ಹೆನ್ರಿ ಕೆವೆಂಡಿಶ್,ಆಗಿನ ಅತ್ಯಂತ ಶ್ರೀಮಂತ ವಿಜ್ಞಾನಿ, ಆದರೆ….!

Spread the love
Share Button

Dr.B.Shridhara Bhat

ಒಬ್ಬ ವಿಚಿತ್ರ ಸ್ವಭಾವದ ಮಹಾನ್ ರಸಾಯನಶಾಸ್ತ್ರಜ್ಞ, ಹೆನ್ರಿ ಕೆವೆಂಡಿಶ್, ಅವರ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಶ್ರೀಮಂತ ವ್ಯಕ್ತಿ. ಆತ ಮರಣಗೊಂಡಾಗ ಹತ್ತು ಮಿಲಿಯ ಪೌಂಡ್ (ಆ ಕಾಲದಲ್ಲಿ) ಗಳ ಆಸ್ತಿಯನ್ನು ಬಿಟ್ಟು ಹೋದ. ಜೀವಂತವಿದ್ದಾಗ ಹಳೆಯ ಮಾಸಿಹೋದ, ಒಮ್ಮೊಮ್ಮೆ ಹರಿದುಹೋದ, ಪೋಷಾಕುಗಳನ್ನು ವಿಚಿತ್ರರೀತಿಯಲ್ಲಿ ಧರಿಸುತ್ತಿದ್ದ. ಆದರೆ, ಜಗತ್ತಿನ ಒಬ್ಬ ಅದ್ಭುತ ವಿಜ್ಞಾನಿಯೆನ್ನುವುದರಲ್ಲಿ ಸಂಶಯವಿಲ್ಲ.

ಕೆವೆಂಡಿಶ್ ಅವರು ಅಕ್ಟೋಬರ್, 1731 ರಲ್ಲಿ ಲಾರ್ಡ್ ಚಾರ್ಲ್ಸ್ ಮತ್ತು ಲೇಡಿ ಅನ್ನಿ ಕೆವೆಂಡಿಶ್ ದಂಪತಿಗಳಿಗೆ ಮೊದಲ ಮಗನಾಗಿ ಜನಿಸಿದರು. ತಂದೆಯವರಾದ ಲಾರ್ಡ್ ಚಾರ್ಲ್ಸ್ ಕೂಡಾ ಒಬ್ಬ ವಿಜ್ಞಾನಿಯೇ ಆಗಿದ್ದರು. ಮಗ ಹೆನ್ರಿ ತನ್ನ 18ನೇ ವಯಸ್ಸಿನಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿಕೊಂಡರು. ಆ ಸಮಯದಲ್ಲಿ ಒಂದು ಪದವಿಯನ್ನು ಪಡೆಯಲು “ಧರ್ಮಶಾಸ್ತ್ರ”ವನ್ನು ಕಲಿಯುವ ಅನಿವಾರ್ಯತೆ ಇತ್ತು. ಇದನ್ನು ವಿರೋಧಿಸಿ, ಯುವ ಹೆನ್ರಿ ಪದವಿಯಿಲ್ಲದೇ ಕಾಲೇಜಿನಿಂದ ಹೊರಬಿದ್ದರು. ಅನಂತರ ಪ್ಯಾರಿಸ್ ಗೆ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು.

ಕೆವೆಂಡಿಶ್ ಅವರ ಕಾಲದಲ್ಲಿ ವಿಜ್ಞಾನಿಗಳಲ್ಲಿದ್ದ ಒಂದು ಗೂಢ ಪ್ರಶ್ನೆ, “ ಬೆಂಕಿ ಅಂದರೆ ಏನು? ಬೆಂಕಿಗೆ ವೈಜ್ಞಾನಿಕ ವಿವರಣೆ ಎಂತಹುದು?” ಭಾರತೀಯರು ಮತ್ತು ಗ್ರೀಕರು ಬೆಂಕಿಯನ್ನು ಪಂಚಭೂತಗಳಲ್ಲಿ ಒಂದು ಎಂದು ನಂಬಿದ್ದಾರೆ. ಹದಿನೆಂಟನೆಯ ಶತಮಾನದ ವಿಜ್ಞಾನಿಗಳು “ಫ್ಲೋಜಿಸ್ಟೋನ್ (phlogistone) ಸಿದ್ಧಾಂತ”ವನ್ನು ಒಪ್ಪಿಕೊಂಡಿದ್ದರು. ಯಾವುದೇ ಒಂದು ವಸ್ತುವನ್ನು “ಉರಿಸಿದಾಗ” ಅದರಲ್ಲಿರುವ “ಫ್ಲೋಜಿಸ್ಟೋನ್” ಬಿಡುಗಡೆಯಾಗಿ ಬೆಂಕಿಯ ರೂಪದಲ್ಲಿ ಹೊರಬರುವುದು, ಎನ್ನುವುದು ತತ್ವ. “ಫ್ಲೋಜಿಸ್ಟೋನ್”ನ್ನು ಯಾರೂ ಹಿಡಿಯದಿದ್ದಾಗ, ಕೆವೆಂಡಿಶ್ ಈ ಪ್ರಯತ್ನವನ್ನು ಮಾಡುತ್ತಾರೆ.

ಸಂಶೋಧನೆ ನಡೆಸುತ್ತಾ, ಕೆವೆಂಡಿಶ್ “ಫ್ಲೋಜಿಸ್ಟೋನ್”ನ ಬದಲು ಇನ್ನೊಂದು ‘ಅನಿಲ’ವನ್ನು ಹಿಡಿದು, ಈ ಅನಿಲವೂ ಗಾಳಿಯಲ್ಲಿ ನೀಲಿ ಬಣ್ಣದ ಜ್ವಾಲೆಯಲ್ಲಿ ಚೆನ್ನಾಗಿ ಉರಿಯುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಹತ್ತು ವರ್ಷಗಳ ನಿರಂತರ ಪರಿಶ್ರಮದ ಪ್ರಯೋಗಗಳಿಂದ ಒಂದು “ವಿಚಿತ್ರ” ಅವರ ಸಂಶೋಧನೆಗೆ ಒಳಗಾಯಿತು – ಈ ಅನಿಲ ಗಾಳಿಯಲ್ಲಿ ಉರಿದರೆ ನೀರು ಉತ್ಪಾದನೆ ಆಗುತ್ತದೆ! ಹಾಗೇ, ಈ ಅನಿಲಕ್ಕೆ ಅವರು “ಜಲಜನಕ” (Hydrogen) ಎಂಬ ಅನ್ವರ್ಥ ನಾಮಕರಣ ಮಾಡಿದರು. ಆದರೆ, ರಹಸ್ಯ ಇಲ್ಲಿಗೆ ಮುಗಿಯುವುದಿಲ್ಲ. ಕೆವೆಂಡಿಶ್ ಅಭಿಪ್ರಾಯವೇನೆಂದರೆ, ಗಾಳಿಯಲ್ಲಿರುವ 20 % ಭಾಗ ಮಾತ್ರ ಜಲಜನಕದ ದಹ್ಯಕ್ಕೆ ಯೋಗ್ಯವಿದೆ. ಆದರೆ ಇದೇ ದಹನಾನುಕೂಲಿ ಭಾಗ “ಆಮ್ಲಜನಕ”ವೆಂದು ಕಂಡುಹಿಡಿಯಲು ಮುಂದೆ ಒಂದು ದಿನ ಇನ್ನೊಬ್ಬ ಮೇರು ವಿಜ್ಞಾನಿ, ಜೋಸೆಫ್ ಪ್ರೀಸ್ಟ್ಲಿ, ಅವರ ಆಗಮನವಾಗ ಬೇಕಿತ್ತು !

ಕೆವೆಂಡಿಶ್ ಪ್ರಯೋಗಾಲಯದ ಉಪಕರಣಗಳು (ಇಸವಿ :1766)
ಜಲಜನಕವನ್ನು 1766 ರಲ್ಲಿ ಕಂಡುಕೊಂಡು ಪ್ರತ್ಯೇಕಿಸಿದರೂ, ಇದರ ಹಗುರ ತೂಕದ ಗುಣವಿಶೇಷದಿಂದ ಬಲೂನುಗಳ ತಯಾರಿ ಸುಮಾರು 20 ವರ್ಷಗಳ ನಂತರವಾಗುತ್ತದೆ. 1785 ರಲ್ಲಿ ತಯಾರಿಸಿದ ಜಲಜನಕ ತುಂಬಿದ ಬಲೂನೊಂದು ಸಾಕಷ್ಟು ದೂರ ಕ್ರಮಿಸಿ, ಅವಘಡಕ್ಕೀಡಾಗಿ, ಸ್ಪೋಟಗೊಂಡು ಒಳಗಿದ್ದವರನ್ನೆಲ್ಲಾ ಅಸುನೀಗುವಂತೆ ಮಾಡಿದುದು ಚರಿತ್ರೆಯನ್ನು ಸೇರಿಹೋಗಿದೆ. ಇದಕ್ಕೆ ನಾವು ಕೆವೆಂಡಿಶ್ ಅವರನ್ನು ದೂರುವಂತಿಲ್ಲ. ಜಗತ್ತಿನ ಎಲ್ಲಾ ಸಂಶೋಧನೆಗಳು ಸತ್ಯವನ್ನು ಹೊರಗೆಡಹಿ ರಹಸ್ಯಗಳನ್ನು ಬಿಚ್ಚುತ್ತವೆಯಲ್ಲದೆ, ಇದರ ಉಪಯೋಗ ಮಾನವಕುಲದ ಬುದ್ದಿಮತ್ತೆಗೆ ಬಿಟ್ಟ ವಿಚಾರ.

ಕೆವೆಂಡಿಶ್ ಗೆ ವಿದ್ಯಾಭ್ಯಾಸವಿತ್ತು, ಐಶ್ವರ್ಯವಿತ್ತು, ಗೌರವವಿತ್ತು. ಆದರೆ, ಅವರು ಮದುವೆಯಾಗಲು “ಒಳ್ಳೆಯ ಅರ್ಹ ಹುಡುಗ” ಎಂದೂ ಆಗಿರಲಿಲ್ಲ. ಏಕೆಂದರೆ, ಹುಡುಗಿಯರನ್ನು ಅಥವಾ ಹೆಂಗಸರನ್ನು ಕಂಡರೆ ಅವರು ಗಾಬರಿ ಹಾಗೂ ಗಲಿಬಿಲಿಗೊಳ್ಳುತ್ತಿದ್ದರು ಮತ್ತು ಅವರನ್ನು ಇಷ್ಟಪಡುತ್ತಿರಲಿಲ್ಲ. ಈ ಬ್ರಹ್ಮಚಾರಿಯ ಕೊಠಡಿಯೊಳಕ್ಕೆ ಅವರಲ್ಲಿರುವಾಗ ಮನೆಯ ಸೇವಕಿಯೋಬ್ಬಳು ಪ್ರವೇಶ ಮಾಡಿದ ಒಂದೇ ಕಾರಣಕ್ಕೆ ಅವಳನ್ನು ಕೆಲಸದಿಂದ ವಜಾಮಾಡಿದ ಸಂದರ್ಭವಿದೆ. ಕೆವೆಂಡಿಶ್ ಇನ್ನೂ ಅನೇಕ ಸಂಶೋಧನೆಗಳನ್ನು ಮಾಡಿದ್ದರೂ ಅವನ್ನೆಲ್ಲಾ ಪ್ರಕಟಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಹಾಗಾಗಿ, ಒಂದಷ್ಟು ವಿಜ್ಞಾನಕ್ಕೆ ಪ್ರಪಂಚಕ್ಕೆ ಆ ಕಾಲದಲ್ಲಿ ಲಭಿಸದೇ ಹೋಗಿರಬಹುದು.

 

1810 ರಲ್ಲಿ ತನ್ನ 79ರ ಪ್ರಾಯದಲ್ಲಿ ಕೆವೆಂಡಿಶ್ ಒಬ್ಬರೇ ಏಕಾಂತದಲ್ಲಿ ಶುಶ್ರೂಷೆಯಿಲ್ಲದೆ ಮರಣಹೊಂದಿದರು. ಜೀವಿತಾವಧಿಯಲ್ಲಿ, ಧಾರ್ಮಿಕ ಕಟ್ಟುಕಟ್ಟಳೆಗಳಿಂದ ದೂರವಿದ್ದ ಕೆವೆಂಡಿಶ್ ಅವರ ಅಂತ್ಯಕ್ರಿಯೆ ಮಾತ್ರ ಇಂಗ್ಲೆಂಡಿನ ಕ್ಯಾಥಡ್ರೋಲ್ ಒಂದರಲ್ಲಿ ಸಕಲ ಗೌರವಗಳೊಂದಿಗೆ ವಿಧಿವತ್ತಾಗಿ ನಡೆಯಿತು. ಕೆವೆಂಡಿಶ್ ಅವರ ಜಲಜನಕ ಮತ್ತು ಸಾರಜನಕ ( ರುದೆರಫಾರಡ್ ಅವರೊಂದಿಗೆ ), ಗಾಳಿ ಮತ್ತು ನೀರಿನ ಸಂಯೋಜನೆ ( composition), ವೈಜ್ಞಾನಿಕ ವಿಶ್ಲೇಷಣಾ ವಿಧಾನಗಳು, ಪ್ರಯೋಗಗಳಲ್ಲಿ ತಾಂತ್ರಿಕ ವೈವಿಧ್ಯಗಳ ಶೈಲಿಯಿಂದ ಮಹಾನ್ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರುತ್ತಾರೆ.

ಪ್ರಕೃತಿಯ ನಿಗೂಢ ರಹಸ್ಯಗಳನ್ನು ಭೇಧಿಸುವುದರಲ್ಲಿ ಒಬ್ಬ ದಾರ್ಶನಿಕನ ಪಾತ್ರವಿರುವಷ್ಟೇ, ವಿಜ್ಞಾನಿಯ ಕೊಡುಗೆಯೂ ವಿಶಿಷ್ಟವಾಗಿದೆ. ಆದರೆ ರೀತಿಮಾತ್ರ ಬೇರೆಯದೇ ಇರುತ್ತದೆ. ಸಂಶೋಧನಾನಿರತ ವಿಜ್ಞಾನಿಯ ಒಂದು ಉದ್ದೇಶ ಸತ್ಯಶೋಧನೆಯೂ ಆಗಿದೆ ಎನ್ನುವುದು ಗೊತ್ತಿರುವ ವಿಚಾರ. ಹೆನ್ರಿ ಕೇವೆಂಡಿಶವರ ‘ಪ್ಹ್ಲೊಜಿಸ್ಟೋನ್’ ನ ಹುಡುಕುವಿಕೆಯಲ್ಲಿ ಎರಡು ಸತ್ಯಗಳು ಅರಿವಿಗೆ ಬಂದವು. ‘ಪ್ಹ್ಲೊಜಿಸ್ಟೋನ್’ನ ಇಲ್ಲದಿರುವಿಕೆ ಮತ್ತು ‘ಜಲಜನಕ’ದ ಇರುವಿಕೆ.

ಅಪ್ಪಟ ವಿಜ್ಞಾನಿಯೊಬ್ಬ ಸಂಶೋಧನೆಗಳನ್ನು ಆತ್ಮಸಂತೋಷಕ್ಕಾಗಿ ಕೈಗೊಳ್ಳುತ್ತಾನೆ ಅನ್ನುವುದು ಕೇವೆಂಡಿಶ್ ನೋಡಿದರೆ ಅನಿಸಬಹುದು. ಸುಮಾರಷ್ಟು ತನ್ನ ಸಂಶೋಧನೆಗಳನ್ನು ಅವರು ಪ್ರಕಟಿಸುವ ಗೋಜಿಗೂ ಹೋಗುತ್ತಿರಲಿಲ್ಲ ಎನ್ನುವುದು ಇದಕ್ಕೆ ನಿದರ್ಶನವಲ್ಲವೇ?

ಇನ್ನೊಂದು ದೊಡ್ಡ ವಿಡಂಬನೆಯೆಂದರೆ : ಯಾವ ಧರ್ಮಶಾಸ್ತ್ರದ ಅಧ್ಯಯನವನ್ನು ಕೇವೆಂಡಿಶ್ ಮಾಡಲೋಪ್ಪದೆ, ಪದವಿಯನ್ನೂ ಪಡೆಯದೇ ಹೊರಬಂದರೋ, ಯಾವ ಧಾರ್ಮಿಕ ಕಟ್ಟುಕಟ್ಟಳೆಗಳನ್ನು ಜೀವಿತಾವದಿಯಲ್ಲಿ ತ್ಯಜಿಸಿದ್ದರೋ, ಅದೇ ಧಾರ್ಮಿಕ ವಿಧಿವಿಧಾನಗಳಿಂದ ಅವರ ಅಂತ್ಯಕ್ರಿಯೆ ನಡೆಯಿತು. ಆದರೇನು, ಆಗ ಕೇವೆಂಡಿಶ್ ಇಹಲೋಕವನ್ನು ತ್ಯಜಿಸಿದ್ದರಲ್ಲವೇ?

 

 -ಡಾ. ಬಡೆಕ್ಕಿಲ ಶ್ರೀಧರ ಭಟ್ ,  ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: