ತೊರೆಯ ಅಹವಾಲು
ನಾನೊಂದು ಸಣಕಲು
ತೊರೆಯೇನೋ ಅಹುದು
ಹಾಗೆಂದು ನೀ ಕಡೆಗಣಿಸಿ
ಸಾಗಬಹುದೇ ತೊರೆದು?
ನಿನ್ನ ಕಲರವದ ಸುಯಿಲು
ನನ್ನೊಳಗೆ ಹುಯಿಲೆಬ್ಬಿಸಿದಾಕ್ಷಣ
ತಡ ಮಾಡಲಿಲ್ಲ ಮತ್ತೆ
ಹರಿದೆ ಹಾರಿದೆ ಜಿಗಿದೆ.
ಆಳ ಕಂದರ ಕೊರಕಲು ಬಂಡೆ
ಪ್ರಪಾತ ಕಣಿವೆ
ಬೆಚ್ಚಿ ಬಿದ್ದೆ
ಅಂದೊಮ್ಮೆ ನಿನಗೂ ಎದುರಾಗಿತ್ತಲ್ಲವೇ
ಇದೇ ಬವಣೆ.
ಹಾಗೆಂದು ನೆನೆದುಕೊಂಡಾಗಲೇ
ಎದೆಗುಂದಿದ ಎದೆಯಾಳಕ್ಕೆ
ಸಳ ಸಳನೇ ಇಳಿದ ತಂಪು ಸೆಲೆ
ಅದುಮಿಟ್ಟ ಹಿಡಿ ಪ್ರೀತಿಯ ಸಾಂಗತ್ಯಕ್ಕೆ
ಬಸ ಬಸನೇ ಒಸರಿ ಅರಸುತ್ತಿದೆ
ಜೀವ ನೆಲೆ.
ಗಮ್ಯ ತೀರದ ದುರ್ಗಮ
ಕಥೆ ಕೇಳಿ ಸಾಗಲೊಪ್ಪದೆ
ಎಷ್ಟು ಸತಾಯಿಸುತ್ತಿದೆ ಹಾದಿ?!
ಸುರಿವ ಬೆವರೊರೆಸಿಕೊಳ್ಳದೆಯೇ
ಒಡಲೊಳಗೇ ಇಳಿಬಿಟ್ಟು
ಇಷ್ಟಿಷ್ಟೇ ಸಾವರಿಸಿಕೊಂಡು
ಗಡಿ ಬಿಡಿಯಲ್ಲಿ ಧಾವಿಸಿ ಬಂದರೆ…
ತಿರುಗಿಯೂ ನೋಡದೆ ಸರಕ್ಕನೆ
ಸರಿದು ಹೋದೆಯಲ್ಲ…
ಎಂಥಹ ಅವಗಣನೆ!
ಒಪ್ಪಿಕೊಂಡೆ ನಿನ್ನ ತಾಕತ್ತು
ನಿನ್ನದಲ್ಲ ಬಿಡು ತಪ್ಪು
ಬೇಸರಿಕೆಯನ್ನೆಲ್ಲಾ ಇಲ್ಲೇ ಒಗೆದು
ಹಿಂಡಿ ಹಿಂಗಿಸಿ ಬಿಡುತ್ತೇನೆ.
ನನ್ನದೇ ದಾರಿ ಗೊತ್ತು ಮಾಡಿಕೊಳ್ಳುತ್ತೇನೆ.
ಕೊನೆಗೊಂದು ಪ್ರಶ್ನೆ
ನೀಲ ಕಡಲು ಬರೇ ನಿನ್ನ ಸ್ವತ್ತೇ?
ನಾನು ನನ್ನಂತಹ ತೊರೆಗಳು
ನದಿಯಾಗ ಬಯಸುವುದೂ ತಪ್ಪೇ..?!
-ಸ್ಮಿತಾ ಅಮೃತರಾಜ್, ಸಂಪಾಜೆ.
18/03/2014
ಕವಿತೆ ತುಂಬ ಹಿಡಿಸಿತು .ಇನ್ನೂಓದಬೇಕು .ಉಂಟು ಅಲ್ಲವಾ
ವಂದನೆಗಳು-smitha