ಸಮುದ್ರ ತೀರದಲ್ಲಿರುವ ಬೇತಾಳ

Share Button

 

ಪ್ರಪಂಚದಲ್ಲಿ ಬಹುತೇಕವಾಗಿ ಸಾಗರ ಆವರಿಸಿದೆಯೆಂದು ನಮ್ಮನಿಮ್ಮೆಲ್ಲರಿಗೂ ತಿಳಿದಿದೆ. ಸಮುದ್ರದಲ್ಲಿ ಒಂದು ದೊಡ್ಡ ಜಗತ್ತೇ ಇದೆ. ನನ್ನ ಬಗ್ಗೆ ಹೇಳಬೇಕೆಂದರೆ ನಾನಿರುವುದು ನೆಲದಲ್ಲಾದರೂ ನನ್ನ ಲೋಕ ಸಮುದ್ರ. ಕಡಲ ತೀರವೇ ನನ್ನ ಮನೆ. ಸಮುದ್ರದ ಬಗ್ಗೆ ಎಲ್ಲಾ ತಿಳುವಳಿಕೆಯಿದೆ ಎಂದು ಯಾರು ಎಷ್ಟೇ ದಿಟ್ಟತನದಿಂದ ಹೇಳಿಕೊಂಡರೂ ನನ್ನಷ್ಟು ಸಾಗರದ ಬಗ್ಗೆ ಅರಿತವರು ಇರರು. ಬೆಳಗ್ಗೆಯಾಗುತ್ತಿದ್ದಂತೆ   ಪುಟ್ಟ ದೋಣಿಗಳಲ್ಲಿ ಸಮುದ್ರಕ್ಕೆ ಹೋಗಿ ಬಲೆ ಹೆಣೆಯುವ ಮೀನುಗಾರರು, ದೂರದಲ್ಲಿ ದಡದತ್ತ ಬರುವಂತೆ ಕಾಣುವ ಧಮನಿ, ಹಡಗುಗಳು, ಎಷ್ಟೇ ಕಣ್ಣು ಅಗಲಿಸಿ ನೋಡಿದರೂ ಕೊನೆಯಾಗದ ಜಲರಾಶಿ ಇವೆಲ್ಲವೂ ನನಗೆ ಸರ್ವೇ ಸಾಮಾನ್ಯ. ಚಂಡಮಾರುತ, ಕುಂಭದ್ರೋಣ ಮಳೆ ಹೀಗೆ ವಿವಿಧ ಪ್ರಕೃತಿಯ ವಿಕೋಪಕ್ಕೆ ರುದ್ರ ನರ್ತನ ಮಾಡುವ ಸಮುದ್ರದ ಅಲೆಗಳನ್ನಾಗಲಿ ಅಥವಾ ಯಾವ ಲೋಕದ ಸಮಸ್ಯೆಗೆ ತಲೆಕೆಡಿಸಿಕೊಳ್ಳದೆ ಶಾಂತತೆಯಲ್ಲಿರುವ ಸಾಗರವನ್ನೂ ಕಂಡಿದ್ದೇನೆ. ಇನ್ನು ಹಡಗಿನ ಪಾಡು ಹೇಳಬೇಕಾ, ಜಲಸಾಗರದಲ್ಲಿ ಅತ್ತಇತ್ತ ಅಲುಗಾಡುತ್ತಾ ಇನ್ನೇನು ಮುಳುಗುತ್ತವೇನೋ ಎಂದು ಅಪಹಾಸ್ಯದಲ್ಲಿ ನಾನು ನಗುತ್ತಿರುವಾಗ ಸಲೀಸಾಗಿ ತೇಲಲು ಆರಂಭಿಸುತ್ತದೆ.

ಕಡಲಿನಿಂದ ದೃಷ್ಟಿ ಸರಿಸಿ ದಡದತ್ತ ನೋಡಿದರೆ, ಮನುಷ್ಯರಿಗೂ ಸಮುದ್ರಕ್ಕೂ ಎಂಥಾ ನಂಟೋ ಏನೋ. ಅಲೆಗಳಲ್ಲಿ ಈಜಿಕೊಂಡು, ಹಾರಿಕೊಂಡು, ಬಿದ್ದುಕೊಂಡಿರಲು ಅದೆಂಥ ಖುಷಿಯೋ ನನಗಂತೂ ತಿಳಿಯದು. ಅಂಟು ಮರಳಿನಲ್ಲಿ ಕೂತು ಸಂತಸದಲ್ಲಿ ಹೊರಳಾಡುತ್ತಾರೆ. ಅವರ ಆಟವನ್ನು ನೋಡಿದರೆ ನನಗೆ ನಗು ಬರುತ್ತದೆ. ಚಿಕ್ಕ ಮಕ್ಕಳ ಕಥೆಯಂತೂ ಬೇಡವೇ ಬೇಡ. ಮರಳಿನಲ್ಲಿ ಬಾವಿ ತೋಡಿ, ಮನೆ ಕಟ್ಟಿ ಕೊನೆಗೆ ಗೃಹಪ್ರವೇಶ ಒಂದು ಮಾಡುವುದಿಲ್ಲ ಅಷ್ಟೇ. ಎಂತ ಸಡಗರವೋ ನನಗೆ ತಿಳಿಯದು. ಮನುಷ್ಯರಿಗೇನು ಗೊತ್ತು ಸಮುದ್ರ ಒಂದು ರೀತಿಯಲ್ಲಿ ಗೋಮುಖವ್ಯಾಘ್ರ ಎಂದು. ಅತಿ ಉತ್ಸಾಹದಲ್ಲಿ ಇಲ್ಲಿ ನೀರಿನಲ್ಲಿ ಆಟಾಡುವ ಎಷ್ಟೋ ಮಂದಿಯನ್ನು ಇದೇ ನೀರು ತನ್ನೊಳಗೆ ಸೆಳೆದು ಅವರ ಜೀವವನ್ನು ಉಂಡಿದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ನನಗೆ ಯಾರ ಪ್ರಾಣವನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರದಿಂದ ತುಸು ಕಣ್ಣೀರು ಜಾರಿದ್ದೂ ಉಂಟು. ಇನ್ನು ಕೆಲವು ಮಾನವರಿದ್ದಾರೆ ನೋಡಿ, ಅವರಿಗೆ ನನ್ನ ದೇಹವನ್ನು ತಲೆಯಿಂದ ಬುಡವರೆಗೆ ದಿಟ್ಟಿಸಿ ನೋಡುವುದೇ ಆಯಿತು. ಕೆಲವರಿಗೆ ಸುಮ್ಮನೆ ನೋಡಿದರೆ ಸಾಕಾಗುವುದಿಲ್ಲ. ನನ್ನೊಂದಿಗೆ ಭಾವಚಿತ್ರ ಬೇರೆ ಬೇಕಿವರಿಗೆ. ನನ್ನನ್ನು ಅಷ್ಟು ನೋಡಲು ನನ್ನಲ್ಲಿ ಏನು ವಿಶೇಷತೆಯಿದೆ ಎಂದು ನನಗಂತೂ ಅರಿಯದು.

 

ಚಿತ್ರರಚನೆ: ರಮ್ಯಶ್ರೀ ಭಟ್

ಮನುಷ್ಯರ ವಿಷಯ ಬದಿಗಿಡೋಣ. ಹಡಗುಗಳಿವೆಯಲ್ಲಾ, ಇವು ಎಷ್ಟೇ ಬೃಹತ್ ಅರಮನೆ ಅಥವಾ ಪಟ್ಟಣದಂತಿರಲಿ, ನನಗೆ ಇವರು ತಲೆಬಾಗಲೇ ಬೇಕು. ಇವರೆಲ್ಲರ ನಿಯಂತ್ರಣ ನನ್ನ ಕೈಯಲ್ಲಿದೆ. ನನ್ನ ಮಾತು ಕೇಳದಿದ್ದರೆ ದಿಕ್ಕಾಪಾಲಾಗುವುದಂತು ಪಕ್ಕಾ ಬಿಡಿ. ಈಗ ನಿಮಗೆ ನಾನು ಯಾರೆಂದು ತಿಳಿದಿರಬಹುದು. ಸೂರ್ಯ ಮುಳುಗಿ ಎಷ್ಟೇ ಅಂದದ ಬೆಳದಿಂಗಳು ಬಂದರೂ ನನ್ನ ತಲೆಯಲ್ಲಿರುವ ದೀಪ ತೀಕ್ಷ್ಣವಾಗಿ ಉರಿಯುತ್ತದೆ. ನನ್ನ ದೀಪವನ್ನು ಶೋಧಕದೀಪದಂತೆ ಬಳಸಿಕೊಂಡು ಹಡಗುಗಳು ಯಾವ ದಿಕ್ಕಿನಲ್ಲಿ ಚಲಿಸಬೇಕೆಂದು ನಿಯಂತ್ರಿಸುತ್ತೇನೆ. ಹಡಗುಗಳ ನಿಯಂತ್ರಣ ಎಷ್ಟೇ ನನ್ನ ಕೈಯಲ್ಲಿದೆಯೆಂದು ನಾನು ಅಹಂಕಾರದಿಂದ ಬೀಗಿಕೊಂಡರೂ ನನಗೆ ಇವರು ತುಂಬಾ ಪ್ರಿಯರು. ಪ್ರತಿ ಹಡಗು ಆಗಮಿಸುತ್ತಿದ್ದಂತೆ ಪರ ಊರಿನಲ್ಲಿರುವ ನನ್ನ ಸ್ನೇಹಿತರು ನನಗಾಗಿ ಕಳಿಸಿದ ಸಂದೇಶ ಸಿಗುತ್ತದೆ. ನಾನೂ ಕೂಡ ನನ್ನ ಪ್ರೀತಿಯ ಸಂದೇಶವನ್ನು ಕೊಟ್ಟು ಹಡಗುಗಳನ್ನು ಕಳಿಸಿಬಿಡುತ್ತೇನೆ.

ನನ್ನನ್ನು ನಿರ್ಮಿಸಿದವರು ನನಗೆ ಅಷ್ಟೇನು ಅಂದಚೆಂದ ನೀಡಲಿಲ್ಲ. ಒಟ್ಟಾರೆ ಬೇತಾಳನಂತೆ, ಎಲ್ಲಾ ಋತುವಿನಲ್ಲಿ ಪ್ರಕೃತಿಯ ಪ್ರೀತಿಯ ತಂಗಾಳಿ, ಹೊಂಬಿಸಿಲಿನಿಂದ ಹಿಡಿದು ರಭಸದಿಂದ ಬೀಸುವ ಬಿರುಗಾಳಿ, ಜಡಿಮಳೆ, ಸುಡುಬಿಸಿಲು ಎಲ್ಲವನ್ನೂ ತಡೆದುಕೊಂಡು ಗಟ್ಟಿ ನಿಂತಿದ್ದೇನೆ. ಪ್ರತಿದಿನ ಸೂರ್ಯಾಸ್ತವನ್ನು ವೀಕ್ಷಿಸಿರುವ ದಾಖಲೆ ನನ್ನದು.ನೀವೆಲ್ಲರೂ ನನ್ನನ್ನು ನೋಡಿ ಸಂತಸ ಪಟ್ಟಿರಬಹುದು ಎಂದು ನಾನು ಭಾವಿಸುತ್ತೇನೆ. ಕೊನೆಗೂ ನನ್ನ ಮನದಾಳದ ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು. ಇನ್ನೊಮ್ಮೆ ನೀವು ನನ್ನತ್ತ ಬಂದಾಗ ಭೇಟಿಯಾಗೋಣ.

ಇಂತಿ ನಿಮ್ಮ ಪ್ರೀತಿಯ ದೀಪಸ್ತಂಭ.

 

– ರಮ್ಯಶ್ರೀ ಭಟ್, ಬೆಂಗಳೂರು

8 Responses

 1. Shruthi Sharma says:

  Such a wonderful writing. Superb 🙂

 2. Shruthi Sharma says:

  Loved the painting too 🙂

 3. Hema Hema says:

  ವಿಶಿಷ್ಟ ವಿಷಯದ ಆಯ್ಕೆ…ಸೊಗಸಾದ ನಿರೂಪಣೆ..ಚಿತ್ರವೂ ಚೆನ್ನಾಗಿದೆ..ಸೂಪರ್

 4. bhagyalaxmi says:

  ದೀಪಸ್ತ೦ಭದ ವರ್ಣಚಿತ್ರವೂ , ಸ್ವಗತವೂ ಚೆನ್ನಾಗಿದೆ

 5. ಯಾರದು? ಟೋಪಿ ಇಟ್ಟುಕೊಂಡಿರುವ ಶಿಸ್ತಿನ ಸಿಪಾಯಿಯೊಬ್ಬ ಈಟಿ ಹಿಡಿದು ಕಾವಲು ಕಾಯುತ್ತಿದ್ದಾನೋ?! ಅವಂ ಏನೋ ಗೊಣಗುತ್ತಿರುವಂತಿದೆಯಲ್ಲ. ಅವನ ಬೇಜಾರನ್ನು ಅರಿತವರಂತೆ ಬೇಸರ ಕಳೆಯಲು ಮೋಡಗಳು ವರ್ಣರಂಜಿತ ಚಿತ್ತಾರ ಬಿಡಿಸಿವೆ ಆಗಸದ ತುಂಬಾ. ಸುಂದರ ಕಡಲು ಬೀಸುವ ಗಾಳಿಯೊಡನೆ ಸೇರಿ ‘ಸಾಪಾಸಾ’ ಹೇಳುತ್ತಿದೆ, ಇವನನ್ನು ಮುದಗೊಳಿಸಲು. ಸೂರ್ಯ ನಕ್ಕು ನಕ್ಷತ್ರಗಳನ್ನು ಕಳಿಸುತ್ತಾನೆ ಅವನ ಏಕತಾನತೆ ಕಳೆಯಲು.

  ಅದ್ಭುತ ಕಲ್ಪನಾಶಕ್ತಿ ನಿಮ್ಮದು! ದೀಪಸ್ತಂಭವೇ ಮಾತನಾಡಿದಂತೆನಿಸಿತು. ಅದರ ಬೇಜಾರಿಗೆ ಸಾಂತ್ವನ ಕೊಡೋಣವೆನಿಸಿತು, ಅಷ್ಟು ಮನಮುಟ್ಟುವಂತಿದೆ ಈ ಸ್ವಗತ ಬರಹ ಮತ್ತು ನೀವು ಬಿಡಿಸಿದ ಚಿತ್ರ. ಶುಭಾಶಯಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: