ಸ್ಟಾರ್ಟ್ ಅಪ್‌ಗೆ ನೂರಾರು ದಾರಿ

Spread the love
Share Button

Start app

ವಾಟ್ಸ್ ಆಪ್ ಕಂಪನಿಯನ್ನು 19 ಶತಕೋಟಿ ಡಾಲರ್‌ಗೆ (1.20 ಲಕ್ಷ ಕೋಟಿ ರೂ.) ಮಾರಾಟ ಮಾಡುವುದರೊಂದಿಗೆ ಇತ್ತೀಚೆಗೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಶತಕೋಟ್ಯಧಿಪತಿಯಾಗಿ ಹೊರಹೊಮ್ಮಿದವರು ಜಾನ್ ಕೋಮ್. ಇವರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಜುಕರ್‌ಬರ್ಗ್ ಅವರಂತೆಯೇ ಕಾಲೇಜು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದವರು. ಹೊಸ ಬಗೆಯ ಆಲೋಚನೆ, ಪಟ್ಟು ಬಿಡದೆ ದುಡಿಯುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಜಗತ್ತಿಗೇ ತೋರಿಸಿಕೊಟ್ಟವರು. ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಹೊಸ ಬಗೆಯ ಸ್ಟಾರ್ಟ್ ಅಪ್ ಕಂಪನಿಗಳು ಅಸ್ತಿತ್ವಕ್ಕೆ ಬರುತ್ತಿವೆ. ಮಾರುಕಟ್ಟೆಯಲ್ಲಿ ಗೆಲ್ಲಬಲ್ಲ ತಂತ್ರವನ್ನು ಶೋಧಿಸಿ ಕಾರ್ಯಗತಗೊಳಿಸುವವರಿಗೆ ಇಲ್ಲಿದೆ ವಿಫುಲ ಅವಕಾಶ.

 1. ಸ್ಟಾರ್ಟ್ ಅಪ್‌ಗೆ ಹೊಸತನದ ಐಡಿಯಾಗಳೇ ಬಂಡವಾಳ

ಭಾರತದಲ್ಲಿ ಪ್ರತಿ ವಾರ ಕನಿಷ್ಠ ಐದು ಸ್ಟಾರ್ಟ್ ಅಪ್‌ಗಳಿಗೆ ಚಾಲನೆ ನೀಡಲಾಗುತ್ತಿದೆ. ಇಲ್ಲಿ ನಿಮ್ಮ ಹೊಸತನದ ಆಲೋಚನೆ, ಪರಿಕಲ್ಪನೆ, ಪರಿಶ್ರಮ, ಛಲ ಮತ್ತು ಬುದ್ಧಿಮತ್ತೆಯೇ ಮೂಲ ಬಂಡವಾಳ. ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಬೇರೂರಬಲ್ಲ ಯೋಜನೆ ನಿಮ್ಮಲ್ಲಿದ್ದರೆ, ದುಡ್ಡು ಮತ್ತು ಬಂಡವಾಳಕ್ಕೆ ಚಿಂತೆಯೇ ಬೇಡ. ಉದ್ಯಮದ ಅಂದಾಜು ಪ್ರಕಾರ ದೇಶದಲ್ಲಿ 500-600ರಷ್ಟು ಸಕ್ರಿಯ ಏಂಜೆಲ್ ಹೂಡಿಕೆದಾರರು ಇದ್ದಾರೆ. ಅವರದ್ದೇ ಜಾಲವಿದೆ. ಈ ಹೂಡಿಕೆದಾರರು ನಿಮ್ಮ ಯೋಜನೆಗಳಲ್ಲಿ ಸಹಭಾಗಿತ್ವ ಒಪ್ಪಂದ ಮಾಡಿಕೊಂಡು ಬಂಡವಾಳ ನೀಡುತ್ತಾರೆ. ನಿಮ್ಮದೇ ಕಂಪನಿಯ ಬಾಸ್ ಆಗಿ ಮುನ್ನಡೆಸಬಹುದು. ಮತ್ತಷ್ಟು ಮಂದಿಗೆ ನೀವೇ ಉದ್ಯೋಗ ಕೊಡಬಹುದು. ಅಂತಹ ಕೆಲವು ಯಶಸ್ವಿ ನಿದರ್ಶನಗಳು ಇಲ್ಲಿವೆ.

 2. ಕಸದಲ್ಲಿ ರಸ ಕಂಡ ಡೈಲಿಡಂಪ್ ಮೇಲೆ ಹೂಡಿಕೆ

ಬೆಂಗಳೂರಿನ ಇಂದಿರಾನಗರದಲ್ಲಿ ಡೈಲಿ ಡಂಪ್ ಎಂಬ ಸ್ಟಾರ್ಟ್ ಅಪ್ ಕಂಪನಿ ನಾಗರಿಕರಿಗೆ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಿಸಲು, ವಿಲೇವಾರಿ ಮಾಡಲು ಸಹಕರಿಸುತ್ತದೆ. ನಾನಾ ಬಗೆಯ ಮಣ್ಣಿನ ಸಾಧನಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತದೆ. ಆನ್‌ಲೈನ್ ಮೂಲಕ ಕೂಡ ಮಾಹಿತಿ ಒದಗಿಸುತ್ತದೆ. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಕಂಪನಿ ಇಂದು ಚೆನ್ನೈ,ಮುಂಬಯಿ, ಹೈದರಾಬಾದ್,ಪುಣೆ ಮತ್ತು ದಿಲ್ಲಿಗೂ ವಿಸ್ತರಿಸಿದೆ. ಇತ್ತೀಚೆಗೆ ಮುಂಬಯಿ ಮೂಲದ ಅಂಕುರ್ ಕ್ಯಾಪಿಟಲ್ ಎಂಬ ಹೂಡಿಕೆ ಸಂಸ್ಥೆ ಡೈಲಿಡಂಪ್‌ನಲ್ಲಿ 50 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದೆ!

3. ನಿತಿನ್ ಕಾಮತರ ಕ್ರಾಂತಿಕಾರಿ ಜರೊಧಾ ಬ್ರೋಕರೇಜ್!

ಉಡುಪಿ ಮೂಲದ ನಿತಿನ್ ಕಾಮತ್ ಜೆರೊಧಾ ಎಂಬ ಹೊಸ ಪರಿಕಲ್ಪನೆಯ ಬ್ರೋಕರೇಜ್ ಕಂಪನಿಯನ್ನು ತೆರೆದು ಯಶಸ್ವಿಯಾಗಿರುವ ಹುಡುಗ ಎಂದರೆ ಅಚ್ಚರಿಯಾಗದಿರುವುದಿಲ್ಲ. ಬೇರೆ ಯಾವುದೇ ಷೇರು ವಹಿವಾಟು ನಡೆಸುವ ಕಂಪನಿ ಗ್ರಾಹಕರಿಂದ ಶೇಕಡಾವಾರು ಲೆಕ್ಕದಲ್ಲಿ ಬ್ರೋಕರೇಜ್ ಶುಲ್ಕ ಸಂಗ್ರಹಿಸಿದರೆ, ನಿತಿನ್ ಕಾಮತರು ಆ ಮಾರ್ಗದ ಬದಲಿಗೆ, ಮೊತ್ತ ಎಷ್ಟೇ ಇರಲಿ, ಕೇವಲ 20 ರೂ.ಗಳ ಅತ್ಯಲ್ಪ ಶುಲ್ಕ ಪಡೆಯುತ್ತಾರೆ. ಇತರ ಕಡೆ 1 ಲಕ್ಷ ರೂ.ಗಳ ಷೇರುಗಳನ್ನು ಮಾರಿದರೆ 1 ಸಾವಿರ ರೂ. ಶುಲ್ಕ ಕೊಡಬೇಕಿದ್ದರೆ, ಜರೋಧಾದಲ್ಲಿ ಕೇವಲ 20 ರೂ! ಇದು ಹೇಗೆ ಸಾಧ್ಯವಾಯಿತು ಎಂದರೆ, ಆನ್‌ಲೈನ್ ತಂತ್ರಜ್ಞಾನದ ನೆರನಿಂದ ಎನ್ನುತ್ತಾರೆ ನಿತಿನ್. ಪರಿಣಾಮ? ಕೇವಲ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಜರೋಧಾ ಈಗ 40,000 ಗ್ರಾಹಕರ ನೆಲೆಯನ್ನು ಹೊಂದಿದೆ. ದಿನಕ್ಕೆ ಸರಾಸರಿ 5,000 ಕೋಟಿ ರೂ. ವಹಿವಾಟು ನಡೆಸುತ್ತಿದೆ.

4. ಬೆಂಗಳೂರಿನ ನವೀನ ಸ್ಟಾರ್ಟ್ ಅಪ್‌ಗಳ ವೈವಿಧ್ಯ

ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ನಾನಾ ಬಗೆಯ ಸ್ಟಾರ್ಟ್ ಅಪ್‌ಗಳಿಗೆ ಪ್ರಯೋಗಶಾಲೆ. ಇಲ್ಲಿನ ಕೋರಮಂಗಲದಲ್ಲಿ ಐಟಿ ಸಲ್ಯೂಷನ್ಸ್, ಗ್ರಾಹಕ ಕೇಂದ್ರಿತ ವೆಬ್‌ಸೈಟ್, ಮನೆಯ ನಿತ್ಯೋಪಯೋಗಿ ಉತ್ಪನ್ನ, ಸೇವೆಗಳನ್ನು ಒದಗಿಸುವ ಸ್ಟಾರ್ಟ್ ಅಪ್‌ಗಳನ್ನು ಇಲ್ಲಿ ಕಾಣಬಹುದು. ರಜನೀತ್ ಎಂಬ ಯುವಕ ಡ್ರೀಮ್ ಸ್ಟಾಟ್ಸ್‌ಡಾಟ್ ಇನ್ ಎಂಬ ವೆಬ್ ತಾಣದ ಮೂಲಕ ಸ್ಟಾರ್ಟ್ ಅಪ್‌ಗಳಿಗೆ ಉಚಿತ ಸಂವಹನ ವೇದಿಕೆ ಕಲ್ಪಿಸಿದ್ದಾರೆ. 30-40 ಸಾವಿರ ರೂ.ಗಳ ಹೂಡಿಕೆಯಲ್ಲಿ ಅವರು ಆರಂಭಿಸಿರುವ ಈ ತಾಣವನ್ನು 170ಕ್ಕೂ ಹೆಚ್ಚು ಹೊಸ ಸ್ಟಾರ್ಟ್ ಅಪ್‌ಗಳು ಬಳಸಿವೆ. ಸ್ನೇಹಾ ರಾಯ್ ಮತ್ತು ಸನಂದಾ ಮಿಶ್ರಾ ಎಂಬ ಇಬ್ಬರು ಐಐಟಿ ಪದವಿ ಗಳಿಸಿದ ಯುವತಿಯರು ಸ್ಥಾಪಿಸಿದ ಟಾಪ್‌ಟೊಮೆಟೊ ಡಾಟ್ ಇನ್, ಗ್ರಾಹಕರಿಗೆ ಹಾಲು, ಬೆಣ್ಣೆ, ಹಣ್ಣು, ಹಂಪಲು, ತರಕಾರಿಗಳನ್ನು ನಿತ್ಯ ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವ ಸೇವೆ ಒದಗಿಸುತ್ತದೆ. ಈ ವಹಿವಾಟನ್ನು 5 ಲಕ್ಷ ರೂ. ಬಂಡವಾಳದಲ್ಲಿ 2012ರಲ್ಲಿ ಆರಂಭಿಸಿದ್ದರು.

ನಾಸ್ಕಾಮ್‌ನಿಂದ 10,000 ಸ್ಟಾರ್ಟ್ ಅಪ್ ಯೋಜನೆ

ಐಟಿ ವಲಯದ ಪ್ರಾತಿನಿಧಿಕ ಸಂಸ್ಥೆ ನಾಸ್ಕಾಮ್, 10 ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯಲ್ಲಿ ಹಲವು ಹೂಡಿಕೆ ಸಂಸ್ಥೆಗಳೂ, ರಾಜ್ಯ ಸರಕಾರಗಳೂ ಕೈಜೋಡಿಸುತ್ತಿವೆ. ಹೊಸ ಉದ್ಯಮಿಗಳಿಗೆ ತರಬೇತಿಯನ್ನೂ ಒದಗಿಸುತ್ತಿದೆ.

 ಒಳನೋಟ : ಏಂಜೆಲ್ ಹೂಡಿಕೆದಾರ ಎಂದರೆ ಯಾರು?

ನಿವ್ವಳ ಸಂಪತ್ತು 10 ಕೋಟಿ ರೂ.ಗೂ ಹೆಚ್ಚು ಇರುವ, 20-40 ಲಕ್ಷ ರೂ. ಹೆಚ್ಚುವರಿ ನಗದು ಹೊಂದಿರುವವರು ಏಂಜೆಲ್ ಹೂಡಿಕೆದಾರರಾಗಬಹುದು. ಇವರು ಸ್ಟಾರ್ಟ್‌ಅಪ್‌ಗಳಲ್ಲಿ ತಮ್ಮ ಬಂಡಬಾಳ ತೊಡಗಿಸುತ್ತಾರೆ. ಶೇ.5-20ರಷ್ಟು ಷೇರುಗಳನ್ನು ಕೊಳ್ಳುತ್ತಾರೆ. ಉದ್ಯಮಶೀಲತೆ, ಕಂಪನಿಗೆ ಸಲಹೆ ನೀಡುವ ಸಾಮರ್ಥ್ಯ ಇರಬೇಕು.

ವಾರದ ಪ್ರಶ್ನೆ :ನಾನಾ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ಸಾಮಾನ್ಯ ಬ್ಯುಸಿನೆಸ್ ಆರಂಭಿಸಲು ಹೂಡಿಕೆ ಎಷ್ಟು ಅಗತ್ಯ?

5ರಿಂದ 6 ಲಕ್ಷ ರೂ. ಆರಂಭಿಕ ಬಂಡವಾಳ ಸಾಕು.

 ತಿಳಿ ನಲಿ : ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಲು ಆಸಕ್ತರಾಗಿರುವ ಸಿಇಒಗಳು, ಉದ್ಯಮಿಗಳಿಗೆ ವೇದಿಕೆ, ಮಾಹಿತಿ ಒದಗಿಸುವ ವೆಬ್ ತಾಣ. http://www.indianangelnetwork.com

 

– ಕೇಶವ ಪ್ರಸಾದ್.ಬಿ.ಕಿದೂರು

21/03/2014

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: