ತ್ರಿ-ಕೋನ

Share Button

 

Ashok KG MIjar

ಅಂಕುಶ್ ಅಂತಿಮ ಪದವಿ ವಿದ್ಯಾರ್ಥಿ. ಸಿರಿವಂತ ಮನೆತನದ ಏಕೈಕ ಕುಡಿ. ತಾಯಿ ಮಹಾ ದೈವಭಕ್ತೆ, ತಂದೆ ಹಲವು ಕಂಪೆನಿಗಳ ಒಡೆಯ. ಯಾವತ್ತಿದ್ದರೂ ಪ್ರತಿಷ್ಠೆಗೆ ಬೆಲೆ ಕೊಡುವ ವ್ಯಕ್ತಿ. ಅಂಕುಶ್ ಬಹಳ ಆರಾಮಾಗಿ, ಕಷ್ಟ-ನಷ್ಟ ಏನೇಂಬುದೇ ಗೊತ್ತಿಲ್ಲದೆ ಬೆಳೆದ ಹುಡುಗ. ಅವನದೊಂದು ವಿಚಿತ್ರ ಗುಣ. ಎಲ್ಲರೂ ಸರಿ ಅಂದರೆ ಅದು ಅವನ ರೀತಿಯಲ್ಲಿ ತಪ್ಪು. ತಾಯಿ ಪೂಜೆಗೆ ಬಾ ಎಂದಾಗ, “ಐ ಡೋಂಟ್ ಬಿಲೀವ್ ಗಾಡ್ ಮೋಮ್” ಅಂತ ಉದಾಸೀನವಾಗಿ ಹೇಳುತ್ತಿದ್ದ. ಯಾವಾಗ ಪಿಯುಸಿ ಮೆಟ್ಟಲೇರಿದ್ದನೋ ಆವಾಗಲೇ ಅವನು ಈ ರೀತಿ ಬದಲಾವಣೆಯಾಗಿದ್ದ. ಶ್ರೀಮಂತ ಗೆಳೆಯರ ಸಹವಾಸವೋ, ಅಥವಾ ತನ್ನಂತ ವಿಚಿತ್ರ ಮನಸ್ಥಿತಿಯ ಗೆಳೆಯರ ಬಳಗವೋ ಬೇಡದುದರ ಕಡೆಗೇನೆ ಆಸಕ್ತಿ ಬೆಳೆದಿತ್ತು. ತಾಯಿಯ ದೈವಭಕ್ತಿ, ಪೂಜೆ, ಪುನಸ್ಕಾರ ಯಾವುದೂ ಇಷ್ಟವಾಗುತ್ತಿರಲಿಲ್ಲ. ಕಾಲೇಜಿಗೆ ಬಂದ ಮೇಲಂತೂ ತಾಯಿಯ ಹತ್ತಿರ ಮಾತನಾಡುವುದೇ ಕಮ್ಮಿಯಾಗಿತ್ತು. ದೇವರಿಲ್ಲ ಎಂದು ವಾದ ಮಾಡುತ್ತಿದ್ದವನಿಗೆ ಅವನ ನಾಸ್ತಿಕ ಗೆಳೆಯರೂ ಕುಮ್ಮಕ್ಕು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿ ದೊಡ್ಡ ವಾಗ್ವಾದಕ್ಕೇ ಕಾರಣನಾಗಿದ್ದ.

ಕಾಲೇಜ್ ಎಲೆಕ್ಷನ್ ಗೆ ಸಿಕ್ಕಾಪಟ್ಟೆ ದುಡ್ಡು ಸುರಿದು ಪ್ರೆಸಿಡೆಂಟ್ ಆದ. ಹೊಸ ಬೈಕ್ ತಗೊಂಡು ಸಿಕ್ಕಾಪಟ್ಟೆ ಸ್ಪೀಡ್ ಲ್ಲಿ ಓಡಿಸುವ ಖಯಾಲಿ ಬೆಳೆಸಿಕೊಂಡ. ಒಂದು ದಿನ ಅನಾಹುತ ನಡೆದೇ ಹೋಯಿತು. ನಡು ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿ ರಕ್ತಸಿಕ್ತವಾಗಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ತುಂಬಾ ರಕ್ತಹೋಗಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಒಂದು ಕಡೆಯಿಂದ ರಕ್ತ ಕೊಡುವ ದಾನಿಗಳು ಬೇಕಿದ್ದರೆ ಇನ್ನೊಂದೆಡೆ ಕಿಡ್ನಿಗೂ ಪೆಟ್ಟು ಬಿದ್ದಿದ್ದು ಕಿಡ್ನಿಯ ಅವಶ್ಯಕತೆ ಇತ್ತು. ಡಾಕ್ಟರ್ ಹೇಳಿದರು…”ನಿಮ್ಮ ಮಗ ಕೋಮಾಗೆ ಹೋಗುವ ಎಲ್ಲಾ ಲಕ್ಷಣಗಳಿವೆ.. ಸೋ.. ಆದಷ್ಟು ಬೇಗ ಆಪರೇಷನ್ ಮಾಡಲೇಬೇಕು. ಅವನದ್ದು AB (-) ಬ್ಲಡ್ ಗ್ರೂಪ್.  ಒಂದು ಸಂಶೋಧನೆ ಪ್ರಕಾರ ನೂರರಲ್ಲಿ ಒಬ್ಬರಿಗೆ ಮಾತ್ರ ಈ ರಕ್ತ ಇರೋದು. ನಮ್ಮಲ್ಲಿ ಸಮಯಾವಕಾಶವೂ ಕಡಿಮೆಯಿದೆ. ನೀವೂ ಪ್ರಯತ್ನ ಮಾಡಿ ನಾವು ನಮ್ಮ ಕಡೆಯಿಂದ ಶಕ್ತಿಮೀರಿ ಪ್ರಯತ್ನಿಸುತ್ತೀವಿ”.

Mother child

ಅಂಕುಶ್ ತಂದೆ ಕಿಡ್ನಿ ಕೊಡುವವರಿಗೆ ದೊಡ್ಡ ಮೊತ್ತ ತೆರುವುದಾಗಿ ಹೇಳಿದಾಗ, ಅವನ ಕಂಪೆನಿಯ ಕ್ಲರ್ಕ್ ಒಬ್ಬನ ಕಿಡ್ನಿ ಹೋಲಿಕೆಯಾಗಿ ಸಿಕ್ಕಿತು. ಆದ್ರೆ ರಕ್ತದ ವ್ಯವಸ್ತೆ ಸ್ವಲ್ಪ ಕಷ್ಟವೇ ಆಯಿತು. ಕೊನೆಗೆ ವಿದ್ಯಾರ್ಥಿ ಬಳಗದಲ್ಲಿ ಒಬ್ಬನ ರಕ್ತದಾನ ವರವಾಗಿ ಸಿಕ್ಕಿತು. ಸಮಯಕ್ಕೆ ಸರಿಯಾಗಿ ಆಪರೇಷನ್ ನಡೆದು ಡಾಕ್ಟರ್ ಹೊರಬಂದರು. “ನೋಡಿ ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ದೇವರ ಆಶೀರ್ವಾದ ಇದ್ರೆ ಖಂಡಿತಾ ಬದುಕುಳಿಯುತ್ತಾನೆ.” ಅಂಕುಶ್ ನ ತಾಯಿ ತಾನು ನಂಬಿದ ದೇವರುಗಳಿಗೆ ಹರಕೆ ಹೇಳಿ ಪ್ರಸಾದ ತಂದು ನೆತ್ತಿಯ ಮೇಲಿಟ್ಟರು. ಎರಡು ದಿನಗಳಲ್ಲಿ ನಿಧಾನವಾಗಿ ಕಣ್ಣು ಬಿಟ್ಟ ಅಂಕುಶ್. ಅವನಿಗೆ ಸರಿಯಾಗಿ ಎಲ್ಲಾ ವಿಷಯ ತಿಳಿಯುತಿತ್ತು. ಅಪ್ಪ ಗೆಳೆಯರ ಜೊತೆ ಹೇಳುತ್ತಿದ್ದರು ‘ನನ್ನ ಜೊತೆ ಹಣ ಇತ್ತು, ಹಾಗೆ ಮಗನನ್ನು ಉಳಿಸಿಕೊಂಡೆ’. ಡಾಕ್ಟರ್ ಅಂಕುಶ್ ನ ಪಕ್ಕ ಬಂದವರೇ “ಇಟ್ಸ್ ಮಿರಾಕಲ್ ಇನ್ ಸೈನ್ಸ್ ಮೈ ಬಾಯ್. ನೀನು ಬದುಕುಳಿದದ್ದೇ ಗ್ರೇಟ್.”ಎಂದು ನಸು ನಕ್ಕರು.
ಪಕ್ಕದಲ್ಲೇ ಇದ್ದ ಅಮ್ಮ ಮಾತ್ರ ಏನೂ ಹೇಳದೆ ಮಗನ ನೆತ್ತಿ ಸವರುತ್ತಿದ್ದರು. ಒಂದು ತಿಂಗಳ ಬಳಿಕ ಮನೆಗೆ ಬಂದಾಗ, ಮನೆಯ ಕೆಲಸದವರು ಆಡುವ ಮಾತುಗಳು ಅವನ ಕಿವಿಗೆ ಬಿದ್ದುವು. “ಏನೇ ಹೇಳಿ ಧನಿಯವ್ರ ಮಗ ಬದುಕಿ ಬಂದದ್ದೇ ಈ ಮನೆಯ ಅಮ್ಮನವ್ರಿಂದ. ಅವರ ಉಪವಾಸ, ವ್ರತ, ಪೂಜೆ ಸಾಮಾನ್ಯದವ್ರಿಂದ ಅಸಾಧ್ಯ ಬಿಡಿ.” ಈ ಮಾತು ಕೇಳಿದ್ದೇ ಅವನ ಮನ ಕರಗಿತು. ಕಣ್ಣಂಚಿನಲಿ ನೀರಾಡಿತು. ದೇವರಿದ್ದಾನೋ ಇಲ್ಲವೋ….. ಅಮ್ಮನ ಮುಂದೆ ಬೇರೇನೂ ಗೋಚರಿಸಲೇ ಇಲ್ಲ….!

 

– ಅಶೋಕ್ ಕೆ. ಜಿ. ಮಿಜಾರ್.

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: