ಜನಮನ ಸೆಳೆವ ಮಣ್ಣಿನ ಪಾತ್ರೆಗಳು

Share Button

earthen water filter

ಅನಾದಿ ಕಾಲದ ಮಣ್ಣಿನ ಪಾತ್ರೆಗಳಿಗೆ ಮರುಜೀವ ದೊರೆತಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿ ಎಂಬ ಸಂದೇಶವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಮೂಲಕ ಸಾರಲಾಗುತ್ತಿದೆ.

ಇಲ್ಲಿಯ ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ ವೈವಿಧ್ಯಮಯ ಮಣ್ಣಿನ ದಿನಪಯೋಗಿ ವಸ್ತುಗಳು ಕಂಗೊಳಿಸುತ್ತಿವೆ. ಹಳ್ಳಿಯ ಸೊಗಡನ್ನು ಬಿಂಬಿಸುವ ವಾತಾವರಣ ಸೃಷ್ಟಿಯಾಗಿದೆ. ವಿನೂತನ ಮಾದರಿಯ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದ್ದು, ವರ್ಣರಂಜಿತ ಚಿತ್ರಗಳನ್ನು ಉತ್ಪನ್ನಗಳ ಮೇಲೆ ಬಿಡಿಸಲಾಗಿದೆ. ನಾನಾ ಕಡೆಯಿಂದ ದೀಪೋತ್ಸವಕ್ಕೆ ಬಂದ ಯಾತ್ರಿಗಳಿಗೆ, ಗ್ರಾಹಕರಿಗೆ ಉತ್ಪನ್ನಗಳ ಬಳಕೆಯ ಬಗ್ಗೆ ಅಂಗಡಿ ಮಾಲೀಕ ಜಯರಾಜ್ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಿದ್ದಾರೆ.

ಮಣ್ಣಿನ ಪಾತ್ರೆಗಳು ಪರಿಸರ ಸ್ನೇಹಿಯಾಗಿವೆ. ಯಾವುದೇ ರಾಸಾಯನಿಕ ಅಂಶಗಳ ಮಿಶ್ರಣವಿಲ್ಲದಿರುವುದರಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ. ಹಾಗೇ ಇದರ ಶುಚಿತ್ವಕ್ಕೆ ಸಾಬೂನಿನ ಅಗತ್ಯವಿರುವುದಿಲ್ಲ. ಇದರಿಂದ ನೀರನ್ನು ಕಡಿಮೆ ಮಟ್ಟದಲ್ಲಿ ಉಪಯೋಗಿಸಬಹುದು. ಇದರೊಂದಿಗೆ ಅಲ್ಯೂಮಿನಿಯಂ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಿ ರೋಗಗಳಿಗೆ ಆಹ್ವಾನ ನೀಡುವುದರ ಬದಲು, ಈ ನೈಸರ್ಗಿಕ ಕಚ್ಚಾವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯವು ವೃದ್ದಿಸುತ್ತದೆ. ಜೊತೆಗೆ ಪರಿಸರವನ್ನು ಸಂರಕ್ಷಿಸಿದ ಹಾಗೆ ಆಗುತ್ತದೆ ಎಂದು ಸ್ಥಳೀಯ ಗ್ರಾಹಕ ಹರೀಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಸೀಸ ರಹಿತ ಮಣ್ಣಿನ ನೀರಿನ ಬಾಟಲಿ ಬಹಳ ಆಕರ್ಷಣೀಯವಾಗಿದ್ದು, ಈ ಉತ್ಪನ್ನಕ್ಕೆ ಬಹಳ ಬೇಡಿಕೆ ಇದೆ. ಗ್ರಾಹಕರನ್ನು ಸೆಳೆಯಲು ವಿನೂತನವಾಗಿ ವಿವಿಧ ರೀತಿಯ ಪಾತ್ರೆಗಳು ನಮ್ಮಲ್ಲಿ ದೊರೆಯುತ್ತಿವೆ ಎಂದು ತಿಳಿಸಿದರು. ಪ್ರೆಶರ್ ಕುಕ್ಕರ್, ಸಾಂಬಾರು ತಯಾರಿಸುವ ಸಲಕರಣೆಗಳು, ಹೂಜಿ ಒಳಗೊಂಡಂತೆ ಅಡುಗೆ ತಯಾರಿಸಲು ಉಪಯುಕ್ತವೆನ್ನಿಸುವ ಸಾಮಾಗ್ರಿಗಳಿವೆ. ಇದರೊಂದಿಗೆ ಮಣ್ಣಿನ ರೆಫ್ರಿಜೇಟರ್ ಕೂಡ ಇದ್ದು, ಒಂದುವಾರಗಳ ಕಾಲ ತರಕಾರಿಗಳನ್ನು ಶೇಖರಿಸಬಹುದು. ಇದರೊಂದಿಗೆ ಈ ಉತ್ಪನ್ನಗಳು ಜಿಎಸ್‌ಟಿ ರಹಿತವಾಗಿರುವುದು ಗಮನಾರ್ಹ.

ಕಳೆದ ಒಂದು ವರ್ಷಗಳಿಂದ ಮಂಗಳೂರು ನಗರದಲ್ಲಿ ಜಯರಾಜ್ ಪವನ್ ಕಾರ್ಪೋರೇಷನ್ ಕಂಪನಿ ನಡೆಸುತ್ತಿದ್ದಾರೆ. ಮಣ್ಣಿನ ಪಾತ್ರೆಗಳ ಪ್ರಾಮುಖ್ಯತೆಯನ್ನು ನಾಡಿನೆಲ್ಲೆಡೆ ಪಸರಿಬೇಕೆಂಬ ಉದ್ದೇಶದಿಂದ ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಿದ್ದಾರೆ. ಬೆಂಗಳೂರಿನ ಓರ್ವ ವಾಣಿಜ್ಯೋದ್ಯಮಿಯಿಂದ ಪ್ರೇರಣೆ ಪಡೆದ ಜಯರಾಜ್, ಆ ಉದ್ಯಮಿ ಬಳಿ ಮಣ್ಣಿನ ಉತ್ಪನ್ನಗಳ ಮಾಹಿತಿ ಪಡೆದು ಪರಿಸರಸ್ನೇಹಿ ಉದ್ಯಮವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಇದೇ ಮೊಟ್ಟಮೊದಲ ಬಾರಿಗೆ ವಸ್ತುಪ್ರದರ್ಶನ ಮಳಿಗೆಯಲ್ಲಿ ಈ ವ್ಯಾಪಾರವನ್ನು ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು. ಹಿಂದಿನ ಪಾರಂಪರಿಕ ಆಚಾರ ವಿಚಾರಗಳನ್ನು ಉಳಿಸಿ ಬೆಳಸಬೇಕೆಂಬ ಉದ್ದೇಶದಿಂದ ಅಂಗಡಿಯನ್ನು ಆರಂಭಿಸಿದ್ದೇನೆ. ಆಧುನಿಕತೆಯ ಸ್ಪರ್ಶದಿಂದ ನಮ್ಮ ಸಂಪ್ರದಾಯಿಕ ಜೀವನ ಶೈಲಿ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಬಿಡುವಿಲ್ಲದ ಯಾಂತ್ರಿಕ ಬದುಕಿಗೆ ಒಗ್ಗಿಹೋಗಿರುವ ನಾವು  ಪ್ಲಾಸ್ಟಿಕ್, ಕೋಪರ್, ಸ್ಟಿಲ್ ಪಾತ್ರೆಗಳ ಮೊರೆಹೋಗುತ್ತಿದ್ದೇವೆ.  ಪರಿಣಾಮವಾಗಿ ಮಣ್ಣಿನ ಪಾತ್ರೆ ಕಣ್ಮರೆಯಾಗುತ್ತಿದೆ ಎಂದು ಹೇಳಿದರು.

ಮಣ್ಣಿನ ಪಾತ್ರೆಗಳಲ್ಲಿ ಔಷಧೀಯ ಗುಣಗಳಿದ್ದು, ನಮ್ಮ ಹಿರಿಯರೆಲ್ಲರೂ ದಿನಪಯೋಗಿ ವಸ್ತುಗಳಾಗಿ ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದರು. ಆದಕಾರಣ ಅವರು ಆರೋಗ್ಯವಂತರಾಗಿ ದೀರ್ಘಕಾಲ ಬಾಳಿ ಬದುಕುತ್ತಿದ್ದರು ಎಂದರು. ಆರ್ಯುವೇದಿಕ್ ಚಿಕಿತ್ಸಾಲಯಗಳಲ್ಲಿ ಮಣ್ಣಿನ ಪಾತ್ರೆಗಳ ಬಳಕೆ ಮಾಡುತ್ತಾರೆ. ಅದರಲ್ಲಿ ರೋಗರುಜಿನಗಳನ್ನು ನಿಯಂತ್ರಿಸುವ ಅಂಶವಿದ್ದು, ಡಯಾಬಿಟಿಸ್, ಕ್ಯಾನ್ಸರ್ ರೋಗಗಳನ್ನು ತಡೆಗಟ್ಟುವ ಗುಣವಿರುವುದು ವಿಶೇಷ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು.
.
ಮಾನ್ಯ ಪ್ರಧಾನಿಯವರ ಪರಿಕಲ್ಪನೆಯ ಫಲವಾಗಿ ಉತ್ತರಭಾರತದಲ್ಲಿ ಆರಂಭಗೊಂಡ ಸೀಸ ರಹಿತ ಮಣ್ಣಿನ ಪಾತ್ರೆಗಳು ಇದೀಗ ದಕ್ಷಿಣ ಭಾರತದಲ್ಲೂ ಜನ್ನತಾಳಿವೆ. ಅದರಲ್ಲೂ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಜಾತ್ರಮಹೋತ್ಸದ ವಸ್ತು ಪ್ರದರ್ಶನಾಲಯದಲ್ಲಿ ಭಾರೀ ಸದ್ದು ಮಾಡುತ್ತಿರುವು ವಿಶೇಷ.
.
ವರದಿ: ಸುಶ್ಮಿತ ಜೈನ್ 
ಚಿತ್ರ: ಜಯಲಕ್ಷ್ಮಿ ಭಟ್ 
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಎಸ್‌ಡಿಎಂ ಕಾಲೇಜು, ಉಜಿರೆ

2 Responses

  1. Hema says:

    ಬರಹ ಇಷ್ಟವಾಯಿತು. ಆಧುನಿಕ ಅಡುಗೆಮನೆಗಳಲ್ಲಿ ಮರೆಯಾಗುತ್ತಿರುವ ಮಣ್ಣಿನ ಪಾತ್ರೆಗಳನ್ನು ನೋಡಿದಾಗ ಹಳೆಯ ನೆನಪುಗಳು ಮರುಕಳಿಸಿದುವು.

  2. ಮಣ್ಣಿನ ಪಾತ್ರೆಕೊಳ್ಳಬೇಕೆಂಬ ಅಮ್ಮ ಹಿಡಿಸಿದ ಆಸೆಗೆ ಇಂಬುಕೊಡುವ ಲೇಖನ. ನನಗೆ ತಿಳಿದಹಾಗೆ ಪುತ್ತೂರಿನಲ್ಲೂ ಕುಂಬಾರರ ಸಂಘದ ಸಾಂಪ್ರದಾಯಿಕ ಮಡಿಕೆ-ಕುಡಿಕೆಗಳ ಘಟಕವೊಂದರ ಜೊತೆಗೆ, ನವೀನ ವಿನ್ಯಾಸದ ಪರಿಸರಸ್ನೇಹಿ ಮಣ್ಣಿನ ಪಾತ್ರೆಗಳು ದೊರಕುವ ಎರಡು ಅಂಗಡಿಗಳಿವೆ.

Leave a Reply to Sindhu Devi K Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: