಗ್ಗಡೆಯವರ ಸಹಯೋಗವಿದೆ.

ದೇವಾಲಯದ ಹೊರಾಂಗಣ ಬೇಲೂರಿನಂತೆ ಆಕರ್ಷಣೀಯವಾಗಿ ಇರದಿದ್ದರೂ, ಚೆನ್ನಕೇಶವನ ವಿಗ್ರಹದ ಸೌಂದರ್ಯ  ಬೇಲೂರಿನ ಚೆನ್ನಕೇಶವನನ್ನು ಮೀರಿಸುತ್ತದೆ ಎಂದು ಇಲ್ಲಿನ ಅರ್ಚಕರು, ಸ್ಥಳೀಯರು ಹೇಳುತ್ತಾರೆ. ಈ ವಿಗ್ರಹವನ್ನು ಒಂದೇ ಒಂದು ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿದ್ದು ಮೇಲೆ ಶಿವ. ಮಧ್ಯದಲ್ಲಿ ವಿಷ್ಣು ಅಥವಾ ಚೆನ್ನ ಕೇಶವ ಮತ್ತು ಕೆಳಗೆ ಬ್ರಹ್ಮನನ್ನೂ ಕೆತ್ತಲಾಗಿದೆ. ವಿಷ್ಣುವಿನ ಎಡ,ಬಲ ಬದಿಯಲ್ಲಿ ಶ್ರೀದೇವಿ,ಭೂದೇವಿಯರು ಉಪಸ್ಥಿತರಾಗಿದ್ದಾರೆ. ಚೆನ್ನಕೇಶವನಿಗೆ ಬೇಕಾಗುವ ಎಲ್ಲಾ ಹೂವಿನ ಮಾಲೆ, ಉಡುಪು, ಆಭರಣಗಳನ್ನು ಕಲ್ಲಿನಲ್ಲಿಯೇ, ಅತ್ಯಂತ ಸೂಕ್ಷ್ಮತೆಯಿಂದ ಕೆತ್ತಲಾದುದರಿಂದ ಇಲ್ಲಿ ಹೂವಿನ, ದಿರಿಸು, ಆಭರಣದ ಅಲಂಕಾರ ಕಡಿಮೆ ಎನ್ನುತ್ತಾರೆ ಇಲ್ಲಿನ ಅರ್ಚಕರು. ಈ ಅತ್ಯಂತ ಸುಂದರವಾದ ವಿಗ್ರಹವನ್ನು ಕೆತ್ತಿದ ಕೀರ್ತಿ ಜಕಣಾಚಾರಿಗೆ ಸೇರುತ್ತದೆ.

 

ಈ ಊರಿಗೆ ಕೈದಳ ಎಂಬ ಹೆಸರು ಬರಲು ಮಹತ್ವವಾದ ಕಾರಣವಿದೆ. ಅದು ಇಂತಿದೆ. ಕೈದಳದ ಮೂಲ ಹೆಸರು ಕ್ರೀಡಾಪುರ. ಕ್ರೀಡಾಪುರದಲ್ಲಿ ಜನಿಸಿದ ಜಕಣಾಚಾರಿ ತನ್ನ ಮದುವೆಯ ಬಳಿಕ ಕೆಲಸದ ನಿಮಿತ್ತ ಊರೂರು ಅಲೆಯುತ್ತಾ ಶಿಲ್ಪವನ್ನು ಕೆತ್ತುತ್ತಾ ತನ್ನ ಊರನ್ನು, ಮಡದಿಯನ್ನು ಮರೆಯುತ್ತಾನೆ. ಹೊಯ್ಸಳ ಸಾಮ್ರಾಟ  ವಿಷ್ಣುವರ್ಧನನ ಅಧಿಪತ್ಯವಿದ್ದ  ಹಾಸನದ ಬೇಲೂರಿನಲ್ಲಿ  ಚೆನ್ನಕೇಶವನ ವಿಗ್ರಹವನ್ನು ಕೆತ್ತುವ ಕಾರ್ಯವನ್ನು ಕೈಗೊಳ್ಳುತ್ತಾನೆ. ಆ ವೇಳೆಗಾಗಲೇ ಜಕಣಾಚಾರಿಯ ಮಗ  ಡಂಕಣಾಚಾರಿ ಕ್ರೀಡಾಪುರದಲ್ಲಿ ಜನಿಸಿದ್ದು, ಯುವಕನಾಗಿರುತ್ತಾನೆ, ತನ್ನ ತಂದೆಯನ್ನು ಹುಡುಕುತ್ತಾ ಹಾಸನದ ಬೇಲೂರನ್ನು ತಲುಪುತ್ತಾನೆ. ಅಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಚೆನ್ನಕೇಶವನ ವಿಗ್ರಹದಲ್ಲಿ ಲೋಪವಿದೆಯೆಂದು ಹೇಳುತ್ತಾನೆ. ಆ ವೇಳೆಗಾಗಲೇ ಶಿಲ್ಪಿಯೆಂದು ಹೆಸರು ಮಾಡಿದ್ದ ಜಕಣಾಚಾರಿ, ಯುವಕನ ಮಾತಿಗೆ ಕ್ರೋಧಗೊಂಡು ಪ್ರಸ್ತುತ ಕೆತ್ತಲಾದ ವಿಗ್ರಹದಲ್ಲಿ ಲೋಪವಿದ್ದಲ್ಲಿ ತನ್ನ ಬಲ ಕೈಯನ್ನು ತುಂಡರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ನಂತರ ಆ ವಿಗ್ರಹವನ್ನು ಪರೀಕ್ಷಿಸಿದಾಗ ಅದರಿಂದ ಕಪ್ಪೆಯೊಂದು ಹೊರಬರುತ್ತದೆ. ಜಕಣಾಚಾರಿಯು  ನುಡಿದಂತೆ, ತನ್ನ ಬಲ ಕೈಯನ್ನು ಕತ್ತರಿಸಿಕೊಳ್ಳುತ್ತಾನೆ. ತದ ನಂತರ ಅವರಿಗೆ ತಮ್ಮಿಬ್ಬರ ಅಪ್ಪ,ಮಗ ಸಂಬಂಧದ ಸತ್ಯ ತಿಳಿಯುತ್ತದೆ. ಇಬ್ಬರೂ ಊರಿಗೆ ಮರಳಿ ಬರುತ್ತಾರೆ. ಚೆನ್ನ ಕೇಶವ ವಿಗ್ರಹದಿಂದ ಕಪ್ಪೆ ಹೊರಬಂದುದರಿಂದ ಕಪ್ಪೆ ಚೆನ್ನಿಗರಾಯ ಎಂದು ಕರೆಯಲಾಗುತ್ತದೆ. ಒಂದು ದಿನ ಕನಸಿನಲ್ಲಿ ಬಂದ ಭಗವಂತನು ಜಕಣಾಚಾರಿಗೆ ಊರಿನಲ್ಲಿ ಚೆನ್ನಕೇಶವನ ವಿಗ್ರಹವನ್ನು ಕೆತ್ತುವಂತೆ ನಿರ್ದೇಶಿಸುತ್ತಾನೆ. ಭಗವಂತನ ಆಜ್ಞೆಯಂತೆ ಜಕಣಾಚಾರಿ ತನ್ನ ಎಂಭತ್ತೈದನೇ ವಯಸ್ಸಿನ್ನಲ್ಲಿ, ಒಂದೇ ಕೈಯಿಂದ ವಿಗ್ರಹವನ್ನು ಕೆತ್ತುವ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಜಕಣಾಚಾರಿ ಶ್ರದ್ಧೆ ಭಕ್ತಿಗೆ ಮೆಚ್ಚಿದ ಭಗವಂತನು ಆತನ ಬಲಕೈಯನ್ನು ಕರುಣಿಸುತ್ತಾನೆ. ನಂತರ ಕ್ರೀಡಾಪುರವನ್ನು “ಕೈದಳ” ಎಂದು ಕರೆಯಲಾಗುತ್ತದೆ.

ಚೆನ್ನಕೇಶವ ವಿಗ್ರಹವನ್ನು ಪಶ್ಚಿಮ ಅಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಇದು ಜಕಣಾಚಾರಿ ತನ್ನ ಜೀವಿತಾವಧಿಯಲ್ಲಿ  ಕೆತ್ತಿದ ಕೊನೆಯ ವಿಗ್ರಹವಾಗಿದೆ. ಮುಸಲ್ಮಾನರ ದಾಳಿಯನ್ನು ತಪ್ಪಿಸಲೋಸುಗ ಜಕಣಾಚಾರಿ  ಈ ದಿಕ್ಕಿಗೆ ಇರಿಸಿದರೆಂದು ಎಂದು ಸ್ಥಳೀಯ ಹಿರಿಯೊಬ್ಬರ ಹೇಳಿಕೆ. ವಿಗ್ರಹವನ್ನು ನಾಶ ಮಾಡ ಬಂದ ಮುಸಲ್ಮಾನರು ವಿಗ್ರಹ ಪಶ್ಚಿಮ ದಿಕ್ಕಿನಲ್ಲಿರುವುದನ್ನು ಕಂಡು ನಿರ್ವಾಹವಿಲ್ಲದೇ ಹೋದರೆಂದು ಅವರು ಹೇಳುತ್ತಾರೆ. ಈ ವಿಗ್ರಹದ ಎಡ ಕೈಯ ಮೂರು ಬೆರಳುಗಳಲ್ಲಿ ಅತ್ಯಂತ ಸೂಕ್ಷ್ಮವಾದ ರಂಧ್ರಗಳಿವೆ. ಇದು ಜಕಣಾಚಾರಿಯ  ನೈಪುಣ್ಯತೆಯನ್ನು ಸಾರುತ್ತದೆ.

ದೇವಾಲಯದ ಸೊಬಗನ್ನೂ, ಐತಿಹ್ಯವನ್ನು ಬೆರಗಿನಿಂದ  ಕೇಳಿ ಮರಳುವಾಗ ಕತ್ತಲಾವರಿಸತೊಡಗಿತ್ತು. ಕಾರು ಊರನ್ನು ಹಿಂದಿಕ್ಕಿ ಮುಂದೋಡುತ್ತಿದ್ದರೂ, ನನ್ನ ಮನಸ್ಸು ಮಾತ್ರ ಅಲ್ಲೇ ಕಳೆದುಹೋಗಿತ್ತು.

– ಸೌಜನ್ಯ ಕಡಪ್ಪು,  ಬೆಳ್ತಂಗಡಿ
.

5 Responses

  1. Shruthi Sharma says:

    ಮಾಹಿತಿಪೂರ್ಣ ಲೇಖನ 🙂

  2. Hema says:

    ಬರಹ ಚೆನ್ನಾಗಿದೆ..

  3. ಆಶ್ಚರ್ಯಕರ ವಿಷಯಗಳು! ನಿಮ್ಮ ವರ್ಣನೆ ಓದಿದ ಮೇಲೆ ಮೇಲೆ ಒಮ್ಮೆ ಆ ದೇವಳಕ್ಕೆ ಭೇಟಿ ಕೊಡಬೇಕೆನಿಸುವಂತೆ ಮಾಡಿತು. ಚರಿತ್ರೆಯ ಬಗ್ಗೆ ಬೆಳಕುಚೆಲ್ಲುವ ಉತ್ತಮ ಲೇಖನ.

  4. Chethan says:

    Nama amma na birth place kaidala

Leave a Reply to Shruthi Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: