ಹೀಗೊಂದು ಸಿಸೇರಿಯನ್ ಕೇಸ್

Share Button

Divakara Dongre

ಜನಪ್ರಿಯ ರಾಜಕಾರಣಿ, ನಗರಾಭಿವೃದ್ಧಿ ಸಚಿವ ನುಂಗಣ್ಣನವರ ಆರೋಗ್ಯ ಇತ್ತೀಚೆಗೆ ಯಾಕೋ ಕೈಕೊಡುತ್ತಿದೆ. ಅವರು ಅನ್ಯ ಮನಸ್ಕರಾಗುತ್ತಿದ್ದಾರೆ. ಯಾವುದರಲ್ಲೂ ಆಸಕ್ತಿಯಿಲ್ಲ. ಹೆಚ್ಚೇಕೆ ಅವರ ಆಸಕ್ತಿಯ ಕ್ಷೇತ್ರವಾದ ರಾಜಕಾರಣದಲ್ಲೂ ಕೂಡ! ಯಾರಲ್ಲೂ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ಅವರದಾಗಿತ್ತು. ಸಣ್ಣದಾಗಿ ಪ್ರಾರಂಭವಾದ ಹೊಟ್ಟೆನೋವು ಅವರ ಚಿಂತೆಗೆ ಕಾರಣವಾಗಿತ್ತು. ಹೊಟ್ಟೆನೋವಿನ ಜತೆ ಹೊಟ್ಟೆಯೊಳಗಿರುವುದನ್ನೆಲ್ಲ ವಾಂತಿ ಮಾಡಿಕೊಳ್ಳಬೇಕೆಂಬ ಬಯಕೆ. ಹೊಟ್ಟೆಯನ್ನು ಹಗುರ ಮಾಡಿಕೊಂಡರೂ ಮರು ಕ್ಷಣದಲ್ಲಿ ಮತ್ತಿನ್ನೇನಾದರು ತಿನ್ನಬೇಕೆಂಬ ಬಯಕೆ! ನುಂಗಣ್ಣನವರು ನಿಂತುಕೊಂಡರೆ ಅವರ ಪಾದಗಳು ಕಾಣಲಾಗದಷ್ಟು ಗಾತ್ರದಲ್ಲಿ ಅವರ ಹೊಟ್ಟೆ ಬೆಳೆಯಿತು. ಅನಿವಾರ್ಯವೋ ಎಂಬಂತೆ ದಿನಕ್ಕೆ ಒಂದೆರಡು ಗಂಟೆ ಕಚೇರಿಯಲ್ಲಿ ಕಳೆಯುತ್ತಿದ್ದರು.

ಸಾರ್ವಜನಿಕ ಸಮಾರಂಭಗಳಲ್ಲಿ ನಗರಾಭಿವೃದ್ಧಿ ಸಚಿವ ನುಂಗಣ್ಣನವರು ಕಾಣುವುದು ಅಪರೂಪವಾಯಿತು. ನಗರಾಭಿವೃದ್ಧಿ ಯೋಜನೆಗಳೆಲ್ಲ ನೆನೆಗುದಿಗೆ ಬಿದ್ದವು. ನುಂಗಣ್ಣನವರು ಸದನದ ಕಲಾಪದಲ್ಲಿ ಭಾಗವಹಿಸಿದರೂ ತೂಕಡಿಸತೊಡಗಿದರು. ಅವರದೇನೂ ತಪ್ಪಿಲ್ಲ ಬಿಡಿ. ಅದು ಅವರು ಹೊಟ್ಟೆನೋವಿಗೆ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳ ಪ್ರಭಾವವಾಗಿತ್ತು. ಇಂತಹುದಕ್ಕೆಲ್ಲ ಕಾದು ಕಾಳಿತಿದ್ದ ವಿರೋಧ ಪಕ್ಷದವರು ಮತ್ತು ಸುದ್ದಿ ಮಾಧ್ಯಮಗಳು ನುಂಗಣ್ಣನವರ ಮೇಲೆ ಮುಗಿಬಿದ್ದವು. ಅವರು ಸದನದಲ್ಲಿ ಗೊರಕೆ ಹೊಡೆಯುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿದವು. ಪತ್ರಿಕೆಯೊಂದು ಮುಂದುವರಿದು ನುಂಗಣ್ಣನವರ ಡೆಲಿವರಿ ಡೇಟ್ ಯಾವಾಗ ಎಂದು ಗೇಲಿ ಮಾಡಿತು! ಮುಖ್ಯಮಂತ್ರಿಯವರೇ ಖುದ್ದಾಗಿ ನುಂಗಣ್ಣನವರನ್ನು ಕರೆಸಿ ನಿಮ್ಮ ಈ ಗೊರಕೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳದಿದ್ದಲ್ಲಿ ಮಂತ್ರಿಮಂಡಲದಿಂದಲೇ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನುಂಗಣ್ಣನವರ ಮಡದಿ ಧನಲಕ್ಷ್ಮಮ್ಮನವರಿಗೆ ಚಿಂತೆ ಹಚ್ಚಿಕೊಂಡಿತು. ಗಂಡನ ವಯಸ್ಸು ಇನ್ನೂ ಅರವತ್ತೂ ದಾಟಿಲ್ಲ. ಇನ್ನೂ ಒಂದಿಪ್ಪತ್ತು ವರ್ಷ ರಾಜಕೀಯದಲ್ಲಿ ದುಡಿಯಬಹುದು! ಇಬ್ಬರೂ ಗಂಡು ಮಕ್ಕಳೀಗಾಗಲೇ ರಾಜಕೀಯದಲ್ಲಿ ತಮ್ಮ ಬ್ಯಾಟಿಂಗ್ ಶುರು ಹಚ್ಚಿಕೊಂಡಿದ್ದಾರೆ! ರಾಜಕೀಯವೆಂದರೇ ಹಾಗೆಯೇ, ಯಾರು ಯಾವಾಗ ಯಾವ ಹೊಂಡಕ್ಕೆ ಬೀಳುತ್ತಾರೆ ಎಂದು ಹೇಳಲಾಗುವುದಿಲ್ಲ. ಪಕ್ಷದಲ್ಲಿ ಇಂತಹ ಸಂದರ್ಭಕ್ಕಾಗಿ ಕಾಯುವ ಧೂರ್ತರಿರುತ್ತಾರೆ. ಈ ಸಮಯದಲ್ಲಿ ತನ್ನ ಗಂಡನ ಮಂತ್ರಿ ಪದವಿಯೇನಾದರೂ ಕೈ ತಪ್ಪಿದರೆ ತಮ್ಮ ಸ್ಥಾನ-ಮಾನ, ಕಾರು-ಬಾರು, ಸಂಪತ್ತು, ವೈಭವ, ಮಕ್ಕಳ ರಾಜಕೀಯ ಬದುಕೆಲ್ಲ ದುಸ್ತರವಾದೀತು. ಆಕೆ ಜಾಣೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಆಕೆಗೆ ಗೊತ್ತು.

ಆಕೆ ನಗರದ ಖ್ಯಾತ ವೈದ್ಯ ಡಾ|| ಅಗರ್‌ವಾಲ್‌ರನ್ನು ತನ್ನ ಮನೆಗೆ ಕರೆಸಿಕೊಂಡಳು. ಡಾ|| ಅಗರ್‌ವಾಲ್ ರಾಜಕಾರಣಿಗಳ ವೈದ್ಯರೆಂದೇ ಖ್ಯಾತರು. ರಾಜಕಾರಣಿಗಳಿಗೆ ಬರುವ, ಬರಿಸಬಹುದಾದ ರೋಗಗಳ ಬಗೆಗೆ ಅವರಿಗೆ ಅಪಾರ ಜ್ಞಾನವಿತ್ತು. ರಾಜಕಾರಣಿಗಳಿಗೆ ಹೊಸ ರೋಗವೊಂದನ್ನು ಪತ್ತೆ ಹಚ್ಚಿ ಅವರ ಚಿಕಿತ್ಸೆಗಾಗಿ ಅವರೊಡನೆ ವಿದೇಶಕ್ಕೆ ತೆರಳುವುದರಲ್ಲಿ ಅವರು ನಿಷ್ಣಾತರು. ಅವರು ಸಚಿವ ನುಂಗಣ್ಣನವರ ಮನೆಗೆ ಖುದ್ದು ಭೇಟಿ ನೀಡಿದರು. ಈ ಭೇಟಿಯ ಯಾವುದೇ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಯದಂತೆ ರಹಸ್ಯವಾಗಿಡಲಾಗಿತ್ತು. ನುಂಗಣ್ಣವರ ಮಲ, ಮೂತ್ರಾದಿ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಿದ ಡಾ|| ಅಗರ್‌ವಾಲ್ ಚಿಂತಾಕ್ರಾಂತರಾದರು. ಯಾವುದಕ್ಕೂ ಹೆಚ್ಚಿನ ವಿಶೇಷ ತಪಾಸಣೆ ಅಗತ್ಯವಿದ್ದು ತಮ್ಮ ಆಸ್ಪತ್ರೆಯ ತುರ್ತು ಚಿಕಿತ್ಸಾಘಟಕಕ್ಕೆ ನುಂಗಣ್ಣನವರನ್ನು ಸೇರಿಸುವಂತೆ ಸಲಹೆ ಮಾಡಿದರು.

nunganna

ಡಾ|| ಅಗರ್‌ವಾಲ್ ತಮ್ಮ ಆಸ್ಪತ್ರೆಯ ವಿವಿಧ ರೋಗ ತಜ್ಞರನ್ನು ಕರೆಸಿದರು. ಸಚಿವ ನುಂಗಣ್ಣನವರ ರೋಗಬಾಧೆಯ ಕುರಿತು ಅವರೊಡನೆ ಚರ್ಚಿಸಿದರು. ಖ್ಯಾತ ಪ್ರಸೂತಿ ತಜ್ಞೆ ಡಾ|| ಪ್ರಸೂತಿಕಾ ಕೂಡ ಆ ತಂಡದಲ್ಲಿದ್ದರು. ಉಳಿದ ವೈದ್ಯರು ನೀಡಿದ ಮಾಹಿತಿ ಮತ್ತು ಸಲಹೆಗಳಿಗಿಂತ ಡಾ|| ಪ್ರಸೂತಿಕಾರವರು ನೀಡಿದ ಸಲಹೆ ಭಿನ್ನವಾಗಿತ್ತು. ಅವರ ಅಭಿಪ್ರಾಯದಂತೆ ಸಚಿವ ನುಂಗಣ್ಣನವರಿಗಿರುವ ಸಮಸ್ಯೆಯ ಎಲ್ಲ ಲಕ್ಷಣಗಳು ಒಬ್ಬ ಗರ್ಭಿಣಿಗಿರುವ ಸಮಸ್ಯೆಯಂತಿವೆ. ‘ಐ ಥಿಂಕ್ ಹಿ ಈಸ್ ಕೇರಿಯಿಂಗ್…’ ಎಂದು ನುಡಿದಾಗ ಉಳಿದ ಎಲ್ಲ ವೈದ್ಯರು ಮತ್ತು ಸ್ವತಃ ಡಾ|| ಅಗರ್‌ವಾಲ್ ಅವಾಕ್ಕಾದರು. ಲಕ್ಷಕ್ಕೊಂದು ಇಂತಹ ವಿಸ್ಮಯಗಳು ನಡೆಯುವುದುಂಟು. ಯಾವುದಕ್ಕೂ ಸ್ಕ್ಯಾನಿಂಗ್ ಮಾಡಿಸಿದಲ್ಲಿ ಈ ಸಮಸ್ಯೆಗೆ ನಿಖರವಾದ ಪರಿಹಾರವನ್ನು ಕಂಡುಹುಡುಕಬಹುದೆಂದು ಡಾ|| ಪ್ರಸೂತಿಕಾ ತಿಳಿಸಿದರು.

ಮುಂದಿನ ಕ್ಷಣದಲ್ಲೇ ಸಚಿವ ನುಂಗಣ್ಣನವರ ಸ್ಕ್ಯಾನಿಂಗ್ ಮಾಡಲಾಯಿತು. ರಿಪೋರ್‍ಟ್ ಕಂಡ ಡಾ|| ಅಗರ್‌ವಾಲ್ ಸ್ವತಃ ಬೆಚ್ಚಿಬಿದ್ದರು. ಡಾ|| ಪ್ರಸೂತಿಕಾ ಊಹೆ ನಿಜವಾಗಿತ್ತು. ತಮ್ಮ ವೈದ್ಯಕೀಯ ವೃತ್ತಿಯಲ್ಲೇ ಇದೊಂದು ಹೊಸ ಅನುಭವ ಅವರಿಗೆ. ಸಚಿವ ನುಂಗಣ್ಣನವರ ಹೊಟ್ಟೆಯಲ್ಲಿ ಭ್ರೂಣವೊಂದು ಬೆಳೆಯುತ್ತಿದೆ. ಅಚ್ಚರಿಯೆಂದರೆ ಆ ಭ್ರೂಣಕ್ಕೆ ಶಿಶುವನ್ನು ಹೊಂದುವ ಯಾವ ಲಕ್ಷಣಗಳೂ ಇಲ್ಲ. ಅದು ಬರಿಯ ಮಾಂಸದ ಮುದ್ದೆಯಂತಿದೆ. ಇನ್ನು ಸಮಯವಿಲ್ಲ. ಇನ್ನೂ ಒಂದೆರಡು ಗಂಟೆ ತಡವಾದರೂ ಸಚಿವ ನುಂಗಣ್ಣನವರ ಹೊಟ್ಟೆ ಸಿಡಿದು ಅನಾಹುತಗಳಾಗುವ ಸಾಧ್ಯತೆಯಿದೆ. ಪ್ರಾಣಕ್ಕೆ ಅಪಾಯವಿದೆ! ಮುಂದಿನ ಕ್ಷಣಗಳಲ್ಲಿ ಸಚಿವ ನುಂಗಣ್ಣನವರ ಆಪರೇಷನ್‌ಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಲಾಯಿತು. ಪತ್ರಿಕಾ ವರದಿಗಾರರು, ಮಾಧ್ಯಮದವರನ್ನು ಯಾರನ್ನೂ ಆಸ್ಪತ್ರೆಯ ಒಳಗೆ ಬಿಡದಂತೆ ಬಂದೋಬಸ್ತು ಮಾಡಲಾಯಿತು. ಆಸ್ಪತ್ರೆಯ ಮುಂದೆ ಸಚಿವ ನುಂಗಣ್ಣನವರ ಬಂಧುವರ್ಗ, ಅನುಯಾಯಿಗಳು, ಚೇಲಾಗಳು, ಮರಿ ರಾಜಕಾರಣಿಗಳು ಮತ್ತು ನಗರದ (ಕು)ಖ್ಯಾತ ಸಿವಿಲ್ ಗುತ್ತಿಗೆದಾರರು ಹೀಗೆ ಜನ ಸಾಗರವೇ ಸೇರಿತ್ತು! ಒಳಗೆ ಸಚಿವ ನುಂಗಣ್ಣನವರ ಧರ್ಮಪತ್ನಿ ತಮ್ಮ ಕುಲದೇವತೆ ನುಂಗೇಶ್ವರಿಯನ್ನು ತಮ್ಮ ಪತಿಯ ಪ್ರಾಣವುಳಿಸುವಂತೆ ಸ್ಮರಿಸುತ್ತಿದ್ದರು.

ಎರಡು ಗಂಟೆಗಳ ಸುದೀರ್ಘ ಆಪರೇಷನ್ ಮೂಲಕ ಡಾ|| ಅಗರ್‌ವಾಲ್ ತಂಡ ಸಚಿವ ನುಂಗಣ್ಣನವರ ಹೊಟ್ಟೆಯಲ್ಲಿದ್ದ ಪಿಂಡವನ್ನು ಹೊರತೆಗೆಯಿತು. ಆಪರೇಷನ್ ಮುಗಿಸಿ ಬಂದ ಡಾ|| ಅಗರ್‌ವಾಲ್ ಸಚಿವ ನುಂಗಣ್ಣನವರ ಧರ್ಮಪತ್ನಿ ಧನಲಕ್ಷ್ಮಮ್ಮನವರಿಗೆ ‘ಹಿ ಈಸ್ ಔಟ್ ಆಫ್ ಡೇಂಜರ್’॒ ಎಂದು ತಿಳಿಸಿದರು. ಇಲ್ಲಿ ಲೇಬರ್ ವಾರ್ಡಿನಲ್ಲಿದ್ದ ನರ್‍ಸ್ ತಮ್ಮ ಎಂದಿನ ಅಭ್ಯಾಸದಂತೆ ಸಚಿವ ನುಂಗಣ್ಣನವರ ಹೊಟ್ಟೆಯಿಂದ ತೆಗೆದ ಪಿಂಡವನ್ನು ತಲೆಕೆಳಗಾಗಿಸಿ ಪಿಂಡದ ಮೇಲೆ ತಟ್ಟಿದರು. ಏನಾಶ್ಚರ್ಯ..! ಮಗು ಅಳಲಿಲ್ಲ. ತಟ್ಟಿದ ರಭಸಕ್ಕೆ ಹಲವಾರು ಪತ್ರರೂಪದ ದಾಖಲೆಗಳು ಆ ಪಿಂಡದಿಂದ ಕೆಳಗೆ ಉದುರಿದವು. ಅವೆಲ್ಲ ಸಚಿವ ನುಂಗಣ್ಣನವರು ನಗರಾಭಿವೃದ್ಧಿ ಯೋಜನೆಗಾಗಿ ಪಡೆದ ಕಿಕ್‌ಬ್ಯಾಕ್ ವಿವರಗಳು, ಖೋಟಾ ಬಿಲ್ಲುಗಳು, ಬೇನಾಮಿ ಹೆಸರಲ್ಲಿ ಮಾಡಿದ ನಿವೇಶನಗಳು, ತಮ್ಮ ಬಂಧು ವರ್ಗದ ಹೆಸರಲ್ಲಿ ಮಾಡಿಕೊಂಡ ಬ್ಯಾಂಕ್ ಖಾತೆಗಳ ಪಾಸ್‌ಬುಕ್‌ಗಳು. ಇಷ್ಟೆಲ್ಲವನ್ನು ತಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡು, ಹೊಟ್ಟೆ ಉಬ್ಬರಿಸಿದರೂ ನಗುನಗುತಲಿದ್ದ ಸಚಿವ ನುಂಗಣ್ಣನವರನ್ನು ಕಂಡ ಡಾ||ಅಗರ್‌ವಾಲ್ ಅಚ್ಚರಿಪಟ್ಟರು. ತಮ್ಮ ಪತಿಯ ಪ್ರಾಣ ಉಳಿಸಿದರೆಂದು ಸಚಿವರ ಪತ್ನಿ ಧನಲಕ್ಷ್ಮಿಯವರು ಡಾ|| ಅಗರ್‌ವಾಲ್ ಅವರಿಗೆ ಸೂಟ್ ಕೇಸೋಂದನ್ನು ನೀಡಿದರು.

ನಂತರ ಡಾ|| ಅಗರ್‌ವಾಲ್ ಪತ್ರಿಕಾ ಗೋಷ್ಠಿಯೊಂದನ್ನು ಕರೆದು ನುಂಗಣ್ಣನವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಉದರದಲ್ಲಿ ದುರ್ಮಾಂಸವೊಂದು ಬೆಳೆದುದೇ ಅವರ ಈ ಸಮಸ್ಯೆಗೆ ಕಾರಣವಾಯಿತು. ಸಾಮಾನ್ಯವಾಗಿ ಈ ಸಮಸ್ಯೆ ಅತಿ ಹೆಚ್ಚು ಭಾಷಣಗಳನ್ನು ಮಾಡುವುದು, ಪ್ರವಾಸಗಳಲ್ಲಿರುವುದು, ಆಶ್ವಾಸನೆಗಳನ್ನು ನೀಡುವುದು, ಟೆಂಡರ್‌ಗಳನ್ನು ಕರೆದು ಫೈನಲ್ ಮಾಡುವ ಸಂದರ್ಭಗಳಲ್ಲಿ ಸಚಿವರಾದವರನ್ನು ಕಾಡುತ್ತದೆ. ಅಲ್ಲದೆ ಸರಕಾರಿ ಉದ್ಯೋಗಿಗಳ ವರ್ಗಾವಣೆ, ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸುವುದು, ನಿಗಮಗಳ ಅಧ್ಯಕ್ಷರ ನೇಮಕಾತಿ, ಚುನಾವಣಾ ಸಮಯದಲ್ಲಿ ಸೀಟುಗಳ ಹಂಚಿಕೆ ಮೊದಲಾದ ರಾಷ್ಟ್ರಹಿತ ಕಾರ್ಯಗಳನ್ನು ಮಾಡುವಾಗ ವಿಶ್ರಾಂತಿಯನ್ನು ಪಡೆಯದೆ ಕೆಲಸ ಮಾಡುವ ಮಂತ್ರಿ ಮಹೋದಯರಲ್ಲಿ ಬರುವುದುಂಟು ಎಂದು ಮಾಧ್ಯಮದವರಿಗೆ ವಿವರಿಸಿದರು. ತಮ್ಮ ಆರೋಗ್ಯದ ದೃಷ್ಟಿಯಿಂದ ಮುಂಬರುವ ಚುನಾವಣೆಗಳಲ್ಲಿ ಸಚಿವ ನುಂಗಣ್ಣನವರು ಸ್ಪರ್ಧಿಸಲಾಗದು ಎಂಬುದನ್ನು ಡಾ|| ಅಗರ್‌ವಾಲ್ ಅವರ ಬಾಯಿಯಿಂದ ಹೇಳಿಸುವಲ್ಲಿ ಸಚಿವ ನುಂಗಣ್ಣನವರ ಪುತ್ರ ನಗರಸಭಾಧ್ಯಕ್ಷ ಶ್ರೀಮಾನ್ ಲೋಕಪ್ರಿಯ ಅವರು ತಮ್ಮ ಜಾಣತನವನ್ನು ಮೆರೆದರು.
ಮಂತ್ರಿ ನುಂಗಣ್ಣನವರು ವೈದ್ಯರ ಸಲಹೆಯಂತೆ ಚುನಾವಣೆಗೆ ಸ್ಪರ್ಧಿಸಲಿಲ್ಲ. ಸಾರ್ವಜನಿಕರ ಪ್ರಬಲ ವಿರೋಧದ ನಡುವೆಯೂ ಅವರ ಪುತ್ರ ಲೋಕಪ್ರಿಯ ಚುನಾವಣೆಯಲ್ಲಿ ಗೆದ್ದು ನಗರಾಭಿವೃದ್ಧಿ ಖಾತೆಯನ್ನು ಹೊಂದಿದ್ದಾರೆ. ತಮ್ಮ ತಂದೆ ನುಂಗಣ್ಣನವರಿಂದ ಸೂಕ್ತ ಮಾರ್ಗದರ್ಶನ ಪಡೆಯುತ್ತಿದ್ದಾರೆ!

 

 – ದಿವಾಕರ ಡೋಂಗ್ರೆ ಎಂ.

 

3 Responses

  1. Shankari Sharma says:

    ಒಳ್ಳೇ ವಿಡಂಬನಾತ್ಮಕ ಕಥೆ…ಚೆನ್ನಾಗಿದೆ…

  2. shantala says:

    ದಿಸ್ ಇಸ್ ಸಿಮಿಲರ್ ಟು ಸಂಗಕ್ಕನ ಮುದ್ದಿನ ಸೊಸೆ ಬಸುರಿ ಆದದ್ದು

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: