“ಡಸ್ಟರ್” ಮತ್ತು ಜೂನ್ ಒಂದು!

Spread the love
Share Button

               ಶ್ರುತಿ ಶರ್ಮಾ, ಬೆಂಗಳೂರು.

ಇವತ್ತು ಬೆಳಗ್ಗೆ ಮನೆಯಿಂದ ಎರಡು ಕಿಲೋಮೀಟರ್ ದೂರವಿರುವ ಮೆಟ್ರೋ ಸ್ಟೇಷನ್ ವರೆಗೆ ಹೋಗುತ್ತಿದ್ದಾಗ ನನ್ನ ದ್ವಿಚಕ್ರ ಗಾಡಿಯ ಮುಂದೆ ಹೋಗುತ್ತಿದ್ದ, ಥಳಥಳನೆ ಹೊಳೆಯುತ್ತಿದ್ದ ಕಡುಗಪ್ಪು ಬಣ್ಣದ ಹೊಸ “ಡಸ್ಟರ್” ಕಾರೊಂದು ಗಮನ ಸೆಳೆಯಿತು. ಶಾಲೆಯೊಂದರ ಮುಂದೆ ಕಾರು ನಿಲ್ಲಿಸಿ ಅದರೊಳಗಿನಿಂದ ಮಗುವೊಂದನ್ನು ಹೆತ್ತವರಿಬ್ಬರೂ ಇಳಿಸುವುದು ಕಂಡು ಒಮ್ಮೆ ನಗು ಬಂತು! ಬೆಂಗಳೂರಿನಲ್ಲಿ ಮಗುವಿಗೊಂದರಂತೆ ಡುಮ್ಮ ಕಾರು ತಂದರೆ ಶಾಲೆಗಳ ಮುಂದೆ ಟ್ರಾಫಿಕ್ ಜಾಮೇ ಗತಿ! ನನಗೆ ನಗು ತರಿಸಿದ್ದು ಅದಲ್ಲ. ನಮ್ಮ ಶಾಲೆಯ ಪ್ರಾರಂಭದಂದು ಅಧ್ಯಾಪಕರಿಗೆ ತರಗತಿಯ ಬೋರ್ಡ್ ಒರೆಸಲು “ಡಸ್ಟರ್” ತಂದು ಸಹಾಯಿಸಲು ಮುಗಿಬೀಳುತ್ತಿದ್ದ ನನ್ನ ಸಹಪಾಠಿಗಳ ಆತುರ ನೆನಪಾಯಿತಷ್ಟೇ! ಅಧ್ಯಾಪಕರು ಕೇಳಿದ್ದನ್ನು ತಂದು ಕೊಡುವುದನ್ನು ಅಥವಾ ಹೇಳಿದ್ದನ್ನು ಮುಗಿಬಿದ್ದು ಮಾಡಲು ಹೆಮ್ಮೆ ಪಡುತ್ತಿದ್ದ ನಮ್ಮನ್ನು ನೆನೆಸಿಕೊಳ್ಳುವುದೇ ಮಜಾ!

ನಮ್ಮ ಮನೆಯಿದ್ದುದು ಕೇರಳದ ಗಡಿನಾಡು ಜಿಲ್ಲೆ ಕಾಸರಗೋಡಿನ ಒಂದು ಪುಟ್ಟ ಊರಿನಲ್ಲಿ. ನಾಲ್ಕರಿಂದ ಏಳನೆಯ ತರಗತಿ ವರೆಗೆ ಮನೆಯಿಂದ ಐದು ನಿಮಿಷದ ನಡಿಗೆಯ ದೂರದಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ನನ್ನ ಓದು. ಕಾಸರಗೋಡಿನ ಸುಡು ಬೇಸಗೆ, ಮನೆಯಲ್ಲಿ ಹಲಸಿನ ಹಪ್ಪಳ, ಕಾಡು ಮಾವಿನ ಹಣ್ಣಿನ ಮಾಂಬಳ ಇತ್ಯಾದಿ ಮಾಡುವ ಗೌಜು ಇತ್ಯಾದಿ ಕಳೆದು ಶಾಲೆ ಆರಂಭವಾಗುವುದರೊಂದಿಗೆ ಸುರಿವ ಜಡಿ ಮಳೆಯಲ್ಲಿ ಹೊಸ ಕೊಡೆ ಹಿಡಿದ ನಮಗೆ ಶಾಲೆಗೆ ಹೊರಡಲು ಅತ್ಯಂತ ಸಂಭ್ರಮ! ಮೊದಲ ದಿನದ ಆರಂಭ ಶೂರತ್ವಕ್ಕೇನೂ ಕಡಿಮೆಯಿರಲಿಲ್ಲ.

ನನ್ನ ಮನಸ್ಸಿನಲ್ಲಿ ಪ್ರತಿ ಜೂನ್ ಒಂದರಂದೂ ಇರುತ್ತಿದ್ದ ಗುಟ್ಟಿನ ನಿರ್ಧಾರಗಳು ಕೆಲವು: ಈ ವರ್ಷ ಅಕ್ಷರ ಚೆಂದ ಮಾಡಿ ಬರೆಯಬೇಕು(ಮನೆಯಲ್ಲಿ ನನ್ನ ಕೈಬರಹವನ್ನು ಕಾಗೆ ಕಾಲಿಗೆ ಹೋಲಿಸಲಾಗುತ್ತಿತ್ತು), ಎಲ್ಲಾ ಪುಸ್ತಕಗಳಿಗೂ ಹಾಕಿದ ಬೈಂಡ್ ಅನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಪಾಠಪುಸ್ತಕಗಳ ಹಾಳೆಗಳಿಗೆ ಈ ವರ್ಷ “ಕಿವಿ” ಮೂಡಬಾರದು(ಪುಸ್ತಕಗಳು ಬ್ಯಾಗಿನೊಳಗೆ ಸರಿಯಾಗಿ ನಿಲ್ಲದೆ ಅವುಗಳ ಹಾಳೆಗಳು ತುದಿಯಲ್ಲಿ ಮಡಚಿಕೊಳ್ಳುತ್ತಿದ್ದುದಕ್ಕೆ ಹಿರಿಯರು “ಪುಸ್ತಕಕ್ಕೆ ಕಿವಿ ಬಂದಿದೆ” ಎನ್ನುತ್ತಿದ್ದರು ಹಾಗೂ ಅದು ನಮ್ಮ ಬೇಜವಾಬ್ದಾರಿಯ ಪರಮಾವಧಿಯೆಂಬಂತೆ ಶಾಲೆಯಲ್ಲೂ ಬಿಂಬಿಸಲ್ಪಡುತ್ತಿತ್ತು). ಇನ್ನೂ ಒಂದಿತ್ತು.. ಈ ವರ್ಷವಾದರೂ ಆಯಾ ದಿನದ ಪಾಠವನ್ನು ಆಯಾ ದಿನವೇ ಓದಿದರೆ ಹೇಗಿರುತ್ತದೆಂದು ನೋಡಬೇಕು! “ಆಡದೇ ಮಾಡುವನು ರೂಢಿಯೊಳಗುತ್ತಮನು” ಎಂದು ಅಮ್ಮನ ಬಾಯಲ್ಲಿ ಕೇಳೀ ಕೇಳೀ ನಾನೀ ನಿರ್ಧಾರಗಳನ್ನು ಹೊರಗೆಲ್ಲೂ ಬಿಟ್ಟು ಕೊಡುತ್ತಿರಲಿಲ್ಲ. ಆಮೇಲೆ “ಆಡಿಯೂ ಮಾಡದ ಅಧಮ”ಳಾಗುವುದಕ್ಕೆ ಎಳ್ಳಷ್ಟೂ ಮನಸ್ಸಿರಲಿಲ್ಲ ಕೂಡಾ!

ಶಾಲೆಯ ಮೊದಲ ದಿನದ ಸಂಭ್ರಮ ಹೇಳತೀರದು. ನಮಗದೊಂದು ಹಬ್ಬದ ರೀತಿ, ಒಂದು ತರಗತಿ ಮೇಲೆ, ಜೊತೆಗೆ ಸ್ವಲ್ಪ ದೊಡ್ಡವರಾದೆವೆಂಬ ಹೆಮ್ಮೆಯ ಅನುಭೂತಿ. ಅದಲ್ಲದೆ ಅಂದು ಅರ್ಧ ದಿನ ಮಾತ್ರ ಶಾಲೆ! ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ನಮಗೆ ಅರ್ಧ ದಿನ ಮಾತ್ರ ಶಾಲೆಯಿರುತ್ತಿತ್ತು. ಮೇಲಾಗಿ ಅಂದು ಪಾಠವಿಲ್ಲ, ಜೊತೆಯಲ್ಲಿ ಎರಡು ತಿಂಗಳಿಂದ ಕಾಣಸಿಗದಿದ್ದ ಗೆಳತಿಯರ ಜೊತೆ ಮಾತುಕಥೆ..! ಕ್ಲಾಸು ಅಧ್ಯಾಪಕರು ಯಾರಿರಬಹುದೆಂದು ಘನ ಚರ್ಚೆ!

ಪ್ರಥಮ ದಿನಕ್ಕೂ “ಡಸ್ಟರ್” ಗೂ ಸಂಬಂಧವಿದೆ! ನಾವು ಎಂದಿಂದಲೋ ಆಸೆ ಪಡುತ್ತಿದ್ದ ಹೊಸ ತರಗತಿಯಲ್ಲಿ ಕೂರುವ ಆಸೆ ಈಡೇರಿದುದರೊಂದಿಗೆ, ಹಳೆಯದೇ ಆದರೂ ನಮಗೆ ಹೊಸದೆನಿಸುವ ಬೆಂಚು, ಹೊಸ ತರಗತಿಯ ಬೋರ್ಡು, ಕಿಟಿಕಿಯಿಂದಾಚೆಗೆ ಹೊಸ ದೃಶ್ಯಾವಳಿ, ಹೀಗೆ ಒಂದೆರಡಲ್ಲ ಅಂದಿನ ಖುಷಿಗೆ ಕಾರಣ. ಅಸೆಂಬ್ಲಿಯಲ್ಲೂ ಹೊಸ ಸಾಲು! ತರಗತಿಯಲ್ಲಿ ಹೊಸ ಕ್ಲಾಸು ಅಧ್ಯಾಪಕರು ಬಂದು ಒಂದಷ್ಟು ಪಾಠ ಪುಸ್ತಕಗಳ ಬಗ್ಗೆ, ಇನ್ನು ಬರಬೇಕಿರುವ ಪುಸ್ತಕಗಳ ಬಗ್ಗೆ, ಈ ವರ್ಷಕ್ಕೆ ಎಷ್ಟು ಕಾಪಿ ಪುಸ್ತಕ ಎಷ್ಟು ಒಂದು ಗೆರೆಯ ಪುಸ್ತಕ ಬೇಕು ಇತ್ಯಾದಿ ಹೇಳುತ್ತಿದ್ದರೆ ನಾವು ಮನಸ್ಸಿನಲ್ಲೇ ಅವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದೆವು. ಬರೆದಿಟ್ಟುಕೊಳ್ಳುವ ಅಭ್ಯಾಸವಿರಲಿಲ್ಲ. ಪುಸ್ತಕಗಳಿಗೆ ಬೈಂಡ್ ಮಾಡದೆ ಬರಲೇಬಾರದೆಂಬ ಅಧಿಕೃತ ಸೂಚನೆಯೂ ಇರುತ್ತಿತ್ತು. ಆಮೇಲೆ ಪಠ್ಯ ಪುಸ್ತಕಗಳ ವಿತರಣೆ. ಹೊಸ ಪುಸ್ತಕದ ಘಮ ಅನುಭವಿಸಿತ್ತಾ ಹೊಸ ಪಾಠಗಳೇನಿರಬಹುದೆಂಬ ಕುತೂಹಲದಿಂದ ನೋಡುವಾಗ ಆಗುತ್ತಿದ್ದ ಸಂತೋಷವೇ ಬೇರೆ! ಮನೆಗೆ ಹೋಗಿ ಪುಸ್ತಕಗಳಿಗೆ ಅತ್ಯಂತ ಸುಂದರವಾಗಿ ಬೈಂಡ್ ಮಾಡುತ್ತಿದ್ದ ಅಜ್ಜನ ಕೈಗೆ ಪುಸ್ತಕಗಳನ್ನು ಸುರಕ್ಷಿತವಾಗಿ ತಲುಪಿಸುವ ತೀರ್ಮಾನ ಜೊತೆಯಾಗುತ್ತಿತ್ತು!

ಇದೆಲ್ಲಾ ಆಗಿ ಮೋಸ್ಟ್ ಇಂಟರೆಸ್ಟಿಂಗ್ ಅನಿಸುತ್ತಿದ್ದುದು ಈ ಬಾರಿ ಯಾರು ಬೋರ್ಡ್ ಒರೆಸಲು “ಡಸ್ಟರ್” ತರುವರೆಂಬ ಪ್ರಶ್ನೆ. ನಮ್ಮಲ್ಲಿ ಹಲವರು ಈ ಪ್ರಶ್ನೆಗೋಸ್ಕರ ಕಾಯುತ್ತಿದ್ದು, ಥಟ್ಟನೆ ಎದ್ದು ನಿಲ್ಲುತ್ತಿದ್ದರು! ಮನೆಯಲ್ಲಿ ಹೊಲಿಗೆ ಮಷೀನ್ ಇದ್ದವರಲ್ಲಿ ಒಬ್ಬರು ಮಾರನೆ ದಿನ ಒಂದು ಡಸ್ಟರ್ ಅನ್ನು ತಯಾರಿಸಿ ತರಬೇಕಿತ್ತು. ಅವರು ಒಂದು ಹಳೆ ಬಟ್ಟೆಯನ್ನು ಅಂಗೈಯಲ್ಲಿ ಹಿಡಿವಂಥ, ಚೌಕಾಕೃತಿಯ ಪುಟ್ಟ ತಲೆದಿಂಬಿನಂತೆ ಹೊಲಿದು ಅದರೊಳಗೆ ಹೊಲಿಯುವಾಗ ಉಳಿದ ಹಳೆಯ ಬಟ್ಟೆಗಳ ಚೂರುಗಳನ್ನು ತುರುಕಿಸಿ ಬಂದ್ ಮಾಡಿದ ಉಬ್ಬಿದ ಡಸ್ಟರ್ ಅನ್ನು ತಯಾರಿಸಿ ಮಾರನೆ ದಿನ ತರಬೇಕಿತ್ತು. ಅವರ ಅಮ್ಮಂದಿರೂ ಖುಷಿಯಿಂದ ಡಸ್ಟರ್ ತಯಾರಿಸಿ ಕೊಡುತ್ತಿದ್ದರಷ್ಟೇ! ಮೊದಲೇ ಅಧ್ಯಾಪಕರಿಗೆ ಏನನ್ನಾದರೂ ತಂದುಕೊಡುವುದೆಂದರೆ ಸಂಭ್ರಮವಿರುತ್ತಿದ್ದ ನಮ್ಮೊಳಗೆ ತರಗತಿಗೆ ಡಸ್ಟರ್ ತಂದುಕೊಡುವುದು ಅತ್ಯಂತ ಪುಣ್ಯದ ಕೆಲಸವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದೆವು! ಡಸ್ಟರ್ ತರುವ ಅವಕಾಶ ಕಳಕೊಂಡವರು ಮುಂದಿನ ವರ್ಷವಾದರೂ ಆ ಅವಕಾಶ ಗಿಟ್ಟಿಸಿಕೊಳ್ಳುವ ನಂಬಿಕೆ ಉಳಿಸಿಕೊಳ್ಳುತ್ತಿದ್ದರು.

ನಮ್ಮ ಮನೆಯಲ್ಲಿ ಹೊಲಿಗೆ ಮೆಷೀನ್ ಇಲ್ಲದಿದ್ದುದರಿಂದ ನನಗೆ ಈ ಯೋಚನೆಗಳಿರಲಿಲ್ಲ. ಆದರೆ ಆಗಾಗ ಅಂಗಳದಲ್ಲಿ ಇದ್ದ ಗುಲಾಬಿ ಗಿಡದಿಂದ ತಂದ ಗುಲಾಬಿಗಳನ್ನು ಅಧ್ಯಾಪಿಕೆಯರಿಗೆ ಕೊಡುತ್ತಿದ್ದುದುಂಟು. ಹಾಗೆಯೇ ಗುಟ್ಟಿನಲ್ಲಿ ಗುಲಾಬಿ ಹೂವಿಗೆ ನನ್ನಲ್ಲಿ ಅಪ್ಲಿಕೇಷನ್ ಕೊಡುತ್ತಿದ್ದ ನಫ಼ೀಸಾ, ಷರೀಫಾರಿಗೂ ಕೊಡುತ್ತಿದ್ದುದುಂಟು. ಅವರು ತಲೆಯ ಮೇಲಿನ ಬಟ್ಟೆ ಫಕ್ಕನೆ ಸರಿಸಿ ಗುಲಾಬಿಗೋಸ್ಕರ ಮನೆಯಿಂದ ತಂದಿದ್ದ ಕ್ಲಿಪ್ ನಿಂದ ಅದನ್ನು ಸಿಕ್ಕಿಸಿ ಮತ್ತೆ ತಲೆಪೂರ್ತಿ ಬಟ್ಟೆಯಿಂದ ಮುಚ್ಚಿ ನಗುತ್ತಿದ್ದರು! ಮರುದಿನ ತಪ್ಪದೆ ಎರಡು ಬುಗುರಿ ಹಣ್ಣು ನನಗೆ ಗುಟ್ಟಿನ ಉಡುಗೊರೆ!

ಜೂನ್ ತಿಂಗಳ ಶಾಲೆಯ ನೆನಪುಗಳು ಅಂದಿನ ಹಸಿ ಮಣ್ಣಿನಂತೆ, ಯಾವಾಗಲು ಸುಂದರ, ಸ್ವಚ್ಚ, ಘಮ ಘಮ! ಪ್ರತಿಬಾರಿಯೂ ನಗು ತರಿಸಿಯೇ ತರಿಸುತ್ತವೆ 🙂

 

 – ಶ್ರುತಿ ಶರ್ಮಾ, ಬೆಂಗಳೂರು.

20 Responses

 1. Shruthi N Bhat Shruthi N Bhat says:

  ನನ್ನ ಶಾಲೆಯ ದಿನಗಳು ನೆನಪಾದವು… ತುಂಬಾ ಆಪ್ತವಾದ ಬರಹ ಶ್ರುತಿ …

 2. Hema Hema says:

  ಡಸ್ಟರ್ ಎಂಬೋ ಕಾರಿಗೂ, ಕರಿಹಲಗೆ ಒರೆಸುವ ಡಸ್ಟರ್ ಗೂ ಸಂಬಂಧ ಕಲ್ಪಿಸಿದ ಲಹರಿ..ಸೊಗಸಾಗಿ ಮೂಡಿ ಬಂದಿದೆ

 3. Rukmini Mala Rukmini Mala says:

  ಬಾಲ್ಯದ ನೆನಪು ಸವಿ ಸವಿ ನೆನಪು

 4. ನಮ್ಮ ಮನೆಯಲ್ಲಿ ಹೊಲಿಗೆ ಮಿಷನ್ನಿತ್ತು… ನನ್ನ ಕಡೆಯಿಂದ ಒಂದು ಡಸ್ಟರ್ ಪ್ರತಿವರ್ಷದ ಕೊಡುಗೆ…. ಅದರಲ್ಲೂ ಕಾಂಪಿಟೇಷನಿತ್ತು….

 5. Srinivas Rangappa Srinivas Rangappa says:

  ಶ್ರುತಿ ಬರಹ ತುಂಬಾ ಚೆನ್ನಾಗಿದೆ. ‘ಡಸ್ಟರ್’ ಮತ್ತು ಜೂನ್ 1 ರ ಹಾಗೂ ಕಾರ್ ಹೋಲಿಕೆ, ಶಾಲಾ ದಿನಗಳ ನೆನಪು, ಹೀಗೆ ಬರವಣಿಗೆ ಹೆಣೆದಿರುವ ರೀತಿ, ಅದ್ಬುತ ಶೈಲಿ ಎಲ್ಲಾ ನನಗೆ ಇಷ್ಟವಾಯಿತು.

 6. Avatar Shubha Uday says:

  ತುಂಬಾ ಖುಷಿ ತಂದ ಬರಹ. ನೆನಪಿಸಿತು ಬಾಲ್ಯ ಜೀವನವನ್ನು.. “ಡಸ್ಟರ್” ನಿಜವಾಗಲೂ ಮರೆತೇ ಹೋಗಿತ್ತು. ಕಾಸರಗೋಡಿನಲ್ಲಿ ಯಾವ ಗ್ರಾಮ ನಿಮ್ಮದು 🙂

  • Avatar Shruthi Sharma says:

   ಧನ್ಯವಾದಗಳು. ಕುಂಬ್ಳೆ ಹತ್ತಿರ ಇರುವ ಕಳತ್ತೂರು.. 🙂

 7. Avatar Avinash says:

  Esto varshagalu admele..evathu nijavaglu Nanna baalyada nenapaithuchindi bhatre…nd tnx nanna baalyana nenapu madidke

  • Avatar Shruthi Sharma says:

   ನಿಮ್ಮ ಬಾಲ್ಯದ ನೆನಪು ತರಿಸಲು ಸಾಧ್ಯವಾದುದಕ್ಕೆ ಅಪಾರ ಸಂತೋಷವಿದೆ. ತುಂಬಾ ಧನ್ಯವಾದಗಳು ಅವಿನಾಶ್ 🙂

 8. Avatar ಸರೋಜ says:

  ಇಂದಿಗೂ ನಮ್ಮಲ್ಲಿ ಹಿಂದಿನ ಕಾಲದಂತಿನ ಡಸ್ಟರ್ ನ ಉಪಯೋಗ. ಬರಹ ತುಂಬಾ ಚೆನ್ನಾಗಿದೆ.

 9. Avatar Sangeetha says:

  Puna hogona namma school’ge endu anisuthide…..

  • Avatar Shruthi Sharma says:

   ಹೌದು ಸಂಗೀತ, ಆ ಅನುಭವಗಳು ನೆನಪು ಮಾತ್ರ ಅಂದುಕೊಂಡಾಗ ಒಮ್ಮೆ ಮನಸ್ಸು ಸಪ್ಪೆಯಾಗುತ್ತದೆ.

 10. Avatar Prashanth says:

  Naanu ondane classge hogbitte…

 11. Avatar ಸಾವಿತ್ರಿ ಸ್.ಭಟ್. says:

  ಆಹಾ…ಎಸ್ಟುಸುಂದರ ನೆನಪುಗಳ ಬರಹ.ತುಂಬಾ ಖುಷಿ ಆಯ್ತು.ಓದಿ.ಹಾಗೂ ನೆನಪು ೫೦ ವರ್ಷ ಹಿಂದಕ್ಕೆ ಓಡಿತು…
  ಆ ಮಳೆಗಾಲ,ಜೂನ್ ಒಂದರ ಶಾಲೆ,ಹೊಸಪುಸ್ತಕದ ಪರಿಮಳ, ಗೆಳತಿಯರಿಗಾಗಿ ಕಾದಿರಿಸುತ್ತಿದ್ದ ಜಾಗ, ತಿನ್ನಲು ಒಯ್ಯುತ್ತಿದ್ದ ಹುರಿದ ಹುಣಸೆ ಬೀಜ,ಹಲ ಸಿನ ಬೀಜದ ಸಾಂತಾನಿ ……

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: