ಕಥೆಯಾದಳು…..

Spread the love
Share Button

 ಅಶೋಕ ಕೆ. ಜಿ. ಮಿಜಾರು.

“ಅದೇಕೋ ಏನೋ ಈ ಜೀವನವೆವಂದರೆ ಗೋಜಲು ಅಲ್ಲವೇನೋ ಗಿರೀಶ”, ದಿವಾಕರ ಕೇಳಿದಾಗ, “ಯಾಕೋ ಹಾಗಂತೀಯ ನೀನು ಖುಷಿಯಾಗಿಲ್ಲವೇನು?”. “ಅಯ್ಯೋ ಹಾಗಲ್ಲ, ಕೆಲವೊಮ್ಮೆ ಮೇಲಿಂದ ಮೇಲೆ ನಿರಾಸೆಯಾದರೆ ಬದುಕು ಬೇಸರವೆನಿಸುತ್ತದೆ” ಎಂದು ಉತ್ತರಿಸಿದ ದಿವಾಕರ. “ಏನಾಯ್ತು ಅಂತ ಬಿಡಿಸಿ ಹೇಳಿದ್ರೆ ತಾನೇ ಗೊತ್ತಾಗೋದು, ಹೀಗೆ ಒಗಟಿನ ಹಾಗೇಕೆ ಹೇಳ್ತೀಯ!” ಗಿರೀಶ ಕೇಳಿದ್ರೂ ಅದು ಅವನ ಕಿವಿ ಮುಟ್ಟಲಿಲ್ಲ. ದಿವಾಕರ ಮೌನವ್ರತಗೈದಂತೆ ಸುಮ್ಮನಾಗಿದ್ದ. ಹತ್ತು ನಿಮಿಷ ಕಳೆದಿರಬಹುದು, ಗಿರೀಶ ಎಚ್ಚರಿಸಿದಾಗ ನಿಟ್ಟುಸಿರಿಟ್ಟ ದಿವಾಕರ ಏನೋ ಹೇಳಲು ಹೋಗಿ ಮತ್ತೆ ಸುಮ್ಮನಾದ. ಅವನ ಮನಸ್ಸು ಜೇನುಗೂಡಿಗೆ ಕಲ್ಲೆಸೆದಂತೆ ಕೆಲವು ಸನ್ನಿವೇಶಗಳ ಸುತ್ತಲೇ ತಿರುಗುತ್ತಿತ್ತು. ಹಳೆಯ ನೆನಪುಗಳನ್ನು ಕೆದಕುತ್ತಾ ಸಾಗಿತು.

ಅಂದು ಎಂದಿನಂತೆ ಅಂದೂ ಸಿಟಿ ಬಸ್ಸಿಗೆ ಕಾಯುತ್ತಿದ್ದೆ, ಯಾವತ್ತಿನದ್ದೇ ವಾತಾವರಣ. ಬೆಳಗಿನ ಪ್ರಶಾಂತತೆಯನ್ನು ಕದಡಿ ರಸ್ತೆ ಮೇಲೆ ಸಂಚರಿಸುವ ವಾಹನಗಳು, ಅವುಗಳ ಹಾರ್ನ್ ಶಬ್ಧ, ಅಲ್ಲಿ ಇಲ್ಲಿ ಓಡಾಡುವ ಜನ, ಅರೆತೆರೆದಿರುವ ಅಂಗಡಿ ಬಾಗಿಲುಗಳು, ಬಸ್‌ಸ್ಟಾಂಡ್ ಪಕ್ಕದಲ್ಲಿರುವ ಮರಗಳೆಡೆಯಿಂದ ಮೆಲ್ಲನೆ ಕಣ್ಣು ಕುಕ್ಕುವ ಸೂರ್‍ಯ; ಎಲ್ಲಾ ಸಾಮಾನ್ಯದಂತಿತ್ತು. ಹೀಗೆ ನೋಡ್ತಾ ನೋಡ್ತಾ ಕಣ್ಣು ಸರಿದದ್ದು ಅಲ್ಲಿ, ಒಬ್ಬಳೇ ನಿಂತಿರುವ ಯುವತಿಯತ್ತ. ಇಷ್ಟು ದಿನ ಅವಳನ್ನು ಇಲ್ಲಿ ನೋಡಿರಲಿಲ್ಲ, ಇಂದು ಮೊದಲಬಾರಿಗೆ ನೋಡುತ್ತಿರುವುದು. ಬಿಳಿಯ ಬಣ್ಣದ ಚೂಡಿದಾರ ತೊಟ್ಟಿದ್ದ ಆಕೆ ಮಧ್ಯಮವರ್ಗದವಳೆಂದು ಗುರುತಿಸಬಹುದಿತ್ತು. ನೀಳವಾದ ಜಡೆ, ಬಟ್ಟಲು ಕಣ್ಣುಗಳು, ಗೌರವರ್ಣ ಆಕೆಯನ್ನು ಶ್ವೇತಸುಂದರಿಯನ್ನಾಗಿ ಮೂಡಿಸಿತ್ತು. ಪ್ರಥಮ ನೋಟದಲ್ಲೇ ಆಕೆ ಮನಸಲ್ಲಿ ಅಚ್ಚೊತ್ತಿದ್ದಳು. ನೋಡುತ್ತಿದ್ದಂತೆ ಬಸ್ಸು ಬಂದೇ ಬಿಟ್ಟಿತು. ನಾನು ಬಸ್ಸು ಹತ್ತಿದೆ, ಅವಳೂ ಅದೇ ಬಸ್ಸು ಹತ್ತಿದ್ದು ನೋಡಿ ಖುಷಿಯಾಯಿತು. ಆದರೆ ನಾನು ಇಳಿಯುವವರೆಗೂ ಆಕೆ ಇಳಿದಂತೆ ಕಾಣಲಿಲ್ಲ. ಬಹುಶಃ ಮುಂದಿನ ಊರಿಗೆ ಇರಬಹುದೇನೋ! ಮತ್ತೆ ಆಕೆಯ ನೆನಪು ಆ ದಿನ ಆಗಲೇ ಇಲ್ಲ, ನನ್ನದೇ ಫೈನಾನ್ಸ್ ವ್ಯವಹಾರದಲ್ಲಿ ಮನಸ್ಸು ಮುಳುಗಿ ಹೋಗಿತ್ತು. ಸಂಜೆಯ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕೆಯ ನೆನಪಾಗಿ ಬಸ್ಸಲ್ಲೆಲ್ಲಾ ನೋಡಿದರೂ ಆಕೆ ಇರಲಿಲ್ಲ.

ಮತ್ತೆ ಮರುದಿನ ಅದೇ ಬಸ್ಸಿಗೆ ಕಾಯುತ್ತಿದ್ದಂತೆ ಆಕೆ ನಿನ್ನೆ ನಿಂತಿದ್ದ ಸ್ಥಳವನ್ನೊಮ್ಮೆ ನೋಡಿದೆ. ಅವಳು ಅಲ್ಲಿದ್ದಳು, ಖುಷಿಯಾಯಿತು. ಏಕೋ ಏನೋ ಆಕೆಯ ರೂಪ, ಎತ್ತರದ ನಿಲುವು ಯಾರನ್ನೋ ಹೋಲುತ್ತಿತ್ತು. ಅವಳಲ್ಲಿ ಮಾತನಾಡಬೇಕು, ಸ್ನೇಹ ಬೆಳೆಸಬೇಕೆಂದು ಮನಸ್ಸು ಬಯಸುತ್ತಿತ್ತು. ಆದರೆ ಇನ್ನೊಂದೆಡೆ ಅಳಕು. ಕೆಲವರು ಮುಖಮೂತಿ ನೋಡದೆ ಬಯ್ಯುತ್ತಾರೆ ಮತ್ತೆ ಕೆಲವರು ಪರಿಚಯವಾದಾಗಲೇ ಹಣ ಕೀಳುತ್ತಾರೆ ಎಂದು ಗೆಳೆಯರು ಹೇಳಿದ್ದು ಕೇಳಿದ್ದೇನೆ ಇನ್ನೂ ಏನೇನೋ ಯೋಚಿಸುತ್ತಿದ್ದಂತೆ ಬಸ್ಸು ಬಂದಿತ್ತು.

ಪ್ರತೀ ದಿನ ಇದೇ ರೀತಿ ಮುಂದುವರಿದಿದ್ದು, ದಿನಗಳು ಸರಿದದ್ದೇ ತಿಳಿಯಲಿಲ್ಲ. ಅವಳನ್ನು ನೋಡಿದಂದಿನಿಂದ ದಿನವಿಡೀ ಲವಲವಿಕೆಯಿಂದ ಕೆಲಸ ಸಾಗುತಿತ್ತು. ಅವಳ ಬಗ್ಗೆ ತಿಳಿಯುವ ಕುತೂಹಲ ಜಾಸ್ತಿಯಾಗುತ್ತಿತ್ತು. ಆದರೂ ಆ ಆಸೆಗೆ ಮನಸ್ಸು ಕಡಿವಾಣ ಹಾಕಿಬಿಟ್ಟಿತ್ತು. ತಿಂಗಳುಗಳು ಉರುಳಿದ್ದೂ ಗಮನಕ್ಕೆ ಬಂದಿರಲಿಲ್ಲ. ಇಷ್ಷು ಸಮಯದಲ್ಲಿಯೂ ಆಕೆಗೆ ಯಾರೂ ಸ್ನೇಹಿತೆಯರಿದ್ದಂತೆ ಕಾಣಲಿಲ್ಲ. ಇತ್ತೀಚೆಗೆ ಆಕೆಯೂ ನನ್ನನ್ನು ಗಮನಿಸಿದಂತಿತ್ತು. ಒಂದು ಸಲ ಮುಖಾಮುಖಿಯಾದಾಗ ಸಣ್ಣಗೆ ನಗುಮುಖವಿತ್ತಳು. ಆದರೆ ಆ ನಗುವಲ್ಲಿ ಬಲವಿರಲಿಲ್ಲ. ಜೀವನದಲ್ಲಿ ಏನನ್ನೋ ಕಳಕೊಂಡಂತಿತ್ತು.

ಅವಳು ಯಾರನ್ನು ಹೋಲುತ್ತಿದ್ದಳು? ಇದನ್ನೇ ಮನ ಕೆದಕುತ್ತಿತ್ತು ಹೌದು ಆಕೆಯ ನಿಲುವು ರೂಪ ತನ್ನ ತಂಗಿಯನ್ನು ಹೋಲುತ್ತಿತ್ತು. ತುಂಟತನದಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ತನ್ನ ಪ್ರೀತಿಯಿಂದ ಎಲ್ಲರನ್ನೂ ಬಂಧಿಸಿದ್ದಳು. ಒಮ್ಮೆ ನೆನಪಾಯಿತು ಆ ಕರಾಳ ದಿನ. ಆರು ವರ್ಷಗಳ ಕೆಳಗೆ ತಂಗಿ S.S.ಐ.ಅ ಪರೀಕ್ಷೆ ಮುಗಿಸಿ ರಸ್ತೆಯಲ್ಲಿ ಬರುತ್ತಿದ್ದಳು ಆಗ ಬ್ರೇಕ್‌ಫೈಲಾದ ಲಾರಿಯೊಂದು ಆಕೆಯ ಮೇಲೆ ಯಮದೂತನಂತೆ ಹಾದುಹೋಗಿತ್ತು. ದೇಹವೆಲ್ಲ ರಕ್ತಸಿಕ್ತವಾಗಿ, ಖುಷಿಯ ದಿನಗಳನ್ನೆಲ್ಲ ಮಣ್ಣು ಮಾಡಿ ಹೋಗಿದ್ದಳು. ಈಗ ಅವಳೇ ಇನ್ನೊಂದು ರೂಪದಲ್ಲಿ ಈ ಅಣ್ಣನಿಗೋಸ್ಕರ ಬಂದಿದ್ದಾಳೆ ಎಂದೆಣಿಸಿತ್ತು.

ಮರುದಿನ ಆಕೆಯ ಬಳಿ ಸ್ನೇಹ ಹಸ್ತ ಚಾಚಲೇಬೇಕೆಂಬ ಧೃಡ ನಿಶ್ಚಯ ಮಾಡಿಯಾಗಿತ್ತು. ಆದರೇನು ಬಂತು, ಅವಳು ಆ ದಿನ ಬರಲೇ ಇಲ್ಲ. ಬಹುಶಃ ರಜ ಇರಬಹುದೇನೋ! ದಿನವಿಡೀ ಉತ್ಸಾಹವೇ ಇಲ್ಲವಾಯ್ತು. ಒಂದು ವಾರವಾದರೂ ಆಕೆ ಬರಲಿಲ್ಲ.

ಇನ್ನು ತಡಮಾಡುವುದು ಸರಿಯಲ್ಲ, ಎಂದು ಆಕೆ ಇಳಿಯುತ್ತಿದ್ದ ನಿಲ್ದಾಣದಲ್ಲಿ ಇಳಿದು ಆಕೆಯ ಚಹರೆ ವಿವರಿಸಿ ಅಲ್ಲಿ ಇಲ್ಲಿ ಕೇಳಿದಾಗ ತಿಳಿದಿದ್ದು ಆಕೆ ಎಕ್ಸ್‌ಪೋರ್ಟ್ ಕಂಪನಿಯಲ್ಲಿ ಕ್ಲರ್ಕ್ ಎಂದು. ಅಲ್ಲಿನ ಮ್ಯಾನೇಜರ್‌ನ ಪರಿಚಯ ಮಾಡಿಕೊಂಡು ಆಕೆಯ ಬಗ್ಗೆ ತಿಳಿದುಕೊಂಡೆ ಅವಳ ಹೆಸರು “ಮಧುವೇಣಿ”. ಆ ಕಂಪೆನಿಯ ಮಾಲಿಕನ ಪರಿಚಯದಲ್ಲಿ ಆಕೆ ಅಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಗ ಒಂದೆರಡು ವಾರದಿಂದ ಆಕೆ ಬರಲೇ ಇಲ್ಲ ಎಂದಷ್ಟೇ ಮ್ಯಾನೇಜರ್‌ನಿಂದ ತಿಳಿದಿದ್ದು. ಆಕೆಯ ಸಂಬಂಧಿ ಎಂದು ಹೇಳಿ ಅವನಿಂದ ವಿಳಾಸ ಪಡೆದು ಅವಳ ಮನೆಯತ್ತ ಓಡಾಡಿದ್ದೆ. ಅಲ್ಲಿ ಅವಳ ತಂದೆ ಸಪ್ಪೆ ಮುಖಮಾಡಿ ಕುಳಿತಿದ್ದರು. ವಿಷಯವೇನೆಂದು ಕೇಳಿದಾಗ ಅವಳ ಕಥೆಯನ್ನೆಲ್ಲ ಬಿಡಿಸಿಟ್ಟರು. ಮಧುವೇಣಿ ತುಂಬಾ ಮುಗ್ಧೆ. ಆದರೆ ಅವಳ ಜೀವನದಲ್ಲಿ ಸಮಸ್ಯೆಗಳು ಅನೇಕ. ಹೀಗೆ ಎರಡು ವರ್ಷಗಳಿಂದ ಎದೆನೋವು ಎಂದು ಹೇಳುತ್ತಿದ್ದಳು. ಮದ್ದು ಮಾಡಿಯೂ ಗುಣವಾಗದಾಗ, ಎಕ್ಸರೇಯಲ್ಲಿ ತಿಳಿದಿದ್ದು ಆಕೆಯ ಹೃದಯದಲ್ಲಿ ರಂಧ್ರವಿದೆಯೆಂದು. ಒಂದು ವಾರದಿಂದ ಎದೆನೋವು ಜಾಸ್ತಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇಂದು ಶಸ್ತೃಚಿಕಿತ್ಸೆ ಮಾಡುತ್ತಾರೆ. ವಿಷಯ ತಿಳಿದ ನಾನು ದಿಕ್ಕುತೋಚದವನಾದೆ.

ನಾನು ಮತ್ತು ಅವಳ ತಂದೆ ಆಸ್ಪತ್ರೆಗೆ ಹೋದಾಗ ಆಪರೇಶನ್ ಥಿಯೇಟರಿಗೆ ಅವಳನ್ನು ಕೊಂಡೊಯ್ಯಲಾಗಿತ್ತು. ಅವಳ ಅಣ್ಣ ಹೊರಗೆ ಕಾದು ಕುಳಿತಿದ್ದನು. ಸುಮಾರು ಎರಡು ಘಂಟೆಗಳ ಶಸ್ತೃಚಿಕಿತ್ಸೆ ವಿಫಲವಾಯ್ತು. ವೈದ್ಯರ ಪ್ರಯತ್ನ ಫಲಿಸಲಿಲ್ಲ. ಮಧು ಎಲ್ಲರ ಬಾಳಲ್ಲೂ ಕಹಿ ನೋವನ್ನು ಕೊಟ್ಟು ಮರೆಯಾಗಿದ್ದಳು.
ನನ್ನ ಹೃದಯ ಬಯಸಿದ್ದ ತಂಗಿಯ ಸ್ಥಾನ ಖಾಲಿಯಾಗಿತ್ತು. ಯಾರಂತೆಯೋ ಹೋಲುತ್ತಾಳೆ ಎಂಬಂತೆ ಹತ್ತಿರವಾಗಿದ್ದ ನನ್ನ ತಂಗಿ ಮತ್ತೆ ಮಾಯವಾದಳು. ತಂಗಿಯ ಅಗಲುವಿಕೆಯ ಗಾಯದ ಮೇಲೆ ಮಧುವಿನ ಸಾವು ಬರೆ ಎಳೆದಂತಾಗಿತ್ತು. ಮಧು ತಂಗಿಯಾಗಿ ಬರಲೇ ಇಲ್ಲ. ಆಕೆ ಕಥೆಯಾಗಿಯೇ ಉಳಿದಳು.
ಎಲ್ಲಾ ಯೋಚನೆಗಳನ್ನು ಹೋಡೆದೋಡಿಸಿ ಹೋರ ಪ್ರಪಂಚಕ್ಕೆ ಬಂದಾಗ ಗಿರೀಶ ಇರಲಿಲ್ಲ. ಅವನಿಗೆ ಹೇಳಬೇಕೆಂದಿದ್ದ ಈ ಸಾರ ಒಗಟಾಗಿಯೇ ಉಳಿಯಿತು. ನಿರಾಸೆ ಏಳು ಬೀಳು ಜೀವನದಲ್ಲಿ ಸಾಮಾನ್ಯವೇ ಅಲ್ಲವೇ! ಅದಕ್ಕೆಂದೇ ನಾವು ಹೇಳಿದ ಹಾಗೆ ನಡೆಯದು. ಬೇಸರ ದುಃಖವನ್ನೆಲ್ಲಾ ನುಂಗಿಕೊಂಡು ಮನೆಯತ್ತ ಹೊರಟ ದಿವಾಕರ.

 

01/03/2014

1 Response

  1. BH says:

    ಮನ ಮುಟ್ಟಿದ, ಭಾವಪೂರ್ಣ ಕಥೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: