ಕಪ್ಪು ಹುಡುಗಿ: ಸಂಗೀತಾ ರವಿರಾಜ್ ಅವರ ಗದ್ಯ ಸಂಕಲನ

Spread the love
Share Button

 

‘ಸಂಗೀತಾ ರವಿರಾಜ್ ‘ ಇತ್ತೀಚೆಗೆ ಕೇಳಿ ಬರುತ್ತಿರುವ ಯುವ ಬರಹಗಾರ್ತಿಯರಲ್ಲಿ ಪ್ರಮುಖರು. ಮಡಿಕೇರಿಯ ‘ಚೆಂಬು’ ಎಂಬ ಪುಟ್ಟ ಗ್ರಾಮ ಇವರದು. ವೃತ್ತಿಯಿಂದ ಶಿಕ್ಷಕಿಯಾಗಿರುವ ಈಕೆಯ ಕವಿತೆಗಳು, ಲೇಖನಗಳು ತಮ್ಮ ಸ್ವಂತಿಕೆ, ಧನಾತ್ಮಕ ದೃಷ್ಟಿಕೋನದಿಂದ, ಜಗತ್ತಿನ ಬಗ್ಗೆ, ಸಾಹಿತ್ಯದ ಬಗ್ಗೆ ತನ್ನದೇ ಆದ ಸ್ಪಷ್ಟ ತಿಳುವಳಿಕೆಯಿಂದ ಗಮನ ಸೆಳೆಯುತ್ತವೆ. ಈಗಾಗಲೇ ‘ಉಡುಗೊರೆ’ ಮತ್ತು ‘ನನ್ನೊಡಲ ಮಿಹಿರ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿರುವ ಸಂಗೀತಾ ರವಿರಾಜ್ ಅವರ ಹೊಸ ಗದ್ಯ ಬರಹಗಳ ಸಂಕಲನ ‘ಕಪ್ಪು ಹುಡುಗಿ’. ಪತ್ರಿಕೆ ಗಳಲ್ಲಿ, ಬ್ಲಾಗ್ ಗಳಲ್ಲಿ, ಆಕಾಶವಾಣಿಯಲ್ಲಿ.. ಹೀಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ಪ್ರಕಟಿತವಾದ ತಮ್ಮ ಬರಹಗಳನ್ನು ಒಂದೆಡೆ ದಾಖಲಿಸಿಡುವ ಹುಮ್ಮಸ್ಸು ಅವರದು. ಇದು ಅವರು ಸಾಹಿತ್ಯದ ಬೇರೆ ಬೇರೆ ಆಯಾಮಗಳನ್ನು ಕುತೂಹಲದ ಕಣ್ಣಿನಿಂದ ಪರಿಗಣಿಸುತ್ತಿರುವ ಸೂಚನೆಯೂ ಹೌದು.

ಒಟ್ಟು ೨೪ ಬರಹಗಳಿರುವ ಈ ಸಂಕಲನಕ್ಕೆ ಶ್ರೀಮತಿ ದೇವಿಕಾ ನಾಗೇಶ್ ಅವರು ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಹಿನ್ನುಡಿಯಲ್ಲಿ ಬರೆದಿರುವಂತೆ “‘ಒಂದು ನಿರ್ದಿಷ್ಟ ಕೇಂದ್ರಕ್ಕೆ ನಿಷ್ಠರಾಗುತ್ತಲೇ ಆ ಕೇಂದ್ರದ ಸುತ್ತ ಲಲಿತವಾಗಿ ಹರಡಿಕೊಳ್ಳುವವುದು ಪ್ರಬಂಧದ ಸಹಜ ಗುಣ. ಈ ಅರ್ಥದಲ್ಲಿ ಇದು ಕವಿತೆ ಮತ್ತು ಕತೆಯ ನಡುವೆ ನಿಂತುಕೊಳ್ಳುತ್ತದೆ.” ಈ ನಿಟ್ಟಿನಲ್ಲಿ ಸಂಗೀತರ ಬರಹಗಳು ತಮ್ಮ ಲವಲವಿಕೆಯ ಶೈಲಿಯಿಂದ, ಕಥನ ಶೈಲಿಯ ಆಪ್ತತೆಯಿಂದ ಹೃದ್ಯವಾಗುತ್ತವೆ. ಆಗೊಮ್ಮೆ ಈಗೊಮ್ಮೆ ಅವರ ಕವಿ ಮನಸ್ಸಿನ ಲಹರಿಗಳು ಥಟ್ಟನೆ ಮುದಗೊಳಿಸುತ್ತವೆ. ದೇವಿಕಾ ನಾಗೇಶ್ ಅವರು ಗಮನಿಸಿದಂತೆ ‘ಆತ್ಮಕಥಾನಕದ ಮಾದರಿಯಲ್ಲಿರುವ ಈ ಸಂಕಲನದ ಪ್ರಬಂಧಗಳು ಒಂದೇ ಏಟಿಗೆ ಓದಿಸಿಕೊಂಡು ಹೋಗುವ ಗುಣಹೊಂದಿವೆ.’ ಲೇಖಕಿಯೇ ತನ್ನ ‘ಮೆಲು ದನಿ’ಯಲ್ಲಿ ಹೇಳಿಕೊಂಡಂತೆ, ಕಾಲಕ್ಕೆ ಯಾರೂ ಅತೀತರಲ್ಲ. “ಬಾಲ್ಯ, ಮಳೆಯಲ್ಲಿ ನೆನೆದಾಡಿದ ದಿನಗಳು, ದಾರಿಗುಂಟದ ಕನವರಿಕೆಗಳು, ನನ್ನವೇ ಕಕ್ಕುಲಾತಿಗಳು’ ಹೀಗೆ ಚಿಕ್ಕ ಚಿಕ್ಕ ಅನುಭವಗಳು ಅಂತೆಕಂತೆಗಳ ಸಂತೆಯಲ್ಲಿ ಚೆಲ್ಲಾಡಿದ್ದನ್ನು ಹೆಕ್ಕಿ ಪ್ರಬಂಧಗಳಂತೆ ಬರೆದಿರುವೆ ಅಷ್ಟೇ. ನನ್ನ ಮನಸ್ಸಿನ ಪಿಸುಮಾತುಗಳನ್ನು ನಿಮ್ಮ ಮೌನಕ್ಕೆ ತುಸು ನೀಡುತ್ತಿರುವೆ”.

ಸಂಗೀತಾ ಅವರು ಮೂಲತ: ಕವಯಿತ್ರಿ ಹಾಗೂ ಶಿಕ್ಷಕಿ ಆಗಿರುವುದರಿಂದ ಅವೆರಡರ ದಟ್ಟ ಛಾಯೆ ಈ ಬರಹಗಳುದ್ದಕ್ಕೂ ಇವೆ. ಮೊದಲೇ ಹೇಳಿದಂತೆ ಅವರಿಗೆ ಸಾಹಿತ್ಯದ ಬಗ್ಗೆ, ಜಗತ್ತಿನ ಬಗ್ಗೆ ತನ್ನದೇ ಸ್ಪಷ್ಟ ಕಲ್ಪನೆಗಳಿವೆ. ತಮ್ಮ ‘ಕವಿತೆಯ ಕನವರಿಕೆಗಳು’ ಪ್ರಬಂಧದಲ್ಲಿ ‘ಪಳಗಿದ ಕವಿಗಳಿಗೆ ಕವಿತೆ ಅಂತರಂಗದಲ್ಲಿ ಮೊಳಕೆಯೊಡೆದು ನಂತರ ಹೆಮ್ಮರವಾಗುವ ಪ್ರಕ್ರಿಯೆ ‘ ಎಂದೂ ಹೆಣ್ಣಿನ ಸಾಹಿತ್ಯ ಕೃಷಿಯ ಕುರಿತಾಗಿ ‘ ನಮ್ಮ ಸ್ವಂತಿಕೆಯನ್ನು ಒಂದು ಚುಕ್ಕಿಯನ್ನಷ್ಟಾದರೂ ಮರೆ ಮಾಚುವ ಸಂದರ್ಭ ಪ್ರತಿ ಹೆಣ್ಣಿಗೂ ಮದುವೆಯ ನಂತರ ಬರುತ್ತದೆ ಎಂಬುದು ನನ್ನ ಭಾವನೆ. ಅಂತಹ ಸಮಯದಲ್ಲಿ ನಮ್ಮ ಸಹಾಯಕ್ಕೆ ಬರುವುದು ನಮ್ಮಲ್ಲೇನಾದರೂ ಪ್ರತಿಭೆ ಇದ್ದರೆ ಮಾತ್ರ. ‘ ಎಂಬ ಒಳ ನೋಟಗಳನ್ನೂ ಆಕೆ ಕೊಡುತ್ತಾರೆ.

ಸಂಗೀತಾ ಅವರ ಈ ಸಂಕಲನ ಲಲಿತ ಪ್ರಬಂಧದ ಶೈಲಿಯಲ್ಲಿ ಇದೆಯಾದರೂ ಅವರಲ್ಲಿ ಗಮನ ಸೆಳೆಯುವ ವೈಚಾರಿಕ ಪ್ರಜ್ನೆಯೂ , ಗಹನವಾಗಿ ಚಿಂತಿಸುವ ಮನೋಭಾವವೂ ಇದೆ. ಉದಾಹರಣೆಗೆ ತಮ್ಮ ಕೃಷ್ಣ ಸುಂದರಿಯ ಕಥನ’ದಲ್ಲಿ ಕಪ್ಪು ಬಣ್ಣದ ಯುವತಿಯರು ‘ಅನುಭವಿಸುವ ಸಮಸ್ಯೆಗಳನ್ನು ತಿಳಿಯಾದ ಸ್ತ್ರೀ ವಾದದ ಛಾಯೆಯಲ್ಲಿ ಆಕೆ ನಿರೂಪಿಸುತ್ತಾರೆ. ‘ಬರಹಗಾರರ ಬವಣೆಗಳೆಂಬ ಸುಖಗಳು’, ‘ಸಾಹಿತ್ಯ ಸಮ್ಮೇಳನಗಳು ಏಕೆ ಬೇಕು? ಪ್ರಬಂಧಗಳಲ್ಲಿ ಯುವ ಬರಹಗಾರರ, ಪ್ರಸ್ತುತ ಸಾಹಿತ್ಯದ ರಾಜಕೀಯದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಹಾಗಿದ್ದರೂ ಈ ರೀತಿಯ ಬರಹಗಳು ಇನ್ನಷ್ಟು ಮಾಗಬೇಕಾದ, ಆಳವಾಗಿ ಬೇರೆ ಬೇರೆ ಆಯಾಮಗಳಲ್ಲಿ ಚಿಂತಿಸಬೇಕಾದ ಅಗತ್ಯ ಇದೆ.

ಸಂಗೀತರಲ್ಲಿನ ಕವಯಿತ್ರಿ ತುಂಬ ಸೊಬಗಿನಿಂದ, ಒನಪಿನಿಂದ ಅವರ ಬರಹಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಉದಾಹರಣೆಗೆ, ಸೀರೆಯ ಬಗ್ಗೆ ನವಿರಾಗಿ ಬರೆದ ‘ಸೀರೆ ಮತ್ತು ನೀರೆ’ ಬರಹದ ಈ ಸಾಲುಗಳನ್ನು ನೋಡಿ: ‘ಸೀರೆಗಳ ಮೇಲಿನ ಹೆಚ್ಚಿನ ಚಿತ್ರಗಳು ಎಲೆ, ಹೂವು, ಬಳ್ಳಿ ಹೀಗೆ ಪ್ರಕೃತಿ ವಿರಚಿತಗಳಿಂದ ತುಂಬಿರುತ್ತವೆ. ಮುತ್ತು, ರತ್ನ, ಪಚ್ಚೆ, ಹವಳ ಇವುಗಳನ್ನು ಪೋಣಿಸಿದಂತೆ ಶಬ್ದಗಳನ್ನೇನಾದರೂ ಪೋಣಿಸಹೊರಟರೆ ನಮಗೆ ಮೊದಲಾಗಿ ದಕ್ಕುವ ಶಬ್ದಗಳೆ ಹೆಣ್ಣು, ಸೀರೆ, ಹೂವು, ಬಳ್ಳಿ. . ಹೀಗೆ.!

ಇನ್ನು ತಾಯಿಯಾಗಿ, ಗೃಹಿಣಿಯಾಗಿ, ಗೆಳತಿಯಾಗಿ ಹೆಣ್ಣಿನ ಭಾವ ಜಗತ್ತು ಅವರ ‘ಮಿಸ್ ಎಂಬ ಎರಡನೆಯ ಅಮ್ಮ’, ‘ಮನೆವಾಳ್ತೆಯ ಮಹಿಮೆ’, ಅಪ್ಪ ಎಂಬ ಮಮಕಾರದ ಸಂಪತ್ತು’ ಬರಹಗಳಲ್ಲಿ ನವಿರಾಗಿ ಮೂಡಿ ಬಂದಿವೆ. ಸಂಗೀತರ ಬರಹಗಳ ವಿಶಿಷ್ಟತೆ ಅವುಗಳಲ್ಲಿನ ನಾಜೂಕುತನ ಹಾಗೂ ಭಾವುಕತೆಯನ್ನು ಹದಗೊಳಿಸುವ ಕಾಮನ್ ಸೆನ್ಸ್. ಉದಾಹರಣೆಗೆ ‘ಸುರಗಿ ಹೂವಿನ ನೆನಪು ಸೊರಗುವುದಿಲ್ಲ’ ಪ್ರಬಂಧದ ಈ ವಾಕ್ಯಗಳನ್ನುಗಮನಿಸಿ: ‘ಅತೀ ಸುಂದರ ಪುಷ್ಪ ಸುರಗಿ ಶುಭ್ರ ಬಿಳಿಯ ಬಣ್ಣದಲ್ಲಿದ್ದು , ನಡುವಿನಲ್ಲಿ ತಿಳಿ ಹಳದಿಯೊಂದಿಗೆ ಕೇಸರವಿರುತ್ತದೆ. ಸೂರ್ಯ ಉದಯಿಸುವ ಮುನ್ನವೆ ಮರ ಹತ್ತಿ ಈ ಪುಷ್ಪವನ್ನು ಕುಯ್ಯಬೆಕು. ತಡವಾದರೆ ಅರಳಿಬಿಡುತ್ತವೆ. ಆಗ ಅವನ್ನು ಪೋಣಿಸಲು ಕಷ್ಟ. ಮೊಗ್ಗಿರುವಾಗಲೆ ಕೊಯ್ದು ಅದರ ಉದ್ದವಾದ ತೊಟ್ಟನ್ನು ಹಿಂಬದಿ ಸ್ವಲ್ಪವೆ ತುಂಡು ಮಾಡಿ, ಹೂವಿನ ಪುಷ್ಪ ಪಾತ್ರೆಯನ್ನು ಹಿಂಬದಿಗೆ ಬಗ್ಗಿಸಿ ಅದನ್ನು ಸೇರಿಸಿ ಸೂಜಿ ದಾರದಲ್ಲಿ ಪೋಣಿಸಬೆಕು. ಇದರ ಪರಿಮಳ ವರ್ಣಿಸಲಸದಳ. ಭಾಷೆಯ ಸೌಂದರ್ಯ, ಅಪ್ಪಟ ದೇಸಿತನ ಬೆರೆತ ಶೈಲಿ ಇದು. ಇದೇ ರೀತಿಯ ಕನವರಿಕೆಗಳು ಅವರ ‘ಸುರಿದರೂ ಮಳೆ, ಕರಗಿದ್ದು ಒಡಲು’ ಬರಹದಲ್ಲಿಯೂ ಇದೆ.

ಹೆಣ್ಣು ತನ್ನ ಅಸ್ಮಿತೆಯನು ಕಂಡುಕೊಳ್ಳಲೇ ಬೇಕಾದ ಈ ಕಾಲ ಘಟ್ಟದಲ್ಲಿ, ತನ್ನತನದ ಹುಡುಕಾಟದಲ್ಲಿ ಆತ್ಮಸ್ಥೈರ್ಯವನ್ನು ಉಳಿಸಿಕೊಂಡು ಬೆಳೆಯಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತ್ಯ ಎನ್ನುವುದು ಒಂದು ತಲೆಮಾರಿನ ಆಶೋತ್ತರದ, ಕನಸು,ಕನವರಿಕೆ ನಿರೀಕ್ಷೆಗಳ ಪ್ರತೀಕವೂ ಹೌದು. ಸಂಪಾಜೆಯಂತಹ ಹಳ್ಳಿಗಾಡಿನಲ್ಲಿದ್ದುಕೊಂಡು ಸಂಗೀತಾ ಅವರು ತನ್ನ ಸಾಹಿತ್ಯ ಕೃಷಿಯನ್ನು ಒಲುಮೆಯಿಂದ, ನಲುಮೆಯಿಂದ ಮುಂದುವರಿಸಿದ್ದಾರೆ. ಅವರದೇ ಪ್ರಬಂಧವೊಂದರಲ್ಲಿ ಇರುವಂತೆ ‘ದಕ್ಕದ್ದನ್ನು ಕಲ್ಪಿಸಿಕೊಳ್ಳುವುದಕ್ಕಿಂತ ದಕ್ಕುವುದನ್ನು ಹುಡುಕಿ ನಾಲ್ಕು ದಿನದ ಜೀವನವನ್ನು ಸಂತೋಷದಿಂದ ಕಳೆಯುವುದೇ ಜೀವನ’. ಈ ಆತ್ಮವಿಶ್ವಾಸ, ಲವಲವಿಕೆ ಅವರ ಬಾಳಿಗೆ ದೀವಿಗೆಯಾಗಲಿ, ಅವರಿಗೆ ಶುಭ ಹಾರೈಕೆ.

 

 – ಜಯಶ್ರೀ ಬಿ ಕದ್ರಿ

2 Responses

  1. SMITHA says:

    Abhinandanegalu sangeetha. Olleya pusthaka parichaya madikortiruviri jayashree madam.

Leave a Reply to Jayashree b kadri Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: