ನಿಮ್ಮ ಬ್ಯಾಂಕ್ ಖಾತೆಯನ್ನು ಮರೆತಿದ್ದೀರಾ?

Spread the love
Share Button

 

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ದೇಶದ ನಾನಾ ಬ್ಯಾಂಕ್‌ಗಳಲ್ಲಿ ಖಾತೆದಾರರು ಹತ್ತಾರು ವರ್ಷಗಳಿಂದ ಹಿಂತೆಗೆದುಕೊಳ್ಳದೆ ಮರೆತುಹೋಗಿರುವ, ವಾರಸುದಾರರಿಲ್ಲದ ಹಣ ೩,೬೦೦ ಕೋಟಿ ರೂ.ಗೂ ಹೆಚ್ಚು. ಹಾಗಾದರೆ ಯಾಕೆ ಹೀಗಾಗುತ್ತದೆ? ಇಲ್ಲಿದೆ ವಿವರ:

ಬ್ಯಾಂಕ್ ಉಳಿತಾಯ ಖಾತೆ ಯಾವಾಗ ನಿಷ್ಕ್ರಿಯವಾಗುತ್ತದೆ?

ನೀವು ಖಾತೆಯಿಂದ ಎಟಿ‌ಎಂ, ಬ್ಯಾಂಕ್ ಶಾಖೆ ಅಥವಾ ಆನ್‌ಲೈನ್ ಮೂಲಕ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ವರ್ಗಾವಣೆ ನಡೆಸದಿದ್ದರೆ ಖಾತೆಯನ್ನು ಸಕ್ರಿಯವಲ್ಲದ ಖಾತೆ ಎಂಬುದಾಗಿ ಪರಿಗಣಿಸುತ್ತಾರೆ. ಎರಡು ವರ್ಷವಾದರೆ ಸಂಪೂರ್ಣ ನಿಷ್ಕ್ರಿಯ ಖಾತೆ ಎಂದು ವರ್ಗೀಕರಿಸಲಾಗುತ್ತದೆ. 10 ವರ್ಷಗಳ ನಂತರ ಅನ್‌ಕ್ಲೈಮ್ಡ್ ಡೆಪಾಸಿಟ್ ಎಂದು ಮರು ವರ್ಗೀಕರಣ ಮಾಡುತ್ತಾರೆ. ಖಾತೆ ನಿಷ್ಕ್ರಿಯವಾದ ನಂತರ ಅದಕ್ಕೆ ಸಂಬಂಸಿ ಎಟಿ‌ಎಂ, ಫೋನ್ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ಮಾಡಲಾಗುವುದಿಲ್ಲ. ಗ್ರಾಹಕ ಬ್ಯಾಂಕ್ ಶಾಖೆಗೆ ತೆರಳಿ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.

ಬ್ಯಾಂಕ್ ದಂಡ ವಿಸುತ್ತದೆಯೇ?
ಇಲ್ಲ. ಆದರೆ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ದಂಡ ವಿಸುವುದರಿಂದ ಹೆಚ್ಚುತ್ತಾ ಹೋಗಬಹುದು. ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕೂಡ ಮುಂಬರುವ ದಿನಗಳಲ್ಲಿ ದಂಡ ವಿಧಿಸುವ ಸಾಧ್ಯತೆ ಇದೆ. ಒಂದು ವೇಳೆ ಐದಾರು ವರ್ಷಗಳ ಕಾಲ ಕನಿಷ್ಠ ಬ್ಯಾಲೆನ್ಸ್‌ಗಿಂತ ಹೆಚ್ಚು ದುಡ್ಡು ಇದ್ದರೆ, ಖಾತೆ ನಿಷ್ಕ್ರಿಯವಾಗಿದ್ದರೂ ದಂಡ ಇರುವುದಿಲ್ಲ. ಉಳಿತಾಯ ಖಾತೆಗೆ ಇರುವ ಬಡ್ಡಿ ದರ ಸೇರುತ್ತಾ ಹೋಗುತ್ತದೆ. ಆದರೆ ಬಳಕೆದಾರನಿಗೆ ದುಡ್ಡು ಹಿಂತೆಗೆದುಕೊಳ್ಳಬೇಕಾದರೆ ಬ್ಯಾಂಕಿಗೆ ತೆರಳಿ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಇದ್ದರೂ ದಂಡ ವಿಧಿಸಿದ್ದರೆ ಬ್ಯಾಂಕ್ ವಿರುದ್ಧ ಒಂಬುಡ್ಸ್‌ಮನ್ ವ್ಯವಸ್ಥೆಯಲ್ಲಿ ದೂರು ದಾಖಲಿಸಿಕೊಳ್ಳಿ.

ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?
ಒಂದು ವರ್ಷದ ಆಗುತ್ತಿದ್ದಂತೆ ಖಾತೆ ನಿಷ್ಕ್ರಿಯವಾಗಿದ್ದರೆ ಬ್ಯಾಂಕ್ ಶಾಖೆಗೆ ತೆರಳಿ ನಿಮ್ಮ ಚೆಕ್ ಬಳಸಿ ಹಣ ಹಿಂತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಇ-ಬ್ಯಾಂಕಿಂಗ್ ಮೂಲಕ ಖಾತೆಯನ್ನು ಸಕ್ರಿಯಗೊಳಿಸಲು ಮನವಿ ಸಲ್ಲಿಸಬಹುದು. ಒಂದು ವರ್ಷಕ್ಕಿಂತ ಹೆಚ್ಚು ಅವಯಾಗಿದ್ದರೆ ಬ್ಯಾಂಕಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆವೈಸಿ ಪ್ರಕ್ರಿಯೆ ಮತ್ತೊಮ್ಮೆ ಪೂರ್ಣಗೊಳಿಸಬೇಕಾಗಬಹುದು.

ನಿಷ್ಕ್ರಿಯವಾಗದಂತೆ ತಡೆಯುವುದು ಹೇಗೆ?
ಕನಿಷ್ಠ ೬ ತಿಂಗಳೊಗೊಮ್ಮೆಯಾದರೂ ವರ್ಗಾವಣೆ ಮಾಡಿಕೊಳ್ಳಿ. ನಿಮ್ಮ ಅಂಚೆ ವಿಳಾಸ ಬದಲಾಗಿದ್ದು, ಖಾತೆಯನ್ನು ಬಳಸುತ್ತಿದ್ದರೆ ಬ್ಯಾಂಕಿಗೆ ತಿಳಿಸಿ. ಖಾತೆ ತೆರೆದಾಗ ಅಥವಾ ನಂತರ ನಾಮಿನಿಯನ್ನು ತಪ್ಪದೆ ಮಾಡಿಕೊಳ್ಳಿ.

ಬ್ಯಾಂಕ್‌ಗಳು ಮಾಹಿತಿ ಕೊಡುತ್ತವೆಯೇ?
ಹತ್ತು ವರ್ಷಕ್ಕಿಂತ ಹೆಚ್ಚು ಅವಯಿಂದ ಯಾವುದೇ ವರ್ಗಾವಣೆ ನಡೆಯದ ಖಾತೆಗಳ ಹೆಸರು ಮತ್ತು ವಿಳಾಸವನ್ನು ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಆರ್‌ಬಿ‌ಐ ಹೇಳಿದೆ. ಆದರೆ ಎಲ್ಲ ಬ್ಯಾಂಕ್‌ಗಳು ಅದರಂತೆ ನಡೆದುಕೊಂಡಿಲ್ಲ.ಆರ್‌ಬಿ‌ಐ ಮಾರ್ಗದರ್ಶಿಯ ಪ್ರಕಾರ ಬ್ಯಾಂಕ್‌ಗಳು ಖಾತೆದಾರರಿಗೆ ಪತ್ರ ಬರೆದು ತಿಳಿಸಬೇಕು. ವಿಳಾಸ ತಪ್ಪಾಗಿ ಪತ್ರ ಮರಳಿದರೆ ನಂತರ ಇತರ ಮೂಲಗಳ ಮೂಲಕ ಯತ್ನಿಸಬೇಕು ಎನ್ನುತ್ತದೆ ಆರ್‌ಬಿ‌ಐ. ಆದರೆ ಅಂತಹ ಯತ್ನ ಬ್ಯಾಂಕ್‌ಗಳು ಮಾಡುವುದು ವಿರಳ. ಆದ್ದರಿಂದ ಖಾತೆದಾರರೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ವಿಶ್ಲೇಷಕರು.

ಶೂನ್ಯ ಬ್ಯಾಲೆನ್ಸ್ ಖಾತೆಗಳು ಸಕ್ರಿಯವಾಗದಿದ್ದರೆ?
ಶೂನ್ಯ ಬ್ಯಾಲೆನ್ಸ್ ಹೊಂದಿರುವ ಹಾಗೂ ವಿದ್ಯಾರ್ಥಿಗಳ ಉಳಿತಾಯ ಖಾತೆಗಳು ನಿಷ್ಕ್ರಿಯ ಖಾತೆ ಎಂದು ವರ್ಗೀಕರಣವಾದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಿ ಇಲಾಖೆಗಳಿಗೆ ವಿದ್ಯಾರ್ಥಿ ವೇತನ/ನೇರ ನಗದು ವರ್ಗಾವಣೆಗೆ ಅಡಚಣೆಯಾಗುತ್ತದೆ. ಇದನ್ನು ಮನಗಂಡು ಆರ್‌ಬಿ‌ಐ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಹೊರಡಿಸಿದ ಮಾರ್ಗದರ್ಶಿಯಲ್ಲಿ, ನಿಷ್ಕ್ರಿಯ ಖಾತೆಗಳಲ್ಲಿ ಕೂಡ ಕೆಲವು ವರ್ಗಗಳನ್ನು ರೂಪಿಸಿ, ವಿದ್ಯಾರ್ಥಿ ವೇತನ ವಿತರಣೆಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿತ್ತು.

ನಿಷ್ಕ್ರಿಯ ಖಾತೆಗಳ ಹಣ ಎಲ್ಲಿಗೆ ಹೋಗುತ್ತದೆ?
ಶಾಖೆಗಳಲ್ಲಿ 10 ವರ್ಷಕ್ಕಿಂತ ಹೆಚ್ಚು ಹಳೆಯ ನಿಷ್ಕ್ರಿಯ ಖಾತೆಗಳು ಇದ್ದರೆ, ಅದರಲ್ಲಿರುವ ಹಣ ಬ್ಯಾಂಕ್‌ನ ಪ್ರಧಾನ ಕಚೇರಿಗೆ ವರ್ಗಾವಣೆಯಾಗುತ್ತದೆ. ಆರ್‌ಬಿ‌ಐ ಇಂತಹ ಠೇವಣಿಯನ್ನು ಠೇವಣಿದಾರರಿಗೆ ಹಣಕಾಸು ಸಾಕ್ಷರತೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಚಿಂತನೆ ನಡೆಸಿದೆ. ಪ್ರಸ್ತುತ ಬ್ಯಾಂಕ್‌ಗಳಿಗೆ ಆರ್‌ಬಿ‌ಐನಲ್ಲಿ ಇಡಬೇಕಾದ ಠೇವಣಿ (ನಗದು ಮೀಸಲು ಅನುಪಾತ), ದೀರ್ಘಕಾಲೀನ ಸಾಲದ ಬೇಡಿಕೆಯನ್ನು ನೆರವೇರಿಸಲು ಇದು ಉಪಯುಕ್ತವಾಗುತ್ತದೆ. ಇದೇ ವೇಳೆ ಖಾತೆದಾರರ ವಿಳಾಸ ಪತ್ತೆ ಹಚ್ಚುವ ಎಲ್ಲ ಯತ್ನಗಳನ್ನು ಬ್ಯಾಂಕ್‌ಗಳು ನಡೆಸಬೇಕು.

bank account

 

ನಿಮ್ಮ ಹಣ ನಿಮ್ಮದೇ
ನಿಮ್ಮ ಖಾತೆ ನಿಷ್ಕ್ರಿಯವಾಗಿ ಹತ್ತು ವರ್ಷಗಳ ನಂತರ ಅನ್‌ಕ್ಲೈಮ್ಡ್ ಡೆಪಾಸಿಟ್ ಆಗಿದ್ದರೂ, ಅದರಲ್ಲಿರುವ ಹಣ ನಿಮ್ಮದೇ. ಆದ್ದರಿಂದ ಮರಳಿ ಪಡೆಯಬಹುದು. ಇದಕ್ಕೆ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ, ವಿಳಾಸ ಮತ್ತು ಗುರುತಿನ ದಾಖಲೆಗಳನ್ನು ಕೊಟ್ಟು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

 

 

 

-ಕೇಶವ ಪ್ರಸಾದ್.ಬಿ.ಕಿದೂರು ಬೆಂಗಳೂರು

(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

07/03/2014

 

2 Responses

  1. ಒಳ್ಳೆ ಮಾಹಿತಿ ನೀಡಿದ್ದೇರ
    ಧನ್ಯವಾದಗಳು

  2. Purnima says:

    Very useful information

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: