ತ್ಯಾಗರಾಜರು-{ವಾಗ್ಗೇಯಕಾರರು}

Share Button

Savithri Doddamani

ಸಂಗೀತ ದಿಗ್ವಿಜಯರಾದ ತ್ಯಾಗರಾಜರು , ತ್ರಿಮೂರ್ತಿಗಳಲ್ಲಿ ಎರಡನೆಯವರು.ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿಗಳೇ ತ್ಯಾಗರಾಜರು.

ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಕಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಜನ್ಮ ತಾಳಿದರು. ಇವರು ಮುರುಕುನಾಡು ಎಂಬ ತೆಲುಗು ಬ್ರಾಹ್ಮಣ ವರ್ಗಕ್ಕೆ ಸೇರಿದವರು.ಭಾರದ್ವಾಜಗೋತ್ರ-ಮೂರನೇ ಕುಮಾರರಾಗಿ ಜನ್ಮತಾಳಿದರು.ಇವರ ತಂದೆ ರಾಮಬ್ರಹ್ಮರು ಸಂಗೀತ ವಿದ್ವಾಂಸರೂ ,ದೈವ ಭಕ್ತರೂ ಆಗಿದ್ದರು. ತಮ್ಮ 14ನೇ ವಯಸ್ಸಿನೊಳಗಾಗಿ ತೆಲುಗು,ಸಂಸ್ಕೃತ ಭಾಷೆಗಳನ್ನು ಕಲಿತು,ಕಾವ್ಯ, ನಾಟಕ,ಅಲಂಕಾರಗಳಲ್ಲಿ ವಿಷೇಶ ಪಾಂಡಿತ್ಯವನ್ನು ಹೊಂದಿದರು.ಇವರ ತಂದೆ ರಾಮಬ್ರಹ್ಮರು ತಿರುವಾರೂರು ಬಿಟ್ಟು ತಿರುವಯ್ಯಾರಿಗೆ ಬಂದು ನೆಲಸಿದರಂತೆ.ಆಗಲೇ ಸುಂಠಿ ವೆಂಕಟರಮಣಯ್ಯ ಎಂಬವರ ಬಳಿ ಸಂಗೀತ ಅಭ್ಯಾಸಕ್ಕೆ ತೊಡಗಿದರು.

ತಂಜಾವೂರಿನ ರಾಜ ಅವರಿಗೆ ಮನೆ ಕೊಟ್ಟರು. ತ್ಯಾಗರಾಜರಿಗೆ ಬ್ರಹ್ಮೋಪದೇಶ ನೆರವೇರಿಸಿ ಕೊಟ್ಟರು.ತ್ಯಾಗರಾಜರು ’ವಸಂತ’ರಾಗದಲ್ಲಿ  ’ಸೀತಮ್ಮಮಾಯಮ್ಮ’ ಕೃತಿಯನ್ನು ರಚಿಸಿ, ತಾಯಿ ಸೀತಮ್ಮನೆಂದೂ ತಂದೆ ರಾಮ ಎಂದೂ ತಮ್ಮ ಮಾತಾಪಿತೃಗಳ ನಾಮಧೇಯಗಳ ಮತ್ತು ಆರಾಧ್ಯದೇವನಾದ ಸೀತಾರಾಮರ ಉಭಯ ಪರವಾಗಿ ಕೃತಿಗಳಲ್ಲಿ ಅಲಂಕಾರಿಕವಾಗಿ ಚಿತ್ರಿಸಿದ್ದಾರೆ.ಮಾತಾಪಿತೃಗಳ ದೈವಭಕ್ತಿಯೂ ತ್ಯಾಗರಾಜರಲ್ಲಿ ಸಂಪೂರ್ಣವಾಗಿ ಚಿಕ್ಕಂದಿನಿಂದಲೇ ಬೇರೂರಿತ್ತು. ತಾಯಿ ಅವರಿಗೆ ಪುರಂದರದಾಸರ ಕೃತಿಗಳನ್ನು ಹೇಳಿಕೊಡುತ್ತಿದ್ದರು.

ಸ್ವಲ್ಪ ಕಾಲದಲ್ಲಿ ರಾಮ ಷಡಕ್ಷರಿ ಮಂತ್ರೋಪದೇಶವೂ ರಾಮಕೃಷ್ಣಾನಂದರೆಂಬ ಯತಿವರ್ಯರಿಂದ ಲಭಿಸಿತು. ಕಂಚಿಯಿಂದ ಬಂದ ವಿದ್ವಾಂಸರಲ್ಲಿ ರಾಮತಾರಕ ಮಂತ್ರೋಪದೇಶವನ್ನು ಪಡೆದರು. ಕೋಟಿರಾಮಗಳನ್ನು ಜಪಿಸಿದರೆ ಭಗವತ್ ಸಾಕ್ಷಾತ್ಕಾರನಾಗುದೆಂಬ ದೃಢನಂಬಿಕೆ ಮೇಲೆ ರಾಮನಾಮಗಳನ್ನು ಜಪಿಸುತ್ತಾ ಪ್ರತಿದಿನವೂ ರಾಮವಿಗ್ರಹವನ್ನು ಪೂಜಿಸುತ್ತಾ ಅನೇಕ ಕೃತಿಗಳನ್ನು ರಚಿಸಿದರು. ಅವರ ಭಕ್ತಿಗೆ ಮೆಚ್ಚಿ ನಾರದರು ಸ್ವರಾರ್ಣವವೆಂಬ ಸಂಗೀತ ಶಾಸ್ತ್ರವನ್ನು ದೊರಕುವಂತೆ ಮಾಡಿದರು ಎಂಬ ಪ್ರತೀತಿ ಇದೆ. ತಮ್ಮ ಮನೋಭಾವವನ್ನು ಕೃತಿಗಳಲ್ಲಿ “ಅತೀತ, ಅನಾಗತ ಗ್ರಹಗಳಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಇವರ ವಿಳಂಬ,ಮಧ್ಯಮ,ದುರಿತ ಕಾಲಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾದ ಕೃತಿಗಳನ್ನು ರಚಿಸಿದ್ದಾರೆ. ಸಂಗೀತ ವ್ಯಾಕರಣವೆನಿಸುವ ಯತಿ,ಪ್ರಸ್ತಾರಗಳನ್ನು ಬಿಡದೆ ತ್ರಿಸ್ಥಾಯಿಗಳಲ್ಲೂ ಸಂಚಾರವಿರುವ ಕೃತಿಗಳನ್ನು ರಚಿಸಿದ್ದಾರೆ.ತಮ್ಮ ಕೃತಿಗಳನ್ನು, ತ್ಯಾಗರಾಜ’ ಎಂಬ ಅಂಕಿತ ಬರೆದು ತಿರುವಾರೂರಿನ ತ್ಯಾಗರಾಜ ಸ್ವಾಮಿಗೆ ಅರ್ಪಿಸಿದರೆಂದು ಹೇಳುತ್ತಾರೆ.

Tyagarajaru

 

ಜನ ಸಾಮಾನ್ಯ ಹಾಡುಗಳಲ್ಲಿನ ಅಂಶಗಳನ್ನು ತಿಳಿಸುವುದಕ್ಕೆ ತ್ಯಾಗರಾಜರು ದಿವ್ಯ ನಾಮಸಂಕೀರ್ತನೆಗಳಲ್ಲೂ ಉತ್ಸವ ಸಂಪ್ರದಾಯ ಕೀರ್ತನೆಗಳಲ್ಲೂ ಒಪ್ಪುವ ರಾಗಗಳಲ್ಲಿ ರಚಿಸಿದ್ದಾರೆ. ತಮ್ಮ ಶಿಷ್ಯರಾದ ವೀಣೆ ಕುಪ್ಪಯ್ಯರವರ ಪ್ರಾರ್ಥನೆಯನ್ನು ಮನ್ನಿಸಿ ದೇಶಾಟನೆ ಮಾಡಿ ಸಂಚರಿಸಿದ ಕ್ಷೇತ್ರಗಳಲ್ಲಿನ ದೇವರುಗಳ ಮೇಲೆ ಕೃತಿಗಳನ್ನು ರಚಿಸಿದ್ದಾರೆ. ಪ್ರಹ್ಲಾದ ಭಕ್ತಿ ವಿಜಯಂ, ನೌಕಾಚರಿತ್ರಂ,ಎಂಬ ಗೇಯ ನಾಟಕಗಳು ಶ್ರೇಷ್ಠ ಕೃತಿಗಳೆಂದು ಪರಿಗಣಿಸಲ್ಪಟ್ಟಿವೆ.ಇವರ ಕೃತಿರಚನಾ ಕೌಶಲ ದೇಶ,ವಿದೇಶಗಳಲ್ಲೆಲ್ಲಾ ಖ್ಯಾತಿ ಗಳಿಸಿದೆ.ದೂರ ದೂರದ ವಿದ್ವಾಂಸರು ಅವರಲ್ಲಿ ಆಶೀರ್ವಾದ ಪಡೆಯಲು ಬರುತ್ತಿದ್ದರು.ವಿದ್ವಾಂಸರ ಗಾಯನವನ್ನು ಕೇಳಿ, ತಮ್ಮ ವಂದನೆ ನಿಮಗೆ ಸದಾ ಇರಲಿ ಎಂತ “ಎಂದರೋ ಮಹಾನುಭಾವುಲು”[ಶ್ರೀರಾಗ] ಪಂಚರತ್ನ ಕೀರ್ತನೆಯನ್ನು ರಚಿಸಿ ಹಾಡಿದರಂತೆ. ತೀರ್ಥ ಕ್ಷೇತ್ರಗಳಿಗೆ ಸಂದರ್ಶಿಸಿ,ಅಲ್ಲಿನ ದೇವರುಗಳ ಮೇಲೆ ಕೃತಿಗಳನ್ನು ರಚಿಸಿದ್ದಾರೆ. ೧.ತಿರುವಚ್ಚಿಯಾರು ಪಂಚರತ್ನಗಳು,ತಿರುಪತಿಕ್ಷೇತ್ರ ಕೃತಿಗಳು,ಪುತ್ತೂರು ಕ್ಷೇತ್ರ, ಕಂಚಿಕ್ಷೇತ್ರ,ಶ್ರೀರಂಗ ಕ್ಷೇತ್ರಕ್ತಿಗಳು,ಲಾಲ್ ಗುಡಿ ಕ್ಷೇತ್ರ, ಷೋಲಿಂಗರ್ ಕ್ಷೇತ್ರ ಕೃತಿಗಳನ್ನು ನೋಡಬಹುದು. ತಮಗೆ ಸಂದಿರುವ ಕೀರ್ತಿ ಶ್ರೀರಾಮನಿಗೇ ಇರುವುದು “ದಾಶರಥೇ ನೀ ಋಣ ಮು ತೀರ್ಬನಾತರಮಾ” ಎಂಬ ತೋಡಿರಾಗದ ಕೃತಿಯಲ್ಲಿ ಬರೆದಿದ್ದಾರೆ.

ವಾಲಾಜ ಪೇಟೆ ವೆಂಕಟರಮಣ ಭಾಗವತರು,ಮಾನಂಬು ಚಾವಡಿ ವೆಂಕಟಸುಬ್ಬಯ್ಯರು,ತಂಜಾವೂರು ರಾಮರಾಯರು,ಉಮಯಾಪುರ  ಕೃಷ್ಣ ಭಾಗವತರು,ಸುಂದರ ಭಾಗವತರು,ತಿಲೈಸ್ಥಾನಂರಾಮ ಅಯ್ಯಂಗಾರ್,ವೀಣಾ ಕುಪ್ಪಯ್ಯನವರು,ತ್ಯಾಗರಾಜರ ಪ್ರಸಿದ್ಧ ಶಿಷ್ಯರು. ಇವರು ಗತಿಸುವುದಕ್ಕೆ ಮುಂಚೆ ಗೃಹಸ್ಥಾಶ್ರಮವನ್ನು ತ್ಯಜಿಸಿ ಸನ್ಯಾಸಾಶ್ರಮವನ್ನು ವಿಧಿವತ್ತಾಗಿ ಸ್ವೀಕರಿಸಿದರು. ರಾಮ ನಾಮದಲ್ಲೇ ಇದ್ದು ಪ್ರಭವ ನಾಮ ಸಂವತ್ಸರದಲ್ಲಿ[ 6 ಜನವರಿ 1847] ಮೋಕ್ಷವನ್ನು ಹೊಂದಿದರು.

 

ಸಾವಿತ್ರಿ,ಡಿ.ಕೆ.ಭಟ್,  ದೊಡ್ಡಮಾಣಿ, ಎಡನಾಡು.

2 Responses

  1. ಬಲು ಅಪೂರ್ವದ ಮಾಹಿತಿಗಳು . ಚೆನ್ನಾಗಿದೆ .

  2. Shankari Sharma says:

    ಕರ್ನಾಟಕ ಸಂಗೀತದ ಮೇರು ಪರ್ವತ,ಪೂಜ್ಯ ತ್ಯಾಗರಾಜರ ಬಗ್ಗೆ ಅಪರೂಪದ ಸಂಕ್ಷಿಪ್ತ ಮಾಹಿತಿ ಒದಗಿಸಿದ್ದೀರಿ…ಧನ್ಯವಾದಗಳು…

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: