ಗಣೇಶನ ಮೆರವಣಿಗೆಯೂ…ಹಾಸ್ಟೆಲ್ ಗಣೇಶನೂ

Share Button

ಪ್ರತಿವರ್ಷದಂತೆ ಈ ಬಾರಿಯೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶನ ಹಬ್ಬವನ್ನು ಎಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸಲಾಯಿತು. ದೇವಾಲಯಗಳಲ್ಲಿ ಹೋಮ ಹವನಗಳು, ಮನೆಗಳಲ್ಲಿ  ಗಣಪತಿಯನ್ನು ಮೂರ್ತಿಯನ್ನು ಕೂರಿಸಿ, ಪೂಜಿಸಿ, ವಿವಿಧ ನೈವೇದ್ಯಗಳನ್ನು ಸಮರ್ಪಿಸಿ ಸಂಭ್ರಮಿಸಿದ್ದಾಯಿತು. ಸಾಮೂಹಿಕವಾಗಿ ಬಡಾವಣೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ  ಈ ಹಬ್ಬವನ್ನು ಆಚರಿಸುವಾಗ  ಗಣೇಶನ ಮೆರವಣಿಗೆಯೂ  ಅವಿಭಾಜ್ಯ ಅಂಗ.

ನಮ್ಮ ಬಡಾವಣೆಯ ದೇವಾಲಯದಲ್ಲಿರುವ ಉತ್ಸವಮೂರ್ತಿಗೆ ಪ್ರತಿವರ್ಷವೂ  ಗಣೇಶ ಹಬ್ಬದ ಸಂದರ್ಭದಲ್ಲಿ ಮೆರವಣಿಗೆ ಸಲ್ಲುತ್ತದೆ. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ, ಅಲಂಕರಿಸಿದ  ಸಣ್ಣ ರಥದಲ್ಲಿ ಉತ್ಸವ ಮೂರ್ತಿಯನ್ನಿರಿಸಿ ವಾದ್ಯಮೇಳಗಳ ಸಂಗೀತ ಮತ್ತು ಒಂದೆರಡು ಕಲಾತಂಡಗಳ ಪ್ರದರ್ಶನದೊಂದಿಗೆ ಗಣೇಶನ ಮೆರವಣಿಗೆ ಆರಂಭವಾಗುತ್ತದೆ. ತಮ್ಮ ಮನೆಮುಂದೆ ಬರುವ ರಥವನ್ನು  ಸ್ವಾಗತಿಸಲು, ರಸ್ತೆಯನ್ನು ಗುಡಿಸಿ ರಂಗೋಲಿ ಹಾಕಿ, ಗಣೇಶನಿಗೆ ಹಣ್ಣು-ಕಾಯಿ ಅರ್ಪಿಸುವುದು ಸಂಪ್ರದಾಯ.  ರಥವು ತಮ್ಮ ಮನೆ ದಾಟಿದೊಡನೆ, ತಾವೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ, ಅಕ್ಕಪಕ್ಕದವರೊಂದಿಗೆ  ಮಾತನಾಡುತ್ತಾ, ವಾದ್ಯಮೇಳಗಳಿಗೆ ಕಿವಿಗೊಡುತ್ತಾ ನಿಧಾನವಾಗಿ ಗಣೇಶನ ಜೊತೆ ವಾಕಿಂಗ್ ಮಾಡುವುದು  ನನಗಂತೂ ಖುಷಿ ಕೊಡುವ ಸಂಗತಿ. ಹೀಗೆ ವರ್ಷಕ್ಕೊಮ್ಮೆ ಕಾಣಸಿಗುವ ಹಲವು ಮಂದಿಯೊಡನೆ ಸಂಪರ್ಕವಿಟ್ಟುಕೊಳ್ಳಲು ಇದು ಉತ್ತಮ ಅವಕಾಶ. ಸದಾ ಮೊಬೈಲ್, ಕಂಪ್ಯೂಟರ್  ಲೋಕದಲ್ಲಿರುವ ಕೆಲವು ಮಕ್ಕಳಾದರೂ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುವುದು  ಮುದ  ಕೊಡುವ ವಿಚಾರ.

ಗಣೇಶೋತ್ಸವದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಪೂಜಾ ಕೈಂಕರ್ಯಗಳು ಮತ್ತು ಪ್ರಸಾದ ವಿನಿಯೋಗವನ್ನು  ಸಂಬಂಧಿಸಿದವರು ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತಾರೆ. ಆದರೂ ಮೆರವಣಿಗೆಯಲ್ಲಿ ಜೊತೆಯಾಗುವವರು ಕೆಲವೇ ಮಂದಿ. ಹೆಚ್ಚಿನವರು ತಮ್ಮ ಮನೆಯ ಮುಂದೆ ರಥ ಬಂದಾಗ ಹೂವು-ಹಣ್ಣು ಅರ್ಪಿಸಿ ಮರೆಯಾಗುತ್ತಾರೆ. ಭಾಗವಹಿಸದ ಕೆಲವರನ್ನು ಉದ್ದೇಶಿಸಿ, ‘ಬನ್ನಿ, ಬನ್ನಿ ಒಟ್ಟಿಗೆ ಹೋಗೋಣ’ ಅಂದರೂ ಬರಲಿಲ್ಲ. ‘ಎಲ್ಲೋ ಹೋಗಬೇಕಿದೆ’   ‘ ನೆಂಟರು ಬರುತ್ತಾರೆ’  ಇತ್ಯಾದಿ ಹಾರಿಕೆಯ ಉತ್ತರಗಳು ಸಿಕ್ಕಿದುವು. ನಾನು ಗಮನಿಸಿದಂತೆ, ಪ್ರತಿವರ್ಷವೂ ನಮ್ಮ ಬಡಾವಣೆಯಲ್ಲಿ ಬಹಳಷ್ಟು ಹೊಸಮನೆಗಳನ್ನು  ಕಟ್ಟಲಾಗುತ್ತಿದೆ, ಹೊಸಜನರು ಬರುತ್ತಿದ್ದಾರೆ.  ಆದರೆ ವರ್ಷದಿಂದ ವರ್ಷಕ್ಕೆ ಮೆರವಣಿಗೆಯಲ್ಲಿ ಕಾಣಿಸುವ ನಿವಾಸಿಗಳ  ಸಂಖ್ಯೆ ಮಾತ್ರ ನಿರಾಶಾದಾಯಕ.   ಮನೆಯಿಂದ ತಲಾ ಒಬ್ಬರು ಭಾಗವಹಿಸಿದರೂ ಕನಿಷ್ಟ 500 ಮಂದಿಯಾದರೂ ಸೇರಬಹುದಾದ ದೊಡ್ಡ ಬಡಾವಣೆ ನಮ್ಮದು.  ಆದರೂ ಜನರಿಗೇಕೆ ನಿರಾಸಕ್ತಿ ಎಂಬ ಭಾವ ಕಾಡುತ್ತದೆ.


ಎರಡು ತಿಂಗಳ ಹಿಂದೆ, ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ, ನಮ್ಮ ಮಗನು ದೂರದ ಉತ್ತರಾಖಂಡ ರಾಜ್ಯದ ರೂರ್ಕಿಗೆ ತೆರಳಿ ಅಲ್ಲಿ ಹಾಸ್ಟೆಲ್ ನಲ್ಲಿ  ವಾಸವಾಗಿದ್ದಾನೆ.  ರೂರ್ಕಿಯಲ್ಲಿ  ಗಣೇಶ ಹಬ್ಬವನ್ನು ಆಚರಿಸುವುದಿಲ್ಲವೆಂದೂ, ಕಾಲೇಜಿಗೆ ರಜೆಯೂ ಇಲ್ಲವೆಂದೂ, ಗೋಕುಲಾಷ್ಟಮಿಯನ್ನು ಬಹಳ ಸಡಗರದಿಂದ  ಆಚರಿಸುತ್ತಾರೆಂದೂ ಮೊದಲಾಗಿಯೇ ತಿಳಿಸಿದ್ದ.  ಹಬ್ಬದ ದಿನ ಮಗನಿಗೆ ಫೋನಾಯಿಸಿದಾಗ ನಮಗೆ ಅಚ್ಚರಿ ಕಾದಿತ್ತು .  ರೂರ್ಕಿಯ ಹಾಸ್ಟೆಲ್ ನಲ್ಲಿ   ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ  ಬಂದ ವಿದ್ಯಾರ್ಥಿಗಳು ಒಟ್ಟಾಗಿ ಹಬ್ಬ ಮಾಡಿದರಂತೆ. ನಮ್ಮ ಮಗನ ಸಹಪಾಠಿಯಾಗಿರುವ ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬನು  ತನ್ನ ಬಂಧುವೊಬ್ಬರು ಅದೇ ಕ್ಯಾಪಸ್ ನ ಮನೆಯೊಂದರಲ್ಲಿ ವಾಸವಾಗಿದ್ದಾರೆ, ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸುತ್ತಾರೆ, ಬಾ ಹೋಗೋಣ ಎಂದನಂತೆ. ಅಪರಿಚಿತರ ಮನೆಗೆ ಹೋಗುವುದೇ ಬೇಡವೇ ಎಂಬ ಅಳುಕಿನಲ್ಲಿ ನಮ್ಮ ಮಗನೂ ಅವರ ಮನೆಗೆ ಹೋದ.

ಎಲ್ಲರನ್ನೂ ಆದರಿಸಿದ   ಅತಿಥೇಯ ಕುಟುಂಬದವರು ಇದ್ದ ಸೀಮಿತ ಅನುಕೂಲತೆಯಲ್ಲಿ, ಗಣೇಶನನ್ನು ಕೂರಿಸಿ ಅಚ್ಚುಕಟ್ಟಾಗಿ ಪೂಜೆ ಮಾಡಿದ್ದರಂತೆ.  ಆ ಕ್ಯಾಂಪಸ್ ನಲ್ಲಿ ಓದುತ್ತಿರುವ, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಹೀಗೆ ವಿವಿಧ ರಾಜ್ಯಗಳಿಂದ ಬಂದ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡರಂತೆ . ಅತಿಥೇಯರು ಮತ್ತು ಕೆಲವು ವಿದ್ಯಾರ್ಥಿನಿಯರು  ಸೇರಿ ತಯಾರಿಸಿದ  ಅನ್ನ, ತಿಳಿಸಾರು, ಸಾಂಬಾರು, ಹಪ್ಪಳ,  ಚಿತ್ರಾನ್ನ,  ಪಲ್ಯ, ಕೋಸಂಬರಿ, ಪಾಯಸಗಳಿದ್ದ  ರುಚಿಯಾದ ಊಟವನ್ನು ಎಲ್ಲರೂ ಉಂಡರಂತೆ. ದಕ್ಷಿಣಭಾರತದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮಾಡಿ, ಇನ್ನು ಮುಂದೆಯೂ ಹೀಗೆ ಹಬ್ಬಗಳ ಆಚರಣೆ ಮಾಡೋಣ  ಎಂದು ಆತ್ಮೀಯವಾಗಿ ಬೀಳ್ಕೊಟ್ಟರಂತೆ.  ಎಂತಹ ಉದಾತ್ತ ಮನೋಭಾವ ಅವರದು!

ಹೀಗೆ ಅನಿರೀಕ್ಷಿತವಾಗಿ ಗಣೇಶ ಹಬ್ಬದಲ್ಲಿ ಪಾಲ್ಗೊಂಡೆನೆಂದು  ಮಗ ತಿಳಿಸಿದಾಗ ನಮಗೆ  ಬಹಳ ಸಂತಸವಾಯಿತು. ಇಲ್ಲಿ ಗಮನಿಸಬೇಕಾದುದೇನೆಂದರೆ, ಹಬ್ಬದಲ್ಲಿ ಭಾಗವಹಿಸಿದ ಹೆಚ್ಚಿನವರೂ  ಇಪ್ಪತ್ತರ ಆಸುಪಾಸಿನ , ಪ್ರಸ್ತುತ ಉತ್ತರ ಭಾರತದಲ್ಲಿರುವ,  ದಕ್ಷಿಣ ಭಾರತದ ವಿದ್ಯಾರ್ಥಿಗಳು.   ಬಹುಶ:  ಇದುವರೆಗೆ ತಮ್ಮ ಮನೆಯಲ್ಲಿ ಪೂಜೆ ಹಾಗೂ  ಅಡುಗೆಯ ಬಗ್ಗೆ ಗಮನ ಹರಿಸಿರಲಾರದ ಎಳೆ ಯುವಕ, ಯುವತಿಯರು. ಅತಿಥೇಯರೂ  ವಿದ್ಯಾರ್ಥಿಗಳೇ, ಇವರಿಗಿಂತ 5-6  ವರ್ಷ ದೊಡ್ಡವರು ಅಷ್ಟೆ.  ಗಣೇಶ ಹಬ್ಬವೆಂಬುದು ಅವರಿಗೆ ‘ತಮ್ಮವರನ್ನು’  ಕಲೆಹಾಕಲು ಒಂದು ನೆಪ. ಹಾಗಾದರೆ ತಮ್ಮವರು ಯಾರು?  ನಮ್ಮ ಮನೆಯ  ಆವರಣ ದಾಟಿದೊಡನೆ  ನಮ್ಮ ಬೀದಿ, ನಮ್ಮ ಬಡಾವಣೆ,  ನಮ್ಮ ನಗರ, ನಮ್ಮ ಜಿಲ್ಲೆ, ನಮ್ಮ ರಾಜ್ಯ, ನಮ್ಮ ನೆರೆರಾಜ್ಯ…ಹೀಗೆ ವಿಸ್ತಾರವಾಗಿ ಹೋಗುತ್ತಾ ಇನ್ನೊಂದು ಖಂಡ ಸೇರಿದಾಗ ನಮಗಿರುವ ಗುರುತು ‘ನಾವು  ಭಾರತೀಯರು’ . ಬಹುಶ:  ಇದೇ ಕಾರಣಕ್ಕೆ ದೂರದ ಊರಿನಲ್ಲಿ ನೆಲೆಸಿರುವಾಗ  ಪರಸ್ಪರ ಹತ್ತಿರವಾಗುತ್ತೇವೆ, ಆದರೆ ನಮ್ಮದೇ ಊರಿನಲ್ಲಿರುವಾಗ ನಮ್ಮ ಬಡಾವಣೆಯವರೇ ನಮಗೆ ಅಪರಿಚಿತರಾಗುತ್ತಾರೆ!
.

– ಹೇಮಮಾಲಾ.ಬಿ

2 Responses

  1. Shruthi Sharma says:

    ಚಿಂತನೆಗೆ ಹಚ್ಚುವ ಬರಹ. ತುಂಬಾ ಚೆನ್ನಾಗಿದೆ .. 🙂

  2. Sudha Bhat says:

    ಹೌದು. ಪರ ಊರಿನಲ್ಲಿ ನಮ್ಮವರು ಕಂಡಾಗ ತುಂಬಾ ಖುಷಿ ಆಗುವದು. ಆದರೆ ಅದೇ ಜನ ಊರಲ್ಲಿ ನೆರಮನೆಯವರದ್ರು ಮಾತಾಡಿಸಲು ಬಿಡುವಿಲ್ಲದ ಪರಿಸ್ಥಿತಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: