ಹಿಂಗು-ಪಾಚಕ ಮಿತ್ರ

Share Button

Dr.Harshita

ಹಿಂಗು ಎಂಬುದು ಅಡುಗೆ ಮನೆಯ ಅವಿಭಾಜ್ಯ ಸದಸ್ಯ. ಹಿಂಗಿನ ಒಗ್ಗರಣೆಯ ಪರಿಮಳ ಬಂತೆಂದರೆ ಅದು ಗೃಹಿಣಿಯಿಂದ ಅಡುಗೆಯ ಮುಕ್ತಾಯದ ಸೂಚನೆ. ಅಡುಗೆಯಲ್ಲಿ ಇದರ ಬಳಕೆಯ ಮುಖ್ಯ ಕಾರಣಗಳೆಂದರೆ ಇದರ ವಿಶಿಷ್ಟ ಪರಿಮಳ ಹಾಗೂ ಪಾಚಕ ಗುಣ.

ಹಿಂಗು ಒಂದು ಸಸ್ಯ ಜನ್ಯ ಗೋಂದು.ಇದರ ಸಸ್ಯದ ವೈಜ್ಞಾನಿಕ ಹೆಸರು Ferula narthex  ಹಾಗೂ ಇದು Umbelliferae ಸಸ್ಯ ಕುಟುಂಬಕ್ಕೆ ಸೇರಿದೆ.ಇಂಗ್ಲಿಷ್‌ನಲ್ಲಿ ಇದನ್ನು Asafoetida ಎನ್ನುತ್ತಾರೆ. ಇದು ಮೂಲತಃ ಲ್ಯಾಟಿನ್ ಶಬ್ದವಾಗಿದ್ದು, ಇದರ ಅರ್ಥ ಮಲದ ಗಂಧ. ಇದೇ ಅರ್ಥದಿಂದ ಇದನ್ನು Devil’s dung ಎಂದೂ ಕರೆಯುತ್ತಾರೆ. ಮೂಲತಃ ಇದು ಇರಾನ್ ಹಾಗೂ ಅಫಘಾನಿಸ್ಥಾನದ ಸಸ್ಯವಾಗಿದ್ದು ಈಗ ಭಾರತದ ಕಾಶ್ಮೀರ ಹಾಗೂ ಪಂಜಾಬ್ ನಲ್ಲೂ ಬೆಳೆಸುತ್ತಾರೆ. ಆದರೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದಾಗುವುದು ಇರಾನ್ ಹಾಗೂ ಅಫಘಾನಿಸ್ಥಾನದಿಂದ. ಪ್ರಾಚೀನಕಾಲದಲ್ಲಿ ಇದನ್ನು ಅಡುಗೆಗೆ ಮಾತ್ರವಲ್ಲದೆ ಅಪಸ್ಮಾರ,ನಾಯಿಕೆಮ್ಮು, ಅನಾರ್ತವ,ಹೊಟ್ಟೆಹುಳ ಮುಂತಾದ ರೋಗಗಳಿಗೆ ಔಷಧಿಯಾಗಿಯೂ ಬಳಸಲಾಗುತ್ತಿತ್ತು.

asafoetida-hing

ಸಂಗ್ರಹಿಸುವ ವಿಧಾನ: ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಹಿಂಗಿನ ರಸವನ್ನು ಸಂಗ್ರಹಿಸಲಾಗುತ್ತದೆ.ಇದು ಐದರಿಂದ ಹತ್ತು ಅಡಿಗಳವರೆಗೆ ಎತ್ತರಬೆಳೆಯುವ ಗಿಡವಾಗಿದ್ದು, ಕಾಂಡದ ಅತ್ಯಂತ ಕೆಳಗಿನ ಭಾಗದಲ್ಲಿ ಗಾಯ ಮಾಡಲಾಗುತ್ತದೆ. ಅಲ್ಲಿಂದ ಒಸರುವ ರಸವನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ಕರಗಿಸಿ ನಂತರ ಬಟ್ಟೆಯಲ್ಲಿ ಸೋಸಿ ಶುದ್ಧೀಕರಿಸಲಾಗುತ್ತದೆ. ಅದನ್ನು ಒಣಗಿಸಿದಾಗ ಗಟ್ಟಿಯಾಗಿ ಗೋಂದಿನ ರೂಪವನ್ನು ತಾಳುತ್ತದೆ.

ಮುಖ್ಯ ರಾಸಯನಿಕ ಘಟಕಗಳು: Asaresinotannol, Ferulic acid, Umbelliferone, Disulphide

ಔಷಧೀಯ ಗುಣಗಳು: ಜೀರ್ಣಕ್ರಿಯೆ ಹಾಗೂ ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ,ಮಾಸಿಕ ಋತುಸ್ರಾವವನ್ನು ಉತ್ತೇಜಿಸುತ್ತದೆ, ಕಫವನ್ನು ಹೊರಹಾಕುತ್ತದೆ, ಹೊಟ್ಟೆ ಹುಳಗಳನ್ನು ನಿವಾರಿಸುತ್ತದೆ, ವಾತ ಅನುಲೋಮಕವಾದುದರಿಂದ ಹೊಟ್ಟೆ ಉಬ್ಬರಿಸುವುದನ್ನು ತಡೆಯುತ್ತದೆ, ನೋವು ನಿವಾರಕ ಮತ್ತು ಮೂತ್ರಸ್ರಾವಕ್ಕೂ ಸಹಕಾರಿ.

ಸರಳ ಚಿಕಿತ್ಸಾ ವಿಧಾನಗಳು:

 1. ಗಂಟು ನೋವಿಗೆ-ಚಿಟಿಕೆ ಇಂಗನ್ನು ಕೊಬ್ಬರಿ ಎಣ್ಣೆಯೊಂದಿಗೆ ಸೇರಿಸಿ ಬಿಸಿ ಮಾಡಿ ಹಚ್ಚಬೇಕು.
 2. ಹೊಟ್ಟೆ ಉಬ್ಬರಿಸುವುದಕ್ಕೆ-ಕಡಲೆಯಷ್ಟು ಹಿಂಗನ್ನು ತುಪ್ಪದೊಂದಿಗೆ ಹುರಿದು ಮಜ್ಜಿಗೆಯಲ್ಲಿ ಕದಡಿ ಉಪ್ಪು ಹಾಕಿ ಕುಡಿಯಬೇಕು.
 3. ಚಿಕ್ಕ ಮಕ್ಕಳ ಹೊಟ್ಟೆನೋವಿಗೆ- ಹಿಂಗನ್ನು ತುಪ್ಪದೊಂದಿಗೆ ಅರೆದು ಹೊಕ್ಕುಳದ ಸುತ್ತ ಲೇಪಿಸಬೇಕು.
 4. ನೋವಿನಿಂದ ಕೂಡಿದಮಾಸಿಕ ಋತುಸ್ರಾವ-ಒಂದು ಚಿಟಿಕೆ ಹುರಿದ ಹಿಂಗು ಮತ್ತು ಕಾಲು ಚಮಚ ಮೆಂತೆ ಪುಡಿಯನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯಬೇಕು.
 5. ಹಲ್ಲು ನೋವಿಗೆ-ಹಿಂಗನ್ನು ನೋವಿರುವ ಹಲ್ಲಿನ ಮೇಲೆ ಇಡಬೇಕು./ ಹಿಂಗು ಮತ್ತು ಲವಂಗವನ್ನು ನೀರಿನಲ್ಲಿ ಕುದಿಸಿ ಅದರಲ್ಲಿ ಬಾಯಿ ಮುಕ್ಕಳಿಸಬೇಕು./ಹಿಂಗನ್ನು ಎರಡು ಚಮಚ ನಿಂಬೆ ರಸದೊಂದಿಗೆ ಸೇರಿಸಿ ಬಿಸಿಮಾಡಿ ಹತ್ತಿಯಲ್ಲಿ‌ ಅದ್ದಿ ನೋವಿರುವ ಹಲ್ಲಿನ ಮೇಲೆ ಇಡಬೇಕು.
 6. ಕಫದಿಂದ ಕೂಡಿದ ಕೆಮ್ಮು-ಕಡಲೆಯಷ್ಟು ಹಿಂಗು,ಒಂದು ಚಮಚ ವೀಳ್ಯೆದೆಲೆ ರಸ,ಒಂದು ಚಮಚ ಈರುಳ್ಳಿ ರಸ ಹಾಗೂ ಜೇನು ಇವುಗಳನ್ನು ಮಿಶ್ರ ಮಾಡಿ ದಿನಕ್ಕೆರಡು ಬಾರಿ ತೆಗೆದುಕೊಳ್ಳಬೇಕು.
 7. ಜೇನು ನೊಣ ಕಡಿತಕ್ಕೆ-ಹಿಂಗನ್ನು ನೀರಿನೊಂದಿಗೆ ಕಲಸಿ ಹಚ್ಚುವುದು.

ಸೂಚನೆ: ಹಿಂಗು ಅತ್ಯಂತ ತೀಕ್ಷ್ಣಗುಣವನ್ನು ಹೊಂದಿರುವುದರಿಂದ ಅದನ್ನು ಹುರಿದು ಬಳಸಬೇಕು.ಶ್ವಾಸ ಸಂಬಂಧೀ ಕಾಯಿಲೆಗಳಲ್ಲಿ ಮಾತ್ರ ಹಸಿಯಾಗಿ ಬಳಸಬೇಕು. ಹಸಿಯಾಗಿ ಅಥವಾ ಅಧಿಕ ಪ್ರಮಾಣದಲ್ಲಿ ಇದನ್ನು ಬಳಸಿದರೆ ಹುಳಿತೇಗು, ವಾಂತಿ, ತಲೆನೋವು, ಬೇಧಿ,ತುಟಿಗಳ ಊತ ಮುಂತಾದ ಪಿತ್ತ ವಿಕಾರಗಳನ್ನು ಉಂಟುಮಾಡುತ್ತದೆ.

ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಔಷಧಿಯಾಗಿ ಸೇವಿಸಲು (ಆಂತರಿಕವಾಗಿ) ಕೊಡಬಾರದು .ಗರ್ಭಿಣಿಯರೂ ಹಿಂಗನ್ನು ಅಧಿಕ ಪ್ರಮಾಣದಲ್ಲಿ ಅಥವಾ ಹಸಿಯಾಗಿ ಸೇವಿಸಬಾರದು.

 

–  ಡಾ. ಹರ್ಷಿತಾ ಎಂ.ಎಸ್

12 Responses

 1. Avatar Shruthi says:

  Very good information.. ☺

 2. Avatar Omkara Murthy J G says:

  ಆರೋಗ್ಶಕ್ಕೆ ಉಪಯುಕ್ತವಾದ ಮಾಹಿತಿಗಾಗಿ ವಂದನೆಗಳು

 3. Avatar Manju Kiran says:

  Thank you Dr.Harshitha and Hema Mala

 4. Avatar savithri s bhat says:

  ಉತ್ತಮ ಮಾಹಿತಿಗಾಗಿ ಧನ್ಯವಾದಗಳು .ಹಿಂದೊಮ್ಮೆ ನನಗೆ ಚೇಳು ಕಡಿದಾಗ ಆಜಾಗಕ್ಕೆ ಹಿಂಗನ್ನು ಹಚ್ಚಿ ಕೂಡಲೇ ನೋವು ಕಡಿಮೆಯಾಗಿತ್ತು.

 5. Avatar Shankari Sharma says:

  ನಮ್ಮೆಲ್ಲರ ಅಡಿಗೆ ಕೋಣೆಯ ರಾಣಿ..ಹಿಂಗು …ಅದರ ವಿವಿಧ ಉಪಯುಕ್ತತೆಗಳ ಬಗ್ಗೆಯ ಲೇಖನ ತುಂಬ ಉಪಕಾರಿ…ಧನ್ಯವಾದಗಳು..

 6. Avatar Latha Gopalakrishna says:

  Latha Gopalakrishna ಒಳ್ಳೆಯ ಉಪಯುಕ್ತ ಮಾಹಿತಿ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: