‘ಮಳೆ ನಿಂತಾಗ’ – ಕೆ. ಎಮ್. ಅನ್ಸಾರಿ ಅವರ ಕವನ ಸಂಕಲನ

Share Button

 

ಕವಿತೆಯ ಸೊಲ್ಲೊಂದು ನಮಗೆ ಯಾಕೆ ಆಪ್ತವಾಗುತ್ತದೆ? ಕವಿತೆಯ ಮೂಲ ಸೆಲೆ ಯಾವುದು? ಪ್ರೀತಿಯೇ? ಪ್ರೇಮವೇ? ವಿರಹವೇ? ಅದಕ್ಕೂ ಮೀರಿದ ಅನುಭಾವವೇ? ಕವಿತೆ ಕಟ್ಟುವ ಕವಿ ಮನಸು ಅನುಭವಗಳನ್ನು ಪರಿಭಾವಿಸುವ ವಿಧ ಯಾವುದು? ಹೀಗ್ವೆ ಕವಿ‌ಎ, ಕವಿತೆ ಹುಟ್ಟುವ ಸಮಯ ಇವು ಸಾಹಿತ್ಯ ವಿಮರ್ಶಕರಾದಿಯಾಗಿ ಜನ ಸಾಮಾನ್ಯರನ್ನೂ ಕಾಡುವ ಪ್ರಶ್ನೆಗಳು. ಇದೆಲ್ಲವನ್ನು ಮೀರಿ ಒಂದು ಕವಿತೆಯ ಸಾಲು ನಮ್ಮಲ್ಲಿ ಛಕ್ಕನೆ ಹೊಸ ಹೊಳಹನ್ನು ಚಿಮ್ಮಿಸಬಹುದು, ಜೀವನದ ವಿಷಾದದ ಬಗ್ಗೆ, ಕಳೆದು ಹೋದ ಕನಸುಗಳ ಬಗ್ಗೆ ಕಣ್ಣೀರಾಗಿಸಬಹುದು. ಕವಿತೆ, ಹಾಡಿನ ಶಕ್ತಿಯೇ ಅದು. ಅದು ಸಿನೆಮಾ ಹಾಡಾಗಿರಲಿ, ಗಝಲ್ ಇರಲಿ, ಭಾವ ಗೀತೆ ಇರಲಿ ನಮ್ಮೊಳಗಿನ ಭಾವ ತಂತಿಯನ್ನು ಮಿಡಿಯುವ ಭಾವ ತೀವ್ರತೆ ಅದಕ್ಕೆ ಇದೆ. ಈ ನಿಟ್ಟಿನಲ್ಲಿ ಕಾವ್ಯದ ನಿಕಷಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವುದು, ಓದುಗರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವುದು, ಕವಿ ಹಾಗೂ ಓದುಗರ ಕಾತರ, ನಿರೀಕ್ಷೆ ಹಾಗೂ ಹಕ್ಕು ಆಗಿದೆ.

ಕೆ. ಎಮ್. ಅನ್ಸಾರಿ ಅವರ ‘ಮಳೆ ನಿಂತಾಗ’ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾದ ಅವರ ಕವನ ಸಂಕಲನ. ಈ ಕವನದ ಜೊತೆಗೆಯೇ ‘ಹರಕೆಯ ಕೋಳಿ’ ಎಂಬ ಕಾದಂಬರಿಯನ್ನೂ ಅವರು ಪ್ರಕಟಿಸಿದ್ದಾರೆ. ಅತ್ಯುತ್ತಮ ಸಾಮಾಜಿಕ, ಚಾರಿತ್ರಿಕ ಒಳ ನೋಟಗಳುಳ್ಳ ಕಾದಂಬರಿ ಅದು. ಹಾಗಿದರೂ ಈ ಕವನ ಸಂಕಲನ ಅವರ ಮುಗ್ಧ ಜೀವನ ಪ್ರೀತಿ, ಪ್ರೇಮ, ಪ್ರೀತಿ, ವಿರಹ, ತಾಯಿಯ ವಾತ್ಸಲ್ಯದ ಬಗ್ಗೆ ಕನವರಿಕೆಗಳು, ನಿರಂತರ ಕಾಡುವ ಕನಸುಗಳ ಬಗ್ಗೆ, ಸಾಮಾಜಿಕ ಪಿಡುಗುಗಳ ಬಗೆ ಅವರಿಗಿರುವ ಕಳಕಳಿಗಳಿಂದ ಆಪ್ತವಾಯಿತು. ಸಂಕಲನದ ಬಗ್ಗೆ ಒಂದಿಷ್ಟು ಮಾತು.
ಈ ಕವನ ಸಂಕಲನದಲ್ಲಿ ಒಟ್ಟು ೫೦ ಕವಿತೆಗಳಿದ್ದು ಮಂಗಳೂರಿನ ಆಕೃತಿ ಆಶಯ ಪ್ರಕಾಶನದವರು ಪ್ರಕಟಿಸಿದ್ದಾರೆ. ‘ಮಳೆ ನಿಂತಾಗ’ ಇವರ ಮೊದಲ ಕವನ ಸಂಕಲನ.

‘ಹನಿ ಮಳೆಯೋ, ಜಡಿ ಮಳೆಯೋ
ಮಳೆಯೆಂದರೆ ಸಂಭ್ರಮ‘-

ಈ ಸಂಭ್ರಮ , ವಾಸ್ತವ ಪ್ರಜ್ನೆ ಅನ್ಸಾರಿಯವರ ಒಟ್ಟು ವ್ಯಕ್ತಿತ್ವದಲ್ಲಿ ಹದವಾಗಿ ಮಿಳಿತವಾಗಿರುವುದು ಅವರ ಕವಿತೆಗಳಲ್ಲಿ ಕಂಡು ಬರುತ್ತದೆ.

ಅವರ ಸಂವೇದನಾಶೀಲತೆ, ಸಾಮಾಜಿಕ ಕಳಕಳಿ, ಹೆಣ್ಣು ಮಕ್ಕಳ ಸಂಕಟಗಳ ಬಗ್ಗೆ ಅರಿವು, ಮುಖ್ಯವಾಗಿ ಅವರ ಸೆಕ್ಯುಲರ್ ಮನೋಭಾವ ಈ ಕವಿತೆಗಳಲ್ಲಿ ಹಾಸುಹೊಕ್ಕಾಗಿವೆ. ಉದಾಹರಣೆಗೆ ‘ವಿಧವೆ’ ಕವನದ ಈ ಸಾಲುಗಳನ್ನು ನೋಡಿ:

ಅಂದು ಬಂದವರು
ಅಂದೇ ಹೋದರು..
ಚಿತೆಯ ಅಗ್ನಿ ಆರುವ ಮೊದಲು..
ದೈವ ವಿಧಿಯೆಂದು
ಗೊಣಗುತ..

ಅದೇ ರೀತಿ ‘ದೈವ ಭಕ್ತರು’ ಕವನದ ಈ ಸಾಲುಗಳು..

ಹರನೇ..
ಹೊರಗಡೆ
ಸಾಲಾಗಿ ನಿಂತ ಭಿಕ್ಷುಕರ
ದೇಹವನು
ಮುಚ್ಚಿದ್ದು ಹರಿದ ಅರಿವೆ
ಹಾಗೆಯೇ
ಯಾ ಅಲ್ಲಾಹ್..
ಹೊರಗಡೆಯೋ..
ಹರಿದ ಫರ್ದಾ ಧರಿಸಿ
ಸ್ತ್ರೀಯರು ಮಕ್ಕಳು
ಒಂದು ಹೊತ್ತಿನ ಊಟಕ್ಕೆ
ಕೈ ಚಾಚುತ್ತಿದ್ದರು..
ಮತ್ತೊಂದು ಬೀದಿಯಲಿ ಘಂಟೆ ನಾದ..
ಒಳ ಹೊಕ್ಕಾಗ
ಬಿಳಿ ವಸ್ತ್ರಧಾರಿ
ನೀಡುತ್ತಿದ್ದ ಉಪದೇಶ ಪ್ರಾರ್ಥನೆ
ಒಕ್ಕೊರಲಿನಿಂದ
ಅಮೇನ್ ಅನ್ನುವ ಧ್ವನಿ..
ಬಂಗಾರದ ಶಿಲುಬೆ..

ಮೊಳೆಯಲ್ಲಿ ಬಂಧಿಯಾದ
ಏಸು ದೇವರು..

ಹೀಗೆ ಕವಿಯ ಉದಾತ್ತತೆ, ಹಸಿವಿನಿಂದ, ಬಡತನದಿಂದ ನರಳುವವರ ಬಗ್ಗೆ ಮರುಗುವ ಮನ.. ಹೀಗೆ ಅಂತ:ಕರಣವುಳ್ಳ ಕವಿತೆಗಳು.
ಅವರ ನವಿರಾದ ಹಾಸ್ಯ, ತುಂಟತನ ‘ಭಕ್ತಿ’ ಕವಿತೆಯಲ್ಲಿದೆ.

ಮದುವೆಯಾದ ಹೊಸದರಲ್ಲಿ
ನನ್ನಾಕೆಯ
ಶ್ರೀಕೃಷ್ಣ ಭಕ್ತಿಯ ಕಂಡು
ಅಸೂಯೆಯಿಂದ
ಕೇಳಿದ್ದೆ.
ನಾನೇಕಾಗಬಾರದು
ನಿನ್ನ ಶ್ರೀಕೃಷ್ಣ..?
ಮುಖ ಸಿಂಡರಿಸಿ
ಮಾತು ಬಿಟ್ಟು ಕೂತಿದ್ದಳು
ಮೂರು ದಿನ..!!



ಅದೇ ರೀತಿ ಪ್ರೀತಿಗೆ ಸಂಬಂಧಿಸಿದ, ವಾಸ್ತವ ಪ್ರಜ್ನೆ ಉಳ್ಳ ಇನ್ನೊಂದು ಕವನ ‘ಒಮ್ಮೆ ನಕ್ಕು ಬಿಡು’ ಕವಿತೆಯ ಸಾಲುಗಳು

ನಾಳಿನ ಶುಭೋದಯದಲ್ಲಿ
ನಾನಿರುವೆನೆಂಬ
ಕಲ್ಪನೆ ಹುಸಿಯಾದೀತು..
ಬದುಕಿನ ಜಂಜಾಟದಲ್ಲಿ
ನಗು ಮೊಗದ ನೆನಪೊಂದೇ
ಚಿರಾಯು…

ಅನ್ಸಾರಿಯವರು ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಭೇದವಿಲ್ಲದೆ ಸಮಾಜದಲ್ಲಿ ಒಂದಾಗಿ ಬಾಳುತ್ತಿರುವ ಕಾರಣ ಅವರ ಕವಿತೆಗಳಲ್ಲಿ ಎಲ್ಲ ಧರ್ಮಗಳ ಪ್ರತಿಮೆಗಳೂ ಇವೆ. ಉದಾಹರಣೆಗೆ’ಜನುಮ ದಿನದಂದು’ ಕವಿತೆಯ ಯಮ.

ನಿನ್ನೆಯ ಕನಸಲಿ
ಬಂದ ಆ ಆಗಂತುಕ ‘
ಬೆನ್ನು ತಟ್ಟಿ
ನಗುತ ನುಡಿದ..
ಪ್ರತಿ ವರುಷ ಹುಟ್ಟು ಹಬ್ಬದ ದಿನ
ನಾ ಬಂದು ನಗುವೆ..
ನನ್ನೆಡೆಗೆ ಬರುವ
ವರುಷಗಳು
ಹತ್ತಿರವಾಗುತ್ತಿರುವೆನ್ನುವ ಸಂತಸವೆನಗೆ.
ಭಯದಿ ಬೆಚ್ಚಿ ಕಣ್ಣನೊರಸಿದಾಗ
ಕೋಣನ ಬೆನ್ನೇರಿ
ಇರುಳ ಮೌನದಲಿ
ಮರೆಯಾದ…!!!

ಕೌಟುಂಬಿಕ ಬಂಧಗಳ ಬಗ್ಗೆ ಬರೆದ, ಪ್ರೀತಿಯ ಬಗ್ಗೆ, ಮುಖ್ಯವಾಗಿ ತಾಯಿಯ ಬಗ್ಗೆ ಇರುವ ಅನೇಕ ಕವನಗಳು ಈ ಸಂಕಲದ ಅಭಿರುಚಿಗೂ, ಲೇಖಕರ ಜೀವನ ದೃಷ್ಟಿಗೂ ಸಾಕ್ಷಿಯಾಗಿವೆ.
‘ಮರುಭೂಮಿಯ ಅತ್ತರು’. ‘ಜ್ನಾನೋದಯ’, ಆಸ್ತಿಯ ಪಾಲು, ‘ಎದೆಯಬೆಂಕಿ’ ‘ಫ಼ೇಸ್ ಬುಕ್’, ‘ವಸಂತ ಕಾಲ,’ ‘ಧರ್ಮದ ಅಮಲು’, ‘ಸಂಪ್ರದಾಯ’, ‘ಅನ್ವೇಷಣೆ ‘ಹೀಗೆ ಹಲವಾರು ಕವನಗಳು ತಮ್ಮ ಪ್ರಾಮಾಣಿಕ ಅಭಿವ್ಯಕ್ತಿಯಿಂದ ಗಮನ ಸೆಳೆಯುತ್ತವೆ. ದಲಿತ ಸಂವೇದನೆಯುಳ್ಳ ‘ಅಸ್ಪೃಶ್ಯ’ ಕವನದ ಸಾಲುಗಳನ್ನು ಗಮನಿಸಿ:

ಇಂದು
ಧಣಿ ಮನೆಯ
ಅಟ್ಟದಲಿ ಗೂಡು
ಕಟ್ಟಿದ
ಜೇನ ತೆಗೆದು
ಅವನ ಕೈಗಿತ್ತಾಗ
ದಕ್ಕಿದ್ದು
ಹಳಸಿದ ತಂಗಳನ್ನ..!!

ಕವಿತೆಯ ಲಯ, ಭಾಷೆಯ ಸೂಕ್ಷ್ಮಗಳನ್ನು ಇನ್ನಷ್ಟು ಅಳವಡಿಸಿಕೊಂಡಲ್ಲಿ ಈಗಾಗಲೇ ಅರ್ಥಪೂರ್ಣವಾಗಿರುವ ಅನ್ಸಾರಿಯವರ ಕವಿತೆಗಳು ಇನ್ನಷ್ಟು ಸುಂದರವಾಗಬಲ್ಲವು. ಅವರಿಗೆ ಶುಭ ಹಾರೈಕೆಗಳು.

 

 -ಜಯಶ್ರೀ ಬಿ ಕದ್ರಿ

3 Responses

  1. Ansari says:

    ನನ್ನ ಕವನ ಸಂಕಲನವನ್ನು ಪರಿಚಯಿಸಿದ ಶ್ರೀಮತಿ ಜಯಶ್ರೀ ಮತ್ತು ತಂಡಕ್ಕೆ ಧನ್ಯವಾದಗಳು.

  2. ಮಧು says:

    ಬದುಕಿನ ಅನುಭಾವಗಳ ಅನಾವರಣ

Leave a Reply to Ansari Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: