ಹೊಯ್ಯುತ್ತಿದೆ ಮಳೆ ಇಲ್ಲಿ ನಿಮಗೆಂದೆ…

Share Button

Smitha Amritaraj-05082016

ಅಯ್ಯೋ..! ಇದೆಂಥಾ ಝಡಿ ಮಳೆಯಪ್ಪ..ಹೊರಗೆ ಕಾಲಿಡಲು ಬಿಡೋದಿಲ್ಲವಲ್ಲ,ಇನ್ನು ಊರು ಪೂರ ಸುತ್ತಾಡೋದೇನು ಬಂತು ಅಂತ ಒಳಗೊಳಗೆ ಮರುಗುತ್ತಾ,ಮಳೆಯನ್ನು ಶಪಿಸಿಕೊಳ್ಳುತ್ತಾ..ಹೊರಗೆ ಹಜಾರದಲ್ಲಿ ಕುಳಿತು ಮಾಡಿನಿಂದ ಏಕಪ್ರಕಾರವಾಗಿ ಸುರಿವ ಮಳೆಯನ್ನಷ್ಟೇ ದಿಟ್ಟಿಸುತ್ತಿದ್ದೀರಾ..?ಹಾಗಿದ್ದರೆ ನಮ್ಮೂರು ಮಡಿಕೇರಿಗೆ ಬನ್ನಿ.ಇಲ್ಲಿ ಮಳೆ ನಿಮಗಾಗಿಯೇ ಸುರಿಯುತ್ತಿದೆ ನೋಡಿ.ನೀವು ಯಾವ ಊರಿನವರೇ ಸರಿ,ನಿಮಗೆ ನಮ್ಮೂರ ಮಳೆ ಯಾವ ರಗಳೆ ರೇಜಿಗೆಯೂ ಹುಟ್ಟಿಸದೆ ನಿಮ್ಮನ್ನು ಹಾರ್ಧಿಕವಾಗಿ ಸ್ವಾಗತಿಸುತ್ತದೆ.ಈ ಮಳೆಯಲ್ಲೇ ಬದುಕಿನ ಅನೇಕ ಸಹಜ ಸೌಂದರ್ಯಗಳನ್ನು ನಿಮ್ಮ ಮುಂದೆ ತೆರೆದಿಟ್ಟು,ನಿಮ್ಮ ಬದುಕನ್ನ ಪಾವನವಾಗಿಸಲು,ಸಹ್ಯವಾಗಿಸಲು ಈ ಪುಟ್ಟ ಊರು ಮಡಿಕೇರಿ ಪಣ ತೊಟ್ಟಂತೆ ಕುಳಿತಿದೆಯೆಂದರು ಕೂಡ ಉತ್ಪ್ರೇಕ್ಷೆಯಾಗಲಾರದು.

ಪುಟ್ಟ ಊರು ಮಡಿಕೇರಿಯಲ್ಲಿ ಅಂಥದ್ದೇನಿದೆ?ಅಂತ ಸುಮ್ಮಗೆ ಹಗುರವಾಗಿ ನಕ್ಕು ಉಡಾಫೆಯಾಗಿ ಯೋಚಿಸದಿರಿ.ನಮ್ಮ ಕೊಡಗು ಜಿಲ್ಲೆಯ ರಾಜಧಾನಿಯೇ ಮಡಿಕೇರಿ.ಇಲ್ಲಿ ಅನುಭವಿಸಲಿಕ್ಕೆ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲೋಸುಗವಾದರೂ ಒಮ್ಮೆ ಇಲ್ಲಿಗೆ ಬಂದು ನೋಡಿ.ಇಲ್ಲಿಯ ಮಳೆಗೆ ಅದರದೇ ಆದ ಭಿನ್ನ ವೈಶಿಷ್ಟ್ಯವಿದೆ,ಅನೂಹ್ಯ ಮೆರುಗಿದೆ.ಸುರಿವ ಮಳೆಗೆ ಇಲ್ಲಿನ ಪ್ರಕೃತಿ,ಪ್ರೀತಿಗೊಂದು ಹೊಸ ಭಾಷ್ಯ ಬರೆದಂತೆ ಗೋಚರಿಸುತ್ತದೆ.ಎಲ್ಲಾ ಹೊತ್ತಿನಲ್ಲೂ ಇಲ್ಲಿ ಭೋರೆಂದು ಮಳೆ ಹುಚ್ಚುಗಟ್ಟಿ ಸುರಿಯುವುದಿಲ್ಲ.ಬಿಟ್ಟೂ ಬಿಡದೆ ಮೆಲುವಾಗಿ ಆಲಾಪಿಸುತ್ತಾ..ಸಣ್ಣಗೆ ಪಿರಿ ಪಿರಿಯೆಂದು ಜಿನುಗುವ ಮಳೆಯನ್ನು ಹಾಗೇ ನಿಂತು ಕಣ್ಣರಳಿಸಿ ನೋಡುವುದೇ ಒಂದು ತೆರನಾದ ಸೊಗಸು.ಅಥವಾ ಈ ಹನಿಮಳೆಗೆ ಕೊಡೆ ಬಿಡಿಸಿಕೊಂಡು ಸುಮ್ಮಗೆ ಹೆಜ್ಜೆ ಹಾಕುವುದರಲ್ಲಿಯೇ ಏನೋ ಒಂದು ರೀತಿಯ ಹೇಳಿಕೊಳ್ಳಲಾಗದ ಮುದವಿದೆ.

ಮಡಿಕೇರಿ ಹೇಳಿಕೇಳಿ ಪ್ರವಾಸಿ ತಾಣ.ನೀವು ಇಲ್ಲಿಗೆ ಯಾವ ಕಾಲದಲ್ಲಿ ಬಂದು ಹೋದರೂ ಸರಿಯೇ.ನಿಮ್ಮನ್ನು ನಮ್ಮೂರು ಖಂಡಿತಾ ನಿರಾಶೆಗೊಳಿಸಲಾರದು.ಎಲ್ಲಾ ಕಾಲಕ್ಕನುಗುಣವಾಗಿ ನೋಡ ಬಹುದಾದ ಅನೇಕ ವಿಶೇಷ ಸಂಗತಿಗಳಿವೆ ಇಲ್ಲಿ.ಆದರೆ ಇದೇ ಮಳೆಯಲ್ಲಿ ನೀವು ಬಂದಿರೆಂದರೆ..ಕೊರೆವ ಚಳಿಯಲ್ಲಿ ಅದೆಷ್ಟೋ ಅಪ್ಯಾಯಮಾನವಾದ ಸಂಗತಿಗಳನ್ನು ಎದೆಯೊಳಗೆ ಬೆಚ್ಚಗಿಟ್ಟುಕೊಂಡು ಹೋಗುವಷ್ಟು ಬೆರಗಿನ ಲೋಕವನ್ನು ನಿಮ್ಮೆದುರಿನಲ್ಲಿ ಹರವಿಡುತ್ತದೆ.ಈ ಮಳೆ ಸುರಿದದ್ದೇ ತಡ,ಅದೆಷ್ಟೋ ಹೆಸರಿಲ್ಲದ ಪುಟ್ಟ ಪುಟ್ಟ ತೊರೆಗಳು ಮರು ಜೀವ ಪಡೆದುಕೊಡು ಕಲರವಗೈಯುತ್ತಾ ನದಿಯಾಗಬಯಸುತ್ತವೆ.ತುಂಬಿ ಹರಿಯುವ ಸಣ್ಣ ಸಣ್ಣ ನದಿಗಳಿಗೆ ಕಡಲಾಗುವ ಸಂಭ್ರಮ.ಬೆಟ್ಟದಿಂದ ಅಲ್ಲಲ್ಲಿ ಸೀಳಿ ಹರಿಯುವ ಝರಿಗಳು,ಭೋರ್‍ಗೆವ ಜಲಪಾತಗಳು,ಒಂದೇ ಎರಡೇ..?ಇಷ್ಟೊಂದು ಜಲರಾಶಿಗಳು ನಿಮ್ಮ ಮುಂದೆ ಉಳಿದ ಯಾವ ಕಾಲದಲ್ಲೂ ಕಣ್ಣಿಗೆ,ಮನಸಿಗೆ ಹಬ್ಬವನ್ನುಂಟು ಮಾಡಲಾರವು ಎಂಬುದು ಮಾತ್ರ ಸತ್ಯ.

Abbi falls

ಅಬ್ಬಿಫಾಲ್ಸ್

ನಿಮಗೆ ಗೊತ್ತಿದೆಯೋ,ಇಲ್ಲವೋ ಗೊತ್ತಿಲ್ಲ.ನಮ್ಮ ಮಡಿಕೇರಿಯ ಹೃದಯ ಭಾಗದಿಂದ ಅನತಿ ದೂರದಲ್ಲಿ‌ಅಂದರೆ, 8 ಕಿ.ಮೀಟರಿನ ಅಂತರದಲ್ಲಿ ಅಬ್ಬಿಫಾಲ್ಸ್ ಎಂಬ ಜಲಧಾರೆಯಿದೆ.ನಿಸರ್ಗದ ನಡುವಿನಿಂದ ಭೋರ್ಗೆರೆಯುತ್ತಾ ಚಿಮ್ಮಿ,ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುವ ಸೊಬಗಿನ ಧಾರೆಯನ್ನು ನೋಡುವುದೇ ಮಳೆಗಾಲದ ಒಂದು ರೋಮಾಂಚನ.ಪಕ್ಕದಲ್ಲಿರುವ ತೂಗು ಸೇತುವೆಯ ಮೇಲೆ ನಿಂತು ನೋಡಿದರಂತೂ ಅದರ ವೈಭವದ ಬೆಡಗಿನ ನೋಟದಲ್ಲಿ ಸ್ವರ್ಗವೇ ಸೂರೆಗೊಂಡಂತೆ ಮನಸ್ಸು ಸ್ತಬ್ಧವಾಗಿ ಬಿಡುತ್ತದೆ.ಜಲಲ.. ಜಲ.. ಜಲಧಾರೆ ಅಂತ ಅಬ್ಬಿ ನೋಡುತ್ತಾ ಮನ ಸುಮ್ಮಗೆ ಹಾಡೊಂದನ್ನ ಗುನುಗಿಕೊಳ್ಳುತ್ತದೆ.ಅಸಲಿಗೆ,ಅಲ್ಲಿ ನಮ್ಮಷ್ಟಕ್ಕೆ ನಾವೇ ಗುನುಗಿಕೊಳ್ಳಬೇಕಷ್ಟೆ. ಅಬ್ಬಿಯ ಶಬ್ದದ ಮುಂದೆ ನಮ್ಮೆಲ್ಲ ಅಬ್ಬರಗಳೂ ದ್ವನಿ ಕಳೆದುಕೊಳ್ಳುತ್ತವೆ ಅಲ್ಲಿ.ನಮ್ಮೆಲ್ಲರ ಮಾತುಗಳಿಗೆ ಅಬ್ಬಿಯಷ್ಟೇ ಕಿವಿಯಾಗುತ್ತದೆ.ಅಬ್ಬಿ ನೋಡಲು ಬಂದವರಿಗೆ ಉಳಿದವರೊಂದಿಗೇನು ವ್ಯರ್ಥ ಮಾತು ಅಂತ ಮಾರುತ್ತರ ಕೊಟ್ಟಂತಾಗುತ್ತದೆ.

ಇನ್ನು ಈ ಮಳೆಗೆ ಭಾಗಮಂಡಲದ ತಲಕಾವೇರಿಗೆ ಹೋಗುವುದೇ ಒಂದು ವಿಶಿಷ್ಟ ಅನುಭವ.ಅಗಸ್ತ್ಯಮುನಿ ತಪಗೈದ, ಲೋಪಮುದ್ರೆ ಲೋಕಾರ್ಪಣೆಗಾಗಿ ಕಾವೇರಿಯಾಗಿ ಹರಿದು ಹೋದ ನೆಲೆಯೇ ತಲಕಾವೇರಿ. ಮಡಿಕೇರಿಯಿಂದ ಸರಿ ಸುಮಾರು ನಲವತ್ತು ಕಿಲೋಮೀಟರ್‌ಗಳಾಚೆ ಅಂಕು ಡೊಂಕಾದ ಹಾವು ಹರಿದಂತೆ ಕಾಣುವ ರಸ್ತೆಯಲ್ಲಿ ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಗದ್ದೆ ಬಯಲು,ಕಾಫಿ-ಏಲಕ್ಕಿ ತೋಟಗಳು,ಮರವನ್ನಪ್ಪಿದ ಕರಿ ಮೆಣಸು ಬಳ್ಳಿಗಳು,ಒಪ್ಪವಾಗಿ ಕತ್ತರಿಸಿದ ಬೇಲಿಗಳು,ಅದರ ನಡುವೆ ಅರಳಿ ನಿಂತ ಬೇಲಿ ಹೂಗಳು,ಜೊತೆಗೆ ಬೆಟ್ಟದ ಮೇಲೆ,ರಸ್ತೆಯ ಬದಿಯಲ್ಲಿ,ಸಿಕ್ಕು ಸಿಕ್ಕಲ್ಲಿ ಯಾರು ನೆಡದೆಯೂ ತಮ್ಮಷ್ಟಕ್ಕೇ ಅರಳಿ ನಿಂತ ಹೆಸರೇ ಇರದ ಬಣ್ಣ ಬಣ್ಣದ ಪುಷ್ಪಗಳ ಮೋಹಕ ಯಾತ್ರೆಯನ್ನು ನೋಡುತ್ತಿರುವಂತೆಯೇ ಅನಾಯಾಸವಾಗಿ ನಾವು ಭಗಂಡೇಶ್ವರನ ಸನ್ನಿಧಿಯಲ್ಲಿ ನಿಂತು ಬಿಟ್ಟಿರುತ್ತೇವೆ.ಕಾವೇರಿ ಕನ್ನಿಕೆ ಹಾಗು ಗುಪ್ತಗಾಮಿನಿಯಾದ ಸುಜೋತಿ ನದಿಗಳ ತ್ರಿವೇಣಿ ಸಂಗಮವನ್ನು ನೋಡಲು ಈ ಮಳೆಯಲ್ಲೇ ಜನ ಕಿಕ್ಕಿರಿದು ಜಮಾಯಿಸಿರುತ್ತಾರೆ.ಇನ್ನೊಂದಷ್ಟು ದೂರ ಬೆಟ್ಟದ ದಾರಿಯಲ್ಲಿ ಪಯಣಿಸುವಾಗ ವಿಶೇಷವೆಂಬಂತೆ ಒಮ್ಮೆ ಮೋಡ,ಮತ್ತೊಮ್ಮೆ ಮಳೆ.ಹೀಗೇ ಮಳೆ ಮತ್ತು ಮೋಡಗಳು ನಮ್ಮನ್ನು ಕಣ್ಣುಮುಚ್ಚಾಲೆಯಾಡಿಸುತ್ತಾ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತಂದು ನಿಲ್ಲಿಸುತ್ತದೆ. ಆಗಲೇ ಬೆಟ್ಟದ ತುತ್ತ ತುದಿಯಲ್ಲಿ ನಾವು ನಿಂತಿರುತ್ತೇವೆ.ಅಲ್ಲಿನ ಹಾದಿಯಲ್ಲಿ ನಮ್ಮ ನೆತ್ತಿ ಮೇಲೆಯೇ ಚಲಿಸುವ ಮೋಡ, ಆಗಾಗ್ಗೆ ನಮ್ಮ ಕೆನ್ನೆ ಸೋಕಿ ಕಚಗುಳಿಯಿಟ್ಟಂತಾಗುತ್ತದೆ.ಜೊತೆಗೆ ಸುಯ್ಯನೆ ಸುಯ್ಯುವ ಗಾಳಿ ನಮ್ಮನ್ನು ಹೊತ್ತೊಯ್ದಂತೆ ನಾವು ಚಲಿಸತೊಡಗುತ್ತೇವೆ.ನಾವು ನೆಲದ ಮೇಲೆ ಕಾಲಿಟ್ಟಿದ್ದೇವೋ? ಅಥವಾ ಗಾಳಿ ಮೇಲೋ ಅಂತ ಗುಮಾನಿ ಬರುವಷ್ಟು.ಪುರಾಣ ಕಥಾಪಾತ್ರಗಳಲ್ಲಿ ಲೋಕಪರ್ಯಟನೆಗಾಗಿ ಮೋಡದ ಕೆಳಗೆ ತೇಲುತ್ತಾ ಬರುವ ದೇವಾನು ದೇವತೆಗಳು ನಾವೇ ಏನೋ ಅನ್ನುವಂತೆ.ಕೊಡಗಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಭಾಗಮಂಡಲದ ಮಳೆಯಲ್ಲಿ ತಲೆ ತೋಯಿಸಿಕೊಳ್ಳುವುದರಲ್ಲಿಯೂ ಇದೆ ಒಂದು ಅಪೂರ್ವ ಸುಖ.

Talakaveri

ತಲಕಾವೇರಿ

ನಮ್ಮ ಮಡಿಕೇರಿಯಿಂದ 15 ಕಿ.ಮೀಟರ್‌ಗಳ ದೂರದಲ್ಲಿರುವ ಮಾಂದಲ್ ಪಟ್ಟಿ ಎಂಬ ಹೆಸರಿನ ಸ್ಥಳವನ್ನ ಬಹುಷ: ಯಾರೂ ಕೇಳದವರಿರಲಿಕ್ಕಿಲ್ಲ.ಮುಗಿಲಪಟ್ಟಿ ಇದಕ್ಕೆ ಮತ್ತೊಂದು ಅನ್ವರ್ಥ ನಾಮ.ದನ ಮೇಯುತ್ತಿದ್ದ ಸ್ಥಳವಾಗಿದ್ದ ಮಾಂದಲ್ ಪಟ್ಟಿಯಿಂದು ಅತಿ ಹೆಚ್ಚು ಪ್ರವಾಸಿಗರು ಬರುವ ತಾಣವಾಗಿದೆ.ಈ ತಾಣಕ್ಕೆ ಅದರದೇ ಆದ ಸಾಕಷ್ಟು ಐತಿಹ್ಯಗಳಿವೆ.ಇದರ ಬಗ್ಗೆ ಗೀತೆ ರಚಿಸಿದ್ದಾರೆ,ಸಿನೇಮಾ ಮಾಡಿ ಹೋಗಿದ್ದಾರೆ ಅಂದ ಮೇಲೆ ಹನಿಯುವ ಮಳೆಗೆ, ಕಡಿದಾದ ರಸ್ತೆಯಲ್ಲಿ ಸಾಗಿ ಮಾಂದಲ್ ಪಟ್ಟಿಯ ಬೆಟ್ಟದ ತುತ್ತ ತುದಿಯಲ್ಲಿ ನಿಂತು ಮುಗಿಲು ಮುಟ್ಟುವ ತವಕ ಯಾರಿಗಿರೋದಿಲ್ಲ ಹೇಳಿ?.ಇಲ್ಲಿ ನೆಲವೇ ಇಲ್ಲ.ಬರೇ ಮುಗಿಲು..ಮುಗಿಲು.ನಮ್ಮ ಕೈಯೊಳಗೆ,ಕಣ್ಣೊಳಗೆ,ಎದೆಯೊಳಗೆ ತುಂಬಿಕೊಂಡಷ್ಟು ಮುಗಿಲು.ಕೆಳಗೂ ಮುಗಿಲು,ಮೇಲೂ ಮುಗಿಲು.ಒಬ್ಬರನ್ನೊಬ್ಬರು ಮರೆಮಾಚುವಷ್ಟು.ನಾನೂ ಮುಗಿಲು-ನೀನು ಮುಗಿಲು.ಎಲ್ಲವೂ ಮುಗಿಲು ಎಷ್ಟು ಚೆಂದ?!.ಸಣ್ಣಗೆ ಹನಿಯುವ ಮಳೆಯಲ್ಲಿ ಮುಗಿಲು ಮುಟ್ಟುವ ಕನಸನ್ನ ಈ ಮಳೆಯಲ್ಲಿ ಖಂಡಿತಾ ಸಾಕಾರಗೊಳಿಸಿಕೊಳ್ಳಬಹುದು.

ಇ಼ಷ್ಟೆಲ್ಲಾ ಸುತ್ತಿ ಬಂದು ,ಮಡಿಕೇರಿ ಪೇಟೆಯಲ್ಲೇ ಕಾಲು ನಡಿಗೆಯಷ್ಟು ದೂರದಲ್ಲಿರುವ ರಾಜಾ ಸೀಟಿನಲ್ಲಿ ರಾಜ-ರಾಣಿಯರಂತೆ ಕುಳಿತು ,ಹನಿಯುವ ಮಳೆಗೆ ಸುತ್ತಲಿನ ವಿಹಂಗಮ ನೋಟವನ್ನು ಕಣ್ತುಂಬಿ ಕೊಳ್ಳದಿದ್ದರೆ,ಈ ಸುರಿವ ಮಳೆಯಲ್ಲಿ ಮಡಿಕೇರಿಗೆ ಬಂದದ್ದಕ್ಕೆ ಸಾರ್ಥಕವಾಗಲಾರದು.ಸ್ವರ್ಗದ ಸಿಂಹಾಸನದಲ್ಲಿ ಕುಳಿತು ,ಕೆಳಗಿನ ಭುವಿಯನ್ನು ಸುತ್ತ ನಿರುಕಿಸಿದ ಅನುಭವ ದಕ್ಕುತ್ತದೆ.ಕಾಲ್ಪನಿಕ ಪಾತ್ರಗಳೆಲ್ಲಾ ನೈಜ್ಯವಾಗಿ ಎದುರಿಗೆ ನಿಂತಂತೆ ಭಾಸವಾಗುತ್ತದೆ.ಸುರಿವ ಮಳೆ,ಮುಸುಕಿದ ಮಂಜು ನಮ್ಮನ್ನು ಏಕಾ ಏಕಿ ಸ್ವರ್ಗದ ಬಾಗಿಲಿಗೆ ಕೊಂಡೊಯ್ದಂತೆ ಅನ್ನಿಸುತ್ತದೆ.ಹನಿಯುವ ಮಳೆಯಲ್ಲಿನ ಮಡಿಕೇರಿಯೆಂದರೆ..ಸ್ವರ್ಗವಲ್ಲದೆ ಮತ್ತಿನ್ನೇನು?.ಸ್ವರ್ಗವೆಂದರೆ.. ಬೇರೆಲ್ಲೂ ಇಲ್ಲ.ಇಲ್ಲಿಯೇ ಇದೆ ಎನ್ನುವಂತೆ.

ರಾಜಾಸ್ ಸೀಟ್, ಮಡಿಕೇರಿ

ಇವಿಷ್ಟಾಗಿಯೂ ಮಡಿಕೇರಿ ವ್ಯಾಪ್ತಿಗೆ ಸೇರಿದ ಕೆಲವೊಂದು ಹಳ್ಳಿಗಳನ್ನು ಈ ಮಳೆಗಾಲದಲ್ಲಿ ನೋಡುವುದೇ ಹೆಚ್ಚು ಸೂಕ್ತ.ಈಗಷ್ಟೇ ನಾಟಿ ನೆಟ್ಟ ಭತ್ತದ ಗದ್ದೆ ಬಯಲುಗಳನ್ನು ನೋಡಬೇಕು.ಹಸಿರು ಸಸಿಗಳು ಒಂದೇ ರೀತಿಯಲ್ಲಿ ಶಿಸ್ತಾಗಿ ಗಾಳಿಗೆ ತುಯ್ಯುತ್ತಾ ನರ್ತಿಸುತ್ತಿರುವಂತೆ ತೋರುತ್ತದೆ.ಗದ್ದೆ ಬದುವಿನಲ್ಲಿ ಅರಳಿನಿಂತ ಬಿಳಿಯ ಮಲ್ಲಿಗೆ ಹೂವಿನಂತ ಅಣಬೆಗಳು,ಪಕ್ಕದ ತೋಡಿನಿಂದ ಗದ್ದೆಗೆ ಹತ್ತಿಕೊಂಡ ಮೀನುಗಳು,ಮೂಲೆಯ ಮಾಟೆಯಿಂದ ಇಣುಕಿ ಹಣಕಿ ಹಾಕುವ ಏಡಿಗಳು,ಹುಳು ಹುಪ್ಪಟೆ,ಪುಡಿ ಮೀನಿಗಾಗಿ ,ಸಾಲು ಸಾಲಾಗಿ ಮಳೆಯಲ್ಲೇ ಧ್ಯಾನಿಸುತ್ತಾ ನಿಂತ ಬಿಳಿಯ ಕೊಕ್ಕರೆಗಳು..ಇವೆಲ್ಲಾ ಗದ್ದೆ ಬದುವಿನ ಸಹಜ ಚಿತ್ರಗಳು.ಇವನ್ನೆಲ್ಲಾ ಅನುಭವಿಸಿದರಷ್ಟೇ ಬದುಕು ಪೂರ್ಣ.

ಇವಿಷ್ಟೂ ಸ್ಥಳಗಳನ್ನು ಖಂಡಿತವಾಗಿಯೂ ಎರಡು ದಿನಗಳೊಳಗೆ ಮನ ತಣಿಯೇ ನೋಡಿ ಆನಂದಿಸ ಬಹುದು.ಒಂದಷ್ಟು ಸಮಯ ಮಿಕ್ಕಿ,ಕೊಡಗಿನ ಎರಡನೇ ಅತೀ ಹೆಚ್ಚು ಮಳೆ

5 Responses

  1. Rama Mv says:

    Nice write up. ಕೊಡಗನ್ನು ಈಗತಾನೆ ಬಿಟ್ಟು ಬಂದಿದ್ದ ನನ್ನನ್ನು ಮ್ಮೆ ಕರೆದೊಯ್ದರು , ಸ್ಮಿತಾ.

  2. Seenu Pappunalmata says:

    ಈ ಬರಹ ನೋಡಿದ ತಕ್ಷಣ ನಾವು ಮಡಿಕೇರಿಗೆ ಹೋಗಬೇಕು ಅನೀಸ್ತಾಇದೆ

  3. Deepak Kumar says:

    ಬರಹದಲ್ಲಿಯೇ ಮಡಿಕೇರಿ ದರ್ಶನ ಮಾಡಿಸಿದ್ದೀರಾ..

  4. Ranganath Nadgir says:

    2002 ರಲ್ಲಿ
    ನಾನು ಸಹಕುಟುಂಬ ಮಡಕೇರಿಗೆ ಆಗಮಿಸಿದ್ದೆನು, ನಿಮ್ಮ ಲೇಖನದಲ್ಲಿ ಮೂಡಿ ಬಂದ ಪ್ರತಿ ಸ್ಥಳದ
    ವರ್ಣನೆ ನನ್ನ ನೆನಪುಗಳನ್ನು ಮರುಕಳಿಸಿದವು, ನಿಮ್ಮ ಶಬ್ದ ಸಂಪತ್ತು, ,ವರ್ಣನಾತೀತ, ಧಾರವಾಡದ
    “ಸಾಹಿತ್ತ್ಯ ಸಂಭ್ರಮ” ಕಾರ್ಯಕ್ರಮ ಪ್ರತಿ ವರ್ಷದ ಜನೆವರಿ ತಿಂಗಳಲ್ಲಿ 3 ದಿನ ಜರುಗುತ್ತದೆ ,
    ತಾವು ಇದಕ್ಕೆ ಆಗಮಿಸಿ ಪ್ರತಿ ದಿನದ ಕಾರ್ಯಕ್ರಮಗಳ ವರದಿ ತಯಾರಿಸಲು ಅತೀ ಯೋಗ್ಯ
    ಲೇಖಕಿ ಆಗಿದ್ದು , ತಮಗೆ ಸದರೀ ಕಾರ್ಯಕ್ರಮಕ್ಕೆ ಆಗಮಿಸಲು ಆಗ್ರಹದ ಬಿನ್ನಹ ,ಶ್ರೀಮತಿ ಹೇಮಾ ಮಾಲಾ
    ಅವರಿಂದ ಇದಕ್ಕಾಗಿ ವಿವರ ಪಡೆಯಲು ಸವಿನಯ ಪ್ರಾರ್ಥನೆ,ಕಳೆದ ಶಾಲಿನ ಪ್ರತಿದಿನದ ವಿವರ ನಾನು
    ಹಿಂದಿನ ಸುರಹೊನ್ನೆ ಸಂಚಿಕೆಯಲ್ಲಿ ಬರೆದಿದ್ದೆ, ಅವನ್ನು ಅವಲೋಕಿಸಲು ವಿನಂತಿ,

  5. savithri s bhat says:

    ಸೊಗಸಾಗಿದೆ ಮಡಿಕೇರಿ ಬರಹವೂ ಸೂಪರ್

Follow

Get every new post on this blog delivered to your Inbox.

Join other followers: