ಶಾಂಘೈನಲ್ಲಿ ವೆಗಾನ್ ಫುಡ್’ ಹೀಂಗೆ’

Share Button

 

ಚೀನಾದ ಪೂರ್ವಾ ಕರಾವಳಿಯಲ್ಲಿರುವ  ಪ್ರಮುಖ ವಾಣಿಜ್ಯನಗರಿ ಶಾಂಘೈ.  ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು  ಬಿಟ್ಟು ಇನ್ನೆಲ್ಲಾ ಪ್ರಾಣಿ-ಪಕ್ಷಿ-ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ,ಶಾಂಘೈನಲ್ಲಿ ನಾಲ್ಕುದಿನಗಳಿದ್ದು ಅಪ್ಪಟ ಸಸ್ಯಾಹಾರವನ್ನುಂಡು ಬಂದ ಅನುಭವ ನನ್ನದು.

ಅಲ್ಲಿನ ಸಹೋದ್ಯೋಗಿ ಮಿತ್ರರು  ಬಹಳ ಕಾಳಜಿಯಿಂದ  ನನ್ನ ಊಟ ತಿಂಡಿಯ ಜವಾಬ್ದಾರಿ ಹೊತ್ತಿದ್ದರು. ಸಂಸ್ಥೆಯ ಕ್ಯಾಂಟೀನ್ ನಲ್ಲಿ  ನನಗೆ ಯಾವುದು ಸೂಕ್ತ ಎಂದು ತಿಳಿಸಿ ಸಹಕರಿಸಿದ್ದರು. ರಾತ್ರಿಯ ಊಟಕ್ಕಾಗಿ ಶಾಂಘೈಯ ‘ವೆಗಾನ್’ ರೆಸ್ಟೋರೆಂಟ್ ಗಳಿಗೆ ಕರೆದೊಯ್ದಿದ್ದರು.  ಅಚ್ಚುಕಟ್ಟಾಗಿದ್ದ  ಹೋಟೆಲ್ ನಲ್ಲಿ  ಕುಳಿತು  ಹರಟುತ್ತಾ ಇರುವಾಗ, ಮೆನು ಕಾರ್ಡ್ ಬಂತು. ಪುಟ್ಟ ರಂಗವಲ್ಲಿಗಳಂತೆ   ಕಾಣುವ ‘ಮಾಂಡರಿನ್’  ಲಿಪಿಯ ಅಕ್ಷ್ರರಗಳ ನಡುವೆ ಇರುವ ಆಂಗ್ಲ ಪದಗಳತ್ತ ಕಣ್ಣು ಹಾಯಿಸಿದಾಗ  “ ವೆಜಿಟೇರಿಯನ್ ಕುಂಗ್ ಪಾವೊ ಚಿಕನ್ “   “ವೆಜಿಟೇರಿಯನ್ ಬೀಫ್ ಅಂಡ್ ಟೊಫು ಪುಡ್ಡಿಂಗ್’ ಇತ್ಯಾದಿ  ಹೆಸರುಗಳನ್ನು ಗಮನಿಸಿ ದಿಗಿಲುಗೊಂಡೆ. ನನ್ನ ಗೊಂದಲ ಕಂಡ ಚೀನೀ ಸಹೋದ್ಯೋಗಿಗಳು “ಭಯಪಡಬೇಡಿ, ಇದು ವೆಗಾನ್ ಹೋಟೆಲ್, ಇಲ್ಲಿ ‘ಮೋಕ್ ಮೀಟ್’ ಮಾತ್ರ ಸಿಗುವುದು.   ಸೋಯಾಭೀನ್ಸ್ ,ತರಕಾರಿಗಳು ಮತ್ತು ವಿವಿಧ ಕಾಳುಗಳನ್ನು ತಯಾರಿಸಿದ ಅಡುಗೆಗಳಿವು ಅಂದರು.

‘ವೆಗಾನ್’ ಆಹಾರ ಪದ್ಧತಿಯ ಪ್ರಕಾರ,  ಹಾಲು, ಮೊಸರು, ತುಪ್ಪ ಇತ್ಯಾದಿ ಯಾವುದೇ  ಪ್ರಾಣಿಜನ್ಯ  ಡೈರಿ ಉತ್ಪನ್ನಗಳನ್ನು ಸೇವಿಸುವುದಿಲ್ಲ., ಜೇನುತುಪ್ಪವೂ ನಿಷಿದ್ಧ. ಹಸುವಿನ ಹಾಲಿಗೆ ಬದಲು ಸೋಯಾ ಹಾಲನ್ನು ಉಪಯೋಗಿಸುತ್ತಾರೆ. ಸೋಯಾ ಹಾಲಿನಿಂದ ತಯಾರಿಸಿದ ವಿವಿಧ ಆಹಾರ ವಸ್ತುಗಳನ್ನು ಡೈರಿ ಉತ್ಪನ್ನಗಳಿಗೆ ಪರ್ಯಾಯವಾಗಿ ಬಳಸುತ್ತಾರೆ.  ನಾನು ಶಾಂಘೈನಲ್ಲಿ ರುಚಿ ನೋಡಿದ ಕೆಲವು ವೆಗಾನ್ ತಿನಿಸುಗಳು  ಹೀಗಿವೆ:

1. ವೆಜಿಟೇರಿಯನ್ ಬೀಫ್ ಅಂಡ್  ಟೊಫು ( Vegeterian Beef and Tofu Pudding boiled in hot chilli oil )

ವೆಜಿಟೇರಿಯನ್ ಬೀಫ್ ಅಂಡ್  ಟೊಫು


ಸೋಯಾ ಹಾಲಿನಿಂದ ತಯಾರಿಸಿದ ‘ಟೊಫು’ ಎಂಬ ಪನೀರ್  ಮತ್ತು ವಿವಿಧ ತರಕಾರಿ ಮಸಾಲೆಗಳನ್ನು ಸೇರಿಸಿ ತಯಾರಿಸಿದ ವ್ಯಂಜನವಿದು. ಸುಮಾರಾಗಿ ಭಾರತದ ಹೋಟೆಲ್ ಗಳಲ್ಲಿ ದೊರೆಯುವ ‘ಆಲೂ ಪನೀರ್ ‘ ನ ರುಚಿ, ಆದರೆ ಉಪ್ಪು, ಖಾರ, ಮಸಾಲೆ  ಇಷ್ಟಪಡುವ ನಮ್ಮ ನಾಲಿಗೆಗೆ ಇದು ಬಲು ಸಪ್ಪೆ ಎನಿಸುತ್ತದೆ!!. ನೂಡಲ್ಸ್ ಅಥವಾ  ಬ್ರೆಡ್ ಜತೆ ನೆಂಚಿಕೊಂಡು ತಿನ್ನಬಹುದು.

2. ’ಸುಶಿ’ ( Sushi)

’ಸುಶಿ’


ಸುಮಾರಾಗಿ ‘ಬೀಡಾ’ದ ಹಾಗೆ ಕಾಣಿಸುವ ‘ಸುಶಿ’ಯಲ್ಲಿ ಹಲವು ವೈವಿಧ್ಯಗಳಿವೆಯಂತೆ . ನನಗಾಗಿ ಸಸ್ಯಾಹಾರದ ’ಸುಶಿ’ ತಯಾರಾಗಿ ಬಂತು. ನೋಡಲು ತುಂಬಾ ಚೆನ್ನಾಗಿತ್ತು.ಅಲಂಕಾರಿಕ ತಟ್ಟೆಯಲ್ಲಿ, ಸ್ವಲ್ಪ ಸೀಳಿದ ಹಸಿರು ಮೆಣಸಿನ ಕಾಯಿ, ಲೆಟ್ಟೂಸ್ ಎಲೆಗಳು ಹಾಗೂ ಸೋಯಾಬೀನ್ಸ್ ನಿಂದ ತಯಾರಿಸಿದ ಕೇಕ್ ನಂತಹ ವಸ್ತುವನ್ನು ಜೋಡಿಸಿದ್ದರು. ನೋಡಲು ತುಂಬಾ ಚೆನ್ನಾಗಿತ್ತು. ಅದನ್ನು ತಿನ್ನುವ ಪದ್ಧತಿ ಇನ್ನೂ ಚೆನ್ನ. ಮೊದಲು ಲೆಟ್ಟೂಸ್ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಒಂದೆರಡು ಹಸಿರುಮೆಣಸಿನಕಾಯಿ ಸೀಳುಗಳನ್ನಿರಿಸಿ, ಅದರ ಜತೆಗೆ ಸೋಯಾ ಕೇಕ್ ಇಟ್ಟು ಮಡಚಿ ತಿನ್ನುವುದು. ರುಚಿ ಸುಮಾರಾಗಿತ್ತು. ಹಸಿರುಮೆಣಸಿನಕಾಯಿ ಖಾರವೇ ಇರಲಿಲ್ಲ.  ರುಚಿಗಿಂತಲೂ ಅದರ ಹೊಸತನಕ್ಕೆ ಮಾರುಹೋಗಿ 3-4 ‘ಸುಶಿ’ ತಿಂದೆ.

ಚೀನಾದಲ್ಲಿ ಪೆನ್ಸಿಲ್ ನಂತಹ  ಎರಡು ‘ಚಾಪ್ ಸ್ಟಿಕ್’ ಗಳ ಮೂಲಕ ಆಹಾರವನ್ನು ತಿನ್ನುತ್ತಾರೆ. ಕೈಯಲ್ಲಿ ಅಥವಾ ಚಮಚದಲ್ಲಿ ಆಹಾರವನ್ನು ತಿನ್ನುವ ಅಭ್ಯಾಸವಿರುವ ನನಗೆ ಚಾಪ್ ಸ್ಟಿಕ್ ನಲ್ಲಿ ತಿನ್ನಲು ಬಲು ತಮಾಷೆಯೆನಿಸಿತು. ನನಗಾಗಿ ಚಮಚ ಮತ್ತು ಫೋರ್ಕ್ ಅನ್ನು ಕೊಟ್ಟಿದ್ದರೂ, ಚಾಪ್ ಸ್ಟಿಕ್ ನಲ್ಲಿ  ಪ್ರಯತ್ನಿಸೋಣ ಎಂದು ಒಂದೆರಡು ತುಣುಕುಗಳನ್ನು ಚಾಪ್ ಸ್ಟಿಕ್ ನಲ್ಲಿ ತಟ್ಟೆಯಿಂದ ಮೇಲೆತ್ತಿ, ತಿನ್ನುವಲ್ಲಿ  ಯಶಸ್ವಿಯಾದೆ! ಆಮೇಲೆ ಚಮಚಕ್ಕೆ ಮರಳಿದೆ!  ‘ಸುಶಿ’ ತಿನ್ನುವ ನನ್ನ ಸಡಗರ ನೋಡಿ ಚೀನಾದ ಅತಿಥೇಯರಿಗೂ ಖುಷಿಯಾಯಿತು.
ಸುಶಿ

3. ವೆಜಿಟೇರಿಯನ್ ಬಿಬಿಕ್ಯೂ ಪೋರ್ಕ್ ಇನ್ ಹನಿ ( Vegetarian BBQ Pork in Honey)

ವೆಜಿಟೇರಿಯನ್ ಬಿಬಿಕ್ಯೂ ಪೋರ್ಕ್ ಇನ್ ಹನಿ

ನೋಡಲು ಸುಮಾರಾಗಿ ‘ಹನಿಕೇಕ್ ‘ನಂತೆ ಇದ್ದ ಈ ಸಿಹಿತಿಂಡಿಯು ನಮ್ಮ ಮಾಪನದಲ್ಲಿ ತೀರಾ ಕಡಿಮೆ ಸಿಹಿ ಇತ್ತು. ಇದು ಕೂಡಾ ಸೋಯಾ ಪನೀರ್ ನಿಂದ ತಯಾರಿಸಲಾದ ತಿನಿಸು. ಒಟ್ಟಿನಲ್ಲಿ ನಾನು ಗಮನಿಸಿದಂತೆ, ಶಾಂಘೈಯ ಅಡುಗೆಪದ್ಧತಿಯಲ್ಲಿ ಉಪ್ಪು, ಖಾರ, ಸಿಹಿ,ಹುಳಿ ಎಲ್ಲವೂ ಕಡಿಮೆ. ರುಚಿಗಿಂತ ಹೆಚ್ಚಾಗಿ ಆಹಾರದ ಜೋಡಣೆಯ ಅಂದವನ್ನು ನೋಡಿ ಸಂತಸಪಟ್ಟೆ.

4.’ಬಕ್ ವೀಟ್’ ಚಹಾ ( Buck whet tea)

’ಬಕ್ ವೀಟ್’ ಚಹಾ

ಚಹಾ ಸೇವನೆಯು ಚೀನಾದ ಭೋಜನದ ಅವಿಭಾಜ್ಯ ಅಂಗ. ಇದರಲ್ಲಿ ಹಲವು ಬಗೆ. ತಯಾರಿ ಪದ್ಧತಿ ಬಹಳ ಸುಲಭ. ಹಲವಾರು ಬಗೆಯ ಹೂವು, ಬೀಜ, ಕಾಳು, ಸೊಪ್ಪುಗಳಿಂದ ತಯಾರಿಸಿದ ಚಹಾ ಲಭ್ಯ. ನಮಗೆ ಬೇಕೆನಿಸಿದ ಹೂವನ್ನೋ, ಬೀಜವನ್ನೋ, ಸೊಪ್ಪನ್ನೋ  ಸ್ವಲ್ಪ ಹೂಜಿಗೆ ಹಾಕಿ, ಒಂದಷ್ಟು  ನೀರು ಕುದಿಸಿ ಸುರಿದರೆ ಸಾಕು,  ಚಹಾ ಸಿದ್ದ. ಉದಾ: ಹಸಿರು ಚಹಾ, ಎಳ್ಳಿನ ಚಹಾ, ಓಟ್ಸ್ ಚಹಾ…ಇತ್ಯಾದಿ. ಪಿಂಗಾಣಿ ಅಥವಾ ಗಾಜಿನ ಮಗ್ ನಲ್ಲಿ ಚಹಾ ತಂದು, ಊಟದ ಮೇಜಿನ ಮಧ್ಯೆ ಇಡುತ್ತಾರೆ. ನಾವು ಊಟದ  ಮಧ್ಯೆ, ಆಗಿಂದಾಗ್ಗೆ ಚಹಾವನ್ನು ಲೋಟಕ್ಕೆ ಬಗ್ಗಿಸಿಕೊಂಡು ಬೇಕಾದಷ್ಟು ಕುಡಿಯಬಹುದು. ಈ ಚಹಾಕ್ಕೆ ಸಕ್ಕರೆ-ಹಾಲು ಸೇರಿಸುವುದಿಲ್ಲ. ನಮ್ಮ ಹಳ್ಳಿಮನೆಗಳಲ್ಲಿ ತಯಾರಿಸುವ ಕೊತ್ತಂಬರಿ, ಜೀರಿಗೆ, ಏಲಕ್ಕಿ ಇತ್ಯಾದಿಗಳುಳ್ಳ ‘ಕಷಾಯ’ವನ್ನು ಹಾಲು, ಸಕ್ಕರೆ ಹಾಕದೆ ಕುಡಿದಂತೆ! ಇಂತಹ ಚಹಾವನ್ನು ತಂಬಿಗೆಗಟ್ಟಲೆ ಕುಡಿದರೂ, ಕ್ಯಾಲೊರಿ -ಕೊಲೆಸ್ಟೆರಾಲ್ ಗಳ  ಭಯ ಬೇಕಿಲ್ಲ. ಮಾರ್ಚ್ ತಿಂಗಳಲ್ಲಿ ಅಲ್ಲಿ 5 ಡಿಗ್ರಿ ತಾಪಮಾನವಿತ್ತು. ಹಾಗಾಗಿ ಬಿಸಿ ’ಬಕ್ ವೀಟ್’ ಚಹಾ ಇಷ್ಟವಾಯಿತು.

5.ವೆಗಾನ್ ಸೂಪ್ ( Vegan soup)

ವೆಗಾನ್ ಸೂಪ್

ಊಟದ ಆರಂಭದಲ್ಲಿ  ಸೂಪ್ ಕುಡಿಯುವ ಅಭ್ಯಾಸವನ್ನು ಪಾಲಿಸುವ ನಮಗೆ ಚೀನಾದಲ್ಲಿ ಊಟದ ಕೊನೆಯ ಹಂತವಾಗಿ ಸೂಪನ್ನು ಕೊಟ್ಟಾಗ ಅಚ್ಚರಿಯಾಯಿತು. ದೊಡ್ಡ ಪಿಂಗಾಣಿಯ  ಬೌಲ್ ನಲ್ಲಿ ತಂದಿರಿಸುವ ಬಿಸಿಬಿಸಿ ಸೂಪನ್ನು  ನಮಗೆ ಬೇಕಾದಷ್ಟು  ಬಡಿಸಿಕೊಳ್ಳಬಹುದು. ಸಣ್ಣಗೆ ಹೆಚ್ಚಿದ ತರಕಾರಿಗಳನ್ನೊಳಗೊಂಡಿದ್ದ ಸರಳ ಸೂಪ್  ಚಳಿಗೆ ಕುಡಿಯಲು ಹಿತವಾಗಿತ್ತು.  ಸನ್ನ ಸಹೋದ್ಯೋಗಿಗಳು ತಲಾ ಎರಡು ಬೌಲ್ ಸೂಪ್ ಕುಡಿದರು.  ಸೂಪನ್ನು ಒಂದೇ ಬಾರಿ ಕುಡಿಯುವ ಪದ್ಧತಿಯನ್ನು ನೋಡಿದ್ದ ನನಗೆ ಇದೂ ವಿಭಿನ್ನ  ಎನಿಸಿತು.
ವೆಗಾನ್  ಸೂಪ್

ನಾಲ್ಕು ದಿನಗಳ ಕಾಲ ಶಾಂಘೈನಲ್ಲಿ ಇದ್ದ ಅವಧಿಯಲ್ಲಿ ನೂಡಲ್ಸ್, ಫ್ರೈಡ್ ರೈಸ್  ಮೊಮೊ, ವಿವಿಧ ಸೂಪ್ ಗಳನ್ನೂ ಸವಿದೆ. ಕಡಿಮೆ ಉಪ್ಪು-ಖಾರ-ಹುಳಿ-ಸಿಹಿ ರುಚಿಯುಳ್ಳ, ಅತಿ ಕಡಿಮೆ ಜಿಡ್ಡು ಮತ್ತು ಮಸಾಲೆಗಳನ್ನು ಸೇರಿಸುವ    ಚೀನೀ ಶೈಲಿಯ ವೆಗಾನ್ ಆಹಾರಗಳು  ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.   ಶಾಂಘೈನಲ್ಲಿ    ಕೆಲವು ವೆಗಾನ್ ರೆಸ್ಟೋರೆಂಟ್ ಗಳಿವೆಯಂತೆ.  ಉದಾಹರಣೆಗೆ ಅಕಾ  ಜುಜುಬೆ ಟ್ರೀ ( Aka Jujube Tree)   , ಹುಯಿ ಯುವಾನ್  ( Hui Yuan)   ಇತ್ಯಾದಿ. ಇಂಗ್ಲಿಷ್ ಬರಹಗಳು ಬಲು ಕಡಿಮೆ ಇದ್ದ ಕಾರಣ ನನಗೆ ಹೆಚ್ಚಿನ ವಿವರಗಳು ಗೊತ್ತಾಗಲಿಲ್ಲ.

ಭಾರತದಲ್ಲಿ ‘ವೆಗಾನ್’ ಆಹಾರ!
ನಮ್ಮಲ್ಲಿ ಹೆಚ್ಚಿನ ಸಸ್ಯಾಹಾರಿ  ಹೋಟೆಲ್ ಗಳಲ್ಲಿ  ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಪನೀರ್, ಚೀಸ್ , ಕೋವಾ ಇತ್ಯಾದಿ ಬಳಸುತ್ತಾರೆ. ‘ವೆಗಾನ್’ ಆಹಾರ ಪದ್ಧತಿ ಅಷ್ಟಾಗಿ ಪ್ರಚಲಿತವಿಲ್ಲ. ಮನೆಯಲ್ಲಿ ತಯಾರಿಸುವ ಚಿತ್ರಾನ್ನ, ಪುಳಿಯೋಗರೆ, ವಿವಿಧ ತರಕಾರಿ ಭಾತ್ ಗಳು, ಪೂರಿ, ಚಪಾತಿ, ಆಲೂಪರಾಠಾ, ಮಸಾಲೆದೋಸೆ ವೆಜಿಟೇಬಲ್ ಬಿರಿಯಾನಿ, ತರಕಾರಿಗಳ ಬಜ್ಜಿ/ಪಕೋಡ/ಬೋಂಡಾಗಳಿಗೆ ಬೆಣ್ಣೆ/ತುಪ್ಪ/ಪನೀರ್ ಹಾಕದಿದ್ದರೆ ‘ವೆಗಾನ್’ ಅನ್ನಲಡ್ಡಿಯಿಲ್ಲ!

.

ಹೇಮಮಾಲಾ.ಬಿ

http://www.prajavani.net/news/article/2017/11/04/530861.html

7 Responses

 1. Avatar Ramesh Y Ramesh says:

  ಓದಿದೆ ಮೆಡಮ್ ಸ್ವಾರಸ್ಯಕರವಾಗಿದೆ

 2. Avatar Shruthi Sharma says:

  Very nice writing, informative too 🙂

 3. Avatar Padyana Ramachandra says:

  Useful information for ‘Vegetarian Traveler’.

 4. ‘ವೇಗನ್’ ಬದಲು ‘ವೆಜ್’ ಎಂದು ಹೇಳಿ ಬೇಸ್ತು ಬಿದ್ದ ಚೀನಾ ಪ್ರವಾಸಿಗರ ಬಗ್ಗೆಯೇ ಹೆಚ್ಚು ಕೇಳಿ ಬೆದರುವವರಿಗೆ ತುಸುವಾದರೂ ಧೈರ್ಯ ಕೊಡುವ, ಚೀನೀ ಜನರ ಆಥಿತ್ಯದ ಸವಿಯ ಕಥಾನಕ ಚಿತ್ರ ಮತ್ತು ಸೂಕ್ತ ವಿವರಣೆಗಳಿಂದಾಗಿ ತುಂಬ ಇಷ್ಟವಾಗುತ್ತದೆ. ಮೆನುವಲ್ಲಿ ಇಂಗ್ಲೀಷ್ ಬರಹ ನೋಡಿದರೆ ಚೀನಾ ಜಾಗತಿಕವಾಗಿ ತುಂಬ ತೆರೆದುಕೊಂಡಿದೆಯೆನಿಸುತ್ತದೆ.

  • Hema Hema says:

   ನಿಮ್ಮ ಸ್ಪಷ್ಟವಾದ , ವಿವರವಾದ ಪ್ರತಿಕ್ರಿಯೆ ಬರಹಕ್ಕೆ ಶೋಭೆ ಕೊಡುತ್ತಿದೆ. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: