ಬದುಕು… ವೈವಿಧ್ಯ

Share Button

Hema trek Aug2014

 

ಕಾಫಿ ಬೆಳೆಗಾರರ ಮನೆಯಂಗಳದಲ್ಲಿ ಕಾಫಿ ಬೀಜ ಹರವಿರುತ್ತಾರೆ. ಅಡಿಕೆ, ತೆಂಗು, ಕೊಕ್ಕೊ,… ಇತ್ಯಾದಿ ಬೆಳೆಯುವ ಮಲೆನಾಡಿನವರ ಮನೆಯಂಗಳದಲ್ಲಿ ಆಯಾ ಕೃಷಿ ಉತ್ಪನ್ನಗಳು ಕಂಗೊಳಿಸುತ್ತವೆ. ಭತ್ತ , ಕಬ್ಬು ಬೆಳೆಯುವ ಬಯಲು ಸೀಮೆಯ ಕಡೆ ಹೋದರೆ ಹಚ್ಚ ಹಸಿರಿನ ಪೈರು ಕಾಣಿಸುತ್ತದೆ. ಹಾಗಾದರೆ, ಕಡಲ ತೀರದಲ್ಲಿ ಮನೆ ಮಾಡಿ, ಜೀವನೋಪಾಯಕ್ಕೆ ಮೀನುಗಾರಿಕೆಯನ್ನು ಅವಲಂಬಿಸುವವರ ಮನೆಯಂಗಳದಲ್ಲಿ ತುಂಬಾ ಮೀನು ಇರಬಹುದಲ್ಲವೇ? ಹೀಗೊಂದು ದಡ್ಡ ಕಲ್ಪನೆಯಿಂದ , ಆ ಮನೆಯ ಕಡೆಗೆ ನಡೆದೆ.

ಆ ಮನೆ ಇದ್ದುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ , ಅಲ್ಲಿಗೆ ನಾನು ಹೋಗುವಂತಾದುದು ತೀರಾ ಅನಿರೀಕ್ಷಿತ. ಕಾರಣ ಹೀಗಿದೆ: ಅಲ್ಲಿನ ಅರಬೀ ಸಮುದ್ರದಲ್ಲಿರುವ ಒಂದು ಪುಟ್ಟ ದ್ವೀಪ ‘ಬಸವರಾಜ ದುರ್ಗ’. ಅದೊಂದು ಬೀಚ್ ಟ್ರೆಕ್ ಕಾರ್ಯಕ್ರಮವಾಗಿತ್ತು. ಹಿಂದಿನ ದಿನ ರಾತ್ರಿ ಮೈಸೂರಿನಿಂದ ಹೊರಟ ಸುಮಾರು 60 ಮಂದಿ, ಶರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ಮಾಡಿ, ಪಕ್ಕದಲ್ಲಿರುವ ಜೈನ ಬಸದಿಗಳನ್ನು ವೀಕ್ಷಿಸಿ, ಮರುದಿನ ಬಸವರಾಜದುರ್ಗಕ್ಕೆ ಚಾರಣ ಮಾಡಲೆಂದು, ‘ ತಾರಿಬಾಗಿಲು’ ಎಂಬಲ್ಲಿಗೆ ಕಡಲಿ ಕಿನಾರೆಯುದ್ದಕ್ಕೂ ಸುಮಾರು 3 ಕಿ.ಮಿ ನಡೆದುಕೊಂಡು ಬಂದಿದ್ದೆವು.

ಕಣ್ಣೆದುರಿಗೆ ಬಸವರಾಜ ದುರ್ಗ ಕಾಣಿಸುತ್ತಿತ್ತು. ಅದನ್ನು ತಲಪಲು ದಡದಿಂದ ಸ್ವಲ್ಪ ದೂರ ದೋಣಿಯಲ್ಲಿ ಪ್ರಯಾಣಿಸಬೇಕು. ದುರ್ಗ ಸಮೀಪಿಸಿದಾಗ, ನಾವು ದೋಣಿಯಿಂದ ಸಮುದ್ರಕ್ಕೆ ಜಿಗಿದು ಆಮೇಲೆ ಸ್ವಲ್ಪ ನಡೆಯಬೇಕು. ಅಲ್ಲಿಗೆ ಬಂದಾಗ, ಬೋಟ್ ಮ್ಯಾನ್ ಗಳಿಂದ ಗೊತ್ತಾದ ವಿಷಯವೇನೆಂದರೆ, ಆಗ ಕಡಲಲ್ಲಿ ಭರತದ ಸಮಯ…. ಮೇಲಾಗಿ ಬೆಳಗಿನ ಆ ಸಮಯದಲ್ಲಿ ತುಂಬಾ ಗಾಳಿ ಬೀಸುತ್ತಿದೆ… ಹಾಗಾಗಿ ಕಡಲಿಗೆ ಜಿಗಿಯುವಾಗ ಹುಷಾರು….ಸುಮಾರು 4-5 ಅಡಿ ನೀರು ಇರಬಹುದು….ಬಟ್ಟೆ ಒದ್ದೆಯಾಗುತ್ತದೆ….ಮೊಬೈಲ್ , ಕ್ಯಾಮೆರಾ ಒಯ್ಯಬೇಡಿ ಇತ್ಯಾದಿ.

ದಣಿವರಿಯದೆ ದಡಕ್ಕಪ್ಪಳಿಸುವ ಭಾರೀ ಗಾತ್ರದ ಅಲೆಗಳ ಮಧ್ಯೆ ಪುಟ್ಟ ದೋಣಿಗಳು ತೊಯ್ದಾಡುತ್ತಿರುವುದನ್ನು ನೋಡಿ ನನಗೆ ಭಯವಾಯಿತು. ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ದೋಣಿ ದುರಂತದಿಂದ ಹಿಡಿದು ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕಿನಾರೆಗೆ ಅಪ್ಪಳಿಸಿದ ಸುನಾಮಿಯ ನೆನಪಾಯಿತು! ಇದರ ಜತೆಗೆ ಹಿಂದಿನ ರಾತ್ರಿಯ ಬಸ್ಸಿನ ಪ್ರಯಾಣದಲ್ಲಿ ಅಸಮರ್ಪಕ ನಿದ್ರೆಯ ದಣಿವು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಇರುವ ಅಲ್ಪ-ಸ್ವಲ್ಪ ತಿಳುವಳಿಕೆ ಮೇಳೈಸಿತು. ಹಾಗಾಗಿ ನನಗೆ ಅನುಕೂಲಕರವಾದ ತರ್ಕವನ್ನು ಮುಂದಿಟ್ಟೆ. “ಈ ಗುಡ್ಡವನ್ನು ಹತ್ತಲು ಅಷ್ಟು ಕಷ್ಟ್ಟ ಪಡುವುದೇತಕೆ? ಅಂತಹ ಹಲವಾರು ಗುಡ್ಡ-ಬೆಟ್ಟಗಳಿಗೆ ಚಾರಣ ಮಾಡಿಯಾಗಿದೆಯಲ್ಲಾ?, ಇದನ್ನು ಹತ್ತದಿದ್ದರೆ ತುಂಬಲಾರದ ನಷ್ಟವೇನಿಲ್ಲ , ಮೇಲಾಗಿ, ಲೈಫ಼್ ಜಾಕೆಟ್ ಇಲ್ಲದೆ, ಈಜೂ ಬಾರದೆ ನೀರಿಗಿಳಿಯುವುದು ಅಪಾಯವನ್ನು ಆಹ್ವಾನಿಸಿದಂತೆ, ನಾನಂತೂ ಈ ರಿಸ್ಕ್ ತೆಗೆದುಕೊಳ್ಳುವುದಿಲ್ಲ, ಇಲ್ಲಿಯೇ ದಡದಲ್ಲಿ ಆರಾಮವಾಗಿ ಇರುತ್ತೇನೆ” ಎಂದು ಘೋಷಿಸಿ ನನ್ನ ನೀರಿನ ಭಯಕ್ಕೆ ಸುರಕ್ಷ್ತಾಕವಚವನ್ನಿತ್ತೆ! ತಂಡದ ಇನ್ನಿಬ್ಬರು ಮಹಿಳೆಯರೂ ನನ್ನ ನಿಲುವು ಸರಿ ಎಂದು ಅವರೂ ನನ್ನ ಜತೆ ಉಳಿದರು.

“ನೀವು ಬರುವುದಿಲ್ಲವಾದರೆ, ಇಲ್ಲಿಯೇ ಸನಿಹದ ಮೀನುಗಾರರೊಬ್ಬರ ಮನೆಯಲ್ಲಿ ವಿರಮಿಸಬಹುದು. ಹಾಗೆಯೇ ಸ್ವಲ್ಪ ನಮ್ಮ ಮೊಬೈಲ್ ಮತ್ತು ಕ್ಯಾಮೆರಾ ಸ್ವಲ್ಪ ನೋಡಿಕೊಳ್ಳುತ್ತೀರಾ?” ಅಂತ ಆಯೋಜಕರು ಮತ್ತು ಕೆಲವರು ತಮ್ಮ ವಸ್ತುಗಳನ್ನು ಕೊಟ್ಟರು. ಹೀಗೆ ನಾಲ್ಕಾರು ಮೊಬೈಲ್ ಫೋನ್ ಮತ್ತು ಕ್ಯಾಮೆರಾ ಗಳ ಜತೆಯಲ್ಲಿ, ನಾನು ಮೂವರು ಮಹಿಳೆಯರು ಆ ಮನೆಯತ್ತ ನಡೆದೆವು.

ಆ ಮನೆಯಾಕೆ ಇಂದಿರಾ. ಆತ್ಮೀಯತೆಯಿಂದ ಬರಮಾಡಿಕೊಂಡರು. ತಮ್ಮ ಮನೆಯಲ್ಲಿ ನಮ್ಮ ತಂಡದ ಎಲ್ಲರ ಬ್ಯಾಗ್ ಇಡಲು ಆವಕಾಶ ಮಾಡಿಕೊಟ್ಟರು. ಆಕೆಯ ಪತಿ ಮತ್ತು ಇನ್ನಿಬ್ಬರು ಸೇರಿ ನಮ್ಮ ತಂಡವನ್ನು ಒಂದು ದೋಣಿಯಲ್ಲಿ ಬಸವರಾಜದುರ್ಗಕ್ಕೆ ಕರೆದೊಯ್ದರು.

‘ನಿಮಗೆ ಸುಸ್ತಾಗಿದ್ದರೆ ಇಲ್ಲಿ ಮಲಗಬಹುದು’ ಎಂದರು ಇಂದಿರಾ. ಮನೆಯ ಮುಂದಿನ ಕಿರಿದಾದ ಕಲ್ಲಿನ ಒರಗು ಮಂಚದಲ್ಲಿ ಕಾಲು ಚಾಚಿ ಕುಳಿತೆವು. ಅಹಾ ತಣ್ಣಗೆ ಬೀಸುವ ಶುದ್ಧವಾದ ಕಡಲಗಾಳಿ! ಕಣ್ಣಿಗೆ ಜೊಂಪು ಹಿಡಿದದ್ದು ಯಾವಾಗ ಎಂದೇ ಗೊತ್ತಾಗಲಿಲ್ಲ. ಒಂದೆರಡು ತಾಸು ನಿದ್ರಿಸಿದೆ, ಎಚ್ಚರವಾದಾಗ ಆ ಮನೆಯ ಮಗಳು, ಸುಮಾರು 12 ವಯಸ್ಸಿನ ಹಸನ್ಮುಖಿ ಸುಪ್ರೀತಾ, ಆಗ ತಾನೇ ಸ್ನಾನ ಮುಗಿಸಿ ಶ್ರದ್ಧೆಯಿಂದ ತುಳಸಿ ಪೂಜೆ ಮಾಡುತ್ತಿದ್ದಳು. ‘ದಿನಾ ನೀನು ಪೂಜೆ ಮಾಡುವುದಾ ಎಂದು ಕೇಳಿದೆ’. ” ಅಮ್ಮ ಮಾಡುತ್ತಾರೆ, ಶಾಲೆಗೆ ರಜೆ ಇದ್ದರೆ ನಾನೂ ಮಾಡುತ್ತೇನೆ’ ಅಂದಳು ಸುಪ್ರೀತಾ. ಸಂಸ್ಕೃತಿಯನ್ನು ಗೌರವಿಸುವ ಇಂತಹ ಮಕ್ಕಳು ಕನಿಷ್ಟ ಹಳ್ಳಿಯಲ್ಲಾದರೂ ಇದ್ದಾರಲ್ಲ ಎಂದು ಖುಷಿಯಾಯಿತು.

ಅದು ಅಚ್ಚುಕಟ್ಟಾದ ಪುಟ್ಟ ಹೆಂಚಿನ ಮನೆ. ಮನೆಯ ಮುಂದೆ ಸಗಣಿ ಸಾರಿಸಿದ ಚಿಕ್ಕ ಅಂಗಳ. ಎದುರು ಮರಳು. ಮರಳಿನಲ್ಲಿಯೇ ಹತ್ತಾರು ತೆಂಗು ಹಾಗೂ ಗೇರುಬೀಜದ ಮರಗಳು. ಅಂಗಳದಲ್ಲಿ ಒಂದು ಬೊರ್‍ ವೆಲ್, ಅದಕ್ಕೊಂದು ಪಂಪ್ ಮತ್ತು ಪೈಪ್ ಅಳವಡಿಸಿದ್ದರು. ಮನೆಯೊಡತಿ ಇಂದಿರಾ ಒಂದು ತೆಂಗಿನಮರದ ಕೆಳಗೆ ಬಟ್ಟೆ ಒಗೆಯುತ್ತಿದ್ದರು. ಮಧ್ಯೆ-ಮಧ್ಯೆ ಎದ್ದು ನೀರಿನ ಪೈಪ್ ಅನ್ನು ಬೇರೆ ತೆಂಗಿನಮರಕ್ಕೆ ಹೊಂದಿಸುತ್ತ ನೀರು ಹಾಯಿಸುವ ಕೆಲಸವನ್ನು ಮಾಡುತ್ತಿದ್ದರು. ಚುರುಕಾಗಿ, ನಗುನಗುತ್ತಾ ಮನೆಯ ಒಳಗೂ- ಹೊರಗೂ ಓಡಾಡುತ್ತ, ಅಂಗಳ ಗುಡಿಸಿದರು…, ಜಗಲಿ ಒರೆಸಿದರು.., ಮೊಬೈಲ್ ನಲ್ಲಿ ಮಾತನಾಡಿದರು,.. ಅಡಿಗೆ ಮಾಡಿದರು…, ಆಮೇಲೆ ಪಕ್ಕದ ಮನೆಗೊಮ್ಮೆ ಹೋಗಿ ಬಂದರು…, ಇವೆಲ್ಲದರ ಮಧ್ಯೆ ನೀರಿನ ಪೈಪ್ ಅನ್ನು ಆಗಿಂದಾಗ್ಗೆ ಬದಲಿಸುತ್ತಾ ತೆಂಗಿನ ಮರಗಳಿಗೆ ನೀರು ಹಾಯಿಸುತ್ತಿದ್ದರು.

ದುಬಾರಿ ಶುಲ್ಕ ಕೊಟ್ಟು, ಯಾವುದೋ ಹೋಟೆಲ್ ನ ಹವಾನಿಯಂತ್ರಿತ ಕೋಣೆಯಲ್ಲಿ ‘ಮಲ್ಟಿ ಟಾಸ್ಕಿಂಗ್’ ಅಂಡ್ ಟೈಮ್ ಮ್ಯಾನೇಜ್ಮೆಂಟ್ ” ಬಗ್ಗೆ ಪುಸ್ತಕದ ಬದನೆಕಾಯಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬದಲು ಇವರ ಮನೆಯಂಗಳದಲ್ಲಿ, ಕಡಲಿನ ಗಾಳಿಗೆ ಮೈಯೊಡ್ಡಿ ಕುಳಿತು, ಪ್ರಾಕ್ಯಕ್ಷಿಕೆ ನೋಡಿದರೆ ಸಾಕು!

ನೀರು ಬೇಕೆಂದು ಮನೆಯ ಒಳಗೂ ಹೋದೆ. ಮನೆಯನ್ನು ಬಹಳ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ಬೆಸ್ತರ ಮನೆಯಲ್ಲಿ ಮೀನು ಇರುತ್ತದೆ ಎಂಬ ಕಲ್ಪನೆಯಿಂದ ಅಲ್ಲಿ ಮೀನಿನ ರಾಶಿಯನ್ನು ಹುಡುಕಿದೆ. ನಿಜವಾಗಿಯೂ ನಿರಾಶೆಯಾಯಿತು. ಮನೆಯ ಒಳಗೂ-ಹೊರಗೂ ಮೀನಿನ ಸುಳಿವಿರಲಿಲ್ಲ. ಅಂಗಳದ ಮೂಲೆಯಲ್ಲೊಂದು ಮೀನು ಹಿಡಿಯುವ ಬಲೆ ಒಂದೇ ಅವರ ಕಸುಬನ್ನು ಗುರುತಿಸುತ್ತಿತ್ತು. ಕೊನೆಗೆ ಕುತೂಹಲದಿಂದ ‘ ಈವತ್ತು ಏನು ಅಡಿಗೆ… ನೀವು ದಿನಾ ಮೀನಿನ ಅಡಿಗೆ ಮಾಡುವುದಿಲ್ಲವೇ?’ ಅಂದೆ. ಇಂದಿರಾ ನಗುತ್ತಾ ಹೇಳಿದರು .” ದಿನಾ ಮೀನು ಸಿಗುವುದಿಲ್ಲ…ನಾವು ಅಂಗಡಿ ತರಕಾರಿ ತರುತ್ತೇವೆ…ಈವತ್ತು ಕ್ಯಾಬೇಜ್ ಪಲ್ಯ , ಸಾರು.. ನೀವು ಬರ್ತೀರ ಅಂತ ಗೊತ್ತಿತ್ತು ಅಲ್ವಾ…ಅದಕ್ಕೆ ನಮ್ಮೆಜಮಾನ್ರು ಈವತ್ತು ಕಡಲಿಗೆ ಹೋಗ್ಲಿಲ್ಲ..ಈಗ ಟೂರಿಸ್ಟ್ ಕರೆದುಕೊಂಡು ಹೋದರು..”

ಅದೂ ಇದೂ ಮಾತಿಗೆ ಎಳೆದಾಗ ಗೊತ್ತಾದುದೇನೆಂದರೆ, ವರ್ಷಕ್ಕೆ ಮೂರು ತಿಂಗಳ ಕಾಲ ಮೀನು ಹಿಡಿಯಲು ಆಗುವುದಿಲ್ಲ, ಮನೆಯ ಪುರುಷರು ಬೆಳಗ್ಗೆ ನಾಲ್ಕು ಗಂಟೆಗೆ ಸಮುದ್ರಕ್ಕೆ ಬೋಟ್ ಮೇಲೆ ಹೋದರೆ, ಎಂಟು ಗಂಟೆಗೆ ಮೀನು ಹಿಡಿದು ವಾಪಸ್ಸಾಗುತ್ತಾರೆ. ಪುರುಷರು ಮೀನು ಮಾರಲು ಮಾರುಕಟ್ಟೆಗೆ ಹೋಗುವುದಿಲ್ಲ.  ಮುಂದಿನ ಕೆಲಸ ಮನೆಯ ಮಹಿಳೆಯರದು. ಅವರು ಮೀನುಗಳನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರುತ್ತಾರೆ. ” ನನಗೆ ಇಬ್ಬರು ಮಕ್ಕಳು…ಮಗ ಪಿ.ಯು.ಸಿ…ಮಗಳು ಏಳನೆ ಕ್ಲಾಸು..ಶಾಲೆ ಹತ್ತಿರವಿದೆ…ಬೆಳಗ್ಗಿನ ತಿಂಡಿ ಚೆನ್ನಾಗಿ ಆಗಬೇಕು…ಮಧ್ಯಾಹ್ನಕ್ಕೆ ಶಾಲೆಯಲ್ಲಿ ಬಿಸಿಯೂಟ ಸಿಗುತ್ತದೆ…ಇಲ್ಲಿ ಊರವರು ಬಿಸಿಯೂಟ ವಾರಕ್ಕೊಮ್ಮೆ ಚೆಕ್ ಮಾಡುತ್ತಾರೆ…11 ಜನರ ಸಮಿತಿ ಇದೆ…ಊಟ ಚೆನ್ನಾಗಿಲ್ಲದಿದ್ದರೆ ಪಾಲಕರು ಸಮಿತಿಗೆ ಹೇಳಬೇಕು…ನಾನು ಕುಮಟಾದವಳು….. ಇಲ್ಲಿಂದ ಒಂದು ಗಂಟೆಯಲ್ಲಿ ಹೋಗಿಬರಬಹುದು…ನಿಮಗೆ ಟೀ ಮಾಡೋಣ ಅಂದ್ರೆ ಹಾಲು ಮುಗಿದಿದೆ… ಈವತ್ತು ಪಕ್ಕದ ಹಳದೀಪುರದಲ್ಲಿ ಜಾತ್ರೆ…ಮಗ ಬೈಕ್ ನಲ್ಲಿ ಅಲ್ಲಿಗೆ ಹೋಗಿದ್ದಾನೆ…ನಮಗೆ ಇಲ್ಲಿ ಏನೂ ತೊಂದರೆಯಿಲ್ಲ, ..ತಿಂಗಳಿಗಾಗುವಷ್ಟು ದಿನಸಿ ತಂದರೆ ಆರಾಮವಾಗಿ ಬದುಕಬಹುದು….ಸಿಟಿಯಲ್ಲಿ ಹಾಗಲ್ಲವಂತೆ ಹೌದಾ”  ಇತ್ಯಾದಿ ಬಹುಕಾಲದ ಗೆಳತಿಯರಂತೆ ಹರಟಿದೆವು.

ಹೀಗೆ ಅವರ ಮನೆಯಲ್ಲಿ 3-4 ಗಂಟೆ ಕಳೆದು, ಕಡಲಿನ ದಡದುದ್ದಕ್ಕೂ ಸ್ವಲ್ಪ ನಡೆದಾಡಿ ಬಂದೆ. ಅಷ್ಟರಲ್ಲಿ ನಮ್ಮ ತಂಡದವರು ಉಪ್ಪು ನೀರಿನಲ್ಲಿ ತೊಯ್ದ ಬಟ್ಟೆಯೊಂದಿಗೆ, ಕಾಲಿಗೆ ಮೆತ್ತಿಕೊಂಡ ಮರಳಿನೊಂದಿಗೆ ಶೋಭಿತರಾಗಿ ಗಲಾಟೆಯೆಬ್ಬಿಸುತ್ತಾ ಬಂದರು. ಹೇಗೂ ತೆಂಗಿನಮರದ ಕೆಳಗೆ ನೀರಿನ ಪೈಪ್ ಇತ್ತಲ್ಲಾ , ಅದನ್ನು ಕೈಗೆತ್ತಿಕೊಂಡು ಕಾರ್ ಸರ್ವಿಸ್ ನವರು ಕಾರು ತೊಳೆಯುವಂತೆ ಪರಸ್ಪರ ನೀರು ಎರಚಿಕೊಂಡು ‘ಸ್ನಾನ’ ಮಾಡಿದರು. ಎಲ್ಲರೂ ಫ಼್ರೆಶ್ ಆಗಿ. ಬಾಟಲಿಗಳಲ್ಲಿ ಕುಡಿಯುವ ನೀರು ತುಂಬಿಸಿ, ಮನೆಯರಿಗೆ ಧನ್ಯವಾದ ಹೇಳಿ ಹೊರಟೆವು.

“ನೀವು ಬರಬಹುದಾಗಿತ್ತು..ಸಮುದ್ರದಲ್ಲಿ 5 ಅಡಿ ನೀರಿಗೆ ಬಿದ್ದೆವು…ಆದರೆ ಚೆನ್ನಾಗಿತ್ತು…ಮಿಸ್ ಮಾಡ್ಕೊಂಡ್ರಿ “ ಅಂದರು ಒಂದಿಬ್ಬರು. ‘ನಾನೇನೂ ಮಿಸ್ ಮಾಡಿಲ್ಲ… ಸಮುದ್ರ ನೊಡುತ್ತಾ ಹಿತವಾಗಿ ನಿದ್ರಿಸಿದೆ, ಮನೆಯಾಕೆಯೊಂದಿಗೆ ಮಾತಾನಾಡಿ ಕೆಲವು ವಿಷಯ ತಿಳಕೊಂಡೆ…ಗುಡ್ಡ-ಬೆಟ್ಟ ಹತ್ತುವ ಕಾರ್ಯಕ್ರಮ ಬೇರೆ ಕಡೆಯೂ ಸಿಗುತ್ತದೆ….ನನಗಂತೂ ಈ ಮನೆಯಲ್ಲಿ ಇದ್ದುದೇ ಇಷ್ಟವಾಯಿತು. ನೀವೇ ಇದನ್ನು ಮಿಸ್ ಮಾಡ್ಕೊಂಡ್ರಿ’ ಎಂದೆ!

ಶ್ರಮದಾಯಕ ಆದರೆ ನೆಮ್ಮದಿಯ, ತೃಪ್ತಿಯ, ನಿಧಾನ ಗತಿಯ ಬದುಕು ಅವರದು. ನಗರಜೀವನದ ನಾಗಾಲೋಟದ ಬದುಕಿನಲ್ಲಿರುವ ನಮಗೆ ಇಷ್ಟು ಆತ್ಮೀಯವಾಗಿ, ನಿಷ್ಕಳಂಕವಾಗಿ ಮಾತನಾಡಲು ಸಮಯ ಇದೆಯೇ? ಅಪರಿಚಿತರ ದೊಡ್ಡ ದಂಡು ಮನೆಗೆ ಬಂದಾಗ ಸಿಡಿಮಿಡಿಗೊಳ್ಳದೆ ನಗುಮುಖದಿಂದ ಉಪಚರಿಸುವ ತಾಳ್ಮೆ ಇವೆಯೇ? ….ಬಹುಶ: ಇಲ್ಲ, ಇದ್ದರೂ ತೀರಾ ವಿರಳ.

 

– ಹೇಮಮಾಲಾ.ಬಿ

(ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾದ ಬರಹ)

5 Responses

  1. jayashree says:

    ನೈಸ್ ಆರ್ಟಿಕಲ್ .

  2. Purnima says:

    ಚೆನ್ನಾಗಿದೆ ನಿಮ್ಮ ಕಡಲ ತೀರದ ಬದುಕಿನ ಜೊತೆಗಿನ ಸ್ಪಂದನ

  3. Aditi says:

    Very nicely written, so that I could visualize those moments.. 🙂

  4. Krishnaveni Kidoor says:

    ತಾಜಾ ತಾಜಾ ಫೋಟೋ . .ಸತ್ತ ಮೀನು ನೋಡಲಾಗುವುದಿಲ್ಲ .ಈಜುವ ಮೀನು ಕಾಣಲು ಚಂದ .

  5. Jagadish says:

    Very nice article ..Congrats…Though I found it difficult to follow some Kannada words…..

Leave a Reply to Krishnaveni Kidoor Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: